ಸಂಪಾದಕೀಯ | ನಗರ ಮಹಾಪೂರ: ನಿರ್ವಹಣೆಯಲ್ಲಿ ಸಂಪೂರ್ಣ ಮುಗ್ಗರಿಸಿದ ಬಿಬಿಎಂಪಿ ಮಳೆ ಅನಾಹುತಗಳು, ನಗರ ಮಹಾಪೂರಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದರೂ ಏನೂ ಕ್ರಮ ಕೈಗೊಳ್ಳದ ಬಿಬಿಎಂಪಿಯ ಅತೀವ ನಿರ್ಲಕ್ಷ್ಯ ಆಶ್ಚರ್ಯ ಹುಟ್ಟಿಸುತ್ತದೆ. ಬೆಂಗಳೂರಿಗೂ ಮಳೆ ಅನಾಹುತಗಳಿಗೂ ಇರುವ ನಂಟಿಗೆ ಕೊನೆ ಎಂಬುದೇ ಇಲ್ಲವೇನೋ. ಭಾನುವಾರ ಧೋ ಎಂದು ಸುರಿದ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಮತ್ತೆ ಎರಡು ಜೀವಗಳು ಬಲಿಯಾಗಿವೆ. ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಮುಳುಗಿಹೋದ ಕಾರಿನಲ್ಲಿದ್ದ ಭಾನುರೇಖಾ ಎಂಬ ಯುವತಿ ಮತ್ತು ಕೆ.ಪಿ. ಅಗ್ರಹಾರದ ರಾಜಕಾಲುವೆಯ ಪ್ರವಾಹದಲ್ಲಿ ಕೊಚ್ಚಿಹೋದ ಲೋಕೇಶ್‌ ಎಂಬ ಯುವಕ ಸಾವನ್ನಪ್ಪಿರುವ ಘಟನೆಗಳು, ಈ ಅವಘಡಗಳ ಸಾಲಿಗೆ ಹೊಸ ಸೇರ್ಪಡೆಗಳಷ್ಟೆ. ಕೆ.ಆರ್‌. ವೃತ್ತದ ಬಳಿ ಮೃತ್ಯುಕೂಪವಾದ ಅಂಡರ್‌ಪಾಸ್‌ನಲ್ಲಿ ಎಂಟು ಅಡಿಗಳಷ್ಟು ನೀರು ಸಂಗ್ರಹವಾಗಿತ್ತು ಎಂದು ವರದಿಯಾಗಿದೆ. ಕಾರು ಮುಳುಗಿ ಯುವತಿ ಸಾವನ್ನಪ್ಪಿದ್ದು ಇಲ್ಲಿಯೇ. ಅಂಡರ್‌ಪಾಸ್‌ಗಳ ನಿರ್ವಹಣೆಯಲ್ಲಿ ಬಿಬಿಎಂಪಿ ಎಷ್ಟೊಂದು ನಿರ್ಲಕ್ಷ್ಯ ವಹಿಸಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಏನೂ ಬೇಕಾಗಿಲ್ಲ. ನಗರ ಯೋಜನಾ ತಜ್ಞರು ಹೇಳುವಂತೆ ಬೆಂಗಳೂರಿನ ಅಂಡರ್‌ಪಾಸ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅವುಗಳು ರಸ್ತೆಯ ಮೇಲ್ಮೈಯಿಂದ ತುಂಬಾ ಆಳದಲ್ಲಿರುವ ಕಾರಣ, ಅಲ್ಲಿ ಸಂಗ್ರಹವಾಗುವ ಮಳೆ ನೀರು ಸರಾಗವಾಗಿ ಹರಿದುಹೋಗುವುದಿಲ್ಲ. ಅಂಡರ್‌ಪಾಸ್‌ಗಳಲ್ಲಿ ಸಂಗ್ರಹವಾಗುವ ನೀರನ್ನು ಗುರುತ್ವಾಕರ್ಷಣೆ ಬಲದಲ್ಲಿ ರಾಜಕಾಲುವೆಗೆ ಸೇರಿಸಲು ಬಹುದೂರದವರೆಗೆ ಕೊಳವೆ ಮಾರ್ಗಗಳನ್ನು ಅಳವಡಿಸಲಾಗಿದೆ. ಆ ಕೊಳವೆ ಮಾರ್ಗಗಳಲ್ಲಿ ಹೂಳು ತುಂಬದಂತೆ ಎಚ್ಚರಿಕೆ ವಹಿಸುವಲ್ಲಿ ಮಾತ್ರ ಬಿಬಿಎಂಪಿ ಸಂಪೂರ್ಣವಾಗಿ ಸೋತಿದೆ. ಮೋರಿಗಳಲ್ಲಿಯೂ ಹೂಳು ತುಂಬಿದ್ದರಿಂದ ನೀರು ತುಂಬಾ ಹೊತ್ತಿನವರೆಗೆ ರಸ್ತೆಯ ಮೇಲೇ ನಿಂತು ಅಪಾಯದ ತೀವ್ರತೆಯನ್ನು ಹೆಚ್ಚಿಸಿದೆ. ಮಳೆ ಅನಾಹುತಗಳು, ನಗರ ಮಹಾಪೂರಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದರೂ ಏನೂ ಕ್ರಮ ಕೈಗೊಳ್ಳದೆ ಸುಮ್ಮನಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಈ ಪರಿ ನಿರ್ಲಕ್ಷ್ಯ ಆಶ್ಚರ್ಯ ಹುಟ್ಟಿಸುತ್ತದೆ. ನಾಗರಿಕರ ನೋವಿನ ಆರ್ತನಾದ ಕೇಳದಷ್ಟು ಅದರ ಕಿವಿ ಕೆಪ್ಪವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸತತ ಒಂದು ವಾರ ಸುರಿದ ಮಳೆಗೆ ಬೆಂಗಳೂರಿನ ಪೂರ್ವಭಾಗದ ಹಲವು ಪ್ರದೇಶಗಳು ಜಲಾವೃತವಾದ ಘಟನೆಯು ಜನರನ್ನು ಇನ್ನೂ ದುಃಸ್ವಪ್ನವಾಗಿ ಕಾಡುತ್ತಿದೆ. ಆಗ ಅಲ್ಲಿನ ರಸ್ತೆಗಳು ಹೊಳೆಯಂತಾಗಿದ್ದರೆ, ಬಡಾವಣೆಗಳು ಕೆರೆಯ ರೂಪ ತಾಳಿದ್ದವು. ಮಳೆಯ ‘ಬಿಸಿ’ ಚೆನ್ನಾಗಿ ತಾಗಿದಾಗ ಅರೆಮಂಪರಿನಲ್ಲಿ ಒಂದಿಷ್ಟು ಕಾಮಗಾರಿ ನಡೆಸುವುದು, ಪುನಃ ಕುಂಭಕರ್ಣ ನಿದ್ರೆಗೆ ಜಾರುವುದು ಪಾಲಿಕೆಗೆ ಚಾಳಿಯಾಗಿಬಿಟ್ಟಿದೆ. ಬೆಂಗಳೂರನ್ನು ನಗರ ಮಹಾಪೂರದ ಅಪಾಯದಿಂದ ತಪ್ಪಿಸಲು ‘ಸರಪಳಿ ರಾಜಕಾಲುವೆ’ಗಳು, ಕೆರೆ–ಕಟ್ಟೆಗಳು ಇಲ್ಲಿದ್ದವು. ಮಳೆನೀರಿನ ಒತ್ತಡವನ್ನು ತಡೆದುಕೊಳ್ಳಲು ಈ ‘ಒದ್ದೆನೆಲ’ಗಳು ಸ್ಪಾಂಜ್‌ನಂತೆ ಕೆಲಸ ಮಾಡುತ್ತಿದ್ದವು. ರಾಜಕಾಲುವೆಗಳು, ಕೆರೆ–ಕಟ್ಟೆಗಳು ಒತ್ತುವರಿಯಾಗುವಾಗ ಬಿಬಿಎಂಪಿ ಮಾತ್ರವಲ್ಲದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೂಡ ಕಣ್ಮುಚ್ಚಿಕೊಂಡು ಕುಳಿತಿತ್ತು. ಕೆಲವು ಅಧಿಕಾರಿಗಳು ರಿಯಲ್‌ ಎಸ್ಟೇಟ್‌ ಮಾಫಿಯಾದೊಂದಿಗೆ ಕೈಜೋಡಿಸಿದ ದೂರುಗಳೂ ಜೋರಾಗಿ ಕೇಳಿಬಂದವು. ಅದರ ಫಲವನ್ನೀಗ ನಗರದ ಅಷ್ಟೂ ನಾಗರಿಕರು ಉಣ್ಣಬೇಕಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 1,848 ಎಕರೆಯಷ್ಟು ಕೆರೆ ಅಂಗಳ ಪ್ರದೇಶ ಒತ್ತುವರಿಯಾಗಿದೆ ಎಂದು ಎ.ಟಿ.ರಾಮಸ್ವಾಮಿ ಸಮಿತಿ ವರದಿ ದಾಖಲಿಸಿದೆ. ಆ ಒತ್ತುವರಿ ತೆರವು ಕುರಿತು ಆಗಾಗ ವಿಧಾನಸಭೆಯಲ್ಲಿ ಚರ್ಚೆ ಆಗುತ್ತಲೇ ಇರುತ್ತದೆ. ಸಾಮಾನ್ಯವಾಗಿ ಮಳೆಗಾಲಕ್ಕೆ ಬೇಸಿಗೆಯಲ್ಲೇ ತಯಾರಿ ಮಾಡಿಕೊಳ್ಳುವುದು ವಾಡಿಕೆ. ಹೂಳನ್ನು ತೆಗೆಯುವುದು, ಮೋರಿ ದುರಸ್ತಿಗೊಳಿಸುವುದು, ಚರಂಡಿ ಗೋಡೆಯನ್ನು ಸರಿಪಡಿಸುವುದು– ಹೀಗೆ ಎಲ್ಲ ಕಾರ್ಯಗಳೂ ಆಗಲೇ ಆಗಬೇಕು. ಆದರೆ, ಪಾಲಿಕೆ ಆಡಳಿತ ತನ್ನ ಹೊಣೆಯನ್ನು ಮರೆತು ಕುಳಿತಿದೆ ಎನ್ನುವುದಕ್ಕೆ ಈಗ ನಡೆದಿರುವ ಅವಘಡಗಳೇ ಪುರಾವೆ. ಆಡಳಿತ ವ್ಯವಸ್ಥೆಯನ್ನು ತಿವಿದು ಎಬ್ಬಿಸಬೇಕಿದ್ದ ಚುನಾಯಿತ ಕೌನ್ಸಿಲ್‌ ಸಹ ಸದ್ಯ ಅಸ್ತಿತ್ವದಲ್ಲಿ ಇಲ್ಲ. ಅಧಿಕಾರಿಗಳ ಮೈಮರೆವಿಗೆ ಇದರಿಂದ ಇನ್ನಷ್ಟು ಇಂಬು ದೊರೆತಿದೆ. ಕೆಲವು ವರ್ಷಗಳ ಹಿಂದೆ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದಾಗ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು ಎಂದು ಅಬ್ಬರಿಸಿ, ಕಾರ್ಯಾಚರಣೆಯನ್ನೂ ಆರಂಭಿಸಲಾಯಿತು. ಬೆಂಗಳೂರಿನ ಪೂರ್ವಭಾಗದಲ್ಲಿ ಜೆಸಿಬಿ ಯಂತ್ರಗಳ ಸದ್ದು