ಸಂಪಾದಕೀಯ | ರೆಪೊ ದರ ಏರಿಕೆ ನಿರೀಕ್ಷಿತ; ಸರ್ಕಾರದ ಸಹಾಯ ಹಸ್ತ ಬೇಕು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಮತ್ತಷ್ಟು ಹೆಚ್ಚು ಮಾಡಲಿದೆ ಎಂಬುದು ನಿರೀಕ್ಷಿತವೇ ಆಗಿತ್ತು. ರೆಪೊ ದರದ ಏರಿಕೆಯು ಶೇಕಡ 0.25ರಷ್ಟು ಇರಲಿದೆ ಎಂಬ ಅಂದಾಜನ್ನು ಕೂಡ ಹಣಕಾಸು ತಜ್ಞರು ಮಾಡಿದ್ದರು. ಅದಕ್ಕೆ ಅನುಗುಣವಾಗಿ ಇದೆ ಸಮಿತಿ ಮಾಡಿರುವ ರೆಪೊ ದರ ಏರಿಕೆ ಪ್ರಮಾಣ. ಫೆಬ್ರುವರಿ 8ರಂದು ಆಗಿರುವ ದರ ಏರಿಕೆಯ ನಂತರದಲ್ಲಿ ರೆಪೊ ಶೇ 6.50ಕ್ಕೆ ತಲುಪಿದೆ. ಇದು, ಕೇಂದ್ರೀಯ ಬ್ಯಾಂಕ್‌ ಇತರ ಬ್ಯಾಂಕ್‌ಗಳಿಗೆ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರ. ಈ ಹೆಚ್ಚಳದ ಪರಿಣಾಮವಾಗಿ ಎಲ್ಲ ಬಗೆಯ ಸಾಲಗಳ ಮೇಲಿನ ಬಡ್ಡಿ ದರವು ಸಹಜವಾಗಿಯೇ ಹೆಚ್ಚಲಿದೆ. ಡಿಸೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ 0.35ರಷ್ಟು ಹೆಚ್ಚು ಮಾಡಿತ್ತು. ಹಿಂದಿನ ವರ್ಷದ ಮೇ ತಿಂಗಳ ನಂತರದಲ್ಲಿ ರೆಪೊ ದರದಲ್ಲಿ ಆಗಿರುವ ಏರಿಕೆಯು ಶೇ 2.50ರಷ್ಟು ಇದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ನಡೆಸಿರುವ ದೀರ್ಘ ಸಮರವು ಇನ್ನೂ ಕೊನೆಗೊಂಡಿಲ್ಲ ಎಂಬುದನ್ನು ಆರ್‌ಬಿಐ ಸೂಚ್ಯವಾಗಿ ಹೇಳಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ರೆಪೊ ದರವನ್ನು ಇನ್ನಷ್ಟು ಹೆಚ್ಚು ಮಾಡಲು ಅವಕಾಶವನ್ನು ಮುಕ್ತವಾಗಿ ಇರಿಸಿಕೊಂಡಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಈಚೆಗೆ ಶೇ 6ಕ್ಕಿಂತ ಕಡಿಮೆ ಆಗಿದೆಯಾದರೂ, ಇಂಧನ ಹಾಗೂ ಆಹಾರ ವಸ್ತುಗಳನ್ನು ಹೊರತುಪಡಿಸಿ ಇತರ ಉತ್ಪನ್ನಗಳು ಹಾಗೂ ಸೇವೆಗಳ ಹಣದುಬ್ಬರ ಪ್ರಮಾಣವು ಈಗಲೂ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 4ಕ್ಕೆ ಮಿತಿಗೊಳಿಸಬೇಕಾದ ಹೊಣೆ ಆರ್‌ಬಿಐ ಮೇಲಿದೆ. ಆದರೆ ಆರ್‌ಬಿಐ ತನ್ನ ಹೊಣೆ ನಿಭಾಯಿಸುವಲ್ಲಿ ವಿಫಲವಾಗಿರುವುದು ಈಗ ಬಹಳಷ್ಟು ಚರ್ಚೆಯಾಗಿರುವ ಸಂಗತಿ. ಅದೇನೇ ಇದ್ದರೂ, ಹಣದುಬ್ಬರದ ಸಮಸ್ಯೆಯು ಕೊನೆಗೊಂಡಿಲ್ಲ ಎಂಬುದನ್ನು ಆರ್‌ಬಿಐ ಗುರುತಿಸಿರುವುದು ಈಗ ಸ್ಪಷ್ಟ. ಹೀಗಾಗಿಯೇ ಅದು ರೆಪೊ ದರವನ್ನು ಇನ್ನಷ್ಟು ಹೆಚ್ಚು ಮಾಡುವ ಅವಕಾಶವನ್ನು ಮುಕ್ತವಾಗಿ ಇರಿಸಿಕೊಂಡಿದೆ. ಹಣದುಬ್ಬರ ನಿಯಂತ್ರಣಕ್ಕೆ ಬರಬೇಕು ಎಂದಾದರೆ ರೆಪೊ ದರವನ್ನು ಆರ್‌ಬಿಐ ಹೆಚ್ಚಿಸಲೇಬೇಕು. ಹಣದುಬ್ಬರವು ಹೆಚ್ಚಿನ ಅವಧಿಗೆ ಮೇಲ್ಮಟ್ಟದಲ್ಲಿಯೇ ಉಳಿಯುವುದು ಸರ್ವಥಾ ಸರಿಯಲ್ಲ. ಸಾಲವು ಬಹಳ ಅಗ್ಗವಾಗಿ ಸಿಗಬೇಕು ಎಂದು ಬಯಸಲಾಗದು. ಆದರೆ ಆರ್‌ಬಿಐನ ಈ ತೀರ್ಮಾನದ ಪರಿಣಾಮವಾಗಿ ಸಾಲವು ತುಟ್ಟಿಯಾಗುತ್ತಿದೆ. ಅದರಿಂದಾಗಿ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳಿಗೆ ಬಂಡವಾಳ ಸಂಗ್ರಹವು ದುಬಾರಿ ಆಗುತ್ತಿದೆ ಎಂಬುದು ಉಲ್ಲೇಖಾರ್ಹ ಅಂಶ. ಈ ವಿಚಾರವಾಗಿ ಎಂಎಸ್‌ಎಂಇ ವಲಯದ ಪ್ರತಿನಿಧಿಗಳು ಈಗಾಗಲೇ ದನಿ ಎತ್ತಿದ್ದಾರೆ. ಈ ವಲಯದ ಉದ್ದಿಮೆಗಳಿಗೆ ಬ್ಯಾಂಕ್ ಹೊರತುಪಡಿಸಿ ಬೇರೆಡೆಯಿಂದ ಬಂಡವಾಳ ತರುವುದು ಸುಲಭವಲ್ಲ. ರೆಪೊ ದರ ಏರಿಕೆಯ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಆರ್‌ಬಿಐ ಈ ಆಯಾಮವನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು. ಅದರ ಜೊತೆಯಲ್ಲಿಯೇ ಹಣದುಬ್ಬರ ನಿಯಂತ್ರಣದ ಹೊಣೆಯನ್ನು ಆರ್‌ಬಿಐ ಮೇಲೆ ಸಂಪೂರ್ಣವಾಗಿ ವರ್ಗಾವಣೆ ಮಾಡುವ ಬದಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಕೈಲಾದ ಸಹಾಯ ಮಾಡಬೇಕು. ಹಣದುಬ್ಬರವು ಅತಿಯಾಗಿರುವ ನಿರ್ದಿಷ್ಟ ಉತ್ಪನ್ನಗಳು ಹಾಗೂ ಸೇವೆಗಳ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ, ಅಲ್ಲಿ ಹಣದುಬ್ಬರ ನಿಯಂತ್ರಿಸಲು ಸಾಧ್ಯವೇ ಎಂಬುದನ್ನು ಸರ್ಕಾರಗಳು