ಸಂಪಾದಕೀಯ: ನೂತನ ಸಂಸತ್‌ ಭವನ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಗೊಳಿಸಲಿ ಸಂಸತ್‌ ಸದಸ್ಯರು ಸಂಸತ್ತಿನ ಹೊಸ ಕಟ್ಟಡಕ್ಕೆ ಹೋಗುವುದರೊಂದಿಗೆ ದೇಶದ ಸಂಸದೀಯ ಇತಿಹಾಸದಲ್ಲಿ ಹೊಸ ಯುಗವೊಂದು ಆರಂಭಗೊಂಡಿದೆ. ಇತಿಹಾಸ ಮತ್ತು ಕಳೆದೊಂದು ಶತಮಾನದ ಮಹತ್ವದ ಹಲವು ಘಟನೆಗಳಿಗೆ ಸಾಕ್ಷಿಯಾದ ಸಂಸತ್ತಿನ ಹಳೆಯ ಕಟ್ಟಡವು ಈಗ ಇತಿಹಾಸವಾಗಿ ಮಾರ್ಪಟ್ಟಿದೆ. ಸಂಸತ್ತಿನ ಹೊಸ ಕಟ್ಟಡವು ದೇಶದ ಹೊಸ ದೃಷ್ಟಿಕೋನ ಮತ್ತು ಆಕಾಂಕ್ಷೆಗಳ ಸಂಕೇತ ಹಾಗೂ ಹಳೆಯ ಕಟ್ಟಡವು ಭವಿಷ್ಯದಲ್ಲಿ ‘ಸ್ಫೂರ್ತಿಯ ಸೆಲೆ’ ಮತ್ತು ‘ಯಾತ್ರಾ ಸ್ಥಳ’ವಾಗಿ ಬದಲಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸಂಸತ್ತಿನಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಮೋದಿ ಅವರು, ಪಕ್ಷ ರಾಜಕಾರಣವನ್ನು ಮೀರಿ ನಿಂತರು. ಜವಾಹರಲಾಲ್‌ ನೆಹರೂ ಅವರಿಂದ ಮನಮೋಹನ್‌ ಸಿಂಗ್‌ ಅವರವರೆಗೆ ಭಾರತದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಕೊಡುಗೆ ಕೊಟ್ಟ ಈ ಹಿಂದಿನ ಪ್ರಧಾನಿಗಳನ್ನು ಸ್ಮರಿಸಿದರು. ನೆಹರೂ ಅವರ ಪ್ರಸಿದ್ಧ ‘ವಿಧಿಯೊಂದಿಗೆ ಮುಖಾಮುಖಿ’ ಭಾಷಣವನ್ನು ಅವರು ನೆನಪಿಸಿಕೊಂಡರು. ನೆಹರೂ ಅವರು ಸಂಸತ್ತಿನಲ್ಲಿ ಮಾಡಿದ ‘ಮಧ್ಯರಾತ್ರಿಯ ಈ ಹೊತ್ತಿನಲ್ಲಿ...’ ಭಾಷಣವು ಈಗಲೂ ಪ್ರತಿಧ್ವನಿಸುತ್ತಿದೆ ಮತ್ತು ಅದು ಇನ್ನು ಮುಂದೆಯೂ ನಮಗೆ ಸ್ಫೂರ್ತಿ ತುಂಬಲಿದೆ ಎಂದರು. ಕಳೆದ ವರ್ಷಗಳಲ್ಲಿ ಸಂಸತ್ತು ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳುತ್ತಾ ಬಂದಿದೆ ಎಂದೂ ಅವರು ಹೇಳಿದರು. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಭಾರತದ ಪ್ರಜಾಪ್ರಭುತ್ವಕ್ಕೆ ನೆಹರೂ ಅವರ ಕೊಡುಗೆಗಳನ್ನು ನೆನಪಿಸಿಕೊಂಡರು. ವಿರೋಧ ಪಕ್ಷಗಳನ್ನೂ ಜೊತೆಗೆ ಕರೆದೊಯ್ದ ಅವರ ಮುನ್ನೋಟವು ಎಲ್ಲರನ್ನೂ ಒಳಗೊಳ್ಳುವಂತಹುದಾಗಿತ್ತು ಮತ್ತು ಅವರು ಸಂವಿಧಾನ ಹಾಗೂ ಸಂಸದೀಯ ಪ್ರಜಾಪ್ರಭುತ್ವಕ್ಕೆ ತಳಹದಿ ಹಾಕಿಕೊಟ್ಟರು ಎಂದರು. ಸಂಸತ್ತಿನಲ್ಲಿ ತಮ್ಮ ಧ್ವನಿಯನ್ನು ಆಲಿಸುವವರಿಲ್ಲ ಎಂಬುದು ವಿರೋಧ ಪಕ್ಷಗಳ ಸದಸ್ಯರ ದೂರಾಗಿತ್ತು. ಸಂಸತ್ತಿನ ಇತ್ತೀಚಿನ ಕೆಲವು ವರ್ಷಗಳ ಕಲಾಪವನ್ನು ಗಮನಿಸಿದರೆ, ವಿರೋಧ ಪಕ್ಷಗಳ ಸದಸ್ಯರ ದೂರಿನಲ್ಲಿ ಸತ್ಯ ಇಲ್ಲದಿಲ್ಲ ಎಂಬುದು ಮನವರಿಕೆಯಾಗುತ್ತದೆ. ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳಿದ್ದರೂ ಸಂಸತ್ತು ‘ಕುಟುಂಬ ಭಾವ’ವನ್ನು ಮೂಡಿಸಿದೆ ಎಂದು ಮೋದಿ ಹೇಳಿದ್ದಾರೆ. ಆದರೆ, ಈ ‘ಕುಟುಂಬ ಭಾವ’ವು ಕರಗುತ್ತಾ ಹೋಗಿದೆ. ರಾಜಕಾರಣ ಮತ್ತು ಸಮಾಜದಲ್ಲಿ ಇರುವ ಧ್ರುವೀಕರಣವು ಸಂಸತ್ತನ್ನು ಕೂಡ ವಿಭಜಿಸಿದೆ. ಸಂವಾದದ ಸ್ಥಳದಲ್ಲಿ ದ್ವೇಷ ಮತ್ತು ಸಿಟ್ಟು ಬಂದು ಕೂತಿವೆ. ಹೀಗಾಗಿ ಸಂಸತ್ತಿನ ಚರ್ಚೆಗಳ ಗುಣಮಟ್ಟ ಕುಸಿದಿದೆ. ಶಾಸನ ರಚನಾ ಕೆಲಸವು ನಲುಗಿದೆ. ಯಾವ ಚರ್ಚೆಯೂ ಇಲ್ಲದೆ ಮಸೂದೆಗಳಿಗೆ ಅಂಗೀಕಾರ ನೀಡಲಾಗುತ್ತಿದೆ. ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಣ ವಿಶ್ವಾಸ ಮುರಿದುಬಿದ್ದಿದೆ. ಪ್ರಧಾನಿಯವರು ಸಂದರ್ಭೋಚಿತವಾಗಿ, ಅತ್ಯಂತ ಘನತೆಯಿಂದ ವರ್ತಿಸಿದರು. ಭೂತ, ವರ್ತಮಾನ ಮತ್ತು ಭವಿಷ್ಯದ ಕುರಿತಂತೆ ಅತ್ಯುತ್ತಮ ಭಾವನೆಗಳನ್ನು ವ್ಯಕ್ತಪಡಿಸಿದರು. ಉದಾತ್ತವಾಗಿ ಮತ್ತು ಸಮನ್ವಯದಿಂದ ಮಾತನಾಡಿದ ಮೋದಿ ಅವರು, ‘ಹೊಸ ಆತ್ಮವಿಶ್ವಾಸ’ದಿಂದ ಮುಂದೆ ಸಾಗುವ ಸಮಯ ಬಂದಿದೆ ಎಂದರು. ಈ ಹೊಸ ನಂಬಿಕೆಗೆ ಸರ್ಕಾರ ಮತ್ತು ವಿರೋಧ ಪಕ್ಷಗಳ ಬದ್ಧತೆ ಬೇಕಿದೆ. ಹಾಗೆಯೇ, ಸಂಸತ್ತು ಹಾಗೂ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಬದ್ಧತೆಯನ್ನೂ ತೋರಬೇಕಿದೆ. ಸಂಸತ್ತಿನ ಹೊಸ ಕಟ್ಟಡದ ಕಲಾಪವು ಈಗಾಗಲೇ ಮಂಡಿಸಲಾಗಿರುವ ಮಹಿಳಾ ಮೀಸಲು ಮಸೂದೆಯ ಚರ್ಚೆಯೊಂದಿಗೆ ಆರಂಭವಾಗಿರುವುದು ಅರ್ಥಪೂರ್ಣವಾಗಿದೆ. ಈ ಮಸೂದೆಯು ಅಂಗೀಕಾರವಾದರೆ, ಹೆಚ್ಚು ಒಳಗೊಳ್ಳುವಿಕೆ ಮತ್ತು ವಿಸ್ತೃತ ಪ್ರಾತಿನಿಧ್ಯಕ್ಕೆ ಕಾರಣವಾಗಲಿದೆ. ಹಾಗೆಯೇ ದ್ವೇಷವು ಕಡಿಮೆಯಾಗುವ ಭರವಸೆಯೂ ಇದೆ. ಸಂಸತ್ತು ಎಂದರೆ ಕಟ್ಟಡ ಮಾತ್ರ ಅಲ್ಲ. ಅಲ್ಲಿ ಏನು ನಡೆಯುತ್ತಿದೆ, ಅದು ಹೇಗೆ ಕಾರ್ಯನಿರ್ವಹಿಸುತ್ತಿದೆ, ಅಲ್ಲಿ ಆಡುವ ಮಾತುಗಳು ಯಾವುವು, ಚಿಂತನೆಗಳು ಮತ್ತು ಆದರ್ಶಗಳು ಏನು, ಭಾವನೆಗಳು ಮತ್ತು ಧೋರಣೆಗಳು ಏನು ಎಂಬುದೇ ಸಂಸತ್ತಿನ ಸ್ವರೂಪವನ್ನು ನಿರ್ಧರಿಸುತ್ತದೆ. ಸಂಸತ್ತು ಸದಾಶಯವನ್ನು ಸೃಷ್ಟಿಸಬೇಕು, ಜನರ ವಿಶ್ವಾಸ ಮತ್ತು ಗೌರವವನ್ನು ಗಳಿಸಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.