ಸಂಪಾದಕೀಯ: ಕರ್ತವ್ಯನಿರತ ವೈದ್ಯರ ಸುರಕ್ಷತೆ- ಖಾತರಿಪಡಿಸುವ ಕ್ರಮ ಅಗತ್ಯ ಕೇರಳದ ಯುವ ವೈದ್ಯೆಯೊಬ್ಬರು ಚಿಕಿತ್ಸೆ ಪಡೆಯಲು ಬಂದಿದ್ದ ವ್ಯಕ್ತಿಯಿಂದಲೇ ಹಲ್ಲೆಗೊಳಗಾಗಿ ಸಾವಿಗೀಡಾದ ಪ್ರಕರಣ, ಕರ್ತವ್ಯನಿರತ ವೈದ್ಯರು ದೈನಂದಿನ ಕೆಲಸದಲ್ಲಿ ಎಂತಹ ಅಪಾಯವನ್ನು ಎದುರಿಸುತ್ತಾರೆ ಎನ್ನುವುದಕ್ಕೆ ಜ್ವಲಂತ ಉದಾಹರಣೆ. ಕಾಲಿಗೆ ಆಗಿದ್ದ ಗಾಯಕ್ಕೆ ಆ ವೈದ್ಯೆಯು ಮುಲಾಮು ಸವರಿ, ಪಟ್ಟಿಯನ್ನು ಕಟ್ಟುತ್ತಿದ್ದಾಗ, ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೇ ಕತ್ತರಿ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಬಳಕೆಯಾಗುವ ಕಿರುಚಾಕುವಿನಿಂದ ಅವರ ಮೇಲೆ ದಾಳಿ ಮಾಡಿದ್ದ. ಆಸ್ಪತ್ರೆಯಲ್ಲಿ ಹೌಸ್‌ ಸರ್ಜನ್‌ ಆಗಿದ್ದ ವಂದನಾ ದಾಸ್‌, ಈ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಕೊನೆಯುಸಿರು ಎಳೆಯುವಂತಾಯಿತು. ದಾಳಿ ನಡೆಸಿದ ವ್ಯಕ್ತಿಯು ಕುಟುಂಬದ ಸದಸ್ಯರೊಂದಿಗೆ ಹೊಡೆದಾಡಿಕೊಂಡಿದ್ದ. ಗಾಯಗೊಂಡಿದ್ದ ಆತನನ್ನು ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು. ಮೊದಲೇ ಹೊಡೆದಾಡಿಕೊಂಡಿದ್ದ, ಮೇಲಾಗಿ ಕುಡಿದ ಮತ್ತಿನಲ್ಲಿದ್ದ ಈ ವ್ಯಕ್ತಿಯನ್ನು ಚಿಕಿತ್ಸೆಗೆ ಕರೆತಂದಾಗ ಪೊಲೀಸರು ಹೆಚ್ಚು ಜಾಗರೂಕರಾಗಿ ಇರಬೇಕಿತ್ತು. ಆದರೆ, ಚಿಕಿತ್ಸಾ ಕೊಠಡಿಯಲ್ಲಿ ಆತ ಮತ್ತೆ ಪುಂಡತನ ತೋರಿಸತೊಡಗಿದಾಗ ಪೊಲೀಸರಿಗೆ ಆತನನ್ನು ಬೇಗ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಷ್ಟುಹೊತ್ತಿಗೆ ದೊಡ್ಡ ಅನಾಹುತ ನಡೆದುಹೋಗಿತ್ತು. ‘ವೈದ್ಯೆಯ ಮೇಲೆ ಆ ವ್ಯಕ್ತಿಯಿಂದ ದಾಳಿ ನಡೆಯುವ ಯಾವ ಸೂಚನೆಯೂ ಇರಲಿಲ್ಲ. ಏಕಾಏಕಿ ಆತನಿಂದ ಆಕ್ರಮಣ ನಡೆದಿದ್ದರಿಂದ ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ’ ಎನ್ನುವ ಪೊಲೀಸರ ವಾದವನ್ನು ಒಪ್ಪಲಾಗದು. ಆ ವ್ಯಕ್ತಿಯು ಪೊಲೀಸ್‌ ವಶದಲ್ಲೇ ಇದ್ದ. ಸ್ಥಳದಲ್ಲಿ ಪೊಲೀಸರು ಹಾಜರಿದ್ದರೂ ವೈದ್ಯೆಯ ಮೇಲಿನ ದಾಳಿಯನ್ನು ತಪ್ಪಿಸಲು ಸಾಧ್ಯವಾಗದಿರುವುದು ದುರದೃಷ್ಟಕರ ಸಂಗತಿ. ವೈದ್ಯರು, ನರ್ಸ್‌ಗಳು ಹಾಗೂ ಇತರ ವೈದ್ಯಕೀಯ ಸಿಬ್ಬಂದಿ ಕರ್ತವ್ಯನಿರತರಾಗಿದ್ದಾಗ ರೋಗಿಗಳ ಸಂಬಂಧಿಗಳಿಂದ ಹೀಗೆ ಅಪಾಯ ಎದುರಿಸುವ ಪ್ರಸಂಗಗಳು ಆಗಾಗ ಘಟಿಸುತ್ತಲೇ ಇರುತ್ತವೆ. ಸಾಮಾನ್ಯವಾಗಿ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿಯೇ ಇಂತಹ ದಾಳಿಗಳು ನಡೆಯುತ್ತವೆ. ರೋಗಿಗಳ ಅಸಭ್ಯ ವರ್ತನೆಯಿಂದ ಮಹಿಳಾ ವೈದ್ಯರು ಕಿರಿಕಿರಿ ಅನುಭವಿಸುವುದೂ ಇದೆ. ಹಿಂದಿನ ದಶಕಗಳಿಗೆ ಹೋಲಿಸಿದರೆ ವೈದ್ಯಕೀಯ ವಿಜ್ಞಾನ ತುಂಬಾ ಮುಂದುವರಿದಿದೆ. ಅದರ ಪರಿಣಾಮವಾಗಿ ಮಾನವನ ಗುಣಮಟ್ಟದ ಜೀವಿತಾವಧಿಯೂ ಹೆಚ್ಚಾಗಿದೆ. ಆದರೆ, ಪ್ರತಿಯೊಂದು ಜೀವಕ್ಕೂ ಒಂದುದಿನ ಕೊನೆಯಿದೆ ಎನ್ನುವುದು ಪ್ರಕೃತಿಯ ನಿಯಮ. ಇದನ್ನು ಅರಿಯದೆ ತಮಗೆ ಪ್ರೀತಿ ಪಾತ್ರರಾದವರು ಅಸುನೀಗಿದರು ಎಂಬ ಕಾರಣಕ್ಕಾಗಿ, ಚಿಕಿತ್ಸೆ ನೀಡಿದ ವೈದ್ಯರ ಮೇಲೇ ಸಿಟ್ಟು ತೋರಿಸುವುದು ಸರ್ವಥಾ ಸರಿಯಲ್ಲ. ವೈದ್ಯರಿಗೆ ತಮ್ಮ ಸುರಕ್ಷತೆ ಕುರಿತು ಖಾತರಿ ಇಲ್ಲದೆ ಅವರು ಮುಕ್ತವಾಗಿ ಕರ್ತವ್ಯ ನಿರ್ವಹಿಸುವುದು ಇಲ್ಲವೆ ವೈದ್ಯಕೀಯ ಸೇವೆ ಸಲ್ಲಿಸುವುದು ಕಷ್ಟ. ಭಾರತೀಯ ವೈದ್ಯಕೀಯ ಸಂಘದ ವರದಿ ಪ್ರಕಾರ, ಶೇ 75ರಷ್ಟು ವೈದ್ಯರು ಕರ್ತವ್ಯ ನಿರ್ವಹಿಸುವಾಗ ಅಪಾಯ ಎದುರಿಸುತ್ತಾರೆ. ವೈದ್ಯರು ಮತ್ತು ಆರೈಕೆ ಮಾಡುವವರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವುದು ಸರ್ಕಾರ ಹಾಗೂ ಸಮುದಾಯದ ಹೊಣೆ. ಸೋಂಕುಪೀಡಿತರು ಹಾಗೂ ಮಾನಸಿಕ ಸಮಸ್ಯೆಗಳಿಂದ ಬಳಲುವ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವರು ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ಕಳೆದ ಒಂದು ವರ್ಷದಲ್ಲಿ ಕೇರಳ ರಾಜ್ಯವೊಂದರಲ್ಲೇ ವೈದ್ಯರ ಮೇಲೆ 138 ಹಲ್ಲೆ ಪ್ರಕರಣಗಳು ನಡೆದಿವೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಕೇರಳ ಹೈಕೋರ್ಟ್‌ ಈ ಹಿಂದೆಯೇ ಅಲ್ಲಿನ ಸರ್ಕಾರಕ್ಕೆ ಸೂಚನೆ ನೀಡಿದೆ. ಹೀಗಿದ್ದೂ ಇಂತಹ ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯವಾಗಿಲ್ಲ. ಇದು ನಮ್ಮ ವ್ಯವಸ್ಥೆ ತಲುಪಿರುವ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ವೈದ್ಯಕೀಯ ವೃತ್ತಿಪರರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಅನುವಾಗುವಂತೆ ‘ಆಸ್ಪತ್ರೆ ಸುರಕ್ಷತಾ ಕಾಯ್ದೆ’ಗೆ ಅಗತ್ಯ ತಿದ್ದುಪಡಿ ತರುವುದಕ್ಕಾಗಿ ಕೇರಳ ಸರ್ಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಲು ನಿರ್ಧರಿಸಿದೆ. ಈ ಕಾಯ್ದೆಯು ಇಂತಹ ದಾಳಿಗಳ ವಿರುದ್ಧ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸಲು ಅನುವು ಮಾಡಿಕೊಡುತ್ತದೆ. ಕಾನೂನಿನ ಮುಷ್ಟಿಯನ್ನು ಮತ್ತಷ್ಟು ಬಿಗಿಗೊಳಿಸುತ್ತದೆ. ಪ್ರಮುಖ ಆಸ್ಪತ್ರೆಗಳಲ್ಲಿ ಪೊಲೀಸ್‌ ಹೊರಠಾಣೆಗಳನ್ನು ತೆರೆಯಲೂ ಅಲ್ಲಿನ ಸರ್ಕಾರ ನಿರ್ಧರಿಸಿದೆ. ಕಾನೂನನ್ನು ಬಲಪಡಿಸಿದರಷ್ಟೇ ಸಾಲದು, ಜನರಲ್ಲಿ ಜಾಗೃತಿಯನ್ನು ಮೂಡಿಸುವ ಅಗತ್ಯವೂ ಇದೆ. ವೈದ್ಯರ ಮೇಲಿನ ಹಲ್ಲೆಗಳು ಕೇರಳ ರಾಜ್ಯಕ್ಕೇನೂ ಸೀಮಿತವಾಗಿಲ್ಲ. ಕರ್ನಾಟಕವೂ ಸೇರಿದಂತೆ ದೇಶದ ಎಲ್ಲ ಭಾಗಗಳಲ್ಲೂ ಇಂತಹ ಪ್ರಕರಣಗಳು ನಡೆಯುತ್ತಿವೆ. ಹೈದರಾಬಾದ್‌ನಲ್ಲೂ ಇತ್ತೀಚೆಗೆ ವೈದ್ಯರ ಮೇಲೆ ಹಲ್ಲೆ ನಡೆದಿರುವ ಪ್ರಕರಣ ಕಣ್ಣಮುಂದೆಯೇ ಇದೆ. ರಾಜ್ಯದಲ್ಲೂ ‘ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿಯ ಮೇಲಿನ ಹಿಂಸಾಚಾರ ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಕಾಯ್ದೆ– 2009’ ಜಾರಿಯಲ್ಲಿದೆ. ಆದರೆ, ವೈದ್ಯರು ಅಪಾಯ ಎದುರಿಸುವುದನ್ನು ತಡೆಯುವಲ್ಲಿ, ಇಡೀ ದೇಶಕ್ಕೆ ಅನ್ವಯವಾಗುವಂತೆ ವೈದ್ಯಕೀಯ ವೃತ್ತಿಪರರ ಸುರಕ್ಷತಾ ಕಾಯ್ದೆಯೊಂದನ್ನು ತರುವ ಅಗತ್ಯವಿದೆ ಎಂಬುದನ್ನು ಇಂತಹ ಪ್ರಕರಣಗಳು ಒತ್ತಿ ಹೇಳುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.