| ಪರೀಕ್ಷೆ: ರಾಜ್ಯ ಭಾಷೆಗಳಲ್ಲಿನಡೆಸಲು ಪಕ್ಷಾತೀತ ಹೋರಾಟ ಅಗತ್ಯ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಕನ್ನಡ ಸೇರಿದಂತೆ ಎಲ್ಲ ರಾಜ್ಯ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೆಲವು ರಾಜಕೀಯ ಮುಖಂಡರು ಧ್ವನಿ ಎತ್ತಿರುವುದು ಸ್ವಾಗತಾರ್ಹ. ಸಿಆರ್‌‍ಪಿಎಫ್‌ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಷ್ಟೇ ಬರೆಯಲು ಅವಕಾಶ ಕಲ್ಪಿಸಿರುವುದರ ವಿರುದ್ಧ ಕರ್ನಾಟಕದ ವಿರೋಧ ಪಕ್ಷಗಳ ಮುಖಂಡರು ಹಾಗೂ ತಮಿಳುನಾಡು ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಆರ್‌‍ಪಿಎಫ್‌ ನೇಮಕಾತಿ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಷ್ಟೇ ಬರೆಯಲು ಅವಕಾಶ ಕಲ್ಪಿಸುವುದರಿಂದ ಹಿಂದಿಯೇತರ ರಾಜ್ಯಗಳ ಆಕಾಂಕ್ಷಿಗಳನ್ನು ಉದ್ಯೋಗದಿಂದ ವಂಚಿಸಿದಂತಾಗುತ್ತದೆ ಎನ್ನುವ ಆತಂಕ ಸಹಜವಾದುದು ಹಾಗೂ ದೇಶದ ಎಲ್ಲ ರಾಜ್ಯ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಇರಬೇಕು ಎನ್ನುವ ಒತ್ತಾಯ ನ್ಯಾಯಸಮ್ಮತವಾದುದು. ರಾಜ್ಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದರಿಂದ ಸಿಆರ್‌ಪಿಎಫ್‌ನಲ್ಲಿ ಎಲ್ಲ ರಾಜ್ಯಗಳ ನಾಗರಿಕರು ಪ್ರಾತಿನಿಧ್ಯ ಪಡೆಯುವುದು ಸಾಧ್ಯವಾಗುತ್ತದೆ. ಉತ್ತಮ ದೇಹದಾರ್ಢ್ಯ ಹಾಗೂ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ಭಾಷೆಯ ಕಾರಣದಿಂದ ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸು ಪಡೆಯುವುದು ಕನ್ನಡವೂ ಸೇರಿದಂತೆ ಹಿಂದಿಯೇತರ ಭಾಷೆಗಳ ಅಭ್ಯರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಸದ್ಯದ ಪರೀಕ್ಷಾ ಪ್ರಕ್ರಿಯೆಯು ಹಿಂದಿ ಭಾಷಿಕ ರಾಜ್ಯಗಳ ಅಭ್ಯರ್ಥಿಗಳ ಹಿತಾಸಕ್ತಿ ರಕ್ಷಿಸುವಂತಿದೆ. ಯಾವುದೋ ಒಂದು ರಾಜ್ಯಭಾಷೆಯಲ್ಲಿ ದೇಶದ ಎಲ್ಲ ಅಭ್ಯರ್ಥಿಗಳೂ ಪರೀಕ್ಷೆ ಎದುರಿಸಬೇಕೆಂದು ಬಯಸುವುದು ಸರಿಯಲ್ಲ, ಅಂಥ ಅಪೇಕ್ಷೆ ಪ್ರಜಾಸತ್ತಾತ್ಮಕವಾದುದೂ ಅಲ್ಲ. ಸಂವಿಧಾನ ಅನುಮೋದಿಸಿರುವ ಎಲ್ಲ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಇರಬೇಕು. ತನ್ನ ರಾಜ್ಯ ಭಾಷೆಯಲ್ಲಿ ಪರೀಕ್ಷೆ ಬರೆಯುವುದು ಪರೀಕ್ಷಾರ್ಥಿಯ ಸಾಂವಿಧಾನಿಕ ಹಕ್ಕು. ಸಿಆರ್‌ಪಿಎಫ್‌ನ ಸದ್ಯದ ಪರೀಕ್ಷಾ ಪ್ರಕ್ರಿಯೆ ಈ ಹಕ್ಕನ್ನು ಮೊಟಕುಗೊಳಿಸುತ್ತಿದೆ. ಕೇಂದ್ರ ಸರ್ಕಾರದ ಯಾವುದೇ ಸೇವಾಕ್ಷೇತ್ರವು ದೇಶದ ವೈವಿಧ್ಯ ಹಾಗೂ ಬಹುತ್ವವನ್ನು ಪ್ರತಿನಿಧಿಸುವಂತಿರಬೇಕು. ವಿವಿಧ ರಾಜ್ಯ ಭಾಷೆಗಳ ಅಭ್ಯರ್ಥಿಗಳ ಪ್ರಾತಿನಿಧ್ಯವನ್ನು ಪ್ರಜ್ಞಾಪೂರ್ವಕವಾಗಿ ಒಳಗೊಳ್ಳುವ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ರೂಪುಗೊಳ್ಳುವುದು