ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ; ಅಪಘಾತ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಕೆಲವು ತಿಂಗಳುಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿರುವ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಅಕ್ಷರಶಃ ಅಪಘಾತಗಳ ತಾಣವಾಗಿ ಪರಿಣಮಿಸಿದೆ. ಸಂಚಾರ ಹಾಗೂ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ನೀಡಿರುವ ವರದಿಯ ಪ್ರಕಾರ, ಪ್ರಸಕ್ತ ವರ್ಷದ ಜನವರಿಯಿಂದ ಜೂನ್‌ವರೆಗೆ ಈ ಹೆದ್ದಾರಿಯಲ್ಲಿ 136 ಜನ ಪ್ರಾಣ ಕಳೆದುಕೊಂಡಿದ್ದರೆ, 335 ಮಂದಿ ಗಾಯಗೊಂಡಿದ್ದಾರೆ. ಮಂಡ್ಯ ಮತ್ತು ರಾಮನಗರ ನಡುವಿನ ಮಾರ್ಗದಲ್ಲೇ ಹೆಚ್ಚು ಅಪಘಾತಗಳು ಸಂಭವಿಸಿರುವುದನ್ನೂ ವರದಿ ಎತ್ತಿ ತೋರಿದೆ. ಅದರಲ್ಲೂ ಹೆಚ್ಚು ತಿರುವುಗಳು ಹಾಗೂ ಏರಿಳಿತಗಳಿಂದ ಕೂಡಿರುವ ಚನ್ನಪಟ್ಟಣ ಮತ್ತು ಮಂಡ್ಯದ ನಡುವಿನ ಮಾರ್ಗವು ‘ಅಪಘಾತಗಳ ತಾಣ’ವಾಗಿ ಪರಿವರ್ತನೆ ಆಗಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ‘ನಿರ್ಲಕ್ಷ್ಯ ಹಾಗೂ ಅತಿ ವೇಗದ ಚಾಲನೆಯೇ ಅಪಘಾತಗಳಿಗೆ ಕಾರಣ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವಾದಿಸುತ್ತದೆ. ಆದರೆ, ಪ್ರಾಧಿಕಾರ ಹೇಳುತ್ತಿರುವುದು ಅರ್ಧಸತ್ಯವನ್ನು ಮಾತ್ರ. ಏಕೆಂದರೆ, ಹೆದ್ದಾರಿಯ ವಿನ್ಯಾಸದಲ್ಲಿಯೇ ಹಲವು ಲೋಪಗಳಿವೆ ಎಂಬ ದೂರುಗಳೂ ಇವೆ. ಗಂಟೆಗೆ ಗರಿಷ್ಠ 120 ಕಿ.ಮೀ. ವೇಗದ ಸಂಚಾರಕ್ಕೆ ಅನುಕೂಲವಾಗುವಂತೆ ಈ ಹೆದ್ದಾರಿಯನ್ನು ರೂಪಿಸಲಾಗಿದೆ. ಹಾಗೆಯೇ ಇಲ್ಲಿ, ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ, ನೂರಾರು ವಾಹನಗಳು ಗಂಟೆಗೆ 140 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿರುವುದು ಪೊಲೀಸರ ತಪಾಸಣೆಯಿಂದ ಕಂಡುಬಂದಿದೆ. ಸಣ್ಣ ಕಾರುಗಳು ಇಷ್ಟೊಂದು ವೇಗದಲ್ಲಿ ಸಂಚರಿಸುವಾಗ ತಕ್ಷಣ ನಿಯಂತ್ರಣ ಸಾಧಿಸುವುದು ಕಷ್ಟವಾಗಿ ಇಂತಹ ವಾಹನಗಳು ಮತ್ತು ವಾಹನಗಳಲ್ಲಿರುವ ಪ್ರಯಾಣಿಕರು ಗಂಡಾಂತರ ಎದುರಿಸಬೇಕಾಗುತ್ತದೆ. ಹಲವು ಚಾಲಕರು ಟೈರ್‌ಗಳ ಸ್ಥಿತಿಗತಿಯ ಕುರಿತು ಲಕ್ಷ್ಯವನ್ನೇ ಹರಿಸುವುದಿಲ್ಲ. ಹೆಚ್ಚಿನ ವೇಗದಲ್ಲಿ ವಾಹನ ಸಂಚರಿಸುತ್ತಿದ್ದಾಗ ಟೈರ್‌ಗಳು ಸ್ಫೋಟಗೊಂಡು ಅವಘಡಗಳು ಸಂಭವಿಸಿದ್ದೂ ಇದೆ. ಮಾರ್ಗ ಶಿಸ್ತು ಪಾಲನೆ ಮಾಡದೆ ಹೇಗೆಂದರೆ ಹಾಗೆ ವಾಹನ ನುಗ್ಗಿಸುವ ಪರಿಪಾಟವೂ ಅಪಘಾತಗಳಿಗೆ ಕಾರಣವಾಗಿದ್ದಿದೆ. ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದಂತೆಯೇ ಜೂನ್‌ ತಿಂಗಳಲ್ಲಿ ಪರಿಶೀಲನೆ ನಡೆಸಿದ್ದ ಅಲೋಕ್‌ ಕುಮಾರ್‌, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದರು. ಒಂದು ತಿಂಗಳ ಬಳಿಕ ಅವರು ಮತ್ತೆ ಪರಿಶೀಲನೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಬಹುತೇಕ ಸೂಚನೆಗಳನ್ನು ಪಾಲಿಸಲಾಗಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಗುರುತಿಸಿರುವ 18 ಅಪಘಾತ ಸ್ಥಳಗಳು ಮತ್ತು ಪ್ರವೇಶ–ನಿರ್ಗಮನ ಜಾಗಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು, ವಾಹನಗಳ ನಂಬರ್‌ ಪ್ಲೇಟ್‌ ಸೆರೆಹಿಡಿಯುವ ಸ್ವಯಂಚಾಲಿತ ಕ್ಯಾಮೆರಾ ಸಾಧನಗಳನ್ನು (ಎಎನ್‌ಪಿಆರ್‌) ಅಳವಡಿಸಬೇಕು, ಹೆದ್ದಾರಿ ಗಸ್ತು ಹೆಚ್ಚಿಸಬೇಕು ಮತ್ತು ತುರ್ತು ನೆರವಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿತ್ತು. ಆದರೆ, ಒಂದೆಡೆ ಮಾತ್ರ ಎಎನ್‌ಪಿಆರ್‌ ಅಳವಡಿಸಿರುವ ಪ್ರಾಧಿಕಾರವು ಮಿಕ್ಕ ಸೂಚನೆಗಳ ಕುರಿತಂತೆ ಜಾಣ ಕಿವುಡು ಪ್ರದರ್ಶಿಸುತ್ತಿದೆ. ಪೊಲೀಸರಿಂದ ಒತ್ತಡ ಹೆಚ್ಚಾದ ಮೇಲೆ, ಇನ್ನು ಮೂರು ವಾರಗಳ ಒಳಗಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಸಾರ್ವಜನಿಕರು ರಸ್ತೆ ದಾಟಲು ಅಗತ್ಯವಾದ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಇನ್ನಷ್ಟು ಕಾಲಾವಕಾಶವನ್ನೂ ಕೇಳಿದೆ. ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ನಿರಂತರವಾಗಿ ಭೀಕರ ಅಪಘಾತಗಳು ಸಂಭವಿಸುತ್ತಿದ್ದರೂ ನಿಯಂತ್ರಣಕ್ಕೆ ಕಾರ್ಯಪ್ರವೃತ್ತವಾಗದೆ ವೃಥಾ ಕಾಲಹರಣ ಮಾಡುತ್ತಿರುವುದು ಜನರ ಜೀವಕ್ಕೆ ಪ್ರಾಧಿಕಾರ ಬೆಲೆಯನ್ನೇ ನೀಡದಿರುವುದರ ಸಂಕೇತದಂತೆ ಕಾಣುತ್ತದೆ. ಈ ಮಧ್