ಸಂ‍ಪಾದಕೀಯ| ಧಾನ್ಯ, ತರಕಾರಿ ಬೆಲೆ ಏರಿಕೆ ನಿಭಾಯಿಸಲು ಸರ್ಕಾರ ಸಜ್ಜಾಗಬೇಕು ನಿತ್ಯದ ಬದುಕಿಗೆ ತೀರಾ ಅಗತ್ಯವಾಗಿರುವ ಆಹಾರ ವಸ್ತುಗಳ ಬೆಲೆ ಕೆಲವು ತಿಂಗಳುಗಳಿಂದ ಮತ್ತೆ ಗಗನಮುಖಿಯಾಗಿದೆ. ಇದು ಜನರ ಕೈಸುಡುವಂತೆ ಮಾಡುತ್ತಿದೆ. ಆಹಾರ ವಸ್ತುಗಳ ಬೆಲೆಯಲ್ಲಿ ಆಗುತ್ತಿರುವ ಏರಿಕೆಯನ್ನು ಗಮನಿಸಿದರೆ, ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಕಡಿಮೆ ಆಗಿದೆ ಎಂದು ಕೇಂದ್ರ ಸರ್ಕಾರವು ಹೇಳಿದಾಗ ಮನಸ್ಸಿನಲ್ಲಿ ಮೂಡಿದ್ದ ಸಮಾಧಾನ ಭಾವವು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅನಿಸುತ್ತಿದೆ. ತರಕಾರಿ ಹಾಗೂ ಧಾನ್ಯಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವು ಮುಂಗಾರು ಮಳೆಯಲ್ಲಿ ಆಗಿರುವ ವ್ಯತ್ಯಾಸದ ಮೊದಲ ಪರಿಣಾಮವೂ ಆಗಿರಬಹುದು. ಟೊಮೆಟೊ ಬೆಲೆಯು ದೇಶದ ಕೆಲವೆಡೆ ಕೆ.ಜಿ.ಗೆ ₹135ಕ್ಕಿಂತ ಹೆಚ್ಚಾಗಿದೆ. ಈರುಳ್ಳಿ, ಆಲೂಗಡ್ಡೆ, ಬದನೆಕಾಯಿ, ಶುಂಠಿ, ಮೆಣಸು ದುಬಾರಿ ಆಗುತ್ತಿವೆ. ಮಳೆ ಸಕಾಲದಲ್ಲಿ ಆಗದೆ ಇರುವ ಕಾರಣ ದೇಶದ ಹಲವೆಡೆ ಕೃಷಿ ಬೆಳೆಗಳಿಗೆ ಏಟು ಬಿದ್ದಿದೆ. ಇದರ ಪರಿಣಾಮವಾಗಿ ತರಕಾರಿಗಳು ಮಾರುಕಟ್ಟೆಗೆ ಅಗತ್ಯ ಪ್ರಮಾಣದಲ್ಲಿ ಬಂದಿಲ್ಲ. ಬೇಡಿಕೆ ಹಾಗೂ ಪೂರೈಕೆಯ ನಡುವಿನ ವ್ಯತ್ಯಾಸವು ಬೆಲೆ ಏರಿಕೆಗೆ ಕಾರಣವಾಗಿದೆ. ಆದರೆ ಬೆಲೆ ಏರಿಕೆಯನ್ನು ಮುಂಗಾರು ಮಳೆ ಹಾಗೂ ಸಾಗಣೆಗೆ ಮಾತ್ರ ಸಂಬಂಧಿಸಿದ ಸಮಸ್ಯೆಯನ್ನಾಗಿ ಕಾಣಬಾರದು. ಬೆಲೆ ಏರಿಕೆಗೆ ಇಂಬು ಕೊಡುತ್ತಿರುವ ಹಲವು ಇತರ ಕಾರಣಗಳೂ ಇವೆ. ಚೀನಾ ಹೊರತುಪಡಿಸಿದರೆ ಹಣ್ಣು ಮತ್ತು ತರಕಾರಿಗಳನ್ನು ಜಗತ್ತಿನಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವ ದೇಶ ಭಾರತ. ಇಲ್ಲಿನ ಬೆಳೆಗಳಲ್ಲಿ ಅಪಾರ ವೈವಿಧ್ಯವಿದೆ, ಬೇರೆ ಬೇರೆ ಹವಾಗುಣ ಇರುವ ಪ್ರದೇಶಗಳಲ್ಲಿ ಇವುಗಳನ್ನು ಬೆಳೆಯಲಾಗುತ್ತಿದೆ. ಇದು ದೇಶಕ್ಕೆ ಒಂದು ಅನುಕೂಲವನ್ನು ಕಲ್ಪಿಸುವಂತಿದೆ. ಒಂದು ಬೆಳೆಯು ಒಂದು ಪ್ರದೇಶದಲ್ಲಿ ವಿಫಲವಾದರೆ, ಇನ್ನೊಂದೆಡೆ ಅದು ಅಗತ್ಯ ಪ್ರಮಾಣದಲ್ಲಿ ಲಭ್ಯವಾಗಿ ದೇಶದ ಮಾರುಕಟ್ಟೆಗಳಲ್ಲಿ ಸ್ಥಿರ ಪೂರೈಕೆ ಇರುವಂತೆ ಆಗಬಹುದು. ಇದು ಸಾಧ್ಯವಾಗಬೇಕು ಎಂದಾದರೆ ಸರಕು ಸಾಗಣೆ ಹಾಗೂ ದಾಸ್ತಾನು ವ್ಯವಸ್ಥೆಯು ಚೆನ್ನಾಗಿರಬೇಕು. ಈ ವ್ಯವಸ್ಥೆಗಳು ಅತ್ಯಗತ್ಯ ಎಂಬ ಮಾತನ್ನು ದಶಕಗಳಿಂದ ಹೇಳಲಾಗುತ್ತಿದ್ದರೂ, ದೇಶದ ಬಹುತೇಕ ಪ್ರದೇಶಗಳಲ್ಲಿ ಈ ಕೃಷಿ ಮೂಲಸೌಕರ್ಯದ ಕೊರತೆ ಇದ್ದೇ ಇದೆ. ಟೊಮೆಟೊ ಹಾಗೂ ಇತರ ಹಲವು ಬಗೆಯ ಹಣ್ಣುಗಳ ಸಂಗ್ರಹಕ್ಕೆ ಶೈತ್ಯಗೃಹಗಳ ಅಗತ್ಯ ತೀರಾ ಇದೆ. ಅಗತ್ಯಕ್ಕಿಂತ ಹೆಚ್ಚಿನ ಉತ್ಪಾದನೆ ಇರುವ ಸಂದರ್ಭಗಳಲ್ಲಿ ಅವುಗಳನ್ನು ಕೆಡದಂತೆ ಇರಿಸಿಕೊಳ್ಳಬೇಕಾಗುತ್ತದೆ. ಆಗ ಈ ಉತ್ಪನ್ನಗಳನ್ನು ಕೆಡದಂತೆ ರಕ್ಷಿಸಿಕೊಳ್ಳಲು ಹಾಗೂ ಅವುಗಳ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ತರಕಾರಿ ಹಾಗೂ ಹಣ್ಣು ಪ್ರತಿವರ್ಷವೂ ಭಾರಿ ಪ್ರಮಾಣದಲ್ಲಿ ಕೊಳೆತು ಹಾಳಾಗುತ್ತಿವೆ. ಟೊಮೆಟೊ ಬೆಳೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ ಎಂದು ರೈತರು ಅದನ್ನು ರಸ್ತೆಗೆ ಚೆಲ್ಲುವುದು ಮಾಧ್ಯಮಗಳ ಮೂಲಕ ಆಗಾಗ ವರದಿಯಾಗುತ್ತಲೇ ಇರುತ್ತದೆ. ಕೃಷಿ ಬೆಳೆಗಳು, ಅದರಲ್ಲೂ ಮುಖ್ಯವಾಗಿ ಹಣ್ಣುಗಳು ಹಾಗೂ ತರಕಾರಿಗಳು, ಹವಾಮಾನ ವೈಪರೀತ್ಯವನ್ನು ತಾಳಿಕೊಳ್ಳುವ ಮಾರ್ಗವೊಂದನ್ನು ಕಂಡುಕೊಳ್ಳುವ ಅಗತ್ಯ ಇದೆ. ಹಣ್ಣುಗಳು ಹಾಗೂ ತರಕಾರಿಗಳು ಹವಾಮಾನದ ವೈಪರೀತ್ಯಗಳಿಗೆ ಬಹಳ ಬೇಗನೆ ತುತ್ತಾಗುತ್ತಿವೆ. ಬಿಸಿ ಗಾಳಿಯ ಕಾರಣದಿಂದಾಗಿ ಟೊಮೆಟೊ ಬೆಳೆಗೆ ಮೊದಲು ಹಾನಿಯಾಯಿತು. ನಂತರದಲ್ಲಿ, ಅಕಾಲಿಕ ಮಳೆಯಿಂದಾಗಿಯೂ ಈ ಬೆಳೆ ತೊಂದರೆಗೆ ಒಳಗಾಯಿತು. ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಟೊಮೆಟೊ ಬೆಳೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಎಲ್‌ ನಿನೊ ಪ್ರಭಾವವು ಮುಂಗಾರಿನ ಮೇಲೆ ತೀವ್ರವಾಗಿದ್ದರೆ ಎಲ್ಲ ಬಗೆಯ ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಆಹಾರ ವಸ್ತುಗಳ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸುವುದು ದೊಡ್ಡ ಸವಾಲು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಈಚೆಗಷ್ಟೇ ಹೇಳಿದೆ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸನ್ನದ್ಧವಾಗಿ ಇರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.