ಸಂಪಾದಕೀಯ: ಅಮೆರಿಕಕ್ಕೆ ಮೋದಿ ಭೇಟಿ– ಹಿಂಜರಿಕೆ ದಾಟಿದ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಸಂಸತ್ತಿನಲ್ಲಿ ಐತಿಹಾಸಿಕ ಭಾಷಣವೊಂದನ್ನು ಮಾಡುವ ಮೂಲಕ ಅಲ್ಲಿನ ಭೇಟಿಯನ್ನು ಕೊನೆಗೊಳಿಸಿದ್ದಾರೆ. ಈ ಬಾರಿಯ ಭೇಟಿಯಲ್ಲಿ ಅನುಭವಕ್ಕೆ ದಕ್ಕುವ ಒಂದಿಷ್ಟು ಒಳ್ಳೆಯ ಅಂಶಗಳು ಇದ್ದವು. ಹಾಗೆಯೇ, ಒಂದಿಷ್ಟು ಸಾಂಕೇತಿಕತೆಯೂ ಇತ್ತು. ಅಮೆರಿಕ ಮತ್ತು ಭಾರತ ಈಗ ಬಹಳ ಗಾಢವಾದ ಸಂಬಂಧವನ್ನು ಬೆಳೆಸಿಕೊಂಡಿವೆ ಎಂದು ಮೋದಿ ಅವರು ಘೋಷಿಸಿದರು. ಈ ಮೂಲಕ ಚೀನಾಕ್ಕೆ ಒಂದು ಸಂದೇಶವನ್ನು ರವಾನಿಸಿದರು. ಪ್ರಜಾತಂತ್ರ, ಹವಾಮಾನ ಬದಲಾವಣೆ, ಬಲಿಷ್ಠ ಪೂರೈಕೆ ವ್ಯವಸ್ಥೆಯ ಸ್ಥಾಪನೆ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಧಾರಣೆ ವಿಚಾರವಾಗಿ ಒಂದಿಷ್ಟು ಮುಂಗಾಣ್ಕೆಯನ್ನು ನೀಡಿದರು. ಅಮೆರಿಕದ ಜೊತೆ ಈ ಹಿಂದೆ ಮಹತ್ವದ ಸಂಬಂಧವನ್ನು ಹೊಂದಲು ಬಯಸಿದ್ದ ಸಂದರ್ಭಗಳಲ್ಲಿ ಭಾರತವು ಖಚಿತ ನಿಲುವನ್ನು ತಾಳಲು ಹಿಂದೇಟು ಹಾಕುತ್ತಿತ್ತು. ಷಿ ಜಿನ್‌ಪಿಂಗ್‌ ಅವರು ಚೀನಾದ ಅಧ್ಯಕ್ಷ ಆಗುವುದಕ್ಕಿಂತ ಮೊದಲಿನ ಸಂದರ್ಭಗಳಲ್ಲಿ ಭಾರತಕ್ಕೆ ಚೀನಾದ ಉದ್ದೇಶ ಹಾಗೂ ಸಾಮರ್ಥ್ಯದ ಬಗ್ಗೆ ಹೆಚ್ಚು ಸ್ಪಷ್ಟತೆ ಇರಲಿಲ್ಲ. ಆದರೆ ಮೋದಿ ಅವರು ‘ಇತಿಹಾಸದಲ್ಲಿನ ಹಿಂಜರಿಕೆಗಳನ್ನು ದಾಟಿ ಬರುವ’ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಅಮೆರಿಕ ಮತ್ತು ಭಾರತದ ನಡುವಿನ ಪಾಲುದಾರಿಕೆಯು ಈ ಶತಮಾನದ ಕರೆ ಎಂಬ ನೆಲೆಯಲ್ಲಿ ಮಾತನಾಡಿದರು. ವಿಶ್ವದಲ್ಲಿ ರೂಪುಗೊಂಡಿರುವ ವ್ಯವಸ್ಥೆಗೆ ಚೀನಾ ಒಡ್ಡಿರುವ ಸವಾಲನ್ನು ಎದುರಿಸಲು ಅಮೆರಿಕ ಈಗ ಸ್ನೇಹಿತರು ಹಾಗೂ ಪಾಲುದಾರ ರಾಷ್ಟ್ರಗಳನ್ನು ಒಗ್ಗೂಡಿಸುತ್ತಿರುವುದರ ತುರ್ತಿನ ಬಗ್ಗೆ ಆಲೋಚಿಸಿದರು. ಹಾಗೆಯೇ ಮೋದಿ ಅವರು ಇನ್ನೊಂದೆಡೆ, ಲಡಾಖ್ ವಲಯದಲ್ಲಿ ಕೊನೆಗಾಣುತ್ತಿಲ್ಲದ ಗಡಿ ಬಿಕ್ಕಟ್ಟಿನ ಬಗ್ಗೆ ಮತ್ತು ಏಷ್ಯಾದಲ್ಲಿ ಯಜಮಾನಿಕೆ ಸ್ಥಾಪಿಸಲು ಚೀನಾ ನಡೆಸುತ್ತಿರುವ ಯತ್ನಗಳ ಬಗ್ಗೆಯೂ ಅವಲೋಕಿಸಿದರು. ರಕ್ಷಣೆ ಹಾಗೂ ಬಾಹ್ಯಾಕಾಶ ಜಗತ್ತಿಗೆ ಸಂಬಂಧಿಸಿದಂತೆ ಈ ಭೇಟಿಯ ಸಂದರ್ಭದಲ್ಲಿ ಮಹತ್ವದ ಒಪ್ಪಂದಗಳು ಆದವು. ಬೈಡನ್ ಆಡಳಿತದ ಒಪ್ಪಿಗೆಯೊಂದಿಗೆ, ಜಿಇ ಕಂಪನಿಯು ಭಾರತದ ಲಘು ಯುದ್ಧ ವಿಮಾನ ತೇಜಸ್‌ನಲ್ಲಿ ಅಳವಡಿಸಲು ಎಂಜಿನ್‌ ತಯಾರಿಕೆಯ ವಿಚಾರವಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಅಮೆರಿಕವು