ಸಂಪಾದಕೀಯ | ಚುನಾವಣೆ ಹೊಸಿಲಲ್ಲಿ ಭರಪೂರ ಘೋಷಣೆ, ಫಲಿತಾಂಶ ಅವಲಂಬಿಸಿದೆ ಅನುಷ್ಠಾನ ರೈತರು, ಮಹಿಳೆಯರು ಮತ್ತು ಯುವಜನರು– ಚುನಾವಣೆಯ ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಶುಕ್ರವಾರ ಮಂಡನೆಯಾದ ರಾಜ್ಯದ 2023–24ನೇ ಸಾಲಿನ ಬಜೆಟ್‌ನಲ್ಲಿ ಈ ಮೂರೂ ವರ್ಗದವರ ಜಪವೇ ಎದ್ದು ಕಾಣುತ್ತಿದೆ. ಅದರ ಹಿಂದಿನ ಕಾರಣವನ್ನು ಬಿಡಿಸಿ ಹೇಳುವ ಅಗತ್ಯವೇನೂ ಇಲ್ಲ. ಬಿಜೆಪಿಯ ಮತಬುಟ್ಟಿಯನ್ನು ಹಿಗ್ಗಿಸುವ ಹಿರಿದಾಸೆಯೇ ಇಲ್ಲಿ ಕೆಲಸ ಮಾಡಿದೆ. ಚುನಾವಣೆಯಲ್ಲಿ ಎದುರಾಗಬಹುದಾದ ಆಡಳಿತವಿರೋಧಿ ಅಲೆಯ ‘ಪ್ರಭಾವ’ವನ್ನು ತಗ್ಗಿಸಲು ಸೃಷ್ಟಿಯಾದ ಭರಪೂರ ಘೋಷಣೆಗಳ ಮೇಲೆಯೇ ಈ ಬಜೆಟ್‌ ತೇಲಿರುವುದು ಸ್ಪಷ್ಟ. ಅಲ್ಪಸಂಖ್ಯಾತರ ಕಡೆಗೆ, ಅದರಲ್ಲೂ ಆ ಸಮುದಾಯದ ಯುವಕರ ಕಡೆಗೆ ಬಿಜೆಪಿಯ ಚಿತ್ತ ಈ ಸಲ ಹರಿದಿರುವುದು ವಿಶೇಷ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಅಲ್ಲದೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಮುಂದಿನ ಹಣಕಾಸು ವರ್ಷದಲ್ಲಿ ₹ 110 ಕೋಟಿ ತೆಗೆದಿರಿಸಲಾಗಿದೆ. ಈ ಮೊತ್ತ, ಹಾಲಿ ಹಣಕಾಸು ವರ್ಷಕ್ಕೆ ಒದಗಿಸಿರುವ ಅನುದಾನಕ್ಕೆ ಹೋಲಿಸಿದರೆ ಹೆಚ್ಚು–ಕಡಿಮೆ ದುಪ್ಪಟ್ಟು. ಮತದಾನಕ್ಕೆ ರೈತರು ಸಂತುಷ್ಟರಾಗಿ ಹೋಗುವಂತೆ ನೋಡಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ಬಜೆಟ್‌ನಲ್ಲಿ ನಡೆಸಲಾಗಿದೆ. ರೈತರಿಗೆ ನೀಡಲಾಗುತ್ತಿರುವ ಬಡ್ಡಿರಹಿತ ಸಾಲದ ಮಿತಿಯನ್ನು ₹ 3 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಹಾಗೆಯೇ ‘ಭೂಸಿರಿ’ ಸಹಾಯಧನ, ‘ಜೀವನ್‌ ಜ್ಯೋತಿ’ ವಿಮೆ, ‘ರೈತ ಸಂಪದ’ ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಯೋಜನೆಗಳನ್ನು ಘೋಷಿಸಲಾಗಿದ್ದು, ಇವುಗಳೆಲ್ಲ ಕೃಷಿಕರನ್ನು ಖುಷಿಗೊಳಿಸುವ ಪ್ರಯತ್ನಗಳೇ ಆಗಿವೆ. ಸರ್ಕಾರಿ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಶುಲ್ಕರಹಿತ ಪ್ರವೇಶಾವಕಾಶವನ್ನು ಕಲ್ಪಿಸುವ ‘ಮುಖ್ಯಮಂತ್ರಿ ವಿದ್ಯಾಶಕ್ತಿ’ ಯೋಜನೆ ಕೂಡ ಗಮನ ಸೆಳೆಯುವಂಥದ್ದು. ಐಟಿಐಗಳಲ್ಲಿ ಭತ್ಯೆ ಸಹಿತ ಮೂರು ತಿಂಗಳು ತರಬೇತಿ ನೀಡುವ ‘ಬದುಕುವ ದಾರಿ’, ಸಿಇಟಿ ಮೂಲಕ ವೃತ್ತಿಶಿಕ್ಷಣಕ್ಕೆ ಸೇರುವ ಗ್ರಾಮೀಣ ಭಾಗದ ಹಾಗೂ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದಿದ ಆಯ್ದ 500 ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕವನ್ನು ಸರ್ಕಾರವೇ ಭರಿಸುವ ‘ಹಳ್ಳಿ ಮುತ್ತು’, ನಿರುದ್ಯೋಗಿ ಪದವೀಧರರಿಗೆ ಭತ್ಯೆ ನೀಡುವ ‘ಯುವಸ್ನೇಹಿ’ ಯೋಜನೆಗಳು ಯುವಪೀಳಿಗೆಯ ಬೆಂಬಲ ಪಡೆಯುವುದಕ್ಕಾಗಿಯೇ ರೂಪುಗೊಂಡಂಥವು. ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತೀ ತಿಂಗಳು ತಲಾ ₹ 500 ಸಹಾಯಧನ ನೀಡುವ ‘ಶ್ರಮಶಕ್ತಿ’, ವಿದ್ಯಾರ್ಥಿನಿಯರು ಮತ್ತು ಮಹಿಳಾ ಕಾರ್ಮಿಕರಿಗೆ ಉಚಿತ ಬಸ್‌ಪಾಸ್‌ ಯೋಜನೆ ಘೋಷಿಸಲಾಗಿದೆ. ಪ್ರತೀ ಕುಟುಂಬದ ಮತ ಹಂಚಿಕೆಯಲ್ಲಿ ಬಿಜೆಪಿಯ ಪಾಲು ಹೆಚ್ಚಿಸಿಕೊಂಡು ಚುನಾವಣೆಯಲ್ಲಿ ಗೆಲುವು ಖಾತರಿಪಡಿಸಿಕೊಳ್ಳುವ ಯೋಚನೆ ಈ ಕಾರ್ಯತಂತ್ರದ ಹಿಂದೆ ಇರುವಂತಿದೆ. ರಾಜ್ಯದ ಮತದಾರರ ಪಟ್ಟಿಯಲ್ಲಿ ಸಂಖ್ಯಾಬಾಹುಳ್ಯ ಇಲ್ಲದ ಸಮುದಾಯಗಳು, ವರ್ಗಗಳ ಜನರ ಬೇಡಿಕೆಗಳಿಗೆ ಈ ಬಜೆಟ್‌ ಸ್ಪಂದಿಸಿಲ್ಲ ಎಂಬುದು ಮೇಲ್ನೋಟಕ್ಕೇ ಎದ್ದುಕಾಣುತ್ತದೆ. ತೆರಿಗೆ ಹೇರಿಕೆ ಇಲ್ಲದ ಬಜೆಟ್‌ ಮಂಡಿಸಿರುವುದರ ಹಿಂದೆ ಕೂಡ ಚುನಾವಣೆಯೇ ಕೆಲಸ ಮಾಡಿದೆ ಎಂಬುದರಲ್ಲಿ ಅನುಮಾನವಿಲ್ಲ. ಹಿಂದುತ್ವದ ಕಾರ್ಯಸೂಚಿಯನ್ನು ಬಜೆಟ್‌ನಲ್ಲಿ ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ಮುಖ್ಯಮಂತ್ರಿ ಹೊಸ ಹಾದಿ ತುಳಿದಿದ್ದಾರೆ. ಮಠ–ಮಂದಿರಗಳಿಗೆ ಘೋಷಿಸಿರುವ ಅನುದಾನದ ಫಲಾನುಭವಿಗಳ ನಿರ್ದಿಷ್ಟ ಮಾಹಿತಿಯನ್ನು ಪ್ರಕಟಿಸಿಲ್ಲ. ರಾಮನಗರಲ್ಲಿ ರಾಮಮಂದಿರ ನಿರ್ಮಾಣ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಸೇರಿದಂತೆ ಬಿಜೆಪಿಯು ಚುನಾವಣಾ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ಹಲವು ಧಾರ್ಮಿಕ ಕೇಂದ್ರಗಳತ್ತ ಬಜೆಟ್‌ ಗಮನಹರಿಸಿದೆ. ಮೂಲಸೌಕರ್ಯ ಅಭಿವೃದ್ಧಿಯ ಘೋಷಣೆಗಳಲ್ಲಿ ಬಿಜೆಪಿಯು ಬಲ ಹೆಚ್ಚಿಸಿಕೊಳ್ಳಲು ಗಮನ ಕೇಂದ್ರೀಕರಿಸಿರುವ ಪ್ರದೇಶಗಳಿಗೆ ಹೆಚ್ಚು ಒತ್ತು ದೊರೆತಿದೆ. ಅಲೆಮಾರಿಗಳು, ಅರೆಅಲೆಮಾರಿ ಸಮುದಾಯಗಳ ಬಗೆಗೆ ಬಜೆಟ್‌ನಲ್ಲಿ ‍ಪ್ರಸ್ತಾಪವೇ ಇಲ್ಲ. ಉದ್ಯೋಗಾಕಾಂಕ್ಷಿ ಯುವಜನರನ್ನು ಸೆಳೆಯುವುದಕ್ಕೆ ಹಲವು ಘೋಷಣೆಗಳನ್ನು ಮಾಡಲಾಗಿದೆ. ಒಂದೇ ವರ್ಷದಲ್ಲಿ ಒಂದು ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ವಾಗ್ದಾನವೂ ಬಜೆಟ್‌ನಲ್ಲಿದೆ. ಆದರೆ, ಅದಕ್ಕೆ ಪೂರಕವಾಗಿ ಅನುದಾನ ಮೀಸಲಿಡುವ ಕೆಲಸ ಆಗಿಲ್ಲ. ಚುನಾವಣೆಗೆ ಎರಡು ತಿಂಗಳಷ್ಟೇ ಉಳಿದಿರುವಾಗ ಮುಖ್ಯಮಂತ್ರಿಯವರು ಸಂಪ್ರದಾಯದಂತೆ ಬಜೆಟ್‌ ಮಂಡಿಸಿದ್ದಾರೆ. ಈ ಬಜೆಟ್‌ ಘೋಷಣೆಗಳು ಅನುಷ್ಠಾನಕ್ಕೆ ಬರುತ್ತವೆ ಎಂಬ ಖಾತರಿಯೇನೂ ಇಲ್ಲ. ಮುಂದೆ ಯಾರು ಅಧಿಕಾರದ ಗದ್ದುಗೆ ಹಿಡಿಯುತ್ತಾರೆ ಎಂಬುದು ಬಜೆಟ್‌ ಘೋಷಣೆಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ಹಿಂದಿನ ಅನುಭವಗಳ ಆಧಾರದಲ್ಲಿ ಹೇಳುವುದಾದರೆ ಚುನಾವಣೆಯ ಹೊಸ್ತಿಲಲ್ಲಿ ನಿರ್ಗಮಿತ ಸರ್ಕಾರ ಮಂಡಿಸಿದ ಯಾವ ಬಜೆಟ್‌ ಕೂಡ ವಾಸ್ತವದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಜೆಟ್‌ನ ಆಯಸ್ಸು ಕೂಡ ಚುನಾವಣೆಯ ಫಲಿತಾಂಶ ಮತ್ತು ಆನಂತರದ ಬೆಳವಣಿಗೆಗಳನ್ನು ಅವಲಂಬಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.