ಸಂಪಾದಕೀಯ| ಭಾರತದಲ್ಲಿ ವಿಶ್ವಕಪ್ ಕ್ರಿಕೆಟ್: ಗರಿಗೆದರಿದ ನಿರೀಕ್ಷೆ ಕಪಿಲ್ ದೇವ್ ನಾಯಕತ್ವದ ಭಾರತ ತಂಡವು ಮೊದಲ ಬಾರಿಗೆ ಕ್ರಿಕೆಟ್ ವಿಶ್ವಕಪ್ ಜಯಿಸಿ ಈಗ ನಾಲ್ಕು ದಶಕಗಳು ಸಂದಿವೆ. ಭಾರತ ಈಗ ಮತ್ತೊಂದು ಏಕದಿನ ವಿಶ್ವಕಪ್ ಟೂರ್ನಿಯ ಆತಿಥ್ಯಕ್ಕೆ ಸಜ್ಜಾಗಿದೆ. ಅಕ್ಟೋಬರ್ ಐದರಿಂದ ನವೆಂಬರ್ 19ರವರೆಗೆ ಟೂರ್ನಿ ನಡೆಯಲಿದೆ. ವಿಶ್ವಕಪ್ ಜಯಿಸುವುದೆಂದರೆ ತಂಡಗಳಿಗೆ ಪ್ರತಿಷ್ಠೆಯ ವಿಷಯ. ಆತಿಥ್ಯ ನೀಡುವುದು ಕೂಡ ಗೌರವದ ಸಂಗತಿ. ಭಾರತಕ್ಕೆ ಈ ಅವಕಾಶ ದೊರೆಯುತ್ತಿರುವುದು ನಾಲ್ಕನೇ ಸಲ. 1987, 1996 ಮತ್ತು 2011ರಲ್ಲಿ ನೆರೆರಾಷ್ಟ್ರಗಳ ಪಾಲುದಾರಿಕೆಯಲ್ಲಿ ಟೂರ್ನಿಗಳನ್ನು ಆಯೋಜಿಸಿತ್ತು. ಆದರೆ ಈ ಸಲ ಭಾರತ ಪೂರ್ಣಪ್ರಮಾಣದ ಆತಿಥ್ಯ ವಹಿಸಲಿದೆ. ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಇದು ಹೆಗ್ಗಳಿಕೆಯ ಸಂಗತಿ. ಹತ್ತು ತಂಡಗಳಷ್ಟೇ ಆಡಿದರೂ ಜಗತ್ತಿನ ಹಲವಾರು ರಾಷ್ಟ್ರಗಳ ಗಮನ ಟೂರ್ನಿಯ ಮೇಲೆ ನೆಟ್ಟಿರುತ್ತದೆ. ಜೊತೆಗೆ ಹತ್ತಾರು ನಿರೀಕ್ಷೆಗಳೂ ಗರಿಗೆದರಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಟ್ವೆಂಟಿ–20 ಕ್ರಿಕೆಟ್ ಭರಾಟೆಯ ನಡುವೆ ಸೊರಗುತ್ತಿರುವ ಫಿಫ್ಟಿ–50 ಮಾದರಿಯ ಕ್ರಿಕೆಟ್‌ಗೆ ಮರುಜೀವ ತುಂಬಲು ಈ ಬಾರಿಯ ವಿಶ್ವಕಪ್ ಟೂರ್ನಿಯು ಹೊಸ ದಿಕ್ಕು ತೋರಬೇಕೆಂಬ ಆಶಯವೂ ಸೇರಿಕೊಂಡಿದೆ. ಟೆಸ್ಟ್ ಉಳಿವಿಗಾಗಿ ನಾಲ್ಕು ವರ್ಷಗಳ ಹಿಂದೆ ಆರಂಭವಾದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಎರಡು ಆವೃತ್ತಿಗಳು ಯಶಸ್ವಿಯಾಗಿ ಮುಗಿದಿವೆ. ಟೆಸ್ಟ್ ಮಾದರಿಯ ಕಲಾತ್ಮಕತೆ ಮತ್ತು ಚುಟುಕು ಕ್ರಿಕೆಟ್‌ನ ಬೀಸಾಟದ ಗುಣಗಳೆರಡನ್ನೂ ಕಣ್ತುಂಬಿಕೊಳ್ಳುವ ಅವಕಾಶ ಇರುವ ಏಕದಿನ ಮಾದರಿ ಉಳಿಯಬೇಕು ಎಂಬುದು ಹಲವು ದಿಗ್ಗಜರ ಒತ್ತಾಸೆಯಾಗಿದೆ. ಭಾರತ ತಂಡ ಕಳೆದ ಹತ್ತು ವರ್ಷಗಳಿಂದ ಎದುರಿಸುತ್ತಿರುವ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಪ್ರಶಸ್ತಿಗಳ ಗೆಲುವಿನ ಬರ ಅಂತ್ಯಗೊಳ್ಳುವುದು ಯಾವಾಗ ಎಂದು ಅಭಿಮಾನಿಗಳು ಕಾದಿದ್ದಾರೆ. 