ವಿಧಾನಸಭೆ ಚುನಾವಣೆ ಫಲಿತಾಂಶ: ದೃಢ ಸರ್ಕಾರಕ್ಕೆ ಜನಾದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ನೀಡಿದ ತೀರ್ಪು ನಿಚ್ಚಳವಾಗಿದೆ, ಸಂದೇಶ ಸ್ಪಷ್ಟವಾಗಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸರಳ ಬಹುಮತ ಸಿಕ್ಕಿರಲಿಲ್ಲ. ಹಾಗಾಗಿಯೇ ಕಾಂಗ್ರೆಸ್‌–ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿತ್ತು. ಬಳಿಕ, ಈ ಎರಡೂ ಪಕ್ಷಗಳ ಹಲವು ಶಾಸಕರನ್ನು ‘ಆಪರೇಷನ್‌ ಕಮಲ’ ಮೂಲಕ ಸೆಳೆದುಕೊಂಡ ಬಿಜೆಪಿ ಸರ್ಕಾರ ರಚಿಸಿತು. ಕರ್ನಾಟಕವು ಅನೈತಿಕ ಮತ್ತು ಅಸಹ್ಯಕರ ರಾಜಕಾರಣಕ್ಕೆ ಸಾಕ್ಷಿಯಾಗಬೇಕಾಯಿತು. ಬಹುಮತವನ್ನು ‘ಸೃಷ್ಟಿ’ಸಿಕೊಂಡಿದ್ದ ಬಿಜೆಪಿಯು ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿತು. ಆದರೆ, ಅರ್ಧದಲ್ಲಿಯೇ ಅವರನ್ನು ಇಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿತು. ಇಂತಹುದಕ್ಕೆಲ್ಲ ಅವಕಾಶವೇ ಇರಬಾರದು ಎಂದು ಮತದಾರರು ನಿರ್ಧರಿಸಿದ್ದಾರೆ ಎಂಬುದನ್ನು ಈ ಬಾರಿಯ ಫಲಿತಾಂಶವು ಸಾರಿ ಹೇಳಿದೆ. ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತಾವಧಿಯ ಉದ್ದಕ್ಕೂ ಭ್ರಷ್ಟಾಚಾರ ಮತ್ತು ಅದಕ್ಷತೆಯ ಆರೋಪಗಳು ಕೇಳಿಬಂದವು. ಗುತ್ತಿಗೆ ಹಣ ಪಡೆಯಬೇಕಿದ್ದರೆ ಶೇ 40ರಷ್ಟು ಕಮಿಷನ್‌ ನೀಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಡಿದ ಆರೋಪವು ರಾಜ್ಯದಲ್ಲಿ ಬಿಜೆಪಿಗೆ ದುಬಾರಿ ಅನಿಸಿಕೊಂಡಿತು. ಸರ್ಕಾರಿ ಕಚೇರಿಗಳಲ್ಲಿಯೂ ವ್ಯಾಪಕವಾಗಿದ್ದ ಲಂಚಗುಳಿತನದಿಂದ ಜನರು ಪರಿತಪಿಸಿದ್ದರು. ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದ ಹೆಚ್ಚಿನವರು ಸೋತಿದ್ದಾರೆ ಎಂಬುದು ಆಡಳಿತ ವಿರೋಧಿ ಅಲೆ ಎಷ್ಟು ಬಲವಾಗಿತ್ತು ಎಂಬುದಕ್ಕೆ ಪುರಾವೆ ಒದಗಿಸುತ್ತದೆ. ಬೆಲೆ ಏರಿಕೆಯು ಜನರನ್ನು ಹೈರಾಣಾಗಿಸಿತ್ತು ಎಂಬುದು ತಳಮಟ್ಟದ ವಾಸ್ತವ. ಅಡುಗೆ ಅನಿಲ ಸಿಲಿಂಡರ್‌ ಬೆಲೆಯು ₹ 1,100 ದಾಟಿದ್ದು ಬಡವರು ಮತ್ತು ಮಧ್ಯಮ ವರ್ಗದವರ ಬೆನ್ನು ಮುರಿಯುವಂತೆ ಮಾಡಿತ್ತು. ಅಗತ್ಯ ವಸ್ತುಗಳ ಬೆಲೆಯೂ ಗಗನಮುಖಿಯಾಗಿಯೇ ಇದ್ದುದರಿಂದ ನಿತ್ಯದ ವೆಚ್ಚವು ಜನರಿಗೆ ಹೊರೆಯಾಯಿತು. ಪಠ್ಯಪುಸ್ತಕ ಪರಿಷ್ಕರಣೆಯಂತಹ ವಿಚಾರವನ್ನು ಕೂಡ ಬಿಜೆಪಿ ಸರ್ಕಾರವು ಕೋಮು ಧ್ರುವೀಕರಣಕ್ಕೆ ಬಳಸಿಕೊಂಡಿತು. ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಯತ್ನ ನಿರಂತರವಾಗಿ ನಡೆದಿದೆ ಎಂಬುದು ಕೂಡ ಪ್ರಜ್ಞಾವಂತ ಜನರ ಕಳವಳಕ್ಕೆ ಕಾರಣವಾಗಿತ್ತು. ಕೋವಿಡ್‌ ಸಾಂಕ್ರಾಮಿಕ, ಅತಿವೃಷ್ಟಿ, ಪ್ರವಾಹದ ಸಂದರ್ಭದಲ್ಲಿ ಕೇಂದ್ರದ ನಾಯಕತ್ವವು ರಾಜ್ಯವನ್ನು ನಿರ್ಲಕ್ಷಿಸಿತು, ಜಿಎಸ್‌ಟಿ ಬಾಕಿ ಪಾವತಿಯಲ್ಲಿಯೂ ಅಸಡ್ಡೆ ತೋರಿತು ಎಂಬ ಆರೋಪಗಳು ಜನರಿಗೆ ನಿಜ ಎನ್ನಿಸುವಷ್ಟು ವಾಸ್ತವಕ್ಕೆ ಹತ್ತಿರವಿದ್ದವು. ಈ ಎಲ್ಲವೂ ಚುನಾವಣೆ ಘೋಷಣೆಗೆ ಬಹಳ ಮುನ್ನವೇ ಆಡಳಿತ ವಿರೋಧಿ ಅಲೆ ಸೃಷ್ಟಿಸಿದ್ದವು ಎಂಬುದರಲ್ಲಿ ಸಂದೇಹವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವು ಸಕಾರಾತ್ಮಕ ಧೋರಣೆ ಇರಿಸಿಕೊಂಡು ಚುನಾವಣಾ ಪ್ರಚಾರ ನಡೆಸಿತು ಎಂಬುದು ಎದ್ದು ಕಾಣುವಂತಿತ್ತು. ನಾಯಕರ ನಡುವಣ ಒಗ್ಗಟ್ಟು ಪ್ರದರ್ಶನವು ಜನರಲ್ಲಿ ಭರವಸೆ ಮೂಡಿಸಬಹುದು ಎಂಬ ಕಾಂಗ್ರೆಸ್‌ನ ಲೆಕ್ಕಾಚಾರವು ಹುಸಿಯಾಗಲಿಲ್ಲ. ಅದಕ್ಕೆ ಪ್ರತಿಯಾಗಿ, ಬಿಜೆಪಿಯಲ್ಲಿ ರಾಜ್ಯ ಮಟ್ಟದ ಗಟ್ಟಿ ನಾಯಕರು ಇರಲಿಲ್ಲ. ಬಿಜೆಪಿಯ ವರಿಷ್ಠ ಮುಖಂಡರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವರ್ಚಸ್ಸು ಬಳಸಿಯೇ ಗೆಲ್ಲಬಹುದು ಎಂಬ ಬಿಜೆಪಿಯ ಯೋಚನೆಯೂ ಕೈ ಹಿಡಿಯಲಿಲ್ಲ. ಜನರ ಸಂಕಷ್ಟ, ಸ್ಥಳೀಯ ವಿಚಾರಗಳೇ ಚುನಾವಣೆಯ ವಿಷಯವಾದಾಗ ಕೇಂದ್ರದ ಪ್ರಬಲ ನಾಯಕತ್ವವು ಮೋಡಿ ಮಾಡುವುದು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಕೇಂದ್ರ ನಾಯಕತ್ವವು ದುರ್ಬಲವಾಗಿದ್ದರೂ ರಾಜ್ಯದ ನಾಯಕರು ಬೆವರು ಸುರಿಸಿದ್ದು ಹುಸಿ ಹೋಗಲಿಲ್ಲ. ಬಿಜೆಪಿಯ ಪ್ರಚಾರವು ರಕ್ಷಣಾತ್ಮಕ ಆಟಕ್ಕೆ ಸೀಮಿತವಾಗಿದ್ದರೆ, ಕಾಂಗ್ರೆಸ್‌ನ ಪ್ರಚಾರವು ಸೃಜನಶೀಲವಾಗಿತ್ತು. ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯು ಪ್ರತಿಸ್ಪರ್ಧಿ ಪಕ್ಷಗಳಿಗಿಂತ ಉತ್ತಮವಾಗಿತ್ತು. ‘ಸಮಾಜದಲ್ಲಿ ದ್ವೇಷ ಬಿತ್ತುವ ಬಜರಂಗ ದಳದಂತಹ ಸಂಘಟನೆಗಳ ನಿಷೇಧ’ ಎಂಬ ಭರವಸೆಯನ್ನು ಧರ್ಮದ ನೆಲೆಯಲ್ಲಿ ಬಳಸಿಕೊಳ್ಳಲು ಮೋದಿಯವರೂ ಸೇರಿದಂತೆ ಬಿಜೆಪಿ ನಾಯಕರು ಪ್ರಯತ್ನಿಸಿದರು. ಹನುಮಾನ್‌ ಚಾಲೀಸ ಪಠಣಕ್ಕೆ ಅಭಿಯಾನದ ಸ್ವರೂಪ ಕೊಡುವ ಯತ್ನವೂ ನಡೆಯಿತು. ಆದರೆ, ಜಾತಿ–ಧರ್ಮಕ್ಕಿಂತ ಕಾಂಗ್ರೆಸ್‌ ಪಕ್ಷವು ಮತದಾರರ ಮನದಲ್ಲಿ ಮೂಡಿಸಿದ ಜನಕಲ್ಯಾಣ ಕಾರ್ಯಕ್ರಮಗಳ ಕನಸುಗಳಿಗೇ ಜನರು ಮಾರುಹೋದರು. ಕಾಂಗ್ರೆಸ್ ಪಕ್ಷದ ‘ಗ್ಯಾರಂಟಿ’ಗಳಾದ ‘ಯುವನಿಧಿ’, ‘ಗೃಹಜ್ಯೋತಿ’, ‘ಅನ್ನಭಾಗ್ಯ’, ‘ಗೃಹಲಕ್ಷ್ಮಿ’ ಮತ್ತು ‘ಶಕ್ತಿ’ ಭರವಸೆಗಳಿಂದ ಜನರು ಆಕರ್ಷಿತರಾದರು. ಕೋವಿಡ್‌ ಸಾಂಕ್ರಾಮಿಕದಿಂದಾದ ಸಂಕಷ್ಟ, ನಿರುದ್ಯೋಗ ಮತ್ತು ಹಣದುಬ್ಬರ ತೀವ್ರವಾಗಿರುವ ಈ ಸಂದರ್ಭದಲ್ಲಿ ಜನರಿಗೆ ಇಂತಹ ಯೋಜನೆಗಳ ಅಗತ್ಯವೂ ಇದೆ. ನಿರುದ್ಯೋಗಿ ಯುವಜನರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯಿಂದಾಗಿ ಯುವಜನರು ಕಾಂಗ್ರೆಸ್‌ನತ್ತ ಆಕರ್ಷಿತರಾಗಿರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಮೇಲಿದ್ದ ಭ್ರಷ್ಟಾಚಾರ ಆರೋಪ, ಕೇಂದ್ರವು ರಾಜ್ಯವನ್ನು