ಸಂಪಾದಕೀಯ | ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್‌ ಹತ್ಯೆ: ದಿಗಿಲುಗೊಳಿಸುವ ವಿದ್ಯಮಾನ ಉತ್ತರಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ ಎಂಬುದಕ್ಕೆ, ಪೊಲೀಸರ ಸುಪರ್ದಿಯಲ್ಲಿದ್ದ ಪಾತಕಿ ಮತ್ತು ರಾಜಕಾರಣಿ ಅತೀಕ್‌ ಅಹಮದ್‌ ಹಾಗೂ ಆತನ ತಮ್ಮನನ್ನು ಸಾರ್ವಜನಿಕವಾಗಿ ಮಾಧ್ಯಮ ಪ್ರತಿನಿಧಿಗಳ ಎದುರಿನಲ್ಲಿಯೇ ಗುಂಡು ಹೊಡೆದು ಸಾಯಿಸಿರುವುದಕ್ಕಿಂತ ಒಳ್ಳೆಯ ಪುರಾವೆ ಬೇಕಿಲ್ಲ. ಇದು ಪ್ರಯಾಗರಾಜ್‌ನಲ್ಲಿ ಶನಿವಾರ ನಡೆದಿದೆ. ಅತೀಕ್‌ನ ಮಗ ಅಸದ್‌ ಅಹಮದ್‌ ಮತ್ತು ಅವನ ಗೆಳೆಯ ಗುಲಾಂ ಹಸನ್‌ನನ್ನು ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಎರಡು ದಿನಗಳ ಬಳಿಕ ಈ ಇಬ್ಬರ ಹತ್ಯೆ ಆಗಿದೆ. ಕಾನೂನಿಗೆ ಕಿಮ್ಮತ್ತೇ ಇಲ್ಲ ಎಂಬ ವ್ಯವಸ್ಥೆಯ ‍ಪ್ರತೀಕವಾಗಿ ಈ ಹತ್ಯೆಗಳು ಕಾಣಿಸುತ್ತವೆ. ಇಂತಹ ಸರಣಿ ದಾಳಿಗಳು ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡೇ ನಡೆಯುತ್ತಿವೆ ಎಂಬುದೂ ಗಮನಾರ್ಹ. ಈ ರೀತಿಯ ದಾಳಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತವೆ. ಎನ್‌ಕೌಂಟರ್‌ಗಳು ಮತ್ತು ಸರಿಯಾದ ಪ್ರಕ್ರಿಯೆ ಅನುಸರಿಸದೆ ಕೈಗೊಳ್ಳುವ ಕ್ರಮಗಳ ಕುರಿತಂತೆ ಎಷ್ಟೇ ಟೀಕೆ ಬಂದರೂ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಇಂತಹ ಕ್ರಮಗಳಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಅಲ್ಪಸಂಖ್ಯಾತ ಸಮುದಾಯದವರ ಹತ್ಯೆ ಮತ್ತು ಅವರ ಮೇಲೆ ಕೈಗೊಳ್ಳುವ ಹಗೆತನದ ಕ್ರಮಗಳು ಈ ಸರ್ಕಾರದ ಸಾರ್ವಜನಿಕ ನೀತಿಯೇ ಆಗಿವೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಹುಶಃ ಸರಿಯಾದ ಉತ್ತರಗಳು ಸಿಗದ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅತೀಕ್‌ ಮತ್ತು ಆತನ ತಮ್ಮನನ್ನು ರಾತ್ರಿಯ ಹೊತ್ತಿನಲ್ಲಿ ಸಮರ್ಪಕ ಭದ್ರತೆ ಇಲ್ಲದೆ ವೈದ್ಯಕೀಯ ಪರೀಕ್ಷೆಗೆ ಒಯ್ಯುವ ಅಗತ್ಯ ಏನಿತ್ತು ಎಂಬ ಪ್ರಶ್ನೆ ಇದೆ. ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದ ಅತೀಕ್‌ ಅಹಮದ್‌, ಭದ್ರತೆ ಒದಗಿಸಬೇಕು ಎಂದು ಕೆಲವೇ ದಿನಗಳ ಹಿಂದೆ ಕೋರಿದ್ದ. ‘ರಾಜ್ಯದ ಆಡಳಿತ ವ್ಯವಸ್ಥೆಯು ಭದ್ರತೆಯನ್ನು ನೋಡಿಕೊಳ್ಳುತ್ತದೆ’ ಎಂದು ಕೋರ್ಟ್‌ ಹೇಳಿತ್ತು. ಅತೀಕ್‌ ಮತ್ತು ಆತನ ಸಹಚರರ ಮೇಲೆ ಅಪರಾಧ ಪ್ರಕರಣಗಳು ಇವೆ. ಆದರೆ, ಅಪರಾಧಿ ಆಗಿರಲಿ ಅಲ್ಲದಿರಲಿ, ಯಾವುದೇ ವ್ಯಕ್ತಿಯನ್ನು ಕೊಲ್ಲುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಎಷ್ಟೇ ಹೀನ ಕೃತ್ಯ ಎಸಗಿದವನೇ ಆಗಿರಲಿ, ಕಾನೂನಿನ ಪ್ರಕ್ರಿಯೆಯ ಅವಕಾಶ ಆತನಿಗೆ ದೊರೆಯಲೇಬೇಕು. ಇಲ್ಲದೇ ಹೋದರೆ, ಸಮಾಜವು ಅರಾಜಕತೆಯತ್ತ ಸಾಗುತ್ತದೆ. ಈಗಿನ ಕೊಲೆ ಸರಣಿಯು ಬಿಎಸ್‌ಪಿ ಶಾಸಕ ರಾಜು ಪಾಲ್‌ ಕೊಲೆಯೊಂದಿಗೆ 2005ರಲ್ಲಿ ಆರಂಭವಾಯಿತು. ಈ ಪ್ರಕರಣದಲ್ಲಿ ಅತೀಕ್‌ ಅಹಮದ್‌ ಆರೋಪಿ. ಆತ ಮತ್ತು ಆತನ ಸಹಚರರ ಮೇಲೆ ಹಲವಾರು ಪ್ರಕರಣಗಳು ಇದ್ದವು. ಎನ್‌ಕೌಂಟರ್‌ ಹತ್ಯೆಗಳು ಉತ್ತರಪ್ರದೇಶದಲ್ಲಿ ಈಗ ರೂಢಿಯೇ ಆಗಿಬಿಟ್ಟಿವೆ. ಅತೀಕ್‌ ಅಹಮದ್‌ ಮಗನ ಹತ್ಯೆಯೊಂದಿಗೆ ಈ ತಿಂಗಳಲ್ಲಿ ಉತ್ತರಪ್ರದೇಶದಲ್ಲಿ ಮೂರು ಎನ್‌ಕೌಂಟರ್‌ ಹತ್ಯೆಗಳು ನಡೆದಂತಾಗಿ‌ವೆ. ಆದಿತ್ಯನಾಥ ನೇತೃತ್ವದ ಸರ್ಕಾರವು ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ 183 ಪೊಲೀಸ್‌ ಎನ್‌ಕೌಂಟರ್‌ ಹತ್ಯೆಗಳು ನಡೆದಿವೆ. ಸರ್ಕಾರವು ನ್ಯಾಯಾಂಗ ತನಿಖೆಗೆ ಈಗ ಆದೇಶಿಸಿದೆ; ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿದೆ. ಆದರೆ, ಈ ಸರ್ಕಾರಕ್ಕೆ ಸಹಾನುಭೂತಿ ಇರುವುದು ಯಾರ ಕುರಿತು ಎಂಬುದು ಈವರೆಗಿನ ನಡವಳಿಕೆಯಿಂದ ತಿಳಿಯುತ್ತದೆ. ಎನ್‌ಕೌಂಟರ್‌ ನಡೆಸಿದ ಪೊಲೀಸರನ್ನು ಸರ್ಕಾರವು ಹಿಂದೆ ಹೊಗಳಿತ್ತು ಮತ್ತು ಪ್ರತಿಕೂಲ ಕ್ರಮಗಳಿಂದ ಅವರನ್ನು ರಕ್ಷಿಸಿತ್ತು. ಪೊಲೀಸರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ, ಕಾನೂನನ್ನು ಕೈಗೆತ್ತಿಕೊಂಡರೆ ಸಂವಿಧಾನದ ಮೂಲಕ ಸ್ಥಾಪಿತವಾದ ಕಾನೂನು ಮತ್ತು ಸುವ್ಯವಸ್ಥೆಯೇ ಬಿದ್ದುಹೋಗುತ್ತದೆ. ಬುಲ್ಡೋಜರ್‌ಗಳು ಮತ್ತು ಬಂದೂಕುಗಳೇ ಉತ್ತರಪ್ರದೇಶದ ಆಳ್ವಿಕೆಯ ಸಾಧನಗಳು. ಇವುಗಳ ಬಳಕೆಯನ್ನು ಸಾಂಸ್ಥಿಕಗೊಳಿಸಲಾಗಿದೆ ಮತ್ತು ಯಾವುದೇ ಎಗ್ಗಿಲ್ಲದೆ ಅದನ್ನು ಸಮರ್ಥನೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರವು ಪೌರರ ಮೇಲೆ ಕಾನೂನನ್ನು ಮೀರಿ ನಡೆಸುವ ಹಿಂಸಾಚಾರವು ವಿನಾಶಕಾರಿ. ಇದರಿಂದ ಸಮಾಜಕ್ಕೆ ಆಗುವ ಹಾನಿ ಅಪಾರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.