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಗವು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ನಂತರ ಭಾರತ ತಂಡವು ಯಾವುದೇ ಮಾದರಿಯಲ್ಲಿಯೂ ಪ್ರಶಸ್ತಿ ಜಯಿಸಿಲ್ಲ. ತವರಿನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ರೋಹಿತ್ ಶರ್ಮಾ ನಾಯಕತ್ವದ ಭಾರತಕ್ಕೆ ಇದು ಸದವಕಾಶವಾಗಿದೆ. ಆದರೆ 2011ರಲ್ಲಿ ಏಕದಿನ ವಿಶ್ವಕಪ್‌ ದೊರಕಿಸಿಕೊಟ್ಟಂತಹ ಉತ್ತಮ ತಂಡವನ್ನು ಈಗ ಸಿದ್ಧಗೊಳಿಸುವ ಅವಶ್ಯಕತೆ ಇದೆ. ಅನುಭವಿ ಬ್ಯಾಟರ್ ಮತ್ತು ಅತ್ಯುತ್ತಮ ಫಿಟ್‌ನೆಸ್ ಹೊಂದಿರುವ ವಿರಾಟ್ ಕೊಹ್ಲಿ ಅವರೊಬ್ಬರ ಮೇಲಷ್ಟೇ ಹೆಚ್ಚು ಅಲಂಬನೆಯಾಗುವ ಸ್ಥಿತಿ ಈಗಿದೆ. ಹೀಗಾಗಿ ಈ ಹಿಂದಿನ ಸೋಲುಗಳಿಗೆ ಕಾರಣವಾದ ಲೋಪಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಇನ್ನೂ ಬಾಕಿ ಇರುವ ಮೂರು ತಿಂಗಳ ಅವಧಿಯಲ್ಲಿ ನಡೆಯುವ ಪ್ರತಿಯೊಂದು ಟೂರ್ನಿಯೂ ಪ್ರತಿಭಾಶೋಧದ ವೇದಿಕೆಯಾಗಬೇಕು. ಉತ್ತಮ ಆಟಗಾರರಿಗೆ ಮಣೆ ಹಾಕಬೇಕು. ಫಾರ್ಮ್‌ ಮತ್ತು ಫಿಟ್‌ನೆಸ್ ಇಲ್ಲದ ಆಟಗಾರರು ಯಾರೇ ಆಗಿರಲಿ ನಿರ್ದಾಕ್ಷಿಣ್ಯವಾಗಿ ಅವರನ್ನು ಕೈಬಿಡಬೇಕು. ಬಲಾಢ್ಯ ತಂಡಗಳಾದ ಆಸ್ಟ್ರೇಲಿಯಾ, ಹಾಲಿ ಚಾಂಪಿಯನ್ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳಿಗೆ ಕಠಿಣ ಪೈಪೋಟಿಯೊಡ್ಡಲು ಆತಿಥೇಯರು ಸಿದ್ಧವಾಗಬೇಕಿದೆ. ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಒಂದು ಸಲ ಪ್ರಶಸ್ತಿ ಗೆದ್ದಿದ್ದ ಶ್ರೀಲಂಕಾ ತಂಡಗಳು ಈ ಬಾರಿ ಅರ್ಹತಾ ಸುತ್ತಿನಲ್ಲಿ ಗೆದ್ದು ಮುಖ್ಯ ಸುತ್ತಿಗೆ ಪ್ರವೇಶಿಸುವಂತಹ ಅನಿವಾರ್ಯಕ್ಕೆ ಸಿಲುಕಿವೆ. ಭಾರತ ಮತ್ತು ಪಾಕಿಸ್ತಾನ ನಡುವಣ ರಾಜತಾಂತ್ರಿಕ ವಿಷಯವೂ ಈಗ ಮುನ್ನೆಲೆಗೆ ಬಂದಿದೆ. ಪಾಕ್ ತಂಡವು ಭಾರತಕ್ಕೆ ಬರಲು ಅಲ್ಲಿಯ ಸರ್ಕಾರ ಅನುಮತಿ ಕೊಡುವುದೋ ಇಲ್ಲವೋ ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೇ ವೇಳಾಪಟ್ಟಿ ಬಿಡುಗಡೆಯಾದ ಬೆನ್ನಲ್ಲಿಯೇ ದೇಶದ ಪ್ರಮುಖ ತಾಣಗಳಿಗೆ ಪಂದ್ಯಗಳ ಆಯೋಜನೆಯ ಅವಕಾಶ ಸಿಕ್ಕಿಲ್ಲವೆಂಬ ಅಪಸ್ವರಗಳು ಕೇಳಿಬಂದಿವೆ. ಇದೆಲ್ಲದರಾಚೆ ವಿಜಯದಶಮಿ ಮತ್ತು ದೀಪಾವಳಿ ಹಬ್ಬಗಳ ಋತುವಿನಲ್ಲಿಯೇ ನಡೆಯಲಿರುವ ಕ್ರಿಕೆಟ್ ಉತ್ಸವದಲ್ಲಿ ಸಂಭ್ರಮಿಸಲು ಕ್ರಿಕೆಟ್‌ಪ್ರೇಮಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.