ಜೋರಾಗಿ ಮೊಳಗಿತು. ದಿನಗಳು ಕಳೆದಂತೆ, ಬಿಬಿಎಂಪಿಗೆ ಭೂಮಾಪಕರ ‘ಕೊರತೆ’ ಎದುರಾಯಿತು. ಕಾರ್ಯಾಚರಣೆ ತಣ್ಣಗಾಯಿತು. ಪ್ರಭಾವಿಗಳ ಒತ್ತಡದಿಂದ ಒತ್ತುವರಿ ತೆರವು ಕೆಲಸವನ್ನು ಆಗ ಮೊಟಕುಗೊಳಿಸದಿದ್ದರೆ ಇಂದಿನ ಬಹುಪಾಲು ಸಮಸ್ಯೆ ನೀಗಿರುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಮಾತುಗಳನ್ನಾಡಿದ್ದಾರೆ. ಆದರೆ, ಅಧಿಕಾರಸ್ಥರ ಇಂತಹ ಹೇಳಿಕೆಗಳ ಕುರಿತು ಜನ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಪ್ರಬಲ ಇಚ್ಛಾಶಕ್ತಿ ಪ್ರದರ್ಶಿಸಿ ಕಾರ್ಯಾಚರಣೆ ನಡೆಸಿ ಗುರಿ ಮುಟ್ಟಿಸಿದಾಗಲಷ್ಟೇ ಅವರ ಮಾತಿನ ಮೇಲೆ ವಿಶ್ವಾಸ ಮೂಡಲು ಸಾಧ್ಯ. ಇನ್ನು ಅಂಡರ್‌ಪಾಸ್‌ಗಳ ವಿಚಾರ. ರಸ್ತೆಯ ಮೇಲ್ಮೈನಿಂದ ಅಷ್ಟೊಂದು ಆಳದಲ್ಲಿ ಅವುಗಳನ್ನು ನಿರ್ಮಿಸಿರುವುದು ಸರಿಯಲ್ಲ ಎನ್ನುವ ತಜ್ಞರ ಮಾತಿಗೆ ಕಿವಿಗೊಡಬೇಕು. ಈಗಾಗಲೇ ನಿರ್ಮಾಣಗೊಂಡ ಅವೈಜ್ಞಾನಿಕ ಅಂಡರ್‌ಪಾಸ್‌ಗಳ ವಿನ್ಯಾಸ ಸರಿಪಡಿಸುವುದು ಹೇಗೆ ಎಂಬ ಸಲಹೆಯನ್ನು ತಜ್ಞರಿಂದ ಪಡೆದು, ಸರಿಪಡಿಸುವ ಕೆಲಸ ಆಗಬೇಕು. ಕೆಟ್ಟಮೇಲೆ ಬುದ್ಧಿ ಬಂತು ಎನ್ನುವಂತೆ, ಬಿಬಿಎಂಪಿ ಈಗ ನಗರದ 18 ಪ್ರಮುಖ ಅಂಡರ್‌ಪಾಸ್‌ಗಳನ್ನು ಬಂದ್‌ ಮಾಡಿಸಿದೆ. ಎಲ್ಲ ಅಂಡರ್‌ಪಾಸ್‌ಗಳ ಸಮಗ್ರ ಸಮೀಕ್ಷೆ ನಡೆಸಿ, ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಿದ ಮೇಲೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದೆ. ಈ ಕೆಲಸವನ್ನು ಮೊದಲೇ ಮಾಡಿದ್ದರೆ ಅಮೂಲ್ಯ ಜೀವ ಪ್ರವಾಹಕ್ಕೆ ಬಲಿಯಾಗುವ ದಾರುಣ ಸ್ಥಿತಿ ಬರುತ್ತಿರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.