ಸಂಪಾದಕೀಯ: ಅಭಿವೃದ್ಧಿಗೆ ಹೊಸ ವ್ಯಾಖ್ಯಾನ, ‘ಗ್ಯಾರಂಟಿ’ಗೆ ಬಲ ಕೊಡುವ ಕಸರತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2023–24ನೇ ಸಾಲಿನ ರಾಜ್ಯ ಬಜೆಟ್‌ ಹಲವು ದೃಷ್ಟಿಗಳಲ್ಲಿ ಗಮನಾರ್ಹವಾಗಿದೆ. ಐದು ಗ್ಯಾರಂಟಿ ಯೋಜನೆಗಳಿಗೆ ತನ್ನ ಪರಿಪೂರ್ಣ ಬದ್ಧತೆಯನ್ನು ಪ್ರದರ್ಶಿಸಿರುವ ಈ ಬಜೆಟ್‌, ಸುಮಾರು 1.30 ಕೋಟಿ ಕುಟುಂಬಗಳಿಗೆ ಸಾರ್ವತ್ರಿಕ ಮೂಲ ಆದಾಯವನ್ನು ಒದಗಿಸುವಂತಹ ಹೊಸ ಪರಿಕಲ್ಪನೆಯ ಕುರಿತು ಮಾತನಾಡಿದೆ. ಪ್ರತೀ ಕುಟುಂಬಕ್ಕೆ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿಯಷ್ಟು ಮೂಲ ಆದಾಯ ಖಾತರಿಪಡಿಸುವಂತಹ ಯೋಜನೆಗಳ ಅನುಷ್ಠಾನದಿಂದ ಬಡವರ ಕೈಗೆ ಹೆಚ್ಚಿನ ಹಣ ಸಿಕ್ಕಂತಾಗುತ್ತದೆ. ಇದರಿಂದ ಬದುಕಿನ ಬಂಡಿ ಸರಾಗವಾಗಿ ಉರುಳಲಿದೆ ಎಂಬ ಬಜೆಟ್‌ನ ಆಶಯ ಕುತೂಹಲಕಾರಿ. ಸಂಪತ್ತಿನ ಮರುಹಂಚಿಕೆಯ ಮೂಲಕ ಅಭಿವೃದ್ಧಿಗೆ ಹೊಸ ಭಾಷ್ಯವೊಂದನ್ನು ಬರೆಯುವ ಇರಾದೆಯೂ ಎದ್ದು ಕಾಣುವಂತಹದ್ದು. ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಮುನ್ನಡೆಸುವ ಮಾತುಗಳನ್ನೂ ಮುಖ್ಯಮಂತ್ರಿ ಆಡಿದ್ದಾರೆ. ಅವರಿಗೆ ಅಹಿಂದ ವರ್ಗಗಳ ಮೇಲೆ ಕಕ್ಕುಲಾತಿ ಹೆಚ್ಚು ಎನ್ನುವುದು ಸರ್ವವಿಧಿತ. ಬಜೆಟ್‌ನ ಉದ್ದಕ್ಕೂ ಅದಕ್ಕೆ ಪೂರಕವಾದ ಸಾಕ್ಷ್ಯಗಳು ಸಿಕ್ಕುತ್ತವೆ. ಅದರಲ್ಲಿ, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಉಪಯೋಜನೆ (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಕಾಯ್ದೆಯ ಸೆಕ್ಷನ್‌ 7(ಡಿ) ನಿಯಮವನ್ನು ರದ್ದುಪಡಿಸಲು ನಿರ್ಧರಿಸಿರುವುದು ಬಲು ಮಹತ್ವದ್ದು. ವಿಭಜಿಸಲಾಗದ ಮೂಲಸೌಕರ್ಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಯೋಜನಾ ವೆಚ್ಚದ ಒಂದು ಭಾಗವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಒದಗಿಸಲಾಗಿದೆ ಎಂದು ಪರಿಭಾವಿಸುವ ಈ ನಿಯಮ ಕೈಬಿಡಲು ನಿರ್ಧರಿಸಿರುವುದು, ಮೀಸಲಿಟ್ಟ ಅನುದಾನವು ಆಯಾ ಸಮುದಾಯಗಳಿಗೇ ಸದ್ಬಳಕೆಯಾಗಲಿ ಎಂಬ ಕಳಕಳಿಗೆ ದ್ಯೋತಕ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಂದ ಜಮೀನು ಪರಭಾರೆ ಆಗದಂತೆ ತಡೆಯಲು ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ಸಹ ಮಹತ್ವದ ತೀರ್ಮಾನ. ಹಿಂದುಳಿದ ವರ್ಗಗಳ ಪ್ರವರ್ಗ–1 ಮತ್ತು ಪ್ರವರ್ಗ–2ಎನಲ್ಲಿ ಬರುವ ಜಾತಿಗಳ ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿವರೆಗಿನ ನಿರ್ಮಾಣ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ಉದ್ದೇಶಿಸಿರುವುದು ದುರ್ಬಲರ ಸಬಲೀಕರಣದಲ್ಲಿ ದೂರಗಾಮಿ ಪರಿಣಾಮ ಬೀರುವಂಥದ್ದು. ಅಹಿಂದ ವರ್ಗಗಳೊಟ್ಟಿಗೆ ಜೈನರು, ಕ್ರೈಸ್ತರೂ ಸೇರಿದಂತೆ ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಆಶಯವೂ ಬಜೆಟ್‌ನಲ್ಲಿದೆ. ಕೃಷಿಕರನ್ನು ಖುಷಿಯಾಗಿಡುವ ಮಾತುಗಳನ್ನೂ ಬಜೆಟ್‌ನಲ್ಲಿ ಆಡಲಾಗಿದೆ. ಕೃಷಿಭಾಗ್ಯ ಯೋಜನೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ ಮರುಜಾರಿಗೊಳಿಸುವ, ಕೃಷಿ ಸಂಬಂಧಿತ ನವೋದ್ಯಮಗಳನ್ನು ಉತ್ತೇಜಿಸುವ, ‘ನಂದಿನಿ’ ಮಾದರಿಯಲ್ಲಿ ರೈತ ಉತ್ಪನ್ನಗಳಿಗೆ ಏಕೀಕೃತ ಬ್ರ್ಯಾಂಡಿಂಗ್‌ ವ್ಯವಸ್ಥೆ ರೂಪಿಸುವ ಭರವಸೆಗಳನ್ನು ನೀಡಲಾಗಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿರುವ ಸಾಲದ ಮಿತಿಯನ್ನು ₹ 5 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಮಹಿಳೆಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ನಾಲ್ಕು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ‘ಕೂಸಿನಮನೆ’ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವುದಾಗಿ ಪ್ರಕಟಿಸಲಾಗಿದೆ. ರಾಜ್ಯಕ್ಕೊಂದು ಹೊಸ ಶಿಕ್ಷಣ ನೀತಿ ರೂಪಿಸುವ ಮಾತುಗಳನ್ನಾಡುವ ಮೂಲಕ ಬಹುಚರ್ಚಿತ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಡ್ಡು ಹೊಡೆಯಲಾಗಿದೆ. ರಾಜ್ಯದ ಎಲ್ಲ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಒದಗಿಸಲು ಮುಖ್ಯಮಂತ್ರಿ ಕಸರತ್ತು ನಡೆಸಿರುವುದು ಸುಸ್ಪಷ್ಟ. ಆದ್ದರಿಂದಲೇ ರಾಜಧಾನಿ ಬೆಂಗಳೂರಿನಷ್ಟೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೂ ಅವರಿಗೆ ಮುಖ್ಯವಾಗಿ ಕಂಡಿದೆ. ಆದರೆ, ದೂರಗಾಮಿ ಪರಿಣಾಮ ಬೀರುವಂತಹ ದೀರ್ಘಾವಧಿ ಯೋಜನೆಗಳ ಬರ ಬಜೆಟ್‌ನ ಬಹುದೊಡ್ಡ ಕೊರತೆಯಾಗಿ ಪರಿಣಮಿಸಿದೆ. ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರವು ಬಾಕಿ ಉಳಿಸಿರುವ ಕಾಮಗಾರಿಗಳ ಮೊತ್ತ ₹ 2.55 ಲಕ್ಷ ಕೋಟಿಯಷ್ಟು ಇದ್ದು, ಕನಿಷ್ಠ ಆರು ವರ್ಷ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಬಹುದೊಡ್ಡ ಸವಾಲು ಎಂದು ಸಿದ್ದರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಶಿಸ್ತಿನ ಬಜೆಟ್‌ಗಳ ಮಂಡನೆಗೆ ಹೆಸರಾಗಿದ್ದ ಅವರು ಈ ಬಾರಿ ₹ 12,500 ಕೋಟಿಗಳಷ್ಟು ವಿತ್ತೀಯ ಕೊರತೆಯ ಆಯವ್ಯಯ ಮಂಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸಲು ಅವರು ಸಾಹಸಪಟ್ಟಿರುವುದು ಕಾಣುತ್ತದೆ. ನೀರಾವರಿಯಂತಹ ಪ್ರಮುಖ ವಲಯಕ್ಕೆ ಸೂಕ್ತ ಆದ್ಯತೆ ಸಿಕ್ಕಿಲ್ಲ. ಆರೋಗ್ಯ, ಶಿಕ್ಷಣ ವಲಯಕ್ಕೂ ಅನುದಾನದ ಪ್ರಮಾಣ ಕಡಿಮೆಯಾಗಿದೆ. ಮೂಲಸೌಕರ್ಯ ಯೋಜನೆಗಳಿಗೆ ಸಿಕ್ಕ ಒತ್ತು ಕೂಡ ಕಡಿಮೆಯೇ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನಕ್ಕೆ ಬಂದಮೇಲೆ ರಾಜ್ಯ ಸರ್ಕಾರಗಳ ಸಂಪನ್ಮೂಲ ಕ್ರೋಡೀಕರಣಕ್ಕೆ ಇರುವ ಮಾರ್ಗಗಳು ತುಂಬಾ ಕಡಿಮೆ. ಹೀಗಾಗಿ ಸಾಲ ಹೆಚ್ಚು ಮಾಡುವ ದಾರಿಯನ್ನೇ ರಾಜ್ಯ ಸರ್ಕಾರ ಆಯ್ದುಕೊಂಡಿದೆ. ಅಬಕಾರಿ ಸುಂಕ ಹೆಚ್ಚಿಸಲಾಗಿದ್ದು, ನೋಂದಣಿ, ಮುದ್ರಾಂಕ ಶುಲ್ಕ ಹಾಗೂ ವಾಹನ ನೋಂದಣಿ ತೆರಿಗೆಯನ್ನೂ ಪರಿಷ್ಕರಿಸಲು ನಿರ್ಧರಿಸಲಾಗಿದೆ. ಇಷ್ಟಾಗಿಯೂ ಕೊರತೆಯನ್ನು ತುಂಬಿಸಲು ಸಾಧ್ಯವಾಗಿಲ್ಲ. ಮುಂಬರುವ ಲೋಕಸಭಾ ಚುನಾವಣೆಯೂ ಮುಖ್ಯಮಂತ್ರಿ ಮನಸ್ಸಿನಲ್ಲಿ ಇದ್ದಿರಬಹುದಾದರೂ ಕಲ್ಯಾಣ ಕಾರ್ಯಕ್ರಮಗಳ ಜತೆಗೆ ಅಭಿವೃದ್ಧಿ ಯೋಜನೆಗಳ ಕಡೆಗೂ ಗಮನಹರಿಸುವುದು ಅಗತ್ಯವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.