ಕಡೆಗಣಿಸಿದೆ ಎಂಬ ಆರೋಪವನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಕಾಂಗ್ರೆಸ್‌ ಯಶಸ್ಸು ಕಂಡಿದ್ದೇ ಗೆಲುವಿಗೆ ದೊಡ್ಡ ಕೊಡುಗೆ ಕೊಟ್ಟಿದೆ. ಹಿರಿತಲೆಗಳನ್ನು ಬದಿಗೆ ಸರಿಸಿ, ಹೊಸ ಮುಖಗಳಿಗೆ ಅವಕಾಶ ನೀಡುವ ಕಾರ್ಯತಂತ್ರವು ಬಿಜೆಪಿ ತೀರಾ ಪಾತಾಳಕ್ಕೆ ಕುಸಿಯುವುದನ್ನು ತಡೆದಿದೆ. ಈ ಕಾರ್ಯತಂತ್ರವು ಬಿಜೆಪಿಗೆ ಹೊಸ ಹುಮ್ಮಸ್ಸು ತರಬಹುದು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ಕಾಂಗ್ರೆಸ್ ಕೊಟ್ಟಿದೆ. ಅದನ್ನು ನೆರವೇರಿಸುವುದರ ಜೊತೆಗೆ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಬೇಕಾದ ದೊಡ್ಡ ಸವಾಲು ಹೊಸ ಸರ್ಕಾರದ ಮುಂದೆ ಇದೆ. ಇದಷ್ಟೇ ಅಲ್ಲದೆ ಹೊಸ ಸರ್ಕಾರಕ್ಕೆ ಸವಾಲುಗಳ ಸರಮಾಲೆಯೇ ಎದುರಾಗಲಿದೆ. ಸರ್ಕಾರ ರಚನೆಯಾದ ಕೆಲವೇ ವಾರಗಳಲ್ಲಿ ಮುಂಗಾರು ಋತು ಆರಂಭವಾಗಲಿದೆ. ಕಳೆದ ಕೆಲ ವರ್ಷಗಳಲ್ಲಿ ಪ್ರತಿ ಬಾರಿಯೂ ಮುಂಗಾರು ಋತು ರಾಜ್ಯದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಅತಿವೃಷ್ಟಿ, ಪ್ರವಾಹ ಎದುರಿಸುವ ಸಿದ್ಧತೆಯನ್ನು ಸರ್ಕಾರವು ಆರಂಭದಲ್ಲಿಯೇ ಮಾಡಿಕೊಳ್ಳಬೇಕು. ರೈತರ, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ. ಕೊಟ್ಟ ಭರವಸೆಗಳನ್ನು ಪ್ರಾಮಾಣಿಕವಾಗಿ ಮತ್ತು ದಕ್ಷವಾಗಿ ಈಡೇರಿಸಬೇಕಿದೆ. ಇಲ್ಲದೇ ಹೋದರೆ, ಈ ಭರವಸೆಗಳನ್ನು ನಂಬಿ ಮತ ಹಾಕಿರುವ ಮತದಾರ ಮುನಿಯುತ್ತಾನೆ ಎಂಬುದನ್ನು ಕಾಂಗ್ರೆಸ್‌ ಪಕ್ಷವು ಗಮನದಲ್ಲಿ ಇರಿಸಿಕೊಳ್ಳಬೇಕಿದೆ. ಮೂರು ದಶಕಗಳಲ್ಲಿಯೇ ಇಷ್ಟೊಂದು ಬಹುಮತವನ್ನು ಮತದಾರ ಯಾವ ಪಕ್ಷಕ್ಕೂ ಕೊಟ್ಟಿರಲಿಲ್ಲ ಎಂಬುದು ಕಾಂಗ್ರೆಸ್‌ನ ಹೊಣೆಗಾರಿಕೆಯು ಇನ್ನೂ ಹೆಚ್ಚುವಂತೆ ಮಾಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.