ಸಂಪಾದಕೀಯ – ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ : ವಿವಾದಗಳಿಗೆ ರಾಜಕೀಯ ಪರಿಹಾರ ಬೇಕು ಮಣಿಪುರ ರಾಜ್ಯದ ಹಲವು ಕಡೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆ ರಾಜ್ಯದ ಬುಡಕಟ್ಟು ಸಮುದಾಯಗಳು ಹಾಗೂ ಅಲ್ಲಿನ ಮುಖ್ಯವಾಹಿನಿಯ ಮೈತೇಯಿ ಸಮುದಾಯದ ನಡುವೆ ಬಹುಕಾಲದಿಂದ ಮೂಡಿದ್ದ ಅನುಮಾನ ಮತ್ತು ತ್ವೇಷದ ವಾತಾವರಣವು ವಿಕೋಪಕ್ಕೆ ಹೋಗಿದ್ದರ ಪರಿಣಾಮ ಇದು. ಮಣಿಪುರ ರಾಜ್ಯದಲ್ಲಿ ಕುಕಿ ಮತ್ತು ನಾಗಾ ಬುಡಕಟ್ಟು ಸಮುದಾಯಗಳಿಗೆ ಮೀಸಲಾತಿಯ ಪ್ರಯೋಜನ ಕಲ್ಪಿಸಲಾಗಿದೆ. ಮೈತೇಯಿ ಸಮುದಾಯದವರು ತಮ್ಮನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇರಿಸಿದ್ದಾರೆ. ಮಣಿಪುರ ಹೈಕೋರ್ಟ್‌ ಈಚೆಗೆ ನೀಡಿದ ಆದೇಶದಲ್ಲಿ, ಈ ಬೇಡಿಕೆಯ ವಿಚಾರವಾಗಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಒಂದು ತಿಂಗಳೊಳಗೆ ತನ್ನ ಶಿಫಾರಸನ್ನು ಕಳುಹಿಸಬೇಕು ಎಂದು ಸೂಚಿಸಿತು. ಈ ಸೂಚನೆಯು ಮೈತೇಯಿ ಸಮುದಾಯದವರ ಬೇಡಿಕೆಗೆ ಬಲ ತಂದುಕೊಟ್ಟಿತು. ಇದು ಮೈತೇಯಿ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸುವತ್ತ ಒಂದು ಹೆಜ್ಜೆ ಮುಂದಡಿ ಇರಿಸಿದಂತೆ ಎಂದು ಭಾವಿಸಲಾಯಿತು. ಈ ಸೂಚನೆಯನ್ನು ವಿರೋಧಿಸಿ ಬುಡಕಟ್ಟು ಸಮುದಾಯಗಳು ಬುಧವಾರ ಒಗ್ಗಟ್ಟಿನ ನಡಿಗೆಯನ್ನು ಆಯೋಜಿಸಿದವು. ಪ್ರತಿಭಟನಾ ನಡಿಗೆಯ ಸಂದರ್ಭದಲ್ಲಿ ವ್ಯಾಪಕ ಗಲಭೆ ನಡೆಯಿತು. ಹಿಂಸಾಚಾರ ಕೂಡ ನಡೆಯಿತು. ಅಲ್ಲಿ ಹಿಂಸಾಚಾರ ನಿಲ್ಲಿಸಲು ಸೇನೆಯನ್ನು ಮತ್ತು ಅಸ್ಸಾಂ ರೈಫಲ್ಸ್‌ನ ಯೋಧರನ್ನು ಕರೆಸಿಕೊಳ್ಳಲಾಗಿದೆ. ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮೀಸಲಾತಿಯು ಈಚಿನ ದಿನಗಳಲ್ಲಿ ಸಾಮಾಜಿಕ ಸಂಘರ್ಷ ಹಾಗೂ ರಾಜಕೀಯ ವಿವಾದಗಳಿಗೆ ಹೆಚ್ಚೆಚ್ಚು ಕಾರಣವಾಗುತ್ತಿದೆ. ಹಲವು ಸಮುದಾಯಗಳು ತಮಗೂ ಮೀಸಲಾತಿ ಬೇಕು ಎಂದು ಕೇಳುತ್ತಿವೆ. ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಹಲವು ಸಮುದಾಯಗಳು ಬೇರೆ ಸಮುದಾಯಗಳಿಗೆ ಈ ಸೌಲಭ್ಯ ವಿಸ್ತರಿಸುವುದನ್ನು ವಿರೋಧಿಸುತ್ತಿವೆ. ಮಣಿಪುರ ರಾಜ್ಯದಲ್ಲಿ ಮೈತೇಯಿ ಸಮುದಾಯದ ಜನ ಬಹುಸಂಖ್ಯಾತರು. ಅಲ್ಲಿನ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಈ ಸಮುದಾಯದವರ ಸಂಖ್ಯೆ 40. ಈ ಸಮುದಾಯವು ಮೀಸಲಾತಿ ಬೇಕು ಎಂದು ಹೇಳುತ್ತಿರುವುದು, ತಮ್ಮ ಮೀಸಲಾತಿಯನ್ನು ಕಿತ್ತುಕೊಳ್ಳುವ ನಡೆ ಎಂದು ಬುಡಕಟ್ಟು ಸಮುದಾಯಗಳು ಭಾವಿಸಿವೆ. ಬುಡಕಟ್ಟು ಸಮುದಾಯಗಳು ಮ್ಯಾನ್ಮಾರ್‌ನಿಂದ ವಲಸೆ ಬಂದು ಇಲ್ಲಿ ನೆಲೆಗೊಂಡವು, ಹಾಗಾಗಿ ಅವು ಹೊರಗಿನ ಸಮುದಾಯಗಳು ಎಂದು ಕೆಲವರು ಭಾವಿಸಿದ್ದಾರೆ. ಈಗಿನ ಹಿಂಸಾಚಾರಕ್ಕೆ ಮೀಸಲಾತಿಯ ಬೇಡಿಕೆಯೇ ಮುಖ್ಯ ಕಾರಣವಾಗಿದ್ದರೂ, ಇಲ್ಲಿ ಸಂಘರ್ಷಕ್ಕೆ ಬೇರೆ ಕಾರಣಗಳೂ ಇವೆ. ಬಿಜೆಪಿಯ ಎನ್. ಬಿರೇನ್ ಸಿಂಗ್ ನೇತೃತ್ವದ ಸರ್ಕಾರವು ತಮ್ಮನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ಬುಡಕಟ್ಟು ಸಮುದಾಯಗಳು ಭಾವಿಸಿವೆ. ಬುಡಕಟ್ಟು ಸಮುದಾಯಗಳ ಜನರನ್ನು ಮನೆಗಳಿಂದ ಒಕ್ಕಲೆಬ್ಬಿಸಿದ್ದು ಸೇರಿದಂತೆ ರಾಜ್ಯ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಕೈಗೊಂಡ ಕೆಲವು ತೀರ್ಮಾನಗಳು ದ್ವೇಷ ಹಾಗೂ ತಾರತಮ್ಯಕ್ಕೆ ನಿದರ್ಶನಗಳು ಎಂದು ಬುಡಕಟ್ಟು ಸಮುದಾಯಗಳು ಹೇಳುತ್ತಿವೆ. ಆದರೆ, ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿರುವ ಸರ್ಕಾರವು ಅವು ಸಹಜ ಆಡಳಿತಾತ್ಮಕ ತೀರ್ಮಾನಗಳು ಎಂದು ಹೇಳಿದೆ. ಜನರಿಗೆ ಸೂಕ್ತವಾದ ಹಾಗೂ ಕೈಗೆಟಕುವ ದರದಲ್ಲಿ ಶಿಕ್ಷಣವನ್ನು ಒದಗಿಸಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಯುವಕರಿಗೆ ಅಗತ್ಯ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಲು ಕೂಡ ಸರ್ಕಾರಗಳಿಗೆ ಆಗುತ್ತಿಲ್ಲ. ಮೀಸಲಾತಿಗೆ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಇದು ಮುಖ್ಯ ಕಾರಣ. ಕಷ್ಟದ ಸಂದರ್ಭಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ರಕ್ಷಣೆ ನೀಡುವ ಸೌಲಭ್ಯ ಇದು ಎಂದು ಕಾಣಲಾಗುತ್ತಿದೆ. ರಾಜಕೀಯ ಲೆಕ್ಕಾಚಾರಗಳ ಕಾರಣಕ್ಕಾಗಿ ಈ ಬೇಡಿಕೆಗಳಿಗೆ ಪಕ್ಷಗಳು ಒಪ್ಪುತ್ತಿವೆ. ಆದರೆ ನ್ಯಾಯಾಲಯಗಳು ಮೀಸಲಾತಿ ಬೇಡಿಕೆಗಳಿಗೆ ಒಪ್ಪಿಗೆ ನೀಡುತ್ತಿಲ್ಲ. ಮಣಿಪುರದಲ್ಲಿ ಆಗಿರುವಂತೆ ಮೀಸಲಾತಿ ಬೇಡಿಕೆಯ ಜೊತೆಯಲ್ಲಿ ಸಾಮಾಜಿಕ, ಆರ್ಥಿಕ ಹಿತಾಸಕ್ತಿಗಳ ಸಂಘರ್ಷಗಳು ಹಾಗೂ ಇತರ ಕೆಲವು ಸಮಸ್ಯೆಗಳೂ ಬೆರೆತುಕೊಂಡಿರುತ್ತವೆ. ಮಣಿಪುರದ ಈಗಿನ ಸರ್ಕಾರವು ಮೈತೇಯಿ ಸಮುದಾಯದ ಹಿತರಕ್ಷಕ ಎಂಬಂತೆ ಕಾಣಲಾಗಿತ್ತು. ಅದು ಈಗಿನ ಹಿಂಸಾಚಾರವನ್ನು ನಿರೀಕ್ಷಿಸಿರಲಿಲ್ಲ ಮತ್ತು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಮೀಸಲಾತಿ ಹಾಗೂ ಇತರ ಕೆಲವು ಬೇಡಿಕೆಗಳಿಗೆ ರಾಜಕೀಯ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಸೇನೆಯನ್ನು ಬಳಸಿಕೊಳ್ಳುವುದು, ನಿರ್ಬಂಧಗಳನ್ನು ಹೇರುವುದು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.