ಸಂಪಾದಕೀಯ: ಪಶ್ಚಿಮ ಬಂಗಾಳ ಚುನಾವಣಾ ಹಿಂಸೆ- ಎಲ್ಲ ಪಕ್ಷಗಳದ್ದೂ ಸಮಾನ ಹೊಣೆಗಾರಿಕೆ ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆಯಾದ ಬಳಿಕ ಮತ್ತು ಮತದಾನ ನಿಗದಿಯಾಗಿದ್ದ ಶನಿವಾರದಂದು ನಡೆದ ಭಾರಿ ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ ಮತ್ತು ಅಪಾರ ಮೌಲ್ಯದ ಆಸ್ತಿ ನಾಶವಾಗಿದೆ. ಬೆದರಿಕೆ, ಮತಗಟ್ಟೆ ಮೇಲೆ ದಾಳಿ, ಮತಪತ್ರ ಕಸಿದುಕೊಳ್ಳುವಿಕೆ, ಮತಗಟ್ಟೆ ಸಿಬ್ಬಂದಿ ಮೇಲೆ ಹಲ್ಲೆಯಂತಹ ಹಲವು ಪ್ರಕರಣಗಳು ನಡೆದಿವೆ. ಸುಮಾರು 700 ಮತಗಟ್ಟೆಗಳಲ್ಲಿ ನಡೆದ ಮರು ಮತದಾನವೂ ಹಿಂಸೆಯಿಂದ ಮುಕ್ತವಾಗಿ ಇರಲಿಲ್ಲ. ದೇಶದ ಬಹುಪಾಲು ಪ್ರದೇಶಗಳಲ್ಲಿ ಚುನಾವಣಾ ಹಿಂಸಾಚಾರವು ಪೂರ್ಣವಾಗಿ ನಿಂತುಹೋಗಿದೆ. ಚುನಾವಣಾ ಹಿಂಸಾಚಾರ ಮತ್ತು ಚುನಾವಣಾ ಅಕ್ರಮಗಳಿಗೆ ಒಂದು ಕಾಲದಲ್ಲಿ ಕುಖ್ಯಾತವಾಗಿದ್ದ ಬಿಹಾರ ಮತ್ತು ಉತ್ತರಪ್ರದೇಶ ಕೂಡ ಈ ಕುಸಂಸ್ಕೃತಿಯನ್ನು ಬಿಟ್ಟು ದೂರ ಸಾಗಿವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ ಹೆಚ್ಚುತ್ತಲೇ ಇದೆ. ರಾಜ್ಯದ ರಾಜಕಾರಣದ ಹೃದಯದಲ್ಲಿಯೇ ಹಿಂಸೆಯು ಅಡಗಿದೆ ಮತ್ತು ಚುನಾವಣೆಯಂತಹ ತೀವ್ರ ರಾಜಕೀಯ ಚಟುವಟಿಕೆ ಸಂದರ್ಭದಲ್ಲಿ ಇದು ಸಂಘಟಿತವಾಗಿ ಅಭಿವ್ಯಕ್ತಗೊಳ್ಳುತ್ತದೆ. ಈ ಮನಃಸ್ಥಿತಿಯು ಸಮಾಜದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ನಿರಂತರವಾಗಿ ಇದೆ. ಯಾವುದೇ ಕಾರಣಕ್ಕೂ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ. ಹಾಗಾಗಿಯೇ ರಾಜ್ಯವು ಇಂತಹ ಹಿಂಸಾಚಾರವನ್ನು ಮೀರಿ ಮುಂದಕ್ಕೆ ಸಾಗಬೇಕಿದೆ. ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ ಎಲ್ಲ ಪ‍ಕ್ಷಗಳ ಪಾಲೂ ಇದೆ. ದೊಡ್ಡ ಪಕ್ಷಗಳ ಪಾಲು ದೊಡ್ಡ ಪ್ರಮಾಣದಲ್ಲಿಯೇ ಇದೆ. ಈ ಹಿಂಸಾಚಾರದಲ್ಲಿ ಆಡಳಿತಾರೂಢ ಪಕ್ಷದ ಪ್ರಾಬಲ್ಯ ಎದ್ದು ಕಾಣಿಸುತ್ತಿದೆ. ಏಕೆಂದರೆ ಇತರ ಪಕ್ಷಗಳಿಗೆ ಹೋಲಿಸಿದರೆ ಈ ಪಕ್ಷಕ್ಕೆ ಚುನಾವಣೆ ಗೆಲ್ಲಲೇಬೇಕಾದ ಅಗತ್ಯ ಹೆಚ್ಚು ಮತ್ತು ಈ ಪಕ್ಷದ ಬಳಿ ಇತರ ಪಕ್ಷಗಳಿಗಿಂತ ಹೆಚ್ಚಿನ ಸಂಪನ್ಮೂಲ ಸಹಜವಾಗಿಯೇ ಇದೆ. ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷವು ಹಿಂಸಾಚಾರ ಮತ್ತು ದೌರ್ಜನ್ಯವನ್ನು ವ್ಯವಸ್ಥಿತವಾಗಿ ನಡೆಸಿದೆ. ಇತರ ಪಕ್ಷಗಳು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹಿಂಸೆ ಎಸಗಿವೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ವ್ಯಕ್ತಿಗಳು ನಾಮಪತ್ರ ಸಲ್ಲಿಸುವುದಕ್ಕೇ ಅವಕಾಶ ನೀಡದ ಘಟನೆಗಳು ಹಲವೆಡೆ ನಡೆದಿವೆ. ರಾಜ್ಯವನ್ನು ದೀರ್ಘಕಾಲ ಆಳಿದ್ದ ಕಾಂಗ್ರೆಸ್‌ ಮತ್ತು ಸಿಪಿಎಂ, ಈಗ ಆಳ್ವಿಕೆ ನಡೆಸುತ್ತಿರುವ ಟಿಎಂಸಿ ಮತ್ತು ಅದಕ್ಕೆ ಸವಾಲು ಒಡ್ಡಲು ತವಕಿಸುತ್ತಿರುವ ಬಿಜೆಪಿ ಎಲ್ಲವೂ ಚುನಾವಣಾ ಅಸ್ತ್ರವಾಗಿ ಹಿಂಸೆಯನ್ನು ಬಳಸಿಕೊಂಡಿವೆ. 2003 ಮತ್ತು 2008ರ ಚುನಾವಣೆಗಳಲ್ಲಿ ಕ್ರಮವಾಗಿ 70 ಮತ್ತು 36 ಜನರ ಹತ್ಯೆ ಆಗಿತ್ತು. 2013 ಮತ್ತು 2018ರಲ್ಲಿ ಕ್ರಮವಾಗಿ 31 ಮತ್ತು 75 ಮಂದಿಯನ್ನು ಕೊಲ್ಲಲಾಗಿತ್ತು. ಸಾವಿನ ಸಂಖ್ಯೆಯಲ್ಲಿ ಏರಿಳಿತ ಕಾಣಿಸಿಕೊಂಡಿದೆ. ಆದರೆ, ಹಿಂಸಾಚಾರ ಎನ್ನುವುದು ಇಲ್ಲಿ ಸದಾ ಇದ್ದೇ ಇತ್ತು ಎಂಬುದಕ್ಕೆ ಈ ಸಂಖ್ಯೆಗಳು ಪುರಾವೆಯಾಗಿವೆ. ವಿಧಾನಸಭೆ ಮತ್ತು ಲೋಕಸಭೆಗೆ ಚುನಾವಣೆ ನಡೆದಾಗಲೂ ಇಲ್ಲಿ ಹಿಂಸಾಚಾರದ ಅಬ್ಬರ ಕಾಣಿಸಿಕೊಂಡಿದೆ. ಮತದಾನದ ದಿನ ಕೇಂದ್ರ ಮತ್ತು ರಾಜ್ಯ ಪಡೆಗಳ ನಿಯೋಜನೆ ಕುರಿತಂತೆಯೂ ವಿವಾದಗಳು ಹಾಗೂ ಪರಸ್ಪರ ಆರೋಪ–ಪ್ರತ್ಯಾರೋಪಗಳು ಉಂಟಾಗಿವೆ. ಚುನಾವಣಾ ಆಯೋಗ ಮತ್ತು ರಾಜ್ಯಪಾಲರ ಪಾತ್ರದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಈ ವಿಚಾರಗಳು ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತಿವೆ. ಕೇಂದ್ರದ ಪಡೆಗಳನ್ನು ರಾಜ್ಯದಲ್ಲಿ ನಿಯೋಜಿಸಬೇಕು ಎಂದು ಹೈಕೋರ್ಟ್‌ ಈ ಬಾರಿ ಹೇಳಿದೆ. ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ಆಗ್ರಹವೂ ಕೇಳಿಬಂದಿದೆ. ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಮುಖತಃ ಭೇಟಿಯಾಗಿ ರಾಜ್ಯದ ಪರಿಸ್ಥಿತಿಯ ವಿವರಣೆ ನೀಡಿದ್ದಾರೆ. ಹಿಂಸಾಚಾರ ನಡೆಯುವುದಿಲ್ಲ ಮತ್ತು ಹಿಂಸೆಯ ಬೆದರಿಕೆ ಒಡ್ಡುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಎಲ್ಲ ರಾಜಕೀಯ ಪಕ್ಷಗಳ ಹೊಣೆಗಾರಿಕೆಯಾಗಿದೆ. ಹಿಂಸಾಚಾರವು ಚುನಾವಣೆಗೆ ಮಾತ್ರ ಸಂಬಂಧಿಸಿದ ವಿಚಾರ ಅಲ್ಲ. ಸಮಾಜದಲ್ಲಿ ಹಿಂಸಾಚಾರ ನಡೆಯುವುದಕ್ಕೆ ಇರುವ ಚಾರಿತ್ರಿಕ ಕಾರಣಗಳು ಮತ್ತು ವ್ಯವಸ್ಥೆಯೊಳಗೆಯೇ ಅಡಗಿರುವ ಕಾರಣಗಳಿಗೆ ಸೂಕ್ತವಾದ ಪರಿಹಾರವನ್ನು ಹುಡುಕಿಕೊಳ್ಳಬೇಕು. ಈ ರೀತಿ ಆದಾಗ ಮಾತ್ರ ಹಿಂಸೆಯನ್ನು ಪರಿಣಾಮಕಾರಿಯಾಗಿ ತಡೆಯುವುದು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.