ಸಂಪಾದಕೀಯ| ಪಾತಕಿ ಸಿಂಗ್ ಶಿಕ್ಷೆ ಮೊಟಕು: ಬಿಹಾರದಲ್ಲಿ ಅಸಮರ್ಥನೀಯ ನಡೆ ಆನಂದ್ ಮೋಹನ್ ಸಿಂಗ್‌ಗೆ ವಿಧಿಸಿರುವ ಜೈಲು ಶಿಕ್ಷೆಯನ್ನು ಕಡಿಮೆ ಮಾಡಿರುವ ಬಿಹಾರ ರಾಜ್ಯ ಸರ್ಕಾರದ ನಡೆಯು ಕಾನೂನಿಗೆ ತೋರಿರುವ ಅಗೌರವ. ಆನಂದ್ ಮೋಹನ್ ಸಿಂಗ್ ಮೊದಲು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿ, ನಂತರದಲ್ಲಿ ರಾಜಕಾರಣಿ ಆಗಿ ಬದಲಾದವ. ಯುವ, ದಲಿತ ಐಎಎಸ್ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಿದ ಅಪರಾಧಕ್ಕಾಗಿ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸಿಂಗ್‌ 14 ವರ್ಷಗಳಿಂದ ಜೈಲಿನಲ್ಲಿದ್ದ. ಸಿಂಗ್‌ಗೆ ವಿಧಿಸಿರುವ ಶಿಕ್ಷೆ ಕಡಿಮೆ ಮಾಡಿ, ಅವನನ್ನು ಜೈಲಿನಿಂದ ಬಿಡುಗಡೆ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಿಹಾರ ಸರ್ಕಾರವು ‘ಬಿಹಾರ ಪೊಲೀಸ್ ಕಾರಾಗೃಹ ಕೈಪಿಡಿ, 2012’ಕ್ಕೆ ತಿದ್ದುಪಡಿ ತಂದಿದೆ. ಯಾರ ಜೈಲು ಶಿಕ್ಷೆಯನ್ನು ಕಡಿಮೆ ಮಾಡುವಂತಿಲ್ಲ ಎಂಬ ಪಟ್ಟಿಯಲ್ಲಿ ಇರುವ ‘ಕರ್ತವ್ಯದಲ್ಲಿರುವ ಸರ್ಕಾರಿ ನೌಕರನ ಕೊಲೆ’ ಎಂಬ ವಿವರಣೆಯನ್ನು ತೆಗೆದುಹಾಕುವ ಮೂಲಕ, ಸಿಂಗ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲು ಸರ್ಕಾರವು ಅವಕಾಶ ಮಾಡಿಕೊಟ್ಟಿದೆ. ಅಂದರೆ, ಕ್ರಿಮಿನಲ್ ಅಪರಾಧ ಎಸಗಿದ ವ್ಯಕ್ತಿಯೊಬ್ಬ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಿಯಮವನ್ನೇ ಬದಲಾಯಿಸಿದಂತೆ ಆಗಿದೆ. ಸರ್ಕಾರದ ಈ ನಡೆಯು ಸಮಾಜಕ್ಕೆ ಬಹಳ ಕೆಟ್ಟ ಸಂದೇಶವೊಂದನ್ನು ರವಾನಿಸುತ್ತದೆ. ಯಾವ ನಾಚಿಕೆಯೂ ಇಲ್ಲದೆ ನಿಯಮಗಳನ್ನು ಹೀಗೆ ಬದಲಾಯಿಸಿರುವುದು ಅನೈತಿಕ ನಡೆ ಕೂಡ ಹೌದು. ಆನಂದ್ ಮೋಹನ್ ಸಿಂಗ್ ಮಾಜಿ ಸಂಸದ ಕೂಡ ಹೌದು. ಈತ ಬಿಹಾರ ಪೀಪಲ್ಸ್‌ ಪಾರ್ಟಿಯ (ಬಿಪಿಪಿ) ಸಂಸ್ಥಾಪಕ ನಾಯಕ. ಈ ಪಕ್ಷವು ಬಹುತೇಕ ಎಲ್ಲ ಪಕ್ಷಗಳ ಜೊತೆಯಲ್ಲಿಯೂ ಮೈತ್ರಿ ಹೊಂದಿತ್ತು. ಜೆಡಿಯು ಹಾಗೂ ಬಿಜೆಪಿ ಜೊತೆ ಕೂಡ ಇದು ಮೈತ್ರಿ ಹೊಂದಿತ್ತು. ಅಂತಿಮವಾಗಿ ಇದು ಕಾಂಗ್ರೆಸ್ ಜೊತೆ ವಿಲೀನ ಆಯಿತು. ಸಿಂಗ್ ರಜಪೂತ ಸಮುದಾಯಕ್ಕೆ ಸೇರಿದ ನಾಯಕ. ಬಿಹಾರದಲ್ಲಿ ಬಲಿಷ್ಠವಾಗಿರುವ, ಗಣನೀಯವಾಗಿಯೂ ಇರುವ ಈ ಸಮುದಾಯದಲ್ಲಿ ಸಿಂಗ್ ಪ್ರಭಾವಿ ಕೂಡ ಹೌದು. ಸಿಂಗ್‌ನನ್ನು ತಮ್ಮ ಮಹಾಘಟಬಂಧನದ ಕಡೆ ಸೆಳೆದುಕೊಂಡು, ತಮ್ಮ ನೆಲೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಲೆಕ್ಕಾಚಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರದ್ದು. ಸಿಂಗ್, ವಾಸ್ತವದಲ್ಲಿ, ಈ ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ. ಆದರೆ ಮರಣದಂಡನೆಯನ್ನು ಪಟ್ನಾ ಹೈಕೋರ್ಟ್‌ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತು. ಇಲ್ಲಿ ವ್ಯಂಗ್ಯವೆಂದರೆ, ಹಿಂದೆ ಇದೇ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು, ಸಿಂಗ್‌ಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕೊಲೆ ಮಾತ್ರವೇ ಅಲ್ಲದೆ, ಸಿಂಗ್ ಇನ್ನೂ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಿದ್ದಾನೆ. ಸಿಂಗ್ ರಾಜಕಾರಣಿ ಅಲ್ಲ. ಬದಲಿಗೆ, ಆತ ಒಬ್ಬ ಕ್ರಿಮಿನಲ್. ಈ ವ್ಯಕ್ತಿ ಬಿಹಾರದ ಅಪರಾಧ–ರಾಜಕಾರಣದ ಲಾಂಛನವಿದ್ದಂತೆ. ಇಂಥವರನ್ನು ಜೈಲಿನಿಂದ ಬಿಡುಗಡೆ ಮಾಡುವುದಕ್ಕಾಗಿ ನಿಯಮಗಳನ್ನು ಬದಲಾಯಿಸುವುದು ಸಿನಿಕ ರಾಜಕಾರಣಕ್ಕೆ ಉದಾಹರಣೆ. ಬಿಜೆಪಿಗೆ ಎದುರಾಗಿ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ರಚಿಸುವ ಯತ್ನಗಳಲ್ಲಿ ನಿತೀಶ್ ಕುಮಾರ್ ಅವರು ಕೂಡ ಮುಂದಾಳತ್ವ ವಹಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಸಿಂಗ್‌ನನ್ನು ಜೈಲಿನಿಂದ ಹೊರಗೆ ತರಲು ನಿಯಮಗಳನ್ನು ಬದಲಾಯಿಸುವ ಕೆಲಸವು ಇಂಥದ್ದೊಂದು ಮೈತ್ರಿಕೂಟ ರಚನೆಗೆ ನಿತೀಶ್ ಅವರು ಹೊಂದಿರುವ ನೈತಿಕ ಹಕ್ಕನ್ನು ಇಲ್ಲವಾಗಿಸುತ್ತದೆ. ಇದು ನಿತೀಶ್ ಅವರು ವೈಯಕ್ತಿಕವಾಗಿ ಹೊಂದಿರುವ ಹೆಸರನ್ನು ಹಾಳು ಮಾಡುತ್ತದೆ. ಅವರ ವಿಶ್ವಾಸಾರ್ಹತೆಗೆ ಪೆಟ್ಟು ಕೊಡುತ್ತದೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ, ಅಪರಾಧಿಗಳ ಶಿಕ್ಷೆಯ ಪ್ರಮಾಣ ತಗ್ಗಿಸಿದ ರೀತಿಯಲ್ಲೇ ಈ ಪ್ರಕರಣ ಕೂಡ ಕಾಣುತ್ತಿದೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿನ ಅಪರಾಧಿಗಳ ವಿಚಾರವಾಗಿ ಗುಜರಾತ್‌ನ ಬಿಜೆಪಿ ನೇತೃತ್ವದ ಸರ್ಕಾರ ಇರಿಸಿದ ಹೆಜ್ಜೆಗಳನ್ನು ಟೀಕಿಸಿದ್ದ ವಿರೋಧ ‍ಪಕ್ಷಗಳ ನಡೆಯು ಈಗ ಪೊಳ್ಳು ಎಂಬಂತೆ ಕಾಣಬಹುದು. ಹಾಗೆಯೇ, ಬಿಹಾರ ಸರ್ಕಾರದ ಈಗಿನ ಕ್ರಮವನ್ನು ಬಿಜೆಪಿ ಟೀಕಿಸುವುದು ಕೂಡ ಪೊಳ್ಳುತನದಿಂದ ಕೂಡಿದೆ. ಈ ರೀತಿಯಲ್ಲಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವುದು, ಅದನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡಲಿ ಅಥವಾ ಇತರ ಯಾವುದೇ ಪಕ್ಷ ಮಾಡಲಿ, ಅಪರಾಧಿಗಳು ಹಾಗೂ ರಾಜಕಾರಣದ ನಡುವಿನ ನಂಟನ್ನು ಇನ್ನಷ್ಟು ಹೆಚ್ಚಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.