ಪರಿಶೀಲಿಸಬೇಕು. ಈಗಿನ ರೆಪೊ ದರವು ಹಣದುಬ್ಬರದ ಮಟ್ಟಕ್ಕೆ ಹೊಂದಾಣಿಕೆ ಮಾಡಿ ಲೆಕ್ಕ ಹಾಕಿದರೆ ಕೋವಿಡ್ ಪೂರ್ವದ ಸಂದರ್ಭಕ್ಕಿಂತ ಈಗಲೂ ಕಡಿಮೆ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರತಿಪಾದಿಸಿದ್ದಾರೆ. ಅದೇನೇ ಇದ್ದರೂ, ಆಹಾರ ಮತ್ತು ಇಂಧನ ಹೊರತುಪಡಿಸಿ ಇತರ ಸೇವೆಗಳು ಹಾಗೂ ಉತ್ಪನ್ನಗಳ ಹಣದುಬ್ಬರವು ಈಗಲೂ ಕಳವಳಕಾರಿ ಮಟ್ಟದಲ್ಲಿಯೇ ಇದೆ. ಮುಂದಿನ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 5.3ರಷ್ಟು ಇರಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ. ಇದು ಬಹಳ ಆರೋಗ್ಯಕರ ಮಟ್ಟವೇನೂ ಅಲ್ಲ. ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ವಿಚಾರದಲ್ಲಿ ಆರ್‌ಬಿಐ ಬಹಳ ಆಶಾವಾದಿಯಾಗಿ ಇದೆ. ಜಿಡಿಪಿ ಬೆಳವಣಿಗೆ ದರವು 2023-24ರಲ್ಲಿ ಶೇ 6.4ರಷ್ಟು ಆಗಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ರೆಪೊ ದರದಲ್ಲಿ ಈಗ ಮಾಡಿರುವ ಏರಿಕೆಗಳು ಅರ್ಥ ವ್ಯವಸ್ಥೆಯಲ್ಲಿ ಪರಿಣಾಮಗಳನ್ನು ಬೀರುತ್ತಿವೆ ಎಂದು ಗವರ್ನರ್ ದಾಸ್ ಹೇಳಿದ್ದಾರೆ. ಖಾಸಗಿ ವಲಯವು ಬಂಡವಾಳ ವೆಚ್ಚದಲ್ಲಿ ಹೊಸದಾಗಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿರುವಂತಿದೆ. ಖಾಸಗಿ ವಲಯಕ್ಕೆ ನೀಡುವ ಸಾಲದ ಬೆಳವಣಿಗೆ ಪ್ರಮಾಣವು ಈಚಿನ ತಿಂಗಳುಗಳಲ್ಲಿ ಕಡಿಮೆ ಆಗಿದೆ. ರೆಪೊ ದರ ಏರಿಕೆಯ ಪರಿಣಾಮಗಳ ಬಗ್ಗೆ ಆಲೋಚಿಸುವಾಗ ಇದು ಕೂಡ ಗಮನದಲ್ಲಿ ಇರಬೇಕು. ಆರ್‌ಬಿಐ ಪಾಲಿಗೆ ಈಗ ಹಣದುಬ್ಬರದ ನಿಯಂತ್ರಣವೇ ಅತಿದೊಡ್ಡ ಗುರಿಯಾಗಿ ಕಣ್ಣ ಮುಂದೆ ಇರುವಂತಿದೆ. ಏಕೆಂದರೆ, ಅತಿಯಾದ ಹಣದುಬ್ಬರವು ದೀರ್ಘಾವಧಿಯಲ್ಲಿ ಅರ್ಥ ವ್ಯವಸ್ಥೆಯ ಮೇಲೆ ನಿಧಾನಗತಿಯ ಬೆಳವಣಿಗೆಗಿಂತ ಹೆಚ್ಚಿನ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.