ಸಂಪಾದಕೀಯ | ಕೊರೊನಾ ರೂಪಾಂತರಿ ಉಪದ್ರವ: ಆತಂಕ ಅನವಶ್ಯಕ, ಮೈಮರೆವೆ ಸಲ್ಲ ದೇಶದ ವಿವಿಧ ಭಾಗಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕೆಲವು ದಿನಗಳಿಂದ ಹೆಚ್ಚಾಗಿರುವುದು, ಕೋವಿಡ್‌ ಮಾರ್ಗಸೂಚಿಯನ್ನು ಮತ್ತೆ ಸಾರ್ವಜನಿಕ ಜೀವನದ ಭಾಗವಾಗಿಸಿಕೊಳ್ಳಲು ಒತ್ತಾಯಿಸುತ್ತಿರುವಂತಿದೆ. ಐದಾರು ತಿಂಗಳಿಂದ ಕನಿಷ್ಠ ಪ್ರಮಾಣದಲ್ಲಿದ್ದ ಕೊರೊನಾ ಸೋಂಕಿನ ಪ್ರಕರಣಗಳು ಕಳೆದೊಂದು ವಾರದಿಂದ ಏರುಗತಿಯಲ್ಲಿವೆ ಹಾಗೂ ಪ್ರತೀ ದಿನ 10 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಎಂಟು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ದೆಹಲಿ, ಕೇರಳ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 27 ಮಂದಿ ಕೋವಿಡ್‌ ಬಾಧೆಯಿಂದ ಮೃತಪಟ್ಟಿದ್ದಾರೆ. ಈ ಏರಿಕೆ ಪ್ರಮಾಣ ಮುಂದಿನ ದಿನಗಳಲ್ಲಿ ಕೋವಿಡ್‌ನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾಗಬಹುದೆನ್ನುವ ಸೂಚನೆ ನೀಡುವಂತಿದೆ ಹಾಗೂ ಸಾವುನೋವಿನ ಪ್ರಮಾಣವೂ ಹೆಚ್ಚಾಗಬಹುದು. ಸಂಭಾವ್ಯ ಬಿಕ್ಕಟ್ಟನ್ನು ಎದುರಿಸಲು ವೈದ್ಯಕೀಯ ಕ್ಷೇತ್ರ ಅಗತ್ಯ ಸಿದ್ಧತೆಗಳನ್ನು ನಡೆಸಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿನ ಮೂಲ ಸೌಕರ್ಯಗಳನ್ನು ಸುಸಜ್ಜಿತ ಸ್ಥಿತಿಯಲ್ಲಿರಿಸಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿದೆ. ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಕೇಂದ್ರ ಆರೋಗ್ಯ ಸಚಿವರು ಸಮಾಲೋಚನೆ ನಡೆಸಿದ್ದು, ಅಪಾಯದ ಸಾಧ್ಯತೆ ಹೆಚ್ಚಾಗಿರುವ ಸ್ಥಳಗಳನ್ನು ಗುರುತಿಸುವಂತೆ ಸೂಚನೆ ನೀಡಿದ್ದಾರೆ; ಪರೀಕ್ಷೆಗಳ ಸಂಖ್ಯೆ ಮತ್ತು ಲಸಿಕೆ ನೀಡುವುದನ್ನು ಹೆಚ್ಚಿಸುವುದರ ಜೊತೆಗೆ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ಆಸ್ಪತ್ರೆಗಳು ಸನ್ನದ್ಧವಾಗಿರುವಂತೆ ಸೂಚಿಸಿದ್ದಾರೆ. ಹೊಸ ಸೋಂಕುಗಳಿಗೆ ಒಮೈಕ್ರಾನ್‌ ರೂಪಾಂತರಿ ತಳಿ ಎಕ್ಸ್‌ಬಿಬಿ.1.16 ಕಾರಣವೆಂದು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಕೂಡ ಎಕ್ಸ್‌ಬಿಬಿ.1.16 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ರೂಪಾಂತರಿ ತಳಿ ವೇಗವಾಗಿ ಹರಡುತ್ತಿಲ್ಲ ಹಾಗೂ ಅದರ ಪರಿಣಾಮಗಳು ಸೌಮ್ಯವಾಗಿವೆ ಎನ್ನುವುದು ಸಮಾಧಾನಕರ ಸಂಗತಿ. ಆದರೆ, ಮುಂದಿನ ದಿನಗಳಲ್ಲಿ ಈ ರೂಪಾಂತರಿ ಯಾವ ರೀತಿ ವರ್ತಿಸುತ್ತದೆಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ವಿಶ್ವ ಆರೋಗ್ಯ ಸಂಸ್ಥೆಯು ಭಾರತದಲ್ಲಿನ ರೂಪಾಂತರಿ ತಳಿಯ ವರ್ತನೆಯನ್ನು ಗಮನಿಸುತ್ತಿರುವುದಾಗಿ ತಿಳಿಸಿದೆ. ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದರೂ ಆತಂಕಪಡುವ ಸ್ಥಿತಿಯೇನೂ ದೇಶದಲ್ಲಿಲ್ಲ. ಬಹುತೇಕ ನಾಗರಿಕರು ಲಸಿಕೆಯ ಸುರಕ್ಷಾ ವಲಯದಲ್ಲಿದ್ದಾರೆ. ಎರಡು– ಮೂರು ವರ್ಷಗಳ ಅವಧಿಯಲ್ಲಿ ಕೊರೊನಾ ಬಹುತೇಕರಿಗೆ ಬಂದುಹೋಗಿರುವುದರಿಂದ ಸೋಂಕಿನ ವಿರುದ್ಧ ಸಾರ್ವಜನಿಕರಲ್ಲಿ ಪ್ರತಿರೋಧ ಶಕ್ತಿ ರೂಪುಗೊಂಡಿದೆ. ಹಾಗಾಗಿ ಹೊಸ ರೂಪಾಂತರಿ ತಳಿ ನಾಗರಿಕರ ಆರೋಗ್ಯದ ಮೇಲೆ ಹೆಚ್ಚಿನ ಅಪಾಯ ಉಂಟುಮಾಡುವ ಸಾಧ್ಯತೆ ಕಡಿಮೆ. ಹಾಗೆಂದು ಜನ ಮೈಮರೆಯುವಂತಿಲ್ಲ. ಕೊರೊನಾ–19 ವೈರಸ್‌ ಅನಿರೀಕ್ಷಿತ ಹಾಗೂ ಅನೂಹ್ಯ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯನ್ನು ಉಪೇಕ್ಷಿಸಲಾಗದು. ಹಾಗಾಗಿ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು ಹಾಗೂ ಸಾಧ್ಯವಾದಷ್ಟೂ ವೈಯಕ್ತಿಕ ಅಂತರ ಪಾಲಿಸುವುದು ಸೇರಿದಂತೆ ಕೋವಿಡ್‌ ಕಾಲಘಟ್ಟದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳಿಗೆ ಮರಳುವುದು ಇಂದಿನ ಅಗತ್ಯ. ಕೊರೊನಾ ನಿಯಂತ್ರಣದಲ್ಲಿರುವ ಸಮಯದಲ್ಲೂ ಕೋವಿಡ್‌ ಮಾರ್ಗಸೂಚಿಯನ್ನು ನಮ್ಮ ಜೀವನಶೈಲಿಯ ಭಾಗವಾಗಿಸಿಕೊಳ್ಳುವುದರಿಂದ ಕೆಮ್ಮು–ನೆಗಡಿಯಂತಹ ಸೋಂಕುಗಳಿಂದ ಆದಷ್ಟೂ ದೂರವಿರಬಹುದು. ಮಕ್ಕಳು, ಹಿರಿಯ ನಾಗರಿಕರು ಹಾಗೂ ಜೀವನಶೈಲಿ ಸಮಸ್ಯೆಗಳಿಂದ ಬಳಲುತ್ತಿರುವವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಮೂರನೇ ಡೋಸ್‌ ಲಸಿಕೆ ಪಡೆಯದಿರುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಅವರನ್ನು ಲಸಿಕೆಯ ಸುರಕ್ಷಾ ವಲಯದೊಳಗೆ ತರುವ ಪ್ರಯತ್ನಗಳನ್ನು ಸರ್ಕಾರ ಕೈಗೊಳ್ಳಬೇಕಾಗಿದೆ. ‘ಪರೀಕ್ಷೆ, ಚಿಕಿತ್ಸೆ, ಲಸಿಕೆ’ಯ ಸೂತ್ರದೊಂದಿಗೆ ಕೋವಿಡ್‌ ಮಾರ್ಗಸೂಚಿಯನ್ನು ಅನುಸರಿಸುವುದು ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭ ಕೂಡ ಕೊರೊನಾ ಸೋಂಕಿನ ಬಗ್ಗೆ ಹೆಚ್ಚು ಜಾಗ್ರತೆ ವಹಿಸಲು ಒತ್ತಾಯಿಸುವಂತಿದೆ. ಚುನಾವಣಾ ಸಂದರ್ಭದಲ್ಲಿ ಜನರು ಎಚ್ಚರ ತಪ್ಪಬಾರದು. ರಾಜಕೀಯ ಸಮಾವೇಶಗಳು ಹಾಗೂ ಕಾರ್ಯಕರ್ತರ ಸಭೆಗಳು ಸೋಂಕು ಹರಡುವ ಸ್ಥಳಗಳಾಗದಂತೆ ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ವಿವೇಚನೆಯಿಂದ ವರ್ತಿಸಬೇಕು. ಮತಯಾಚನೆ ಮಾಡುವುದರ ಜೊತೆಗೆ ಕೋವಿಡ್‌ ಮಾರ್ಗಸೂಚಿ ಪಾಲನೆಯ ಬಗ್ಗೆ ಜನಜಾಗೃತಿ ಮೂಡಿಸುವುದು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೊಣೆಗಾರಿಕೆಯಾಗಿದೆ. ಶಾಲಾಕಾಲೇಜುಗಳಿಗೆ ರಜೆ ಇರುವ ಏಪ್ರಿಲ್‌–ಮೇ ಅವಧಿಯಲ್ಲಿ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಹೆಚ್ಚಾಗಿರುವುದು ಕೂಡ ಕೊರೊನಾ ಸೋಂಕು ಹರಡಲು ಪೂರಕವಾಗಬಹುದು. ಚುನಾವಣೆ ಮತ್ತು ಪ್ರವಾಸಿ ಋತುವನ್ನು ಜನರು ವಿವೇಕ ಮತ್ತು ಸಂಯಮದಿಂದ ನಿಭಾಯಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.