ಭಾರತಕ್ಕೆ ಶಸ್ತ್ರಸಜ್ಜಿತ 31 ಡ್ರೋನ್‌ಗಳನ್ನು ಮಾರಾಟ ಮಾಡಲಿದೆ. ಇದು ಭಾರತಕ್ಕೆ ಸಮುದ್ರ ಪ್ರದೇಶಗಳಲ್ಲಿ ಹಾಗೂ ಚೀನಾ ಮತ್ತು ಪಾಕಿಸ್ತಾನದ ಜೊತೆಗಿನ ಗಡಿ ಪ್ರದೇಶಗಳಲ್ಲಿ ಸಾಮರ್ಥ್ಯ ವೃದ್ಧಿಗೆ ನೆರವಾಗಲಿದೆ. ಆದರೆ ಇವೆಲ್ಲ ಎರಡು ದೇಶಗಳ ನಡುವಿನ ಸಂಬಂಧದಲ್ಲಿ ಸಹಜ ಮುನ್ನಡೆಗಳು ಎಂದು ವಾದಿಸಬಹುದು. ಸೆಮಿಕಂಡಕ್ಟರ್ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚು ಮಹತ್ವದ ಮೈತ್ರಿ ಏರ್ಪಟ್ಟಿದೆ. ಚಿಪ್ ತಯಾರಿಕಾ ಕಂಪನಿ ಮೈಕ್ರಾನ್‌ಗೆ ಗುಜರಾತ್‌ನಲ್ಲಿ ತಯಾರಿಕಾ ಘಟಕವೊಂದನ್ನು ಸ್ಥಾಪಿಸಲು ಅಮೆರಿಕ–ಭಾರತದ ನಡುವೆ ಒಪ್ಪಂದ ಆಗಿರುವುದು ಕೂಡ ಬಹಳ ಮಹತ್ವದ್ದು. ಈ ಒಪ್ಪಂದದ ಮೂಲಕ ಭಾರತವು ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಪೂರೈಕೆ ವ್ಯವಸ್ಥೆಯ ಪಾಲುದಾರ ಆಗುವತ್ತ ಮೊದಲ ಹೆಜ್ಜೆ ಇರಿಸಿದೆ. ಮಹತ್ವದ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಜೊತೆಯಾಗಿ ಕೆಲಸ ಮಾಡಲಿವೆ. ಈ ಎಲ್ಲ ಒಪ್ಪಂದಗಳನ್ನು ಕೆಲವು ವಹಿವಾಟುಗಳಿಗೆ ಮಾತ್ರ ಸೀಮಿತವಾದುವು ಎಂದು ಗ್ರಹಿಸಬಹುದಿತ್ತು. ಆದರೆ, ಅಮೆರಿಕದ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಮೋದಿ ಅವರು ಈ ಒಪ್ಪಂದಗಳಿಗೆ ಒಂದು ಅರ್ಥವನ್ನು ನೀಡಿದರು, ಒಪ್ಪಂದಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ವಿವರಿಸಿದರು. ಪ್ರಜಾತಂತ್ರ, ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಆಕ್ರಮಣ ಹಾಗೂ ಚೀನಾ ಕುರಿತು ಅಧ್ಯಕ್ಷ ಬೈಡನ್ ಅವರು ಬಯಸಿದ್ದ ರೀತಿಯಲ್ಲಿ ಮೋದಿ ಅವರು ಮಾತನಾಡಿದಂತಿತ್ತು. ಚೀನಾ ವಿಚಾರದಲ್ಲಿ ಅವರು ಸ್ಪಷ್ಟವಾದ ಅನಿಸಿಕೆ ವ್ಯಕ್ತಪಡಿಸಿದರು. ‘ಬಲಪ್ರಯೋಗ ಮತ್ತು ಸಂಘರ್ಷದ ಕರಿಮೋಡಗಳು ಇಂಡೊ–ಪೆಸಿಫಿಕ್ ಪ್ರದೇಶದ ಮೇಲೆ ಮೂಡಿವೆ’ ಎಂಬ ಎಚ್ಚರಿಕೆ ನೀಡಿದರು. ಈ ಪ್ರದೇಶವನ್ನು ಮುಕ್ತವಾಗಿ ಇರಿಸಲು, ಜಾಗತಿಕ ಪೂರೈಕೆ ವ್ಯವಸ್ಥೆಯು ಎಲ್ಲರಿಗೂ ಲಭ್ಯವಿರುವಂತೆ ಮಾಡಲು, ಅದನ್ನು ವಿಕೇಂದ್ರೀಕರಿಸಲು ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಲಿವೆ ಎಂದು ಸಾರಿದರು. ಇಲ್ಲಿರುವ ಸಂದೇಶ ಬಹಳ ಸ್ಪಷ್ಟವಾಗಿದೆ. ಚೀನಾವನ್ನು ಮಿತಿಗಳೊಳಗೆ ಇರಿಸುವ ಉದ್ದೇಶದೊಂದಿಗೆ ಭಾರತ ಮತ್ತು ಅಮೆರಿಕ ಈಗ ಒಂದಾಗಿ ನಿಂತಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.