| ನವದೆಹಲಿಯಲ್ಲಿ ಎನ್‌ಡಿಎ ಸಭೆ: ಕುಗ್ಗಿತೇ ಬಿಜೆಪಿಯ ವಿಶ್ವಾಸ? ಬಿಜೆಪಿಯು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಮತ್ತೆ ಜೀವ ತುಂಬಲು ಮುಂದಾಗಿದೆ. ಇದಕ್ಕೆ ಕೆಲವು ಕಾರಣಗಳಿವೆ. ಬಿಜೆಪಿಗೆ ಈಗ ಚುನಾವಣೆಯ ವಿಚಾರದಲ್ಲಿ ತುಸು ಅಭದ್ರತೆ ಕಾಡುತ್ತಿದೆ. ಯಾಜಮಾನ್ಯ ಧೋರಣೆಯ ಒಂದು ಪ್ರಬಲ ರಾಜಕೀಯ ಪಕ್ಷವಾಗಿ ಗುರುತಿಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ, ರಾಜಕೀಯ ಮೈತ್ರಿಕೂಟದ ಜೊತೆ ಗುರುತಿಸಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ ಎಂದು ಅದಕ್ಕೆ ಅನ್ನಿಸಿದೆ. ಅದರಲ್ಲೂ ಮುಖ್ಯವಾಗಿ, ಹಲವು ವರ್ಗಗಳನ್ನು ಪ್ರತಿನಿಧಿಸುವ ಮೈತ್ರಿಕೂಟವೊಂದು ಎದುರಾಳಿಯಾಗಿ ರೂಪುಗೊಂಡಿರುವಾಗ ತಾನು ಕೂಡ ಒಂದು ಮೈತ್ರಿಕೂಟವನ್ನು ಹೊಂದುವುದು ಒಳಿತು ಎಂದು ಅದಕ್ಕೆ ಅನ್ನಿಸಿದೆ. ಹೀಗಾಗಿ, ಬಿಜೆಪಿಯು ಹಲವು ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಿ ದೆಹಲಿಯಲ್ಲಿ ಸಭೆ ನಡೆಸಿದೆ. ಈ ಪಕ್ಷಗಳ ಪೈಕಿ ಕೆಲವು ಪಕ್ಷಗಳಿಗೆ ಸಂಸತ್ತಿನಲ್ಲಿ ಅಥವಾ ಯಾವುದೇ ರಾಜ್ಯದ ವಿಧಾನಸಭೆಯಲ್ಲಿ ಪ್ರಾತಿನಿಧ್ಯವೇ ಇಲ್ಲ. ಆದರೆ ಈ ಪಕ್ಷಗಳು ಹಲವು ಸಮುದಾಯಗಳನ್ನು ಪ್ರತಿನಿಧಿಸುವುದು ನಿಜ. ಕೆಲವು ಪಕ್ಷಗಳು ಹಿಂದಿನ ಎನ್‌ಡಿಎ ಭಾಗವಾಗಿದ್ದುದೂ ಹೌದು, ಈ ಪಕ್ಷಗಳನ್ನು ಬಿಜೆಪಿಯೇ ಒಡೆದಿರುವುದೂ ನಿಜ! ಐಎನ್‌ಡಿಐಎ ಮೈತ್ರಿಕೂಟದಲ್ಲಿ 26 ರಾಜಕೀಯ ಪಕ್ಷಗಳಿದ್ದರೆ ತನ್ನ ಜೊತೆ 38 ಪಕ್ಷಗಳು ಇವೆ ಎಂದು ಬಿಜೆಪಿ ಹೇಳಿಕೊಂಡಿದೆ. ಮೈತ್ರಿಕೂಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಕ್ಷಗಳನ್ನು ಒಳಗೊಳ್ಳುವುದು ಮುಖ್ಯ, ಅದು ಇತರರನ್ನು ಮೆಚ್ಚಿಸುವ ಉದ್ದೇಶವನ್ನೂ ಹೊಂದಿರುತ್ತದೆ. ವಿರೋಧ ಪಕ್ಷಗಳ ಒಕ್ಕೂಟವು ಪಟ್ನಾದಲ್ಲಿ ಹಾಗೂ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಕ್ಕೂ, ತಾನು ಎನ್‌ಡಿಎ ಸಭೆಯನ್ನು ದೆಹಲಿಯಲ್ಲಿ ನಡೆಸಿದ್ದಕ್ಕೂ ಸಂಬಂಧವೇ ಇಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ಇದು ರಾಜಕೀಯ ವಿರೋಧಿಗಳ ಸಭೆಗೆ ಪ್ರತಿಯಾಗಿ ನಡೆದ ಸಭೆ ಎಂಬುದರಲ್ಲಿ ಅನುಮಾನವಿಲ್ಲ. ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿತು. ಈ ಸೋಲು, 2024ರ ಲೋಕಸಭಾ ಚುನಾವಣೆಯನ್ನು ತಾನು ಏಕಾಂಗಿಯಾಗಿ ಎದುರಿಸಬಲ್ಲೆ ಎಂದು ಬಿಜೆಪಿ ಹೊಂದಿದ್ದ ವಿಶ್ವಾಸವನ್ನು ಕುಗ್ಗಿಸಿರಬಹುದು. ಹಿಂದಿನ ಎನ್‌ಡಿಎ ಭಾಗವಾಗಿದ್ದ ಶಿವಸೇನಾ (ಉದ್ಧವ್ ಬಣ) ಮತ್ತು ಶಿರೋಮಣಿ ಅಕಾಲಿದಳ ಈಗಿನ ಎನ್‌ಡಿಎ ಜೊತೆ ಇಲ್ಲ. ನಿತೀಶ್ ಕುಮಾರ್ ಅವರ ಜೆಡಿಯು ಈಗ ವಿರೋಧ ಪಕ್ಷಗಳ ಐಎನ್‌ಡಿಐಎ ಒಕ್ಕೂಟದ ಜೊತೆಗಿದೆ. ತಾನು ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಚುನಾವಣಾ ಸವಾಲುಗಳು ತೀವ್ರವಾಗಿರಬಹುದು ಎಂದು ಕೂಡ ಬಿಜೆಪಿಗೆ ಅನ್ನಿಸಿರಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಇಂದಿಗೂ ದೇಶದ ಅತ್ಯಂತ ಜನಪ್ರಿಯ ನಾಯಕನಾಗಿ ಮುಂದುವರಿದಿದ್ದಾರೆ. ಮತದಾರರ ನಡುವೆ ಅವರಿಗೆ ಭಾರಿ ಜನಪ್ರಿಯತೆ ಇದೆ. ಆದರೆ ಜನಪ್ರಿಯತೆಯ ತೀವ್ರತೆಯು ತಗ್ಗಿರಬಹುದು ಎಂಬ ಸೂಚನೆಗಳಿವೆ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಸಾಮಾಜಿಕ ಬಿಕ್ಕಟ್ಟುಗಳು ದೇಶದ ಹಲವು ಸಮುದಾಯಗಳನ್ನು ಕಾಡುತ್ತಿವೆ. ಇವೆಲ್ಲ ಸರ್ಕಾರದ ವಿರುದ್ಧ ಅಸಮಾಧಾನವನ್ನು ತೀವ್ರಗೊಳಿಸಬಲ್ಲವು. ಎನ್‌ಡಿಎ ಸಭೆಯಲ್ಲಿ ಪ್ರಧಾನಿ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಿದ್ದರು. ‘ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ತೋರಿದ ಸಾಧನೆಯನ್ನು ಹೇಳುವುದು ಹಾಗೂ ಮುಂದಿನ ಚುನಾವಣೆಗಳ ಬಗ್ಗೆ ಚರ್ಚಿಸುವ’ ಉದ್ದೇಶವನ್ನು ಸಭೆಯು ಹೊಂದಿತ್ತು. ಆದರೆ ಅಲ್ಲಿ ಚುನಾವಣೆಯ ಬಗ್ಗೆ ಹೆಚ್ಚು ಚರ್ಚೆ ಆಗಲಿಲ್ಲ. ವಿರೋಧ ಪಕ್ಷಗಳು ರಚಿಸಿರುವ ಒಕ್ಕೂಟವು ಅವಕಾಶವಾದಿತನದಿಂದ ಕೂಡಿದೆ, ಅನಿವಾರ್ಯದ ಕಾರಣಕ್ಕೆ ರಚನೆಯಾಗಿದೆ ಎಂದು ಪ್ರಧಾನಿ ಮೋದಿ ಟೀಕಿಸಿದರು. ಎನ್‌ಡಿಎ ಮೈತ್ರಿಕೂಟವು ಪ್ರಾದೇಶಿಕ ಆಕಾಂಕ್ಷೆಗಳನ್ನು ಪ್ರತಿನಿಧಿಸುವಂತಿದೆ ಎಂದು ಬಣ್ಣಿಸಿದರು. ಎನ್‌ಡಿಎಯನ್ನು ಅವರು, ‘ನವ ಭಾರತ, ಅಭಿವೃದ್ಧಿ ಹೊಂದಿದ ರಾಷ್ಟ್ರ, ಜನರ ಆಕಾಂಕ್ಷೆ’ ಎಂದು ಹೊಸದಾಗಿ ವ್ಯಾಖ್ಯಾನಿಸಿದರು. ಮೈತ್ರಿಕೂಟದ ಪಾಲಿಗೆ ರಾಷ್ಟ್ರ, ರಾಷ್ಟ್ರದ ಭದ್ರತೆ, ಪ್ರಗತಿ, ಜನರ ಬಲವರ್ಧನೆ ಮೊದಲು ಎಂದು ಹೇಳಿದರು. ಇವೆಲ್ಲ ಚುನಾವಣೆ ಸಂದರ್ಭದಲ್ಲಿ ರೂಪುಗೊಳ್ಳುವ ಮಾತುಗಳು. ಈ ಮಾತುಗಳು, ಘೋಷಣೆಗಳನ್ನು ಇಟ್ಟುಕೊಂಡೇ 2024ರ ಚುನಾವಣೆಯನ್ನು ಎನ್‌ಡಿಎ ಎದುರಿಸುವ ಸಾಧ್ಯತೆ ನಿಚ್ಚಳವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.