ಸಂಪಾದಕೀಯ: ವಿಚ್ಛೇದನಕ್ಕೆ ಹೊಸ ಆಯಾಮ ತಾತ್ವಿಕ ಪರಿಧಿ ಹಿಗ್ಗಿಸಿದ ತೀರ್ಪು ನಿರ್ದಿಷ್ಟ ಸಂದರ್ಭಗಳಲ್ಲಿ ತಾನು ವೈವಾಹಿಕ ಸಂಬಂಧವನ್ನು ಪರಿಸಮಾಪ್ತಿಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಈಚೆಗೆ ನೀಡಿರುವ ಮಹತ್ವದ ಆದೇಶವೊಂದರಲ್ಲಿ ಹೇಳಿದೆ. ಸಂಬಂಧವು ಇನ್ನು ಸರಿಪಡಿಸಲಾಗದು ಎಂಬಷ್ಟರಮಟ್ಟಿಗೆ ಹಾಳಾಗಿದ್ದರೆ, ಅದನ್ನು ಆಧಾರವಾಗಿ ಇಟ್ಟುಕೊಂಡು ವಿಚ್ಛೇದನಕ್ಕೆ ಆದೇಶ ಕೊಡಬಹುದು, ಸಂವಿಧಾನದ 142ನೆಯ ವಿಧಿಯ ಅಡಿಯಲ್ಲಿ ತನಗೆ ಆ ಅಧಿಕಾರ ಇದೆ ಎಂದು ಕೋರ್ಟ್ ಹೇಳಿದೆ. ಇದು ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ನ್ಯಾಯಶಾಸ್ತ್ರಕ್ಕೆ ಹೊಸ ಆಯಾಮವೊಂದನ್ನು ನೀಡಿದಂತೆ. ಯಾವುದೇ ಪ್ರಕರಣದಲ್ಲಿ ಸಂಪೂರ್ಣ ನ್ಯಾಯವನ್ನು ಒದಗಿಸಲು ಸೂಕ್ತವಾದ ಆದೇಶವನ್ನು ಹೊರಡಿಸುವ ಅಧಿಕಾರವು ಸುಪ್ರೀಂ ಕೋರ್ಟ್‌ಗೆ ಇದೆ ಎಂದು 142ನೆಯ ವಿಧಿಯು ಹೇಳುತ್ತದೆ. ಕಕ್ಷಿದಾರರನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಕಳುಹಿಸದೆಯೂ ತಾನು ಅವರಿಗೆ ವಿಚ್ಛೇದನ ನೀಡಬಹುದು ಎಂದು ಐವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ ಸ್ಪಷ್ಟಪಡಿಸಿದೆ. ಕೌಟುಂಬಿಕ ನ್ಯಾಯಾಲಯದ ಮೂಲಕ ಸಹಮತದ ವಿಚ್ಛೇದನ ಪಡೆಯಲು ಪತಿ, ಪತ್ನಿ ಆರರಿಂದ ಹದಿನೆಂಟು ತಿಂಗಳವರೆಗೆ ಕಾಯಬೇಕಾಗುತ್ತದೆ. ಪತಿ, ಪತ್ನಿ ಪೈಕಿ ಯಾರಾದರೊಬ್ಬರು ವಿಚ್ಛೇದನಕ್ಕೆ ಒಪ್ಪಿಗೆ ನೀಡದೆ ಇದ್ದರೂ, ತಾನು ಅಂತಿಮ ನಿರ್ಣಯ ನೀಡುವ ಅಧಿಕಾರ ಹೊಂದಿದ್ದೇನೆ ಎಂದು ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್‌ನ ನಿಲುವು, ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಅನುಸರಿಸಲಾಗುವ 1955ರ ಹಿಂದೂ ವಿವಾಹ ಕಾಯ್ದೆಯಲ್ಲಿ ಹೇಳಿರುವ ನಿಯಮಗಳಿಗೆ ಭಿನ್ನವಾಗಿದೆ. ಈ ಕಾಯ್ದೆಯ ನಿಯಮಗಳ ಅನ್ವಯ, ಪತಿ ಅಥವಾ ಪತ್ನಿಯ ಪೈಕಿ ಯಾರಾದರೊಬ್ಬರು ವೈವಾಹಿಕ ತಪ್ಪು ಎಸಗಿದ್ದರೆ ಮಾತ್ರ ವಿಚ್ಚೇದನ ನೀಡಲು ಅವಕಾಶ ಇದೆ. ಆದರೆ 1955ರ ಕಾಯ್ದೆಯ ಅನ್ವಯ, ‘ವಿವಾಹ ಸಂಬಂಧವು ಸರಿಪಡಿಸಲಾಗದಷ್ಟು ಹಾಳಾಗಿದ್ದರೆ’ ಎಂಬುದು ವಿಚ್ಛೇದನ ನೀಡಲು ಆಧಾರ ಅಲ್ಲ. ಪತಿ ಅಥವಾ ಪತ್ನಿಯ ಪೈಕಿ ಯಾರಾದರೊಬ್ಬರು