ಸಂಪಾದಕೀಯ: ದೌರ್ಜನ್ಯಕ್ಕೆ ಪ್ರತಿಯಾಗಿ ದೌರ್ಜನ್ಯ- ಅರಾಜಕತೆಗೆ ದಾರಿ ಮಾಡುವ ಕ್ರಮ ಕಾನೂನಿಗೆ ಅನುಗುಣವಾಗಿ ಆಡಳಿತ ವ್ಯವಸ್ಥೆ ಮುನ್ನಡೆಯಬೇಕು, ಜನ ನಾಗರಿಕವಾಗಿ ನಡೆದುಕೊಳ್ಳಬೇಕು ಎಂಬ ತತ್ವವನ್ನು ಒಪ್ಪಿಕೊಂಡ ಸಮಾಜವು, ಒಂದು ಅಕ್ರಮವನ್ನು ಇನ್ನೊಂದು ಅಕ್ರಮದ ಮೂಲಕ ಸರಿಪಡಿಸಲು ಮುಂದಾಗುವುದಿಲ್ಲ. ಹಾಗೆಯೇ ಒಂದು ದೌರ್ಜನ್ಯಕ್ಕೆ ಇನ್ನೊಂದು ದೌರ್ಜನ್ಯದ ಮೂಲಕ ಉತ್ತರ ನೀಡಲು ಮುಂದಾಗುವುದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಕಾನೂನಿಗೆ ಅನುಗುಣವಾದ ಹಾಗೂ ನಾಗರಿಕವಾದ ವರ್ತನೆಗಿಂತ ಮೃಗೀಯವಾಗಿ ವರ್ತಿಸುವುದು ಹೆಚ್ಚು ಸರಿ ಎಂದು ಕೆಲವರಿಗೆ ಅನ್ನಿಸಿಬಿಡಬಹುದು. ಆಗ ಅಂಥವರ ಆಲೋಚನೆಗಳು ಹಾಗೂ ನಡೆಗಳು ತೀರಾ ಒರಟಾದ ವೈಯಕ್ತಿಕ, ಸಾಮಾಜಿಕ ಅಥವಾ ರಾಜಕೀಯ ಒತ್ತಡಗಳಿಂದ ಪ್ರಚೋದಿತವಾಗುತ್ತವೆ. ಮಧ್ಯಪ್ರದೇಶದ ಸೀಧೀ ಜಿಲ್ಲೆಯಲ್ಲಿ ಪ್ರವೇಶ್ ಶುಕ್ಲಾ ಎಂಬ ವ್ಯಕ್ತಿಯೊಬ್ಬ ಬುಡಕಟ್ಟು ಸಮುದಾಯಕ್ಕೆ ಸೇರಿದವರೊಬ್ಬರ ಮೇಲೆ ಮೂತ್ರ ಮಾಡಿದ. ಅತ್ಯಂತ ಅಮಾನವೀಯ ಕೃತ್ಯ ಇದು. ಈ ಕೃತ್ಯದ ವಿಡಿಯೊ ನೋಡಿದವರು ಇದನ್ನು ತೀವ್ರವಾಗಿ ಖಂಡಿಸಿದರು. ರಾಜ್ಯ ಸರ್ಕಾರವು ಶುಕ್ಲಾನನ್ನು ಬಂಧಿಸಿತು. ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿತು. ಅವನ ಮನೆಗೆ ಬುಲ್ಡೋಜರ್ ಕಳಿಸಿತು, ಮನೆಯ ಒಂದು ಭಾಗವನ್ನು ನೆಲಸಮ ಮಾಡಲಾಯಿತು. ದೌರ್ಜನ್ಯಕ್ಕೆ ಗುರಿಯಾದ ವ್ಯಕ್ತಿಗೆ ವಿಳಂಬವಿಲ್ಲದೆ ನ್ಯಾಯ ಕೊಡಿಸಿಯಾಗಿದೆ ಎಂದು ಅಲ್ಲಿನ ರಾಜ್ಯ ಸರ್ಕಾರ ಹೇಳಿಕೊಳ್ಳಬಹುದು. ಆದರೆ ಇಲ್ಲಿ ಮೂತ್ರ ಮಾಡಿದ ವ್ಯಕ್ತಿಯ ಮೇಲೆ ಎನ್‌ಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಹೇಗೆ? ಈ ‍ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅಂಶ ಇಲ್ಲ. ಸರ್ಕಾರವು ತಾನು ಕಠಿಣ ಕ್ರಮವೊಂದನ್ನು ತೆಗೆದುಕೊಳ್ಳುತ್ತಿದ್ದೇನೆ ಎಂಬ ಸಂದೇಶ ರವಾನಿಸಲು ಈ ರೀತಿ ಮಾಡಿರಬಹುದು. ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಕಾರಣ, ಈ ಸಂದೇಶ ರವಾನಿಸುವ ಉದ್ದೇಶ ಸರ್ಕಾರಕ್ಕೆ ಇದ್ದಿರಬಹುದು. ಬುಡಕಟ್ಟು ಸಮುದಾಯದ ವ್ಯಕ್ತಿಯ ಮೇಲೆ ಶುಕ್ಲಾ ಮೂತ್ರ ಮಾಡಿದ್ದು ಬಿಜೆಪಿಗೆ ಚುನಾವಣೆಯಲ್ಲಿ ಪೆಟ್ಟು ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂತ್ರ ಮಾಡಿದ ವ್ಯಕ್ತಿಯು ಬಿಜೆಪಿ ಜೊತೆ ನಂಟು ಹೊಂದಿದ್ದ ಎಂದು ವರದಿಯಾಗಿದೆ. ಆದರೆ ಅವನ ಮನೆಯ ಒಂದು ಭಾಗವನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಿದ್ದು ತಪ್ಪು, ಅಕ್ರಮ. ಮನೆಯ ಒಂದು ಭಾಗವನ್ನು ನೆಲಸಮ ಮಾಡಿದ ಕೃತ್ಯವೇ ಒಂದು ದೌರ್ಜನ್ಯ. ಆ ಮನೆಯು ಆರೋಪಿಯ ತಂದೆ ತಾಯಿಗೆ ಸೇರಿದ್ದು. ಶುಕ್ಲಾ ಎಸಗಿರುವ ಕೃತ್ಯ ಅದೆಷ್ಟೇ ಕೆಟ್ಟದ್ದಾಗಿರಲಿ, ಕಾನೂನಿನ ಪ್ರಕ್ರಿಯೆ ಹೊರತುಪಡಿಸಿ ಬೇರೆ ಯಾವ ಮಾರ್ಗದ ಮೂಲಕವೂ ಆತನಿಗೆ ಶಿಕ್ಷೆ ವಿಧಿಸುವ ಅಧಿಕಾರವು ಸರ್ಕಾರಕ್ಕೆ ಇಲ್ಲ. ಆರೋಪಿಗಳ ಮನೆಗೆ ಬುಲ್ಡೋಜರ್ ನುಗ್ಗಿಸುವುದು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಜಾರಿಗೆ ತಂದಿರುವ ಪ್ರತೀಕಾರದ ಒಂದು ಮಾರ್ಗ. ಇದನ್ನು ಉತ್ತರಪ್ರದೇಶ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಹೆಚ್ಚಾಗಿ ಪ್ರಯೋಗಿಸಲಾಗುತ್ತಿದೆ. ಕಾನೂನಿಗೆ ಮರ್ಯಾದೆ ಕೊಡುವಲ್ಲಿ ಇಂತಹ ಅಸ್ತ್ರಗಳಿಗೆ ಅವಕಾಶ ಇರಬಾರದು. ಆದರೆ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಇದು ವ್ಯವಸ್ಥೆಯ ಭಾಗವಾಗಿಬಿಟ್ಟಿದೆ. ಅತ್ಯಂತ ಕೆಟ್ಟ ಅಪರಾಧ ಮಾಡಿದ ವ್ಯಕ್ತಿಗೂ ಕಾನೂನಿನ ಪ್ರಕ್ರಿಯೆಗಳಿಗೆ ಅನುಗುಣವಾಗಿ ಶಿಕ್ಷೆ ತೀರ್ಮಾನವಾಗಬೇಕು. ಆದರೆ, ಶುಕ್ಲಾ ವಿರುದ್ಧ ಕ್ರಮ ಕೈಗೊಂಡ ಪ್ರಕರಣದಲ್ಲಿ ಸರ್ಕಾರವು ಚುನಾವಣೆಗಳ ಮೇಲೆ ಕಣ್ಣಿಟ್ಟು, ಮತದಾರರನ್ನು ಮೆಚ್ಚಿಸುವ ಕೆಲಸ ಮಾಡಿದೆ. ಸರ್ಕಾರಗಳು ತಮ್ಮ ಮನಸ್ಸಿಗೆ ತೋಚಿದಂತೆ ಇಂತಹ ಕ್ರಮಗಳನ್ನು ಜರುಗಿಸುವುದು ನ್ಯಾಯಾಂಗದ ಪ್ರಕ್ರಿಯೆಯನ್ನು ಅಣಕಿಸುವುದಕ್ಕೆ ಸಮ. ಕಾನೂನಿನ ಪಾಲನೆ ಮಾಡಬೇಕಿರುವುದು ಪ್ರಭುತ್ವಗಳ ಕರ್ತವ್ಯ. ಅದನ್ನು ಸರಿಯಾಗಿ ಮಾಡದಿರುವುದು ಪ್ರಜೆಗಳ ಹಕ್ಕುಗಳನ್ನು ಕಿತ್ತುಕೊಳ್ಳುವುದಕ್ಕೆ ಸಮ. ಅಲ್ಲದೆ ಅದು ಮುಂದೆ ಅರಾಜಕತೆಗೆ ನಾಂದಿಯಾಗುತ್ತದೆ. ಅಪರಾಧ ಹಾಗೂ ಶಿಕ್ಷೆಯ ವಿಚಾರದಲ್ಲಿ ಮಧ್ಯಯುಗದಲ್ಲಿ ಜಾರಿಯಲ್ಲಿ ಇದ್ದಂತಹ ಆಚರಣೆಗಳು ದೇಶದಲ್ಲಿ ಎಲ್ಲಿಯೂ ಮರುಕಳಿಸಬಾರದು. ಹಾಗೆ ಮಾಡಿದಲ್ಲಿ ನಾಗರಿಕವಾದ ಹಾಗೂ ಸಂವಿಧಾನಕ್ಕೆ ಅನುಗುಣವಾದ ಜೀವನಕ್ರಮವನ್ನೇ ಬುಡಮೇಲು ಮಾಡಿದಂತೆ ಆಗುತ್ತದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಕರೆದು ಸಾಂತ್ವನ ಹೇಳಿದ್ದಾರೆ, ‍ಪಾದ ತೊಳೆದಿದ್ದಾರೆ. ಆರೋಪಿಯು ಬಿಜೆಪಿ ಜೊತೆ ನಂಟು ಹೊಂದಿಲ್ಲದೇ ಇದ್ದಿದ್ದರೆ ಚೌಹಾಣ್ ಹೀಗೆ ಮಾಡುತ್ತಿದ್ದರೇ? ರಾಜಕಾರಣಿಗಳು ಚುನಾವಣಾ ಜೀವಿಗಳು; ತೋರಿಸಿಕೊಳ್ಳುವುದು ಅವರ ಒಂದು ಗುಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.