ಸಂಪಾದಕೀಯ| ಲಿಂಗತ್ವ ಸಮಾನತೆ: ಆಶಾದಾಯಕ ಪ್ರಗತಿ, ಸಾಗಬೇಕಾದ ದಾರಿ ದೂರ ‘ಲಿಂಗತ್ವ ಅಸಮಾನತೆ ಸೂಚ್ಯಂಕ ವರದಿ–2023’ ಬಿಡುಗಡೆಯಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಲ ಲಿಂಗತ್ವ ಅಸಮಾನತೆಯ ಕಂದರವನ್ನು ಕಡಿಮೆ ಮಾಡುವಲ್ಲಿ ಭಾರತ ಎಂಟು ಸ್ಥಾನಗಳಷ್ಟು ಮೇಲಕ್ಕೆ ಜಿಗಿದಿದೆ. ಒಟ್ಟು 146 ರಾಷ್ಟ್ರಗಳ ಈ ಪಟ್ಟಿಯಲ್ಲಿ 135ನೇ ಸ್ಥಾನದಿಂದ 127ನೇ ಸ್ಥಾನಕ್ಕೆ ಬಂದಿರುವ ಭಾರತ ಸಾಗಬೇಕಾದ ದಾರಿ ಇನ್ನೂ ದೂರವಿದೆಯಾದರೂ ಸುಧಾರಣೆಯತ್ತ ಹೆಜ್ಜೆ ಹಾಕಿರುವುದು ಸಮಾಧಾನ ತರುವಂತಹ ವಿದ್ಯಮಾನ. ಸಮಾಜದಲ್ಲಿ ಬೇರೂರಿರುವ ಪುರುಷಪ್ರಧಾನ ಮನಃಸ್ಥಿತಿಯನ್ನು ಹೋಗಲಾಡಿಸಿ ಲಿಂಗತ್ವ ಸಮಾನತೆಯನ್ನು ಸಾಧಿಸುವುದು ಸಂವಿಧಾನದ ಮೂಲ ಉದ್ದೇಶಗಳಲ್ಲಿ ಒಂದು. ಆದರೆ, ನಮ್ಮ ವ್ಯವಸ್ಥೆ ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ಉತ್ತೇಜಿಸುವ ಪುರುಷಪ್ರಧಾನ ಮನಃಸ್ಥಿತಿಯನ್ನೇ ಪ್ರದರ್ಶಿಸುತ್ತಿರುವುದು ಸುಳ್ಳಲ್ಲ. ಲಾಗಾಯ್ತಿನಿಂದಲೂ ಹೆಣ್ಣಿನ ಕುರಿತ ಪೂರ್ವಗ್ರಹಪೀಡಿತ ವಿಚಾರಗಳಿಗೆ ಮಣೆ ಹಾಕುತ್ತಾ ಬಂದುದೇ ಲಿಂಗತ್ವ ಅಸಮಾನತೆಯು ಇಂದಿನ ಮಟ್ಟ ತಲುಪಲು ಕಾರಣ. ತಾರತಮ್ಯಕ್ಕೆ ಕಾರಣವಾದಂತಹ ಪೂರ್ವಗ್ರಹಗಳಿಗೆ ಉತ್ತೇಜನ ನೀಡುವಂತಿದ್ದ ಹಲವು ಕಾನೂನುಗಳನ್ನು ಕೋರ್ಟ್‌ಗಳು ಅನೂರ್ಜಿತಗೊಳಿಸಿವೆ. ಹೀಗಿದ್ದೂ, ಲಿಂಗ ತಾರತಮ್ಯಕ್ಕೆ ಕಾರಣವಾಗುವ ಸಂಗತಿಗಳು ಹಾಗೇ ಬೇರುಬಿಟ್ಟಿರುವುದು ಆಶ್ಚರ್ಯಕರ. ಅಸಮಾನತೆಯ ಕಂದರವನ್ನು ಶೇ 64.3ರಷ್ಟು ಹೋಗಲಾಡಿಸಲಾಗಿದೆ ಎಂದೇನೋ ವರದಿ ಹೇಳುತ್ತದೆ. ಆದರೆ, ನೆಲದ ವಾಸ್ತವ ಬೇರೆಯೇ ಇದೆ. ಆರ್ಥಿಕತೆಯ ಸಹಭಾಗಿತ್ವದಲ್ಲಾಗಲಿ, ಅವಕಾಶ ಸೃಷ್ಟಿಯಲ್ಲಾಗಲಿ, ಶೈಕ್ಷಣಿಕ ಸಾಧನೆಯಲ್ಲಾಗಲಿ, ಆರೋಗ್ಯ ಮತ್ತು ರಾಜಕೀಯ ಸಬಲೀಕರಣದಲ್ಲಾಗಲಿ ದೇಶದ ಲಿಂಗತ್ವ ಸಮಾನತೆಯ ಪ್ರಗತಿ ದುರ್ಬಲವಾಗಿದೆ. ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶ ನಮ್ಮದು. ಈ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರನ್ನು ಹೊರಗಿಟ್ಟು ದೇಶ ಆರ್ಥಿಕವಾಗಿ ಮುಂದುವರಿಯುವುದು ಅಸಾಧ್ಯದ ಮಾತು. ರಾಜಕೀಯ ಮತ್ತು ಶಿಕ್ಷಣದಲ್ಲಿ ಹೆಣ್ಣುಮಕ್ಕಳಿಗೆ ಒಂದಿಷ್ಟು ಅವಕಾಶಗಳು ಸಿಕ್ಕಿರುವುದನ್ನು ಅಲ್ಲಗಳೆಯುವಂತಿಲ್ಲ. ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಬಳಿಕ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರಿಗೆ ರಾಜಕೀಯ ಅಧಿಕಾರ ದೊರೆತಿರುವುದೂ ನಿಜ. ಆದರೆ, ಸಂಸತ್ತಿನಲ್ಲಾಗಲಿ, ವಿಧಾನಸಭೆಗಳಲ್ಲಾಗಲಿ ದೇಶದ ಅರ್ಧದಷ್ಟು ಜನಸಂಖ್ಯೆಗೆ ಸೂಕ್ತ ಪ್ರಾತಿನಿಧ್ಯವೇ ಇಲ್ಲ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಲು 1996ರಷ್ಟು ಹಿಂದೆಯೇ ಮೊದಲ ಬಾರಿಗೆ ಮಸೂದೆ ಮಂಡನೆಯಾದರೂ ಇದುವರೆಗೆ ಅದು ಕಾರ್ಯರೂಪಕ್ಕೆ ಬಾರದಿರುವುದು ದೇಶದ ಪುರುಷಪ್ರಧಾನ ಮನಃಸ್ಥಿತಿಗೆ ದ್ಯೋತಕ. ರಾಜಕೀಯದಲ್ಲಿ ಮಹಿಳೆಯನ್ನು ಯಾವ ರೀತಿ ದೂರ ಇಡಲಾಗುತ್ತಾ ಬರಲಾಗಿದೆ ಎಂಬ ವಿಷಯವಾಗಿ ದೇಶದ ಉದ್ದಗಲಕ್ಕೂ ಉದಾಹರಣೆಗಳು ಸಿಕ್ಕುತ್ತವೆ. ನಾಗಾಲ್ಯಾಂಡ್‌ ರಾಜ್ಯ ಉದಯವಾಗಿ ಸರಿಯಾಗಿ ಅರವತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ (2023ರಲ್ಲಿ) ಅಲ್ಲಿನ ವಿಧಾನಸಭೆಗೆ ಇಬ್ಬರು ಮಹಿಳೆಯರು ಆಯ್ಕೆಯಾಗಿದ್ದಾರೆ ಎಂದರೆ, ತಾರತಮ್ಯ ಯಾವ ಮಟ್ಟದಲ್ಲಿದೆ ಎಂಬುದು ಅಂದಾಜಿಗೆ ನಿಲುಕೀತು. ಮಹಿಳಾ ಕಾರ್ಮಿಕರ ಕೆಲಸದ ವಾತಾವರಣವನ್ನೇ ನೋಡಿ. ಅವರಿಗೆ ಸಿಗಬೇಕಾದಷ್ಟು ಕನಿಷ್ಠ ವೇತನ ಸಿಗುವುದಿಲ್ಲ. ಕೆಲಸದ ಸಮಯ ದೀರ್ಘವಾಗಿರುತ್ತದೆ. ಸುರಕ್ಷತೆ ಇರುವುದಿಲ್ಲ. ಲೈಂಗಿಕ ಕಿರುಕುಳದ ಪ್ರಕರಣಗಳು ಸಹ ನಡೆಯುತ್ತಲೇ ಇರುತ್ತವೆ. ಉನ್ನತ ಹುದ್ದೆಗಳಿಗೆ, ತಾಂತ್ರಿಕ ನೈಪುಣ್ಯ ಬಯಸುವ ಕೆಲಸಗಳಿಗೆ ಮಹಿಳೆಯರನ್ನು ಪರಿಗಣಿಸದಿರುವ ಪರಿಪಾಟಕ್ಕೆ ದೊಡ್ಡ ಇತಿಹಾಸವಿದೆ. ಘನತೆಯಿಂದ ಕೆಲಸ ಮಾಡುವ ಅವರ ಹಕ್ಕನ್ನು ದಶಕಗಳಿಂದಲೂ ಕಸಿಯುತ್ತಾ ಬರಲಾಗಿದೆ. ಆದ್ದರಿಂದ ಉದ್ಯೋಗದ ವಿಷಯದಲ್ಲಿ ಶೇ 40ಷ್ಟು ಮಾತ್ರ ಸಮಾನತೆ ಸಾಧಿಸಲು ಸಾಧ್ಯವಾಗಿದೆ. ಮಹಿಳೆಯರಿಗೆ ಆರೋಗ್ಯ ಸೌಕರ್ಯ ಕಲ್ಪಿಸುವ ವಿಷಯದಲ್ಲಿ ಒಂದಿಷ್ಟು ಸುಧಾರಣೆಗಳು ಆಗಿವೆ ಎಂದು ವರದಿಗಳು ಹೇಳುತ್ತವೆ. ಆದರೆ, ಅಪೌಷ್ಟಿಕತೆಯ ಸಮಸ್ಯೆ ಇನ್ನೂ ಹಾಗೇ ಇದೆ. ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯಲು ಕೆಲವು ಸೌಲಭ್ಯಗಳನ್ನು ಒದಗಿಸಲಾಗಿದೆಯಾದರೂ ಓದಿದ ಪ್ರತಿ ಆಸಕ್ತ ಹೆಣ್ಣುಮಗಳೂ ಉದ್ಯೋಗ ಪಡೆಯುವಂತಹ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ದೆಹಲಿಯ ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣದ ಯೋಜನೆ ಜಾರಿಗೆ ಬಂದ ಬಳಿಕ, ದುಡಿಮೆಯಲ್ಲಿ ಭಾಗವಹಿಸುವ ಮಹಿಳೆಯರ ಪ್ರಮಾಣ ಶೇ 3.5ರಷ್ಟು ಹೆಚ್ಚಾಗಿದೆ ಎಂದು ಅಲ್ಲಿನ ಅಧ್ಯಯನ ವರದಿಗಳು ಹೇಳುತ್ತವೆ. ರಾಜ್ಯದಲ್ಲಿ ಅದೇ ಮಾದರಿಯಲ್ಲಿ ಜಾರಿಗೆ ಬಂದಿರುವ ‘ಶಕ್ತಿ’ ಯೋಜನೆಯು ಎಷ್ಟರಮಟ್ಟಿಗೆ ಸಕಾರಾತ್ಮಕ ಬದಲಾವಣೆ ತರಬಹುದು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಮಹಿಳೆಯರ ಕುರಿತು ಹಿಂದಿನಿಂದಲೂ ಬೆಳೆದುಬಂದಿರುವ ಪೂರ್ವಗ್ರಹಗಳನ್ನು ತೊಡೆದುಹಾಕಿ, ಅವರು ಘನತೆಯಿಂದ ಬದುಕುವ, ಕೆಲಸ ಮಾಡುವ ಹಕ್ಕನ್ನು ಎತ್ತಿ ಹಿಡಿಯುವ ಕೆಲಸವಂತೂ ಆಗಬೇಕಿದೆ. ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ಒದಗಿಸಿ, ಆರ್ಥಿಕತೆಯ ಸಹಭಾಗಿತ್ವಕ್ಕೆ ಅನುವು ಮಾಡಿಕೊಟ್ಟಿದ್ದೇ ಆದರೆ ದೇಶದ ಪ್ರಗತಿಯ ವೇಗ ಹೊಸ ಮಜಲನ್ನು ತಲುಪಲಿದೆ. ಆಡಳಿತದ ಹೊಣೆ ಹೊತ್ತವರು, ನೀತಿ ನಿರೂಪಕರು ಈ ದಿಸೆಯಲ್ಲಿ ಗಂಭೀರವಾಗಿ ಅವಲೋಕಿಸಬೇಕು. ಸಮಾನತೆಯನ್ನು ಸೃಷ್ಟಿಸುವ ಹಾದಿಯಲ್ಲಿ ಈಗ ಸಾಧ್ಯವಾಗಿರುವ ಅಲ್ಪಪ್ರಗತಿ, ಇದೇ ಸ್ಫೂರ್ತಿಯಲ್ಲಿ ಮುಂದುವರಿದು, ತಾರತಮ್ಯವನ್ನು ಸಂಪೂರ್ಣವಾಗಿ ಹೋಗಲಾಡಿಸುವಂತಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.