ಅಗತ್ಯ. ಹಿಂದಿಯೇತರ ಭಾಷಿಕರು ಇಂಗ್ಲಿಷ್ ಅಥವಾ ಹಿಂದಿಯಲ್ಲಿಯೇ ಪರೀಕ್ಷೆ ಬರೆಯಬೇಕೆನ್ನುವ ನಿಯಮವನ್ನು ಹಿಂದಿ ಹೇರಿಕೆಯ ರೂಪದಲ್ಲೂ ನೋಡಬಹುದು. ಅವಕಾಶ ದೊರೆತಾಗಲೆಲ್ಲ ಕೇಂದ್ರ ಸರ್ಕಾರದ ‘ಹಿಂದಿ ಒಲವು’ ದಕ್ಷಿಣದ ರಾಜ್ಯಗಳ ಮೇಲೆ ಹೇರಿಕೆಯ ರೂಪದಲ್ಲಿ ಪ್ರಕಟಗೊಳ್ಳುತ್ತಿರುತ್ತದೆ. ರಾಜ್ಯ ಭಾಷೆಗಳ ಮೇಲೆ ಹಿಂದಿ ಸವಾರಿ ನಡೆಸುವ ಕೇಂದ್ರ ಸರ್ಕಾರದ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಯತ್ನಗಳಿಗೆ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ವಿರೋಧವೂ ದಾಖಲಾಗಿದೆ. ಉದ್ಯಮ, ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಇಂಗ್ಲಿಷ್‌ನೊಂದಿಗೆ ಹಿಂದಿಯನ್ನು ಎತ್ತಿ ನಿಲ್ಲಿಸುವ ಪ್ರಯತ್ನಗಳನ್ನು ಸಹಿಸಿಕೊಳ್ಳಲಾಗದು. ಸಿಆರ್‌ಪಿಎಫ್‌ ನೇಮಕಾತಿ ಪರೀಕ್ಷೆ ಮಾತ್ರವಲ್ಲ; ಕೇಂದ್ರ ಸರ್ಕಾರದ ಹುದ್ದೆಗಳಿಗೆ ನಡೆಸುವ ಬಹುತೇಕ ಪರೀಕ್ಷೆಗಳು ಹಿಂದಿ ಭಾಷಿಕರ ಹಿತಾಸಕ್ತಿಯನ್ನು ರಕ್ಷಿಸುವಂತಿವೆ. ಬಹುತೇಕ ಬ್ಯಾಂಕ್‌ಗಳಲ್ಲಿ ಹಿಂದಿ ಭಾಷಿಕರು ತುಂಬಿಕೊಂಡಿರುವುದಕ್ಕೆ ಹಿಂದಿಯೇತರ ಭಾಷೆಗಳ ಬಗೆಗಿನ ತಾರತಮ್ಯ ಧೋರಣೆಯೇ ಕಾರಣ. ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್‌ಸಿ) ಕೂಡ ಇತ್ತೀಚಿನವರೆಗೂ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರಲಿಲ್ಲ. ನಿರಂತರ ಪ್ರತಿಭಟನೆಯ ನಂತರ ಕನ್ನಡವೂ ಸೇರಿದಂತೆ ಹದಿಮೂರು ‍ಪ್ರಾದೇಶಿಕ ಭಾಷೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆಗಳನ್ನು ಬರೆಯಲು ಎಸ್‌ಎಸ್‌ಸಿ ಅವಕಾಶ ಕಲ್ಪಿಸಿದೆ. ಈ ಮಾದರಿಯು ಸಿಆರ್‌ಪಿಎಫ್‌ ನೇಮಕಾತಿಗೂ ಅನ್ವಯವಾಗಬೇಕು. ಸಿಆರ್‌ಪಿಎಫ್‌ ಪರೀಕ್ಷೆಗಳ ಭಾಷಾನೀತಿಗೆ ಸಂಬಂಧಿಸಿದಂತೆ ಕೇಂದ್ರ‌ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಹಾಗೂ ಸಿಆರ್‌ಪಿಎಫ್ ಪರೀಕ್ಷೆಯನ್ನು ಈ ಬಾರಿಯಿಂದಲೇ ಎಲ್ಲ ರಾಜ್ಯ ಭಾಷೆಗಳಿಗೆ ಮುಕ್ತಗೊಳಿಸಬೇಕು. ಈ ದಿಸೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ಕೇಂದ್ರ ಸರ್ಕಾರದ ಮೇಲೆ‌ ಪಕ್ಷಾತೀತವಾಗಿ ಒತ್ತಡ ಹೇರಬೇಕು. ಈ ಒತ್ತಡ ಕರ್ನಾಟಕದಿಂದಲೇ ಆರಂಭವಾಗುವುದು ಒಳ್ಳೆಯದು. ಮುಖ್ಯಮಂತ್ರಿ ಹಾಗೂ ರಾಜ್ಯದ ಎಲ್ಲ ಸಂಸದರು ಸಿಆರ್‌ಪಿಎಫ್‌ ಪರೀಕ್ಷೆಗಳ ಭಾಷಾನೀತಿಯನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ಎಲ್ಲ ರಾಜ್ಯ ಭಾಷೆಗಳನ್ನು ಸಮಾನವಾಗಿ ನಡೆಸಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವೂ ಹೌದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.