| ಮಣಿಪುರ ಹಿಂಸೆ: ಸರ್ಕಾರದ ಹೊಣೆಗೇಡಿತನ ಅಕ್ಷಮ್ಯ ಗುಡ್ಡಗಾಡು ರಾಜ್ಯ ಮಣಿಪುರವು ಸುಮಾರು ಮೂರು ತಿಂಗಳಿನಿಂದ ಬುಡಕಟ್ಟು ಸಮುದಾಯಗಳ ನಡುವಣ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿಹೋಗಿದೆ. ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲು ಮಾಡಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ಅವರ ಮೇಲೆ ಗುಂ‍ಪೊಂದು ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದು ಮಣಿಪುರ ಹಿಂಸಾಚಾರದ ಆಘಾತಕರ ಮುಖವನ್ನು ತೆರೆದಿಟ್ಟಿದೆ. ಈ ಒಂದು ವಿಡಿಯೊ ಹಿಂಸಾಚಾರದ ಕರಾಳ ಮುಖವನ್ನು ಇಡೀ ದೇಶಕ್ಕೆ ತೋರಿದೆ. ಜನಾಂಗೀಯ ಹಿಂಸೆ, ಮಹಿಳೆಯರಿಗೆ ಯಾವ ಮಟ್ಟದ ಅವಮಾನ ಮಾಡುವುದಕ್ಕೂ ಹೇಸದ ಮನಃಸ್ಥಿತಿ, ಜನರ ಗುಂಪಿನ ಧಾರ್ಷ್ಟ್ಯ, ಪೊಲೀಸರು ಮತ್ತು ಅಧಿಕಾರ ಸ್ಥಾನದಲ್ಲಿ ಇರುವವರ ಅಸಡ್ಡೆ, ಹಿಂಸೆಗೆ ನೀಡಿದ ಕುಮ್ಮಕ್ಕು, ಮಧ್ಯಪ್ರವೇಶ ಮಾಡಲು ಕೇಂದ್ರ ಸರ್ಕಾರದ ಹಿಂದೇಟು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆಯನ್ನೇ ಮರೆತಿರುವ ಸ್ಥಿತಿ ಎಲ್ಲದಕ್ಕೂ ಈ ವಿಡಿಯೊ ಕನ್ನಡಿ ಹಿಡಿದಿದೆ. ಮನೆಗಳು ಮತ್ತು ವಾಹನಗಳು ಉರಿಯುವ ಚಿತ್ರಗಳು, ಸಶಸ್ತ್ರ ಪಡೆಗಳ ಪಥಸಂಚಲನ, ಬಂಡುಕೋರರು ಮತ್ತು ಇತರರಿಂದ ಆದ ಹಿಂಸಾಚಾರ ಹಾಗೂ ಕಿರುಕುಳದ ಚಿತ್ರಗಳು ಆ ರಾಜ್ಯದಿಂದ ಪ್ರತಿದಿನವೂ ಬರುತ್ತಿದ್ದವು. ಆದರೆ, ಮಹಿಳೆಯರಿಗೆ ನೀಡಿದ ಹಿಂಸೆಯ ಈ ಚಿತ್ರವು ಅವೆಲ್ಲವನ್ನೂ ಮರೆಸಿಹಾಕಿದೆ. ಮಣಿಪುರ ಮಾತ್ರವಲ್ಲ, ಇಡೀ ದೇಶ ಬೆಚ್ಚುವಂತೆ ಮಾಡಿದ ಈ ಘಟನೆಯ ಪೂರ್ಣ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ಮತ್ತು ಮಣಿಪುರ ಸರ್ಕಾರವೇ ಹೊತ್ತುಕೊಳ್ಳಬೇಕು. ಕಾನೂನಿನ ಆಡಳಿತಕ್ಕೆ ಒಳಪಟ್ಟ ಯಾವುದೇ ನಾಗರಿಕ ಸಮಾಜವು ಇಂತಹ ಹೀನ ಕೃತ್ಯ ಎಸಗಿದವರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳುತ್ತಿತ್ತು. ಮೇ ತಿಂಗಳಲ್ಲೇ ಎಫ್‌ಐಆರ್‌ ದಾಖಲಾಗಿದೆ ಮತ್ತು ಘಟನೆಯು ಹೇಗೆ ನಡೆದಿದೆ ಎಂಬ ವಿವರಣೆಯೂ ಅದರಲ್ಲಿ ಇದೆ. ಜೊತೆಗೆ ವಿಡಿಯೊ ಕೂಡ ಇದೆ. ವಿಡಿಯೊ ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವವರೆಗೆ ಯಾವುದೇ ತನಿಖೆ ನಡೆದಿರಲಿಲ್ಲ ಹಾಗೂ ಯಾರನ್ನೂ ಬಂಧಿಸಿಯೂ ಇರಲಿಲ್ಲ. ಮುಖ್ಯಮಂತ್ರಿ ಬೀರೆನ್‌ ಸಿಂಗ್‌ ಅವರು ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ರಾಜ್ಯದಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ ಎಂದೂ ಹೇಳಿದ್ದಾರೆ. ಈ ಘಟನೆ ಮತ್ತು ಮುಖ್ಯಮಂತ್ರಿಯವರೇ ಹೇಳಿದಂತೆ ರಾಜ್ಯದಲ್ಲಿ ನಡೆದ ಇಂತಹ ಇತರ ಘಟನೆಗಳ ಹೊಣೆಯನ್ನು ಅವರೇ ಹೊತ್ತುಕೊಳ್ಳಬೇಕು. ಮಣಿಪುರದಲ್ಲಿ ಮೂರು ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರದ ಜವಾಬ್ದಾರಿಯೂ ಅವರದ್ದೇ ಆಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿ ಸರ್ಕಾರ ಸತತವಾಗಿ ಲೋಪಗಳನ್ನು ಎಸಗುತ್ತಲೇ ಬಂದಿದೆ. ಅಧಿಕಾರಸ್ಥರೇ ಶಾಮೀಲಾಗಿದ್ದಾರೆ ಎಂಬ ಶಂಕೆಯೂ ಇದೆ. ರಾಜಕೀಯ, ಸಾಮಾಜಿಕ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿ ಗಂಭೀರ ಪ್ರಶ್ನೆಗಳು ಹುಟ್ಟಲು ಈಗಿನ ಪರಿಸ್ಥಿತಿಯು ಕಾರಣವಾಗಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ‘ಗಾಢ ಕಳವಳ’ ವ್ಯಕ್ತಪಡಿಸಿದ್ದಾರೆ. ತಳಮಟ್ಟದಲ್ಲಿ ಏನನ್ನೂ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದಾದರೆ ನ್ಯಾಯಾಲಯವು ಮಧ್ಯಪ್ರವೇಶಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಸಂಬಂಧಿಸಿದ ತಮ್ಮ ಸುದೀರ್ಘ ಮತ್ತು ನಿಗೂಢ ಮೌನವನ್ನು ಕೊನೆಗೂ ಮುರಿದಿದ್ದಾರೆ. ಮುಖ್ಯ ನ್ಯಾಯಮೂರ್ತಿಯವರ ಮಾತುಗಳು ಅಥವಾ ಜನರಲ್ಲಿ ಮೂಡುತ್ತಿರುವ ಆಕ್ರೋಶದಿಂದಾಗಿ ಅವರು ಮೌನ ಮುರಿದಿರಬಹುದು. ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಮತ್ತು ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಮಾತನಾಡಲು ಇಂತಹುದೊಂದು ಘೋರ ಕೃತ್ಯವು ನಡೆಯಬೇಕಾಯಿತೇ? ಮಣಿಪುರದ ಹಿಂಸಾಚಾರದ ಬಗ್ಗೆ ಮಾತನಾಡುವಾಗಲೂ ಕಾಂಗ್ರೆಸ್ ಆಳ್ವಿಕೆ ಇರುವ ಛತ್ತೀಸಗಢ ಮತ್ತು ರಾಜಸ್ಥಾನವನ್ನು ಉಲ್ಲೇಖಿಸಿ ಅವರು ಸಂವೇದನಾರಾಹಿತ್ಯವನ್ನು ತೋರಿದ್ದಾರೆ. ಇಂತಹ ಸನ್ನಿವೇಶದಲ್ಲಿಯೂ ತುಚ್ಛವಾದ ರಾಜಕಾರಣವನ್ನು ಮೀರಿ ನಿಲ್ಲಲು ಮೋದಿ ಅವರಿಗೆ ಸಾಧ್ಯವಾಗದಿರುವುದು ವಿಷಾದನೀಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.