ಸಂಪಾದಕೀಯ: ಜಿ20 ಶೃಂಗಸಭೆ: ಜಾಗತಿಕ ವೇದಿಕೆಯಲ್ಲಿ ಭಾರತದ ವರ್ಚಸ್ಸು ಹೆಚ್ಚಳ ಜಿ20 ದೇಶಗಳ ಗುಂಪಿನ ಅಧ್ಯಕ್ಷತೆಯನ್ನು ಭಾರತವು ವಹಿಸಿಕೊಂಡ ನಂತರದ ಎಂಟು ತಿಂಗಳಲ್ಲಿ ಆಗಿರುವ ಕೆಲಸಗಳ ಫಲಿತ ರೂಪದಲ್ಲಿ ನವದೆಹಲಿ ಘೋಷಣೆ ಹೊರಬಿದ್ದಿದೆ. ಇದು ಭಾರತದ ವರ್ಚಸ್ಸನ್ನು ಜಾಗತಿಕ ಮಟ್ಟದಲ್ಲಿ ಏರಿಸಿದೆ; ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿಲ್ಲದ ದೇಶಗಳ ಧ್ವನಿಯಾಗಿ ಮಾತ್ರವಲ್ಲದೆ, ಜಗತ್ತಿನ ‘ದಕ್ಷಿಣ’ ಮತ್ತು ‘ಉತ್ತರ’ದ ನಡುವೆ ಮಧ್ಯಸ್ತಿಕೆ ವಹಿಸುವ ಸಾಮರ್ಥ್ಯ ಮತ್ತು ಸಂಯೋಜನಾ ಶಕ್ತಿಯಾಗಿಯೂ ಭಾರತ ಹೊರಹೊಮ್ಮಿದೆ. ಹತ್ತು ಹಲವು ತೊಡಕುಗಳ ನಡುವೆಯೂ ಸಹಮತದ ಘೋಷಣೆ ರೂಪಿಸುವಲ್ಲಿ ಭಾರತ ಯಶಸ್ವಿಯಾಗಿದೆ. ರಷ್ಯಾ ಮತ್ತು ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿ ಒಮ್ಮತಕ್ಕೆ ಬರಲು ಸಾಧ್ಯವಾಗಿದ್ದರಿಂದ ಸರ್ವ ಸಮ್ಮತಿಯ ಘೋಷಣೆ ಸಾಧ್ಯವಾಗಿದೆ. ರಷ್ಯಾದ ಆಕ್ರಮಣಶೀಲತೆ ಎಂಬುದನ್ನು‍ ಕೈಬಿಟ್ಟು ‘ಯುಕ್ರೇನ್‌ನಲ್ಲಿನ ಯುದ್ಧ’ ಎಂದಷ್ಟೇ ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ. ಬಾಲಿಯಲ್ಲಿ ಕಳೆದ ಬಾರಿ ಕೈಗೊಂಡ ಘೋಷಣೆಗಿಂತ ಈ ಬಾರಿಯದ್ದು ಭಿನ್ನವಾಗಿದೆ. ‘ಹೆಚ್ಚಿನ ಸದಸ್ಯರು’ ‘ಅತ್ಯಂತ ಬಲವಾಗಿ ಖಂಡಿಸಿದ್ದಾರೆ’ ಎಂಬುದರ ಜೊತೆಗೆ ರಷ್ಯಾದ ಪಾತ್ರವನ್ನು ಕಳೆದ ಬಾರಿ ಉಲ್ಲೇಖಿಸಲಾಗಿತ್ತು. ಜಂಟಿ ಘೋಷಣೆ ಇಲ್ಲದ 2008ರ ನಂತರದ ಮೊದಲ ಜಿ20 ಶೃಂಗಸಭೆ ಈ ಬಾರಿಯದ್ದು ಆಗಬಾರದು ಎಂಬ ಎಚ್ಚರಿಕೆಯನ್ನು ಜಿ20 ಸಂಧಾನಕಾರರು ತೆಗೆದುಕೊಂಡಿದ್ದರು. ಕಳೆದ ವರ್ಷ ಅಧ್ಯಕ್ಷತೆ ವಹಿಸಿದ್ದ ಇಂಡೊನೇಷ್ಯಾ, ಮುಂದಿನ ಅಧ್ಯಕ್ಷತೆ ವಹಿಸಲಿರುವ ಬ್ರೆಜಿಲ್‌ ಮತ್ತು 2025ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರಲಿರುವ ದಕ್ಷಿಣ ಆಫ್ರಿಕಾದ ಸಹಾಯ ಇಲ್ಲದೇ ಇದ್ದರೆ ಸಹಮತ ಸಾಧಿಸುವುದು ಸಾಧ್ಯವಾಗುತ್ತಿರಲಿಲ್ಲ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಜೊತೆಗೂಡಿ ಕೆಲಸ ಮಾಡುವ ಇತಿಹಾಸ ಇದೆ ಎಂಬುದರತ್ತ ಸಚಿವರ ಹೇಳಿಕೆಯು ಬೊಟ್ಟು ಮಾಡುತ್ತದೆ. ಬ್ರಿಕ್ಸ್‌ನಲ್ಲಿ ಭಾರತದ ಸಹಭಾಗಿಗಳಾಗಿರುವ ರಷ್ಯಾ ಮತ್ತು ಚೀನಾ ಕೂಡ ಭಾರತದ ಚತುರ ವಿದೇಶಾಂಗ ನೀತಿಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ವಿರಳ ವಿದ್ಯಮಾನವೇ ಹೌದು. ಇವೆಲ್ಲದರ ಫಲಿತಾಂಶವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯ ಮೊದಲ ದಿನವೇ ಘೋಷಣೆಯನ್ನು ಪ್ರಕಟಿಸಲು ಸಾಧ್ಯವಾಯಿತು. ರಷ್ಯಾ ಮತ್ತು ಚೀನಾದ ಅಧ್ಯಕ್ಷರು ಗೈರುಹಾಜರಾಗಿದ್ದು ಶೃಂಗಸಭೆಯ ಕೊನೆಯ ಹೊತ್ತಿಗೆ ಮಹತ್ವದ ವಿಚಾರ ಅನಿಸಲೇ ಇಲ್ಲ. ಹಾಗೆ ನೋಡಿದರೆ, ಅವರಿಬ್ಬರ ಅನುಪಸ್ಥಿತಿಯು ಸರ್ವ ಸಮ್ಮತಿ ಸಾಧಿಸುವಲ್ಲಿ ನೆರವೇ ಆಗಿರಬಹುದು. 55 ದೇಶಗಳನ್ನು ಪ್ರತಿನಿಧಿಸುವ ಸುಮಾರು 3 ಟ್ರಿಲಿಯನ್‌ ಡಾಲರ್‌ (ಅಂದಾಜು ₹ 250 ಲಕ್ಷ ಕೋಟಿ) ಆರ್ಥಿಕತೆ ಹೊಂದಿರುವ ಆಫ್ರಿಕಾ ಒಕ್ಕೂಟಕ್ಕೆ ಗುಂಪಿನಲ್ಲಿ ಕಾಯಂ ಸ್ಥಾನ ನೀಡುವಲ್ಲಿ ಯಶಸ್ವಿಯಾಗಿರುವುದು ಭಾರತ ಹೆಮ್ಮೆಪಡಬಹುದಾದ ವಿಚಾರ. ಇನ್ನು ಮುಂದೆ ಜಿ21 ಎಂದು ಕರೆಯಿಸಿಕೊಳ್ಳಲಿರುವ ಈ ಗುಂಪು ಹೆಚ್ಚು ಪ್ರಭಾವಿ, ಶಕ್ತಿಶಾಲಿ ಮತ್ತು ಶ್ರೀಮಂತ ದೇಶಗಳ ನಾಯಕತ್ವದ ಗುಂಪು ಎಂಬುದರಿಂದ ಕಡಿಮೆ ಸಂಪತ್ತು ಹೊಂದಿರುವ ದೇಶಗಳಿಗೂ ಪ್ರಾತಿನಿಧ್ಯ ಇರುವ ಗುಂಪಾಗಿ ಪರಿವರ್ತನೆಗೊಂಡಿದೆ. ಈ ಬೆಳವಣಿಗೆಯಿಂದಾಗಿ ಕನಿಷ್ಠಪಕ್ಷ ಸೈದ್ಧಾಂತಿಕವಾಗಿಯಾದರೂ ಅಂತರರಾಷ್ಟ್ರೀಯ ಆರ್ಥಿಕ ಸ್ಥಿರತೆ, ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ ತಡೆಯಂತಹ ಗುರಿಗಳನ್ನು ಹೆಚ್ಚು ಸಮಾನ ರೀತಿಯಲ್ಲಿ ಪರಿಣಾಮಕಾರಿಯಾಗಿ ಸಾಧಿಸುವುದು ಸಾಧ್ಯವಾಗಬೇಕು. ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆಯ ಯಶಸ್ಸು ಕೇಂದ್ರ ಸರ್ಕಾರಕ್ಕೆ ಹಿರಿಮೆ ತಂದುಕೊಟ್ಟಿದೆ. ಭಾರತವು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಪಾತ್ರ ವಹಿಸುವುದಕ್ಕಾಗಿ ಹಕ್ಕು ಮಂಡಿಸಬಹುದು. ಜೊತೆಗೆ, ವಿಶ್ವಸಂಸ್ಥೆಯ ಸುಧಾರಣೆಯ ತನ್ನ ಕಾರ್ಯಸೂಚಿಯನ್ನು ಇನ್ನಷ್ಟು ಚೈತನ್ಯದಿಂದ ಪ್ರತಿಪಾದಿಸಬಹುದು. ನವದೆಹಲಿ ಘೋಷಣೆಯಲ್ಲಿ ಉಲ್ಲೇಖಿಸಲಾದ ಸವಾಲುಗಳಾದ ಒಳಗೊಳ್ಳುವಿಕೆ, ಧಾರ್ಮಿಕ ಸಹಿಷ್ಣುತೆ, ವೈವಿಧ್ಯ, ಲಿಂಗತ್ವ ನ್ಯಾಯ ಮತ್ತು ಹವಾಮಾನ ಬದಲಾವಣೆಯ ವಿಚಾರದಲ್ಲಿ ಸರ್ಕಾರವು ದೇಶದೊಳಗೆ ಹೇಗೆ ನಡೆದುಕೊಳ್ಳಲಿದೆ ಎಂಬುದು ಹೆಚ್ಚು ಸೂಕ್ಷ್ಮ ಪರಿಶೀಲನೆಗೆ ಒಳಪಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.