ಸಂಪಾದಕೀಯ: ಮತದ ಮೌಲ್ಯ ಮುಕ್ಕುಗೊಳ್ಳದಿರಲಿ ವಿವೇಕ–ಪ್ರಜ್ಞಾವಂತಿಕೆ ಜೊತೆಗಿರಲಿ ವಿಧಾನಸಭಾ ಚುನಾವಣೆ ರೂಪದಲ್ಲಿ ಕರ್ನಾಟಕದ ಮತದಾರರ ಎದುರು ಸಂಭ್ರಮ ಮತ್ತು ಹೊಣೆಗಾರಿಕೆ ಮಿಳಿತಗೊಂಡ ಸಂದರ್ಭವೊಂದು ಎದುರಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಚುನಾವಣೆಯನ್ನೂ ಮತದಾರರ ಹಬ್ಬವೆಂದು ಪರಿಗಣಿಸಲಾಗುತ್ತದೆ. ಪ್ರಜಾಪ್ರಭುತ್ವದ ಆಶಯ ಪೂರ್ಣರೂಪದಲ್ಲಿ ಸಾಕಾರಗೊಳ್ಳುವುದರಲ್ಲಿ ಚುನಾವಣೆಗಳ ಪಾತ್ರ ಬಹು ದೊಡ್ಡದು. ಜನರ ಆಶೋತ್ತರಗಳ ರೂಪದಲ್ಲಿ ಚುನಾವಣೆಯಲ್ಲಿ ಆರಿಸಿಬರುವ ಪ್ರತಿನಿಧಿಗಳು ಶಾಸಕಾಂಗದ ಭಾಗವಾಗುವುದರಿಂದ, ಆ ಪ್ರತಿನಿಧಿಗಳು ಯಾರಾಗಬೇಕೆನ್ನುವುದನ್ನು ನಿರ್ಧರಿಸುವ ಹೊಣೆಗಾರಿಕೆಯನ್ನು ಹೊಂದಿರುವ ಮತದಾರರು ತಮ್ಮ ಹಕ್ಕನ್ನು ವಿವೇಚನೆಯಿಂದ ಚಲಾಯಿಸಬೇಕಾಗಿರುತ್ತದೆ. ನಾಳೆಗಳ ಆಗುಹೋಗುಗಳನ್ನು ನಿಭಾಯಿಸಬೇಕಾದ ಪ್ರತಿನಿಧಿಗಳ ಆಯ್ಕೆ ಸಮರ್ಪಕವಾಗಿಲ್ಲದೆ ಹೋದರೆ, ಅದರ ಪರಿಣಾಮಗಳನ್ನು ಮತದಾರರೇ ಅನುಭವಿಸಬೇಕಾಗುತ್ತದೆ. ಮತದಾನ ಎನ್ನುವುದು ಮುಂದಿನ ಐದು ವರ್ಷಗಳ ಸುಗ್ಗಿಯನ್ನು ಇಂದೇ ನಿರ್ಣಯಿಸುವ ಬಿತ್ತನೆಯಿದ್ದಂತೆ. ಬಿತ್ತಿದಂತೆ ಬೆಳೆ ಎನ್ನುವುದು ಚುನಾವಣೆಯೇ ಕೇಂದ್ರವಾಗಿರುವ ರಾಜಕಾರಣಕ್ಕೂ ಒಪ್ಪುವ ಮಾತು. ಚುನಾವಣೆ ಎನ್ನುವ ಮತದಾರರ ಹಬ್ಬದಲ್ಲಿ ಸಂಭ್ರಮವಷ್ಟೇ ಇರುವುದಿಲ್ಲ; ಹೊಣೆಗಾರಿಕೆಯೂ ಇರುತ್ತದೆ. ತಾನು ಚಲಾಯಿಸುವ ಮತ ಮೌಲ್ಯಯುತವಾದುದು ಎನ್ನುವ ಅರಿವು ಮತದಾರರಿಗೆ ಅಗತ್ಯ. ‘ಮತ ಚಲಾವಣೆ’ ಎನ್ನುವ ಪರಿಕಲ್ಪನೆ ಹೊಣೆಗಾರಿಕೆಯನ್ನೇ ಸೂಚಿಸುತ್ತದೆ. ಅಭ್ಯರ್ಥಿಯ ಯೋಗ್ಯತೆಯನ್ನು ಪರಿಶೀಲಿಸಿ ನೀಡಬೇಕಾದ ಮತವನ್ನು ಮತದಾರರು ವಿವೇಚನೆಯಿಂದ ಬಳಸಿದಾಗಷ್ಟೇ ಪ್ರಜಾಪ್ರಭುತ್ವದ ಆರೋಗ್ಯ ಸ್ವಸ್ಥವಾಗಿರಬಲ್ಲದು. ಚಲಾವಣೆಗೊಳ್ಳುವ ಪ್ರತಿಯೊಂದು ಮತವೂ ಪ್ರಜಾಪ್ರಭುತ್ವ ವ್ಯವಸ್ಥೆಯ ಕಟ್ಟಡವನ್ನು ಬಲಪಡಿಸುತ್ತಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಭ್ಯರ್ಥಿಗಳ ಅರ್ಹತೆಗಿಂತಲೂ ಅವರ ಧನಬಲ ಹಾಗೂ ಜಾತಿಬಲಗಳೇ ಚುನಾವಣಾ ಕಣದಲ್ಲಿ ಹೆಚ್ಚು ಸುದ್ದಿ ಮಾಡುತ್ತಿವೆ. ಪ್ರಜ್ಞಾವಂತ ಮತದಾರರು ಅಭ್ಯರ್ಥಿಗಳು ಒಡ್ಡುವ ಯಾವುದೇ ರೂಪದ ಆಮಿಷಗಳಿಗೆ ಮರುಳಾಗದೆ, ತಮ್ಮ ಮತದ ಮೌಲ್ಯ ಉಳಿಸಿಕೊಳ್ಳುವುದು ಅಗತ್ಯ. ಸಾರ್ವಜನಿಕ ವಲಯದಲ್ಲಿ ನೈತಿಕತೆ ನಿರೀಕ್ಷಿಸುವವರು ವೈಯಕ್ತಿಕ ಹಂತದಲ್ಲೂ ನೈತಿಕತೆಯನ್ನು ಅನುಸರಿಸುವುದು ಅಗತ್ಯ. ಪ್ರಸಕ್ತ ಚುನಾವಣೆಯಲ್ಲಿ ಮೌಲ್ಯಯುತ ಮತದಾನವನ್ನು ಸಾಧ್ಯವಾಗಿಸುವ ಜವಾಬ್ದಾರಿ ಎಲ್ಲ ಮತದಾರರ ಮುಂದಿದೆ. ನಾಡಿನ ವಿವೇಕವನ್ನು ದೇಶದ ಮುಂದೆ ಮತ್ತೊಮ್ಮೆ ಅನಾವರಣಗೊಳಿಸಲಿಕ್ಕೆ ಇರುವ ಅವಕಾಶವನ್ನು ಕನ್ನಡಿಗರು ಕಳೆದುಕೊಳ್ಳಬಾರದು. ಜನಸಾಮಾನ್ಯರಿಗೆ ಮತದಾನದ ಅರಿವನ್ನು ಮೂಡಿಸಲು ಚುನಾವಣಾ ಆಯೋಗ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ಇತ್ತೀಚಿನ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕ ಹುಟ್ಟಿಸುವ ಸಂಗತಿ. ಮತದಾನದ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸುವವರಲ್ಲಿ ವಿದ್ಯಾವಂತರು ಹಾಗೂ ನಗರ ಪ್ರದೇಶದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಚುನಾವಣೆಯ ದಿನ ಮತಕೇಂದ್ರಗಳಲ್ಲಿ ಜನರ ಸಾಲು ಕಾಣಿಸಿಕೊಳ್ಳುವ ಬದಲು, ಪ್ರವಾಸಿ ತಾಣಗಳಲ್ಲಿ ಜನಸಂದಣಿ ಉಂಟಾಗುತ್ತಿದೆ. ಸಣ್ಣಪುಟ್ಟ ನೆಪಗಳನ್ನು ಹೇಳಿಕೊಂಡು ವೋಟು ಹಾಕದಿರುವವರೂ ಇದ್ದಾರೆ. ಯಾರು ಅಧಿಕಾರಕ್ಕೆ ಬಂದರೂ ಪರಿಸ್ಥಿತಿಯಲ್ಲಿ ಏನೂ ಸುಧಾರಣೆಯಾಗದು ಎನ್ನುವ ನಿರಾಶಾಭಾವವೂ ಮತ ಚಲಾವಣೆಯಿಂದ ದೂರವುಳಿಯಲು ಕಾರಣಗಳಲ್ಲೊಂದಾಗಿದೆ. ಆದರೆ, ಇಂಥ ಯಾವ ಕಾರಣಗಳೂ ಚುನಾವಣೆಯಿಂದ ದೂರ ಉಳಿಯಲಿಕ್ಕೆ ಸಮರ್ಥನೆ ಆಗಬಾರದು. ಸಂವಿಧಾನ ಕಲ್ಪಿಸಿರುವ ಪರಮೋಚ್ಚ ಹಕ್ಕನ್ನು ಚಲಾಯಿಸುವುದು ಮತದಾರರ ಕರ್ತವ್ಯ. ಆ ಕರ್ತವ್ಯದಿಂದ ವಿಮುಖವಾಗುವುದು ನಮಗೆ ನಾವು ಮಾಡಿಕೊಳ್ಳುವ ವಂಚನೆಯಷ್ಟೇ ಅಲ್ಲ; ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಅಳ್ಳಕಗೊಳಿಸುವ ಪ್ರಯತ್ನವೂ ಹೌದು. ಬಂಧುಮಿತ್ರರೊಂದಿಗೆ ಹಬ್ಬವನ್ನು ಮನೆಗಳಲ್ಲಿ ಆಚರಿಸುವಂತೆ, ‘ಚುನಾವಣಾ ಹಬ್ಬ’ವನ್ನು ಸಾರ್ವಜನಿಕವಾಗಿ ಸಂಭ್ರಮಿಸಬೇಕು. ಕುಟುಂಬವರ್ಗ ಹಾಗೂ ಸ್ನೇಹಿತರು ಮತದಾನ ಮಾಡುವಂತೆ ನೋಡಿಕೊಳ್ಳುವುದು ಕೂಡ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ. ಚುನಾವಣಾ ಸಂದರ್ಭವು ಪುಂಡು ಪೋಕರಿಗಳ ಚಟುವಟಿಕೆಗಳಿಗೆ ಹಾಗೂ ಸಾಮಾಜಿಕ ಸೌಹಾರ್ದ ಕದಡುವುದರಲ್ಲಿ ಲಾಭ ಕಂಡುಕೊಳ್ಳುವ ಕಿಡಿಗೇಡಿಗಳಿಗೆ ಅಖಾಡವೂ ಹೌದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸದೆ, ವದಂತಿಗಳಿಗೆ ಕಿವಿಗೊಡದೆ, ಪ್ರಲೋಭನೆಗಳಿಗೆ ಮಾರುಹೋಗದೆ ಅಂತಃಸಾಕ್ಷಿಗೆ ಓಗೊಟ್ಟು ಮತ ಚಲಾಯಿಸುವುದರ ಮೂಲಕ ಕರ್ನಾಟಕದ ಮತದಾರರು ಪ್ರಜ್ಞಾವಂತಿಕೆಯನ್ನು ಮೆರೆಯುವ ಅವಕಾಶವನ್ನು ಬಿಟ್ಟುಕೊಡಬಾರದು. ಈ ಚುನಾವಣೆ, ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ಮಾತು ಬರಿಯ ವಿಶೇಷಣವಾಗಿರದೆ, ಈ ನಾಡಿನ ಜೀವನವಿಧಾನವೇ ಆಗಿದೆ ಎನ್ನುವುದನ್ನು ಸಾಬೀತುಪಡಿಸಲು ಮತದಾರರಿಗೆ ದೊರೆತಿರುವ ಅವಕಾಶವೂ ಹೌದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.