ಸಂಪಾದಕೀಯ: ಅಂಗನವಾಡಿಗಳಲ್ಲಿ ಕಳಪೆ ಮೊಟ್ಟೆ– ಮಕ್ಕಳ ವಿಷಯದಲ್ಲಿ ರಾಜಿ ಸಲ್ಲದು ಅಂಗನವಾಡಿ ಕೇಂದ್ರಗಳಿಗೆ ಹಾಳಾದ ಮೊಟ್ಟೆಗಳು ಪೂರೈಕೆಯಾಗುತ್ತಿರುವುದರ ಬಗ್ಗೆ ಹಾವೇರಿ ಜಿಲ್ಲೆಯಿಂದ ವರದಿಯಾಗಿರುವ ಪ್ರಕರಣಗಳು ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯದ ಬಗ್ಗೆ ಆತಂಕ ಉಂಟುಮಾಡುವಂತಿವೆ. ಕಳಪೆ ಗುಣಮಟ್ಟದ ಮೊಟ್ಟೆಗಳ ಪೂರೈಕೆಯ ಬಗ್ಗೆ ರಾಮನಗರ, ಹಾಸನ ಹಾಗೂ ಉತ್ತರ ಕರ್ನಾಟಕದ ಹಲವೆಡೆಗಳಿಂದಲೂ ದೂರುಗಳು ಬಂದಿದ್ದು, ಈ ದೂರುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ದೂರುಗಳು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಅನುಮಾನ ಮೂಡಿಸುವಂತಿವೆ. ಮಕ್ಕಳು ಮತ್ತು ತಾಯಂದಿರನ್ನು ಅಪೌಷ್ಟಿಕತೆಯಿಂದ ರಕ್ಷಿಸುವುದು ಹಾಗೂ ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು ಶಿಶು ಅಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶ. ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ಮಕ್ಕಳು ಹಾಗೂ ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆಗಳನ್ನು ಪೂರೈಸಲಾಗುತ್ತಿದೆ. ಗುತ್ತಿಗೆದಾರರು ಒದಗಿಸುವ ಈ ಮೊಟ್ಟೆಗಳು ಕಳಪೆ ಗುಟ್ಟಮಟ್ಟದವಾಗಿದ್ದು, ಬೇಯಿಸಿ ಸಿಪ್ಪೆ ತೆಗೆದ ನಂತರ ಅವುಗಳಿಂದ ಕೆಟ್ಟ ವಾಸನೆ ಬರುತ್ತಿದೆ ಹಾಗೂ ಮೊಟ್ಟೆಯ ಒಳಭಾಗ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ದೂರಿದ್ದಾರೆ. ಕೊಳೆತವುಗಳನ್ನು ಬಿಸಾಡಬೇಕಾದುದರಿಂದ, ಮಕ್ಕಳಿಗೆ ವಿತರಿಸಲು ಮೊಟ್ಟೆಗಳ ಕೊರತೆಯಾಗುತ್ತಿದೆ. ಕೊಳೆತು ನಾರುವ ಮೊಟ್ಟೆಗಳು ಗರ್ಭಿಣಿಯರ ಕುಟುಂಬದ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ನಡುವೆ ಜಗಳಕ್ಕೂ ಕಾರಣವಾಗಿವೆ. ಕಳಪೆ ಮೊಟ್ಟೆಗಳು ಮಕ್ಕಳು ಹಾಗೂ ಗರ್ಭಿಣಿಯರ ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆ ಇಲ್ಲದಿಲ್ಲ. ಕೆಲವು ಮಕ್ಕಳು ವಾಂತಿ–ಭೇದಿಯಿಂದ ಬಳಲಿದ ಪ್ರಕರಣಗಳೂ ವರದಿಯಾಗಿವೆ. ಮಕ್ಕಳು ಮತ್ತು ತಾಯಂದಿರ ಅಪೌಷ್ಟಿಕತೆಯನ್ನು ನಿವಾರಿಸುವ ಗುರಿ ಹೊಂದಿರುವ ಅಂಗನವಾಡಿ ಕೇಂದ್ರಗಳೇ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ದುರದೃಷ್ಟಕರ. ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆಗಳನ್ನು ವಿತರಿಸುವ ಕಾರ್ಯಕ್ರಮದ ಕುರಿತು ದೂರುಗಳು ಹೊಸತೇನೂ ಅಲ್ಲ. ಸರ್ಕಾರದಿಂದ ಸಕಾಲಕ್ಕೆ ಅನುದಾನ ದೊರೆಯದ ಕಾರಣ, ಮೊಟ್ಟೆಗಳ ಖರೀದಿಯು ಅಂಗನವಾಡಿ ಕೇಂದ್ರಗಳಿಗೆ ಸವಾಲಾಗಿ ಪರಿಣಮಿಸಿದೆ. ಸಾಲ ಮಾಡಿ ಮೊಟ್ಟೆ ಖರೀದಿಸಿ ವಿತರಿಸಿ, ನಾಲ್ಕೈದು ತಿಂಗಳಾದರೂ ಸರ್ಕಾರದಿಂದ ಹಣ ಬಾರದೆ ಹೋದಾಗ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿರುವುದೂ ಇದೆ. ಕಳೆದ ವರ್ಷ ಪ್ರತಿ ಮೊಟ್ಟೆಯ ಖರೀದಿಗೆ ಸರ್ಕಾರದಿಂದ ₹5ರಿಂದ ₹6 ದೊರೆಯುತ್ತಿತ್ತು. ದರ ಏರಿಕೆಯಾದ ಸಂದರ್ಭಗಳಲ್ಲಿ ಮೊಟ್ಟೆ ಖರೀದಿ ಕಷ್ಟವಾಗುತ್ತದೆ. ಈ ದೂರುಗಳ ಹಿನ್ನೆಲೆಯಲ್ಲಿ ಈ ವರ್ಷದ ಜನವರಿಯಿಂದ ತಾಲ್ಲೂಕುವಾರು ಟೆಂಡರ್‌ ಕರೆದು, ಗುತ್ತಿಗೆದಾರರ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಖರೀದಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಹೊಸ ಗುತ್ತಿಗೆ ಪದ್ಧತಿಯಲ್ಲಿಯೂ ದೋಷಗಳು ಕಾಣಿಸಿಕೊಂಡಿರುವುದರಿಂದ, ಟೆಂಡರ್‌ ಪದ್ಧತಿಯನ್ನು ರದ್ದುಪಡಿಸಿ, ಮೊಟ್ಟೆ ಖರೀದಿ ಜವಾಬ್ದಾರಿಯನ್ನು ಬಾಲ ವಿಕಾಸ ಸಮಿತಿಗೆ ವಹಿಸಿಕೊಡಬೇಕೆನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಮೊಟ್ಟೆ ಖರೀದಿಯನ್ನು ಕೇಂದ್ರೀಕರಣಗೊಳಿಸುವ ಬಗ್ಗೆ ಹಾಗೂ ಸರ್ಕಾರಿ ಸಂಸ್ಥೆಗಳಿಂದ ಖರೀದಿಸುವ ಸಾಧ್ಯತೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಪ್ರಸ್ತಾಪಿಸಿದ್ದಾರೆ. ಕಳಪೆ ಮೊಟ್ಟೆ ಪೂರೈಸಿರುವ ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದ್ದು, ತಪ್ಪಿತಸ್ಥ ಪೂರೈಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದೂ ಅವರು ಹೇಳಿದ್ದಾರೆ. ತಪ್ಪಿತಸ್ಥರನ್ನು ಕಪ್ಪು ಪಟ್ಟಿಗೆ ಸೇರಿಸಿದರಷ್ಟೇ ಸಾಲದು; ಮಕ್ಕಳು ಹಾಗೂ ಗರ್ಭಿಣಿಯರ ಆರೋಗ್ಯದೊಂದಿಗೆ ಆಟವಾಡಿರುವವರ ವಿರುದ್ಧ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಂಗನವಾಡಿಗಳ ಮೂಲಕ ನೀಡುವ ಪೌಷ್ಟಿಕ ಆಹಾರಕ್ಕೆ ಬಳಸುವ ತರಕಾರಿ ಖರೀದಿಗಾಗಿ ಸರ್ಕಾರ ಒಬ್ಬರಿಗೆ ದಿನವೊಂದಕ್ಕೆ ಒಂದೂವರೆ ರೂಪಾಯಿ ಗೊತ್ತುಪಡಿಸಿದೆ. ಈ ಅವೈಜ್ಞಾನಿಕ ದರಪಟ್ಟಿಯ ಬಗ್ಗೆಯೂ ದೂರುಗಳು ವ್ಯಕ್ತವಾಗಿವೆ. ಮಕ್ಕಳು ಹಾಗೂ ತಾಯಂದಿರ ಆರೋಗ್ಯದ ಕಾಳಜಿಗೆ ಸಂಬಂಧಿಸಿದಂತೆ ಯಾವ ರೀತಿಯ ಚೌಕಾಸಿಯೂ ಸಲ್ಲದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.