ಸಂಪಾದಕೀಯ: ಏಕರೂಪ ನಾಗರಿಕ ಸಂಹಿತೆ– ಆತುರದ ನಿರ್ಧಾರ ಸಲ್ಲದು ಏಕರೂಪ ನಾಗರಿಕ ಸಂಹಿತೆಯ ವಿಚಾರವು ರಾಷ್ಟ್ರ ಮಟ್ಟದಲ್ಲಿ ಆಗಾಗ ಮುನ್ನೆಲೆಗೆ ಬರುತ್ತದೆ ಮತ್ತು ತೀಕ್ಷ್ಣವಾದ ಚರ್ಚೆಯೂ ನಡೆಯುತ್ತದೆ. ಕಾನೂನು ಆಯೋಗ ಈ ಕುರಿತು ಸಮಾಲೋಚನಾ ಪ್ರಕ್ರಿಯೆಯನ್ನು ಆರಂಭಿಸಿದೆ ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಏಕರೂಪ ನಾಗರಿಕ ಸಂಹಿತೆಯ ಕುರಿತು ಆಯೋಗದ ನಿಲುವು ಏನು ಎಂಬುದನ್ನು ಸರ್ಕಾರ ಕೇಳಿತ್ತು. ಹೀಗಾಗಿ, ಆಯೋಗವು ಸಮಾಲೋಚನಾ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ. ಏಕರೂಪ ನಾಗರಿಕ ಸಂಹಿತೆಯು ಸರ್ಕಾರದ ನೀತಿಯ ನಿರ್ದೇಶನಾತ್ಮಕ ತತ್ವಗಳ ಭಾಗವಾಗಿದ್ದು ಸಂಹಿತೆಯನ್ನು ರೂಪಿಸಿ ಅನುಷ್ಠಾನ ಮಾಡುವುದು ತನ್ನ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸರ್ಕಾರ ಕಳೆದ ವರ್ಷ ಹೇಳಿತ್ತು. ಈ ವಿಷಯದ ಕುರಿತು ತರಾತುರಿಯಲ್ಲಿ ಚರ್ಚೆ ನಡೆಸುವುದು ಸಮಂಜಸವಲ್ಲ. ‘ಇದು ಮಹತ್ವದ ವಿಚಾರ. ಈ ಹಿಂದಿನ ಕಾನೂನು ಆಯೋಗವು ಸಮಾಲೋಚನೆಯನ್ನು ಆರಂಭಿಸಿತ್ತು. ಅದಾದ ಬಳಿಕ ಮೂರು ವರ್ಷಗಳು ಕಳೆದಿವೆ. ಈಗ ಹೊಸದಾಗಿ ಚರ್ಚೆ ಆರಂಭಿಸಬೇಕಾಗಿದೆ’ ಎಂದು ಆಯೋಗ ಹೇಳಿದೆ. ಈ ಹಿಂದಿನ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆ ಕುರಿತು 2018ರಲ್ಲಿ ಅಧ್ಯಯನ ನಡೆಸಿತ್ತು. ‘ಏಕರೂಪ ನಾಗರಿಕ ಸಂಹಿತೆಯು ಈ ಹಂತದಲ್ಲಿ ಅಪೇಕ್ಷಣೀಯವೂ ಅಲ್ಲ, ಅಗತ್ಯವೂ ಇಲ್ಲ’ ಎಂದು ಹೇಳಿತ್ತು. ಈಗ ಹೊಸದಾಗಿ ಸಂಹಿತೆಯ ಕುರಿತು ಅಧ್ಯಯನ ನಡೆಸಬೇಕಾದಂತಹ ಬೆಳವಣಿಗೆಗಳು ಯಾವುವೂ ಈ ವರ್ಷಗಳಲ್ಲಿ ಆಗಿಲ್ಲ. ಏಕರೂಪ ನಾಗರಿಕ ಸಂಹಿತೆಯ ಜಾರಿಯು ತನ್ನ ಹೊಣೆಗಾರಿಕೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ನೀಡಿದ ಹೇಳಿಕೆಯು ತಪ್ಪು. ಏಕರೂಪ ನಾಗರಿಕ ಸಂಹಿತೆ ಎಂಬುದು ಸಾಂವಿಧಾನಿಕ ಆದರ್ಶ ಮತ್ತು ಇದನ್ನು ಸರ್ಕಾರವು ಜಾರಿಗೆ ತರಬಹುದು ಎಂದು ಸಂವಿಧಾನದ 44ನೇ ವಿಧಿ ಹೇಳುತ್ತದೆ. ಆದರೆ ಇದು ಕಡ್ಡಾಯವಲ್ಲ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರ ಈಗ ಮುಂದಾಗಿರುವುದರ ಹಿಂದೆ ರಾಜಕೀಯ ಉದ್ದೇಶ ಇದ್ದಂತೆ ಕಾಣಿಸುತ್ತಿದೆ. ಇದು ಹೆಚ್ಚು ಸೂಕ್ಷ್ಮವಾದ ಮತ್ತು ವಿಭಜಕ ಎನಿಸುವಂತಹ ವಿಚಾರ. ಈ ಕುರಿತು ಚರ್ಚೆ ನಡೆದರೆ ಅಥವಾ ಏನಾದರೂ ಕ್ರಮಗಳನ್ನು ಕೈಗೊಂಡರೆ ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅನುಕೂಲ ಆದೀತು ಎಂಬ ಭಾವನೆ ಬಿಜೆಪಿಯಲ್ಲಿ ಇರಬಹುದು. ಕಾನೂನು ಆಯೋಗ ಕೊಟ್ಟ ವರದಿಯು ಕೈಯಲ್ಲಿದ್ದರೆ ಸರ್ಕಾರದ ಉದ್ದೇಶಕ್ಕೆ ಅದು ಪೂರಕ ಎನಿಸಬಹುದು. ಏಕರೂಪ ನಾಗರಿಕ ಸಂಹಿತೆಗೆ ದೇಶದಾದ್ಯಂತ ವ್ಯಾಪಕ ಬೆಂಬಲ ಇರಬೇಕು ಮತ್ತು ದೇಶವು ಈ ಆದರ್ಶದತ್ತ ಸಾಗಬೇಕಿದೆ ಎಂಬುದೂ ನಿಜ. ಆದರೆ, ಇದು ರಾಜಕೀಯಗೊಳ್ಳಬಾರದು ಮತ್ತು ಕೋಮುವಾದಿ ದೃಷ್ಟಿಯಿಂದಲೂ ಇದನ್ನು ನೋಡಬಾರದು. ದೇಶದಲ್ಲಿ ಈಗ ಇರುವ ಸನ್ನಿವೇಶದಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ತೆಗೆದುಕೊಳ್ಳುವ ಯಾವುದೇ ಕ್ರಮವು ಬಹುಸಂಖ್ಯಾತರ ವಿಚಾರವನ್ನು ಇಡೀ ಸಮಾಜದ ಮೇಲೆ ಹೇರಲಾಗಿದೆ ಎಂಬ ಭಾವನೆಗೆ ಕಾರಣವಾಗಬಹುದು. ವೈಯಕ್ತಿಕ ಕಾನೂನುಗಳು ಧಾರ್ಮಿಕ ನಂಬಿಕೆಗಳ ಜೊತೆಗೆ ಮಿಳಿತವಾಗಿವೆ. ವಿಚ್ಛೇದನ, ಉತ್ತರಾಧಿಕಾರ, ದತ್ತು, ಪಾಲಕತ್ವ ಸೇರಿ ಹಲವು ವಿಚಾರಗಳು ಮತ್ತು ಪದ್ಧತಿಗಳನ್ನು ಇವು ಒಳಗೊಂಡಿವೆ. ಸ್ವಾತಂತ್ರ್ಯ ಅಥವಾ ಧರ್ಮ, ಲಿಂಗತ್ವ ಹಕ್ಕುಗಳು ಮತ್ತು ಆದಿವಾಸಿಗಳಂತಹ ಜನರ ಆಚರಣೆಗಳು ಮುಂತಾದವುಗಳಲ್ಲಿ ಹಸ್ತಕ್ಷೇಪ ನಡೆಸಿದಂತೆಯೂ ಆಗುತ್ತದೆ ಎಂಬ ವಿಚಾರಗಳೂ ಚರ್ಚೆಯಲ್ಲಿ ಇವೆ. ಈ ಎಲ್ಲ ವಿಚಾರಗಳಿಗೆ ಕಾನೂನು ಆಯೋಗದ ಒಂದು ವರದಿಯ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಜನರು, ಜನಸಮುದಾಯಗಳು, ಸಂಘಟನೆಗಳ ಜೊತೆಗೆ ವ್ಯಾಪಕವಾದ ಸಮಾಲೋಚನೆ ಅಗತ್ಯ ಇದೆ. ರಾಜಕೀಯ ಪರಿಣಾಮವನ್ನು ಉಂಟು ಮಾಡುವುದು ಮಾತ್ರ ಈಗಿನ ಸರ್ಕಾರದ ಉದ್ದೇಶ ಇದ್ದಂತಿದೆ. ಆದರೆ, ಅದಕ್ಕಾಗಿ ಕಾನೂನು ಆಯೋಗವನ್ನು ದುರ್ಬಳಕೆ ಮಾಡಿಕೊಂಡಿರುವುದು ದುರದೃಷ್ಟಕರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.