ತಪ್ಪು ಮಾಡಿದ ಸಂದರ್ಭವಲ್ಲದೆ; ಹಿಂಸೆ, ವಂಚನೆ ಅಥವಾ ಕ್ರೌರ್ಯದ ಆರೋಪ ಇಲ್ಲದಿದ್ದಾಗಲೂ, ವಿವಾಹ ವಿಚ್ಛೇದನಕ್ಕೆ ಆದೇಶ ನೀಡುವ ಬಗ್ಗೆ ಪರಿಗಣಿಸಲು ಅವಕಾಶ ಇದೆ ಎಂಬುದನ್ನು ಈಗ ಕೋರ್ಟ್‌ ಒಪ್ಪಿದೆ. ಕೋರ್ಟ್‌ನ ಈ ಆಲೋಚನೆಯು ಬಹಳ ಮುಖ್ಯವಾದುದು. ಸಾಮಾಜಿಕ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳ ಕಾರಣದಿಂದಾಗಿ ಮೂಡುವ ಪರಿಸ್ಥಿತಿಯನ್ನು ಅಂದಾಜಿಸಲು ಇಲ್ಲಿ ಕೋರ್ಟ್ ಯತ್ನಿಸಿದೆ. ಮದುವೆಯ ಸಂಬಂಧದ ವಿಚಾರದಲ್ಲಿ ಹಲವು ಬದಲಾವಣೆಗಳು ಈಗಾಗಲೇ ಉಂಟಾಗಿವೆ. ಆ ಬದಲಾವಣೆಗಳನ್ನು ಕಾನೂನು ಕೂಡ ಗುರುತಿಸಬೇಕು ಎಂಬುದನ್ನು ಸುಪ್ರೀಂ ಕೋರ್ಟ್‌ನ ಆದೇಶವು ಹೇಳುತ್ತಿದೆ. ಸುಪ್ರೀಂ ಕೋರ್ಟ್‌ ಇಷ್ಟೆಲ್ಲ ಹೇಳುವ ಸಂದರ್ಭದಲ್ಲಿ ಕೆಲವು ಎಚ್ಚರಿಕೆಯ ಮಾತುಗಳನ್ನು ಕೂಡ ಆಡಿದೆ. ವಿವಾಹ ಸಂಬಂಧವನ್ನು ಕೊನೆಗೊಳಿಸುವ ಸಂದರ್ಭದಲ್ಲಿ ಪಾಲನೆ ಮಾಡಬೇಕಿರುವ ನಿಯಮಗಳನ್ನು ಕೂಡ ಅದು ರೂಪಿಸಿದೆ. ಪತಿ ಮತ್ತು ಪತ್ನಿ ಎಷ್ಟು ಕಾಲ ಒಟ್ಟಿಗೆ ಬಾಳಿದ್ದರು, ಸಂಗಾತಿಯ ಮೇಲೆ ಇರುವ ಆರೋಪಗಳು ಏನು, ದಾಂಪತ್ಯದಲ್ಲಿನ ಸಮಸ್ಯೆಯನ್ನು ಪರಿಹರಿಸಲು ಎಷ್ಟು ಬಾರಿ ಯತ್ನ ನಡೆದಿತ್ತು ಎಂಬುದನ್ನೆಲ್ಲ ಪರಿಗಣಿಸಬೇಕು ಎಂದು ಕೋರ್ಟ್ ಹೇಳಿದೆ. ವಿಚ್ಛೇದನವನ್ನು ಹಕ್ಕಿನ ನೆಲೆಯಲ್ಲಿ ಕೊಡುವುದಲ್ಲ; ಬದಲಿಗೆ, ಅದನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಿ ತೀರ್ಮಾನಿಸಬೇಕು ಎಂದು ಹೇಳಿದೆ. ಜಾಗರೂಕತೆಯಿಂದ ಪರಿಗಣಿಸಬೇಕಿರುವ ಅಂಶಗಳು ಹಾಗೂ ಪಾಲಿಸಬೇಕಿರುವ ನಿಯಮಗಳು ಬಹಳ ಮುಖ್ಯವಾಗುತ್ತವೆ. ಏಕೆಂದರೆ, ಅಸಮಾನತೆ ಇರುವ ಈ ವ್ಯವಸ್ಥೆಯಲ್ಲಿ ವಿವಾಹ ವಿಚ್ಛೇದನಗಳನ್ನು ಅಸ್ತ್ರದ ರೂಪದಲ್ಲಿ ಬಳಕೆ ಮಾಡಿರುವುದೂ ಇದೆ. ಈಗ ಸು‍ಪ್ರೀಂ ಕೋರ್ಟ್‌ ಹೇಳಿರುವ ಬಗೆಯಲ್ಲಿ ವಿವಾಹ ವಿಚ್ಛೇದನ ನೀಡಲು ಸುಪ್ರೀಂ ಕೋರ್ಟ್‌ಗೆ ಮಾತ್ರ ಅವಕಾಶ ಇದೆ. ಹೊಸ ತತ್ವವನ್ನು ಆಧರಿಸಿ ಕೌಟುಂಬಿಕ ನ್ಯಾಯಾಲಯಗಳು ವಿಚ್ಛೇದನ ನೀಡಲು ಅವಕಾಶ ಇಲ್ಲ. ಆದರೆ, ಈ ತೀರ್ಪು ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ತಾತ್ವಿಕತೆಯ ಪರಿಧಿಯನ್ನು ಹಿಗ್ಗಿಸಿದೆ ಎಂಬುದಂತೂ ನಿಜ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.