ಸಂಪಾದಕೀಯ | ಹುರುಳಿಲ್ಲದ ಪ್ರಕರಣ: ಸರ್ಕಾರಗಳು ‘ಸುಪ್ರೀಂ’ ಮಾತಿಗೆ ಕಿವಿಗೊಡಬೇಕು ಸರ್ಕಾರಗಳು ಅನಗತ್ಯವಾಗಿ ಕೋರ್ಟ್‌ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುತ್ತವೆ, ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿರುವ ಪ್ರಕರಣಗಳ ಸಂಖ್ಯೆ ಹೆಚ್ಚಲು ಇದು ಕೂಡ ಕಾರಣ ಎಂದು ಸುಪ್ರೀಂ ಕೋರ್ಟ್ ಮಾಡಿರುವ ಟೀಕೆಯು ಕಿವಿಗೊಡಲು ಅರ್ಹವಾಗಿರುವಂಥದ್ದು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ದಾಖಲು ಮಾಡಿರುವ ಪ್ರಕರಣಗಳ ಪೈಕಿ ಕನಿಷ್ಠ ಶೇಕಡ 40ರಷ್ಟು ಪ್ರಕರಣಗಳು ಹುರುಳಿಲ್ಲದವು ಎಂದು ಕೋರ್ಟ್‌ ಈಚೆಗೆ ಹೇಳಿದೆ. ನಗರ ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಕಂಪನಿಗಳು ಹಾಗೂ ಸಂಸ್ಥೆಗಳು ದಾಖಲು ಮಾಡಿರುವ ಪ್ರಕರಣಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದು. ಸರ್ಕಾರಿ ನೌಕರರೊಬ್ಬರಿಗೆ ಪ್ರತಿ ತಿಂಗಳು ₹ 700 ಕೊಡುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವೊಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ‘ಈ ಪ್ರಕರಣದಲ್ಲಿ, ವ್ಯಕ್ತಿಯೊಬ್ಬರಿಗೆ ಪ್ರತಿ ತಿಂಗಳು ₹ 700 ಕೊಡುವುದನ್ನು ನಿರಾಕರಿಸಲು ಸರ್ಕಾರವು ಬೊಕ್ಕಸದಿಂದ ₹ 7 ಲಕ್ಷ ವೆಚ್ಚ ಮಾಡಿರಬೇಕು’ ಎಂದು ಕೋರ್ಟ್ ಹೇಳಿದೆ. ಸರ್ಕಾರದ ನಡುವಿನ ಕಾನೂನು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮಧ್ಯಸ್ಥಿಕೆಯ ಮೊರೆ ಹೋಗುವುದು ಒಳ್ಳೆಯದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು ಈಚೆಗೆ ಕೇಂದ್ರ ಸರ್ಕಾರಕ್ಕೆ ಹೇಳಿದ್ದರು. ಸರ್ಕಾರ ಹಾಗೂ ಅದರ ಅಡಿಯಲ್ಲಿ ಕೆಲಸ ಮಾಡುವ ಸಂಸ್ಥೆಗಳ ಪ್ರಯತ್ನವು ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವುದಾಗಿರಬೇಕೆ ವಿನಾ ಕೋರ್ಟ್‌ ಕಟಕಟೆಗೆ ಒಯ್ಯುವುದಾಗಿರಬಾರದು ಎಂದು ಸಿಜೆಐ ಹೇಳಿದ್ದರು. ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಇರುವ ಪ್ರಕರಣಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಾಗಿಯಾಗಿರುವ ಪ್ರಕರಣಗಳ ಪ್ರಮಾಣವು ಶೇಕಡ 46ರಷ್ಟು ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ವಾದಿ ಅಥವಾ ಪ್ರತಿವಾದಿಯಾಗಿ ನಿಲ್ಲುತ್ತವೆ. ಕೆಲವು ಸಂದರ್ಭಗಳಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಮತ್ತೆ ಪ್ರಕರಣಗಳನ್ನು ದಾಖಲು ಮಾಡಲಾಗುತ್ತದೆ. ಹಲವು ಸಮಸ್ಯೆಗಳನ್ನು ಇಲಾಖೆಗಳ ನಡುವೆಯೇ ಬಗೆಹರಿಸಿಕೊಳ್ಳಬಹುದು, ಕೆಲವು ಸಮಸ್ಯೆಗಳನ್ನು ಉ‍ಪೇಕ್ಷಿಸಲೂಬಹುದು. ವ್ಯಾಜ್ಯಗಳನ್ನು ಬಗೆಹರಿಸಲು ಇರುವ ವೇದಿಕೆಗಳು ನೀಡುವ ತೀರ್ಮಾನವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತದೆ. ಅಧಿಕಾರಿಗಳಿಗೆ ನಿರ್ದಿಷ್ಟ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಹೊಣೆಗಾರರಾಗುವ ಮನಸ್ಸು ಇರುವುದಿಲ್ಲ ಎಂಬುದು, ಈ ರೀತಿ ಮೇಲ್ಮನವಿ ಸಲ್ಲಿಸುವ ಪ್ರವೃತ್ತಿಗೆ ಹಲವು ಸಂದರ್ಭಗಳಲ್ಲಿ ಕಾರಣವಾಗಿರುತ್ತದೆ. ಕೆಲವರಿಗೆ ತೊಂದರೆ ಕೊಡುವ ಉದ್ದೇಶದಿಂದಲೂ ಪ್ರಕರಣ ದಾಖಲು ಮಾಡುವುದಿದೆ. ಆದರೆ ಇದಕ್ಕೆಲ್ಲ ಆಗುವ ಖರ್ಚುಗಳ ಬಗ್ಗೆ ಸರ್ಕಾರವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಪ್ರಕರಣಗಳನ್ನು ನಡೆಸಲಿಕ್ಕೆಂದೇ ಅದರ ಬಳಿ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. 2010ರಲ್ಲಿ ರಾಷ್ಟ್ರೀಯ ವ್ಯಾಜ್ಯ ನೀತಿಯನ್ನು ರೂಪಿಸಲಾಗಿತ್ತು. ಸರ್ಕಾರವು ವ್ಯಾಜ್ಯಗಳನ್ನು ದಾಖಲಿಸುವ ವಿಚಾರದಲ್ಲಿ ಜವಾಬ್ದಾರಿಯುತ ಹಾಗೂ ದಕ್ಷ ಆಗುವಂತೆ ಮಾಡುವುದು ಈ ನೀತಿಯ ಉದ್ದೇಶ ಆಗಿತ್ತು. ಇದನ್ನು 2015ರಲ್ಲಿ ಪರಿಷ್ಕರಿಸಲಾಯಿತು. ಆದರೆ, ಸರ್ಕಾರಗಳ ನಡೆಯಲ್ಲಿ ಯಾವ ಬದಲಾವಣೆಯೂ ಕಂಡುಬಂದಿಲ್ಲ. ನ್ಯಾಯಾಂಗದ ಎಲ್ಲ ಹಂತಗಳಲ್ಲಿಯೂ ನ್ಯಾಯಾಧೀಶರ ಹಾಗೂ ನ್ಯಾಯಮೂರ್ತಿಗಳ ಕೊರತೆ ಇದೆ. ವಿಚಾರಣೆಯ ಹಂತದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆಲ್ಲ ಪರಿಸ್ಥಿತಿ ಬಿಗಡಾಯಿಸುತ್ತದೆ. ಅನಗತ್ಯವಾದ, ಹುರುಳಿಲ್ಲದ ಪ್ರಕರಣಗಳನ್ನು ಕೋರ್ಟ್‌ ಮುಂದೆ ತಂದಾಗ ಅವು ನ್ಯಾಯಾಲಯಗಳ ಪಾಲಿಗೆ ಹೊರೆಯಾಗಿ ಪರಿಣಮಿಸುತ್ತವೆ. ಮಾತ್ರವಲ್ಲದೆ, ಗಂಭೀರ ಪ್ರಕರಣಗಳ ವಿಚಾರಣೆ ಕೂಡ ನಿಧಾನವಾಗಿ ಸಾಗುವಂತೆ ಆಗುತ್ತದೆ. ಆಗ ನಿಜವಾಗಿ ನ್ಯಾಯ ಸಿಗಬೇಕಾದವರಿಗೆ ನ್ಯಾಯದಾನ ವಿಳಂಬವಾಗುತ್ತದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದು ಹಾಗೂ ಕೋರ್ಟ್‌ ಮುಂದೆ ಇರುವ ಪ್ರಕರಣಗಳಲ್ಲಿ ನಿರ್ಣಯವೊಂದು ಬಾರದೇ ಇರುವುದು ಆಡಳಿತದ ಮೇಲೂ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ಸರ್ಕಾರವು ಕೋರ್ಟ್‌ಗಳ ಮುಂದೆ ಇರುವ ಎಲ್ಲ ಪ್ರಕರಣಗಳನ್ನು ಪರಿಶೀಲಿಸಬೇಕು. ಅನಗತ್ಯ ಅನ್ನಿಸುವಂತಹ ಪ್ರಕರಣಗಳನ್ನು ಹಿಂಪಡೆಯಬೇಕು. ಈ ರೀತಿ ಮಾಡುವುದರಿಂದ ಆಡಳಿತಕ್ಕೂ ಒಳ್ಳೆಯದಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.