ಎನ್‌ಸಿಇಆರ್‌ಟಿಯಿಂದ ಪಠ್ಯ ಬದಲಾವಣೆ: ವಿದ್ಯಾರ್ಥಿಗಳಲ್ಲಿ ಸಿದ್ಧಾಂತ ತುರುಕುವ ಯತ್ನ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಸಿದ್ಧಪಡಿಸಿರುವ ಹನ್ನೊಂದು ಮತ್ತು ಹನ್ನೆರಡನೇ ತರಗತಿಯ ಇತಿಹಾಸ, ಸಮಾಜವಿಜ್ಞಾನ ಮತ್ತು ರಾಜ್ಯಶಾಸ್ತ್ರ ಪಠ್ಯ ಪುಸ್ತಕಗಳು ಹೊಸತೇ ಆದ ಇತಿಹಾಸವನ್ನು ಮುಂದಿಟ್ಟಿವೆ ಮತ್ತು ಇಲ್ಲದ ಇತಿಹಾಸವನ್ನೂ ಮಂಡಿಸಿವೆ. ಈ ಬದಲಾವಣೆಯು ಶೈಕ್ಷಣಿಕ ಅಗತ್ಯಗಳಿಗೆ ಬೇಕಾದಂತೆ ಆಗಿದ್ದಲ್ಲ. ಬದಲಿಗೆ, ರಾಜಕಾರಣಕ್ಕೆ ಬೇಕಾದ ಬದಲಾವಣೆಗಳನ್ನು ಮಾಡಲಾಗಿದೆ. ಇದು ಇತಿಹಾಸವನ್ನು ತಿರುಚುವ ಕೆಲಸ. ದೇಶ ವಿಭಜನೆಗೆ ಮೊದಲು ಮತ್ತು ನಂತರ ಹಿಂದೂ–ಮುಸ್ಲಿಂ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಲು ಮಹಾತ್ಮ ಗಾಂಧಿ ನಡೆಸಿದ ಪ್ರಯತ್ನಗಳು, ಅವರ ಹತ್ಯೆಯ ಬಳಿಕ ಆರ್‌ಎಸ್‌ಎಸ್‌ ಮೇಲೆ ಹೇರಿದ ನಿಷೇಧ ಎಲ್ಲವನ್ನೂ ಹೊಸ ಸಂಕಥನದ ಮೂಲಕ ಕಟ್ಟಿಕೊಡಲಾಗಿದೆ. ಹಿಂದೂ ತೀವ್ರವಾದಿಗಳ ಚಟುವಟಿಕೆಗಳ ಕುರಿತ ವಿವರಗಳನ್ನು ಪಠ್ಯದಿಂದ ಕೈಬಿಡಲಾಗಿದೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದ ಉಲ್ಲೇಖಗಳು, ವರ್ಗ, ಧರ್ಮ ಮತ್ತು ಜನಾಂಗೀಯತೆಗಳು ಹೇಗೆ ಜನರನ್ನು ಪ್ರತ್ಯೇಕಿಸುತ್ತವೆ ಎಂಬುದರ ವಿವರಗಳನ್ನೂ ಅಳಿಸಿಹಾಕಲಾಗಿದೆ. ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆ ಮತ್ತು ಮೊಘಲ್‌ ಯುಗದ ಇತಿಹಾಸವೂ ಪಠ್ಯದಿಂದ ಕಾಣೆಯಾಗಿವೆ. ಈ ಹಿಂದಿನ ಹಲವು ಶತಮಾನಗಳ ಅವಧಿಯಲ್ಲಿ ದೇಶದಲ್ಲಿ ಏನು ನಡೆದಿದೆ ಎಂಬುದರ ಅರಿವೇ ಇಲ್ಲದೆ ವಿದ್ಯಾರ್ಥಿಗಳು ಬೆಳೆಯಲು ಕಾರಣವಾಗುವಂತೆ ಪಠ್ಯಪುಸ್ತಕವನ್ನು ಬದಲಾಯಿಸಲಾಗಿದೆ. ಪಠ್ಯವನ್ನು ತರ್ಕಬದ್ಧಗೊಳಿಸುವಿಕೆಯ ಹೆಸರಿನಲ್ಲಿ ಎನ್‌ಸಿಇಆರ್‌ಟಿ ಈ ಬದಲಾವಣೆಗಳನ್ನು ಮಾಡಿದೆ. ತರ್ಕಬದ್ಧಗೊಳಿಸುವಿಕೆ ಎಂಬುದು ಆಡಳಿತಾರೂಢ ಪಕ್ಷದ ರಾಜಕೀಯ ಸಿದ್ಧಾಂತಕ್ಕೆ ಅನುಗುಣವಾಗಿ ಇತಿಹಾಸವನ್ನು ತಿರುಚುವುದು ಅಲ್ಲ. ಭಾರತದ ಇತಿಹಾಸದ ಬರೆಯುವಿಕೆಯಲ್ಲಿ ಎಡಪಂಥೀಯ ಇತಿಹಾಸಕಾರರೇ ಪ್ರಾಬಲ್ಯ ಮೆರೆದಿದ್ದಾರೆ ಎಂಬ ತಕರಾರನ್ನು ಹಿಂದೂ ಬಲಪಂಥೀಯವಾದಿಗಳು ಹಿಂದಿನಿಂದಲೂ ಎತ್ತುತ್ತಾ ಬಂದಿದ್ದಾರೆ. ಹಾಗಾಗಿಯೇ ಆಗಿರುವ ತಪ್ಪುಗಳನ್ನು ಸರಿಪಡಿಸಿ ದೇಶದ ‘ನಿಜವಾದ’ ಇತಿಹಾಸವನ್ನು ಬರೆಯುವುದು ಬಲಪಂಥೀಯವಾದಿಗಳ ಉದ್ದೇಶವಾಗಿದೆ. ಆದರೆ, ‘ನಿಜ ಇತಿಹಾಸ’ವನ್ನು ಬರೆಯುವುದು ಎಂದರೆ ಇತಿಹಾಸದಲ್ಲಿ ಜರುಗಿದ, ಆಡಳಿತ ಪಕ್ಷಕ್ಕೆ ಅನುಕೂಲಕರ ಅಲ್ಲ ಎನ್ನಿಸುವಂತಹ ಎಲ್ಲವನ್ನೂ ಅಳಿಸಿಹಾಕುವುದೇ ಆಗಿದೆ. ಈ ಉದ್ದೇಶವನ್ನು ಈಡೇರಿಸುವುದಕ್ಕಾಗಿ ಆಡಳಿತ ಪಕ್ಷವು ಸಮಗ್ರವಾದ ಯೋಜನೆಯೊಂದನ್ನು ರೂಪಿಸಿದೆ. ಅದರಲ್ಲಿ ಹೆಸರುಗಳ ಬದಲಾವಣೆ, ವ್ಯಕ್ತಿಗಳ ನೆನಪು ಮಾಸುವಂತೆ ಮಾಡುವುದು, ಹೊಸ ವ್ಯಕ್ತಿಗಳು ಮತ್ತು ವಿದ್ಯಮಾನಗಳನ್ನು ಸೃಷ್ಟಿಸುವುದು, ಯುಗ–ಯುಗಗಳನ್ನೇ ಮರೆ ಮಾಚುವುದು, ಇಡೀ ಭೂತಕಾಲವನ್ನು ಪುನರ್‌ ರಚಿಸುವುದು ಅಥವಾ ಮರು ವ್ಯಾಖ್ಯಾನ ಮಾಡುವುದೆಲ್ಲವೂ ಈ ಸಮಗ್ರ ಯೋಜನೆಯ ಭಾಗಗಳು. ಇದರ ಪರಿಣಾಮವಾಗಿ ಹುಸಿ ಇತಿಹಾಸ ಸೃಷ್ಟಿಯಾಗುತ್ತದೆ. ಈ ಹಿಂದೆ ಏನು ನಡೆದಿತ್ತು ಎಂಬುದಕ್ಕಿಂತ ಆಡಳಿತ ಪಕ್ಷಕ್ಕೆ ಏನು ಬೇಕಾಗಿದೆ ಎಂಬುದೇ ಇತಿಹಾಸವಾಗಿಬಿಡುತ್ತದೆ. ವಿವಾದಾತ್ಮಕವಾದ ಈ ಬದಲಾವಣೆಗಳನ್ನು ಗುಟ್ಟಾಗಿ ಮಾಡಲಾಗಿದೆ ಮತ್ತು ಬದಲಾಯಿಸಿದವರು ಈ ಕೃತ್ಯವನ್ನು ದುರುದ್ದೇಶದಿಂದಲೇ ಎಸಗಿದ್ದಾರೆ ಎಂಬುದು ಸ್ಪಷ್ಟ. ಕಳೆದ ಜೂನ್‌ನಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳ ಪಟ್ಟಿಯಲ್ಲಿ ಈಗ ಮಾಡಿರುವ ಹಲವು ಬದಲಾವಣೆಗಳ ಕುರಿತ ಮಾಹಿತಿ ಇರಲಿಲ್ಲ. ಕಣ್ತಪ್ಪಿನಿಂದಾಗಿ ಅದು ಸೇರಿರಲಿಲ್ಲ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ಡಿ.ಪಿ. ಸಕಲಾನಿ ಹೇಳಿದ್ದಾರೆ. ಬದಲಾವಣೆಗೆ ನೀಡಿದ ಸಮರ್ಥನೆಗಳಲ್ಲಿ ತರ್ಕಬದ್ಧಗೊಳಿಸುವಿಕೆ ಮಾತ್ರವಲ್ಲ, ವಿದ್ಯಾರ್ಥಿಗಳ ಮೇಲಿನ ಹೊರೆ ತಗ್ಗಿಸಲು ಈ ಕ್ರಮ ಎಂಬುದೂ ಸೇರಿದೆ. ಪರಿಣತರ ಅಭಿಪ್ರಾಯಗಳನ್ನು ಪಡೆದುಕೊಂಡೇ ಬದಲಾವಣೆಗಳನ್ನು ಮಾಡಲಾಗಿದೆ ಎಂದೂ ಸಕಲಾನಿ ಹೇಳಿದ್ದಾರೆ. ಆದರೆ, ಆ ಪರಿಣತರು ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಪೂರ್ವಗ್ರಹಗಳು ಮತ್ತು ತಪ್ಪು ಗ್ರಹಿಕೆಗಳನ್ನು ಸರಿಪಡಿಸುವುದಕ್ಕಾಗಿ ಹೊಸ ಸಂಶೋಧನೆಗಳ ಆಧಾರದಲ್ಲಿ ಪಠ್ಯವನ್ನು ಕಾಲಕಾಲಕ್ಕೆ ಪರಿಷ್ಕರಿಸುವುದು ಅಗತ್ಯ. ಹೊಸ ದೃಷ್ಟಿಕೋನಗಳು ಮತ್ತು ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಕೂಡ ಬೇಕಿದೆ. ಆದರೆ, ಎನ್‌ಸಿಇಆರ್‌ಟಿ ಈಗ ಮಾಡಿರುವ ಬದಲಾವಣೆಗಳು ಇತಿಹಾಸವನ್ನು ರಾಜಕಾರಣದ ಅಡಿಯಾಳನ್ನಾಗಿಸಿವೆ. ವಿದ್ಯಾರ್ಥಿಗಳ ತಲೆಯಲ್ಲಿ ಸಿದ್ಧಾಂತವನ್ನು ತುರುಕುವುದೇ ಈಗಿನ ಬದಲಾವಣೆಗಳ ಉದ್ದೇಶ ಎಂಬುದರಲ್ಲಿ ಅನುಮಾನವೇನೂ ಇಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.