ಸಂಪಾದಕೀಯ| ಜಲಮೂಲಗಳ ಗಣತಿ: ಸ್ವಾಗತಾರ್ಹ ಹೆಜ್ಜೆ ಕೇಂದ್ರ ಜಲಶಕ್ತಿ ಸಚಿವಾಲಯವು ದೇಶದಲ್ಲಿರುವ ಜಲಮೂಲಗಳ ಗಣತಿಯನ್ನು ನಡೆಸಿ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯು ಕೆಲವು ಉಪಯುಕ್ತ ಮಾಹಿತಿಗಳಿಂದ ಕೂಡಿದೆ. ಕೊಳ, ಕೆರೆ, ಸರೋವರ, ಜಲಾಶಯ ಮತ್ತು ಜಲಸಂರಕ್ಷಣೆಗಾಗಿ ಕಟ್ಟಿದ ಜಲಸಂಗ್ರಹಾಗಾರಗಳ ಸಂಖ್ಯೆ, ಅವುಗಳ ಗಾತ್ರ, ಬಳಕೆಯ ಸ್ಥಿತಿಗತಿ ಹಾಗೂ ಅವುಗಳ ಸಂಗ್ರಹ ಸಾಮರ್ಥ್ಯದ ವಿವರ ದಾಖಲಿಸುವ ಯತ್ನವನ್ನು ಈ ಗಣತಿಯಲ್ಲಿ ಮಾಡಲಾಗಿದೆ. ದೇಶದಲ್ಲಿ 24.24 ಲಕ್ಷ ಜಲಮೂಲಗಳಿದ್ದು, ಅವುಗಳಲ್ಲಿ ಶೇ 2.93ರಷ್ಟು ಮಾತ್ರ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿವೆ ಎಂಬ ಅಂಶ ಗಣತಿಯಲ್ಲಿ ಎದ್ದುಕಂಡಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು, ಅಂದರೆ 7.5 ಲಕ್ಷದಷ್ಟು ಜಲಮೂಲಗಳಿವೆ. ಕರ್ನಾಟಕದ ಗ್ರಾಮಾಂತರ ಭಾಗದಲ್ಲಿ 26,205 ಹಾಗೂ ನಗರ ಪ್ರದೇಶದಲ್ಲಿ 789 ಜಲಮೂಲಗಳಿರುವುದು ಸಹ ವರದಿಯಲ್ಲಿ ದಾಖಲಾಗಿದೆ. ರಾಜ್ಯದ ಶೇ 78ರಷ್ಟು ಜಲಮೂಲಗಳು ನಿರುಪಯುಕ್ತವಾಗಿವೆ ಎನ್ನುವ ಕಳವಳಕಾರಿ ಸಂಗತಿಯ ಮೇಲೂ ವರದಿ ಬೆಳಕು ಚೆಲ್ಲಿದೆ. ಸಂಪೂರ್ಣವಾಗಿ ಬತ್ತಿ ಹೋಗಿರುವುದು, ಹೂಳು ತುಂಬಿರುವುದು, ದುರಸ್ತಿ ಮಾಡಲಾಗದಷ್ಟು ಹಾಳಾಗಿರುವುದು, ಉಪ್ಪುನೀರು ಸಂಗ್ರಹವಾಗಿರುವುದು, ಕೈಗಾರಿಕೆ ತ್ಯಾಜ್ಯ ಸೇರ್ಪಡೆ ಆಗುತ್ತಿರುವುದು ಮತ್ತು ಒತ್ತುವರಿ ಆಗಿರುವುದು ಜಲಮೂಲಗಳ ನಿರುಪಯುಕ್ತತೆಗೆ ಮುಖ್ಯ ಕಾರಣಗಳಾಗಿವೆ. ವರದಿಯನ್ನು ವಿಶ್ಲೇಷಣೆಗೆ ಒಳಪಡಿಸಿದರೆ, ಜನಸಂಖ್ಯೆಯ ಹೆಚ್ಚಳ ಮತ್ತು ನಗರೀಕರಣದ ಒತ್ತಡದಿಂದ ದೇಶ ನಿಧಾನವಾಗಿ ನೀರಿನ ಕೊರತೆಯತ್ತ ಸಾಗುತ್ತಿರುವುದು ಎದ್ದು ಕಾಣುತ್ತದೆ. ಶತಮಾನಗಳಿಂದ ಇದ್ದ ‘ಜಲ ಠೇವಣಿ’ಯ ತಾಣಗಳನ್ನು ಕ್ಷಿಪ್ರಗತಿಯಲ್ಲಿ ಕಳೆದುಕೊಳ್ಳುತ್ತಾ ಹೊರಟಿರುವುದು ಆತಂಕಕಾರಿ ವಿದ್ಯಮಾನ. ಇಂದಿನ ಈ ಕಾಲಘಟ್ಟದಲ್ಲಿ ನಗರೀಕರಣವನ್ನು ತಡೆಯುವುದು ಕಷ್ಟಸಾಧ್ಯವೇ ಸರಿ. ಈ ಹಂತದಲ್ಲಿ ಮುಖ್ಯವಾಗಿ ಆಗಬೇಕಿರುವ ಕೆಲಸ ಏನೆಂದರೆ, ಗ್ರಾಮಾಂತರ ಹಾಗೂ ಅರೆ ಪಟ್ಟಣ ಪ್ರದೇಶಗಳ ಜಲಮೂಲಗಳನ್ನು ಜತನದಿಂದ ಕಾಪಾಡಿಕೊಳ್ಳುವುದು. ಜಲಮೂಲಗಳ ಸಂರಕ್ಷಣೆ ಮಾಡುವುದರ ಅರ್ಥ ಅವುಗಳ ಬಳಕೆಯನ್ನೇ ಮಾಡದಿರುವುದು ಎಂದಲ್ಲ. ವಾಸ್ತವವಾಗಿ, ಸಮರ್ಪಕವಾಗಿ ಬಳಕೆ ಮಾಡದಿರುವ ಕಾರಣಕ್ಕೇ ಅವು ಹಾಳಾಗಿ ಹೋಗುತ್ತಿವೆ. ಜಲಮೂಲಗಳನ್ನು ಸಂರಕ್ಷಿಸಲು ಅವುಗಳನ್ನು ಸರಿಯಾಗಿ ಬಳಕೆ ಮಾಡುವುದು, ಹಾಗೆಯೇ ಮರುಪೂರಣಕ್ಕೂ ಸೂಕ್ತ ವ್ಯವಸ್ಥೆ ಮಾಡುವುದು ಸರಿಯಾದ ತಂತ್ರವಾಗಿದೆ. ನೀರಿನ ಸಮರ್ಪಕ ಬಳಕೆ, ತ್ಯಾಜ್ಯ ನೀರು ಅವುಗಳ ಒಡಲು ಸೇರುವುದಕ್ಕೆ ತಡೆ, ಒಡಲಲ್ಲಿ ಹೂಳು ತುಂಬದಂತೆ ನಿಗಾ– ಇಂತಹ ಕ್ರಮಗಳಿಂದ ಜಲಮೂಲಗಳ ಆರೋಗ್ಯ ಕಾಪಾಡಿ, ಅವುಗಳನ್ನು ಸಂರಕ್ಷಣೆ ಮಾಡಲು ಸಾಧ್ಯ. ಸ್ಥಳೀಯ ಸನ್ನಿವೇಶಗಳಿಗೆ ತಕ್ಕಂತೆ ಒಂದೊಂದು ಜಲಮೂಲಕ್ಕೂ ಒಂದೊಂದು ವಿಧದ ಸಂರಕ್ಷಣಾ ತಂತ್ರವನ್ನು ಅಳವಡಿಸಿಕೊಳ್ಳಬೇಕಿರುವುದು ಇಂದಿನ ತುರ್ತು ಅಗತ್ಯ. ಜಲಮೂಲಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ನೀತಿ ನಿರೂಪಣೆ ಮಾಡುವಾಗ ಇಂತಹ ವರದಿಗಳು ಹೆಚ್ಚು ಉಪಯುಕ್ತ ಎನಿಸುತ್ತವೆ. ಜಲಮೂಲಗಳು ಕುಡಿಯುವ ನೀರನ್ನು ಮಾತ್ರ ಪೂರೈಸುತ್ತಿಲ್ಲ. ಅದರ ಜೊತೆಗೆ ನೀರಾವರಿಗೂ ಮೂಲಗಳಾಗಿವೆ. ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಕಾರಣವಾಗುತ್ತಿವೆ. ಜಲಸಾರಿಗೆಗೆ, ಜಲಕ್ರೀಡೆಗಳಿಗೆ, ಕೈಗಾರಿಕೆಗಳಿಗೆ ಮತ್ತು ಧಾರ್ಮಿಕ ಆಚರಣೆಗಳಿಗೆ ಕೂಡ ಬಳಕೆಯಾಗುತ್ತಿವೆ. ಆಯಾ ಪ್ರದೇಶದ ಹವಾಮಾನದ ಮೇಲೂ ಅವು ಪರಿಣಾಮವನ್ನು ಬೀರಬಲ್ಲವು. ಸಾಂಸ್ಕೃತಿಕವಾಗಿಯೂ ಅವುಗಳ ಮಹತ್ವ ದೊಡ್ಡದಾಗಿದೆ. ಆಯಾ ಜಲಮೂಲಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರತ್ಯೇಕಿಸಿ, ಅದರ ಪಾಲನೆಯ ಹೊಣೆ ಹೊತ್ತ ಸ್ಥಳೀಯ ಸಂಸ್ಥೆಗೆ ಅದನ್ನು ಒದಗಿಸಬೇಕು. ಒತ್ತುವರಿ ತೆರವುಗೊಳಿಸುವುದು ಸೇರಿದಂತೆ ಜಲಮೂಲದ ಸಂರಕ್ಷಣೆಗೆ ಆಯಾ ಸ್ಥಳೀಯ ಸಂಸ್ಥೆಯು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಇದರಿಂದ ಸಾಧ್ಯ. ದೊಡ್ಡ ಸಂಖ್ಯೆಯ ಜಲಮೂಲಗಳು ಖಾಸಗಿ ಒಡೆತನದಲ್ಲಿರುವುದು ಸಹ ಗಣತಿಯಿಂದ ಬೆಳಕಿಗೆ ಬಂದಿದೆ. ಇಂತಹ ಖಾಸಗಿ ಜಲಮೂಲಗಳ ಕುರಿತು ನೀತಿ ನಿರೂಪಣೆಗೂ ಅದು ಒತ್ತಾಯಿಸುತ್ತಿದೆ. ವರದಿಯಲ್ಲಿ ಕೆಲವು ಸ್ಪಷ್ಟತೆಗಳ ಕೊರತೆ ಇದೆ ಎಂದೂ ವಿಶ್ಲೇಷಿಸಲಾಗಿದೆ. ಅಂತಹ ಕೊರತೆಗಳನ್ನು ನೀಗಿಸುವತ್ತ ಮತ್ತು ಕಾಲಕಾಲಕ್ಕೆ ಸಮೀಕ್ಷೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ನವೀಕರಿಸುವತ್ತ ಜಲಶಕ್ತಿ ಸಚಿವಾಲಯ ಗಮನಹರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.