ಸಂಪಾದಕೀಯ: ನಿವೃತ್ತಿ ನಂತರದ ಹುದ್ದೆಗಳು– ನ್ಯಾಯಮೂರ್ತಿಗಳಿಗೆ ಸಂಹಿತೆ ಬೇಕು ನ್ಯಾಯಮೂರ್ತಿ ಹುದ್ದೆಯಲ್ಲಿ ಇದ್ದವರು ನಿವೃತ್ತರಾದ ನಂತರದಲ್ಲಿ ಎರಡು ವರ್ಷಗಳವರೆಗೆ ಯಾವುದೇ ರಾಜಕೀಯ ಹುದ್ದೆಯನ್ನು ಒಪ್ಪಿಕೊಳ್ಳುವಂತೆ ಇಲ್ಲ ಎಂಬ ನಿಯಮ ರೂಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಆದರೆ, ಎರಡು ವರ್ಷಗಳ ನಂತರವೇ ರಾಜಕೀಯ ಹುದ್ದೆಗಳನ್ನು ಒಪ್ಪಿಕೊಳ್ಳಬೇಕು ಎಂಬ ವಾದವನ್ನು ಇಡಿಯಾಗಿ ತಿರಸ್ಕರಿಸಿಲ್ಲ ಎಂಬುದು ಗಮನಾರ್ಹ. ‘ನಿವೃತ್ತ ನ್ಯಾಯಮೂರ್ತಿಯೊಬ್ಬರು ಯಾವುದಾದರೂ ಹುದ್ದೆಯನ್ನು ಒಪ್ಪಿಕೊಳ್ಳಬೇಕೇ ಬೇಡವೇ ಎಂಬ ವಿಚಾರವನ್ನು ಅವರ ಆತ್ಮಸಾಕ್ಷಿಯ ನಿರ್ಧಾರಕ್ಕೆ ಬಿಟ್ಟುಬಿಡಬೇಕು ಅಥವಾ ಈ ವಿಚಾರವಾಗಿ ಜಾರಿಗೆ ಬರುವ ಯಾವುದೇ ಕಾನೂನಿಗೆ ಬಿಟ್ಟುಬಿಡಬೇಕು’ ಎಂದು ಕೋರ್ಟ್ ಹೇಳಿದೆ. ಆದರೆ ಈ ವಿಚಾರವಾಗಿ ನಿರ್ದೇಶನ ನೀಡಲು ಆಗದು ಎಂದು ಹೇಳಿದೆ. ನಿವೃತ್ತ ನ್ಯಾಯಮೂರ್ತಿಗಳು ಸಂಸತ್ತಿನ ಸದಸ್ಯರಾಗುವ ವಿಚಾರವಾಗಿ ತಾನು ಪರಿಶೀಲನೆ ನಡೆಸಲಾಗದು ಎಂದೂ ಅದು ಹೇಳಿದೆ. ಬಾಂಬೆ ವಕೀಲರ ಸಂಘವು ಸಲ್ಲಿಸಿದ್ದ ಅರ್ಜಿಯ ವಿಚಾರವಾಗಿ ಕೋರ್ಟ್‌ ಈ ಮಾತು ಹೇಳಿದೆ. ಇದೇ ಬಗೆಯ ಕೋರಿಕೆ ಇದ್ದ ಅರ್ಜಿಯೊಂದನ್ನು ಈ ಹಿಂದೆ ವಜಾಗೊಳಿಸಲಾಗಿತ್ತು. ಅರ್ಜಿಯಲ್ಲಿ ಹುರುಳಿಲ್ಲ ಎಂದು ಕೋರ್ಟ್‌ ಹೇಳಿದ್ದರೂ, ಆ ಅರ್ಜಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಗಂಭೀರವಾದುವು. ಬೇರೊಂದು ಹುದ್ದೆಯನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎಂಬುದನ್ನು ನ್ಯಾಯಮೂರ್ತಿ ಆಗಿದ್ದವರ ಆತ್ಮಸಾಕ್ಷಿಯ ತೀರ್ಮಾನಕ್ಕೆ ಅಥವಾ ಇನ್ನೂ ರೂಪ ಪಡೆಯಬೇಕಿರುವ ಕಾನೂನಿನ ವ್ಯಾಪ್ತಿಗೆ ಬಿಟ್ಟುಬಿಡುವ ಮೂಲಕ ಕೋರ್ಟ್‌, ಇಲ್ಲೊಂದು ‘ವಿಚಾರ’ ಇದೆ ಎಂಬುದನ್ನು ಒಪ್ಪಿಕೊಂಡಿದೆ. ಈ ವಿಚಾರವು ಹಿಂದಿನಿಂದಲೂ ಚರ್ಚೆಯಲ್ಲಿದೆ. ನ್ಯಾಯಮೂರ್ತಿ ಹುದ್ದೆಯಲ್ಲಿ ಇದ್ದವರು ನಿವೃತ್ತಿಯ ನಂತರದಲ್ಲಿ ರಾಜ್ಯಪಾಲರಾಗಿ, ಸಂಸತ್ತಿನ ಸದಸ್ಯರಾಗಿ ಹಾಗೂ ಇತರ ಅಧಿಕಾರ ಸ್ಥಾನಗಳಿಗೆ ನೇಮಕಗೊಂಡ ನಿದರ್ಶನಗಳು ಇವೆ. ಕೆಲವು ಹುದ್ದೆಗಳ ಜೊತೆ ರಾಜಕೀಯ ಜವಾಬ್ದಾರಿಗಳೂ ಇರುತ್ತವೆ. ನ್ಯಾಯಮೂರ್ತಿಗಳು ನಿವೃತ್ತಿಯ ನಂತರ ಇಂತಹ ಹುದ್ದೆಗಳನ್ನು ಒಪ್ಪಿಕೊಂಡಾಗ, ಆ ಹುದ್ದೆಯು ಇತರರ ಕಣ್ಣಿಗೆ ಆಮಿಷದಂತೆಯೋ ಬಹುಮಾನದಂತೆಯೋ ಕಾಣಬಹುದು. ಇದು ನ್ಯಾಯಾಂಗದ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುತ್ತದೆ. ನ್ಯಾಯಾಂಗವು ಸ್ವತಂತ್ರವಾಗಿ ಇರಬೇಕು, ನಿಷ್ಪಕ್ಷಪಾತವಾಗಿ ಇರಬೇಕು. ಅಷ್ಟೇ ಅಲ್ಲ, ಈ ರೀತಿಯಲ್ಲಿ ಇದೆ ಎಂಬುದು ಇತರರಿಗೆ ಗೊತ್ತಾಗುವಂತೆಯೂ ಇರಬೇಕು. ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರು, ನ್ಯಾಯಮೂರ್ತಿಗಳು ನಿವೃತ್ತಿಯ ನಂತರ ಕೆಲವು ಕಾಲ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳಬಾರದು ಎಂಬ ವಾದದ ಪರವಾಗಿ ಇರಲಿಲ್ಲ. ಏಕೆಂದರೆ, ಸರ್ಕಾರದ ಹಿತಾಸಕ್ತಿಯನ್ನು ಒಳಗೊಂಡ ಪ್ರಕರಣಗಳು ಕೋರ್ಟ್‌ಗಳಲ್ಲಿ ಹೆಚ್ಚೇನೂ ಇಲ್ಲ ಎಂದು ಅಂಬೇಡ್ಕರ್ ಆಗ ಹೇಳಿದ್ದರು. ಆದರೆ, ಈಗ ಪರಿಸ್ಥಿತಿ ಆ ರೀತಿ ಇಲ್ಲ. ಈಗ ಕೋರ್ಟ್‌ಗಳಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ವ್ಯಾಜ್ಯಗಳನ್ನು ಹೊಂದಿರುವುದು ಸರ್ಕಾರವೇ. ಸರ್ಕಾರದ ಹಿತಾಸಕ್ತಿಗಳು, ರಾಜಕೀಯ ಹಿತಾಸಕ್ತಿಗಳು ಒಳಗೊಂಡಿರುವ ಪ್ರಕರಣಗಳಲ್ಲಿ ನ್ಯಾಯಮೂರ್ತಿಗಳು ನ್ಯಾಯನಿರ್ಣಯ ಮಾಡಬೇಕು. ನ್ಯಾಯಮೂರ್ತಿ ಸ್ಥಾನದಲ್ಲಿದ್ದವರು ನಿವೃತ್ತಿಯಾದ ನಂತರ ಕೆಲವು ಹುದ್ದೆಗಳನ್ನು ಒಪ್ಪಿಕೊಂಡರೆ, ಅವರು ನೀಡಿದ್ದ ಆದೇಶ, ತೀರ್ಪುಗಳು ನಕಾರಾತ್ಮಕ ನೆಲೆಯಲ್ಲಿ ಗಮನಸೆಳೆಯುವ ಸಾಧ್ಯತೆ ಇರುತ್ತದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ವೈ.ವಿ. ಚಂದ್ರಚೂಡ್ ಹಾಗೂ ಆರ್.ಎಸ್. ಪಾಠಕ್ ಅವರು, ‘ಕೆಲವು ನ್ಯಾಯಮೂರ್ತಿಗಳು ನಿವೃತ್ತಿ ನಂತರದ ಹುದ್ದೆಗಳ ಮೇಲೆ ಕಣ್ಣಿಟ್ಟು ಆದೇಶ ಬರೆದಿರುವುದಿದೆ’ ಎಂದು ಹೇಳಿದ್ದರು. ಹೀಗಾಗಿ, ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಕಾಯುವ ಉದ್ದೇಶದಿಂದ, ನ್ಯಾಯಮೂರ್ತಿಗಳು ನಿವೃತ್ತಿಯ ನಂತರ ನಿರ್ದಿಷ್ಟ ಸಮಯದವರೆಗೆ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳಬಾರದು ಎಂಬ ಸಲಹೆ ಬಂದಿದೆ. ಈ ವಿಚಾರವನ್ನು ನ್ಯಾಯಮೂರ್ತಿ ಸ್ಥಾನದಲ್ಲಿದ್ದವರ ಆತ್ಮಸಾಕ್ಷಿಯ ತೀರ್ಮಾನಕ್ಕೆ ಬಿಟ್ಟುಬಿಡುವುದು ತೃಪ್ತಿಕರ ಪರಿಹಾರ ಕ್ರಮ ಅಲ್ಲ. ಏಕೆಂದರೆ ಆತ್ಮಸಾಕ್ಷಿಯು ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವರ್ತಿಸುತ್ತಿರುತ್ತದೆ. ಅರ್ಜಿಯಲ್ಲಿ ಹೇಳಿರುವಂತೆ, ಈ ವಿಚಾರದಲ್ಲಿ ಸರ್ಕಾರವು ಯಾವುದೇ ಕಾನೂನು ರೂಪಿಸುವುದಿಲ್ಲ. ಏಕೆಂದರೆ ಇಲ್ಲಿ ಸರ್ಕಾರದಲ್ಲಿ ಇರುವವರ ಹಿತಾಸಕ್ತಿಗಳೂ ಅಡಗಿವೆ. ಈ ವಿಚಾರವಾಗಿ ನಿರ್ದೇಶನಗಳನ್ನು ನೀಡಲು ಕೋರ್ಟ್‌ ನಿರಾಕರಿಸಿದೆಯಾದರೂ ಅದು ನೀತಿ ಸಂಹಿತೆಯೊಂದನ್ನು ರೂಪಿಸಬಹುದು. ನ್ಯಾಯಮೂರ್ತಿ ಆಗಿದ್ದವರು ನಿವೃತ್ತಿಯ ನಂತರ ಬೇರೆ ಹುದ್ದೆ ಒಪ್ಪಿಕೊಳ್ಳುವ ಮೊದಲು ಕನಿಷ್ಠ ಎರಡು ವರ್ಷಗಳ ಅಂತರ ಇರಬೇಕು ಎಂದು ಸಿಜೆಐ ಆಗಿದ್ದ ಆರ್‌.ಎಂ. ಲೋಧಾ ಅವರು ಸಲಹೆ ನೀಡಿದ್ದರು ಎಂಬುದು ಇಲ್ಲಿ ಗಮನಾರ್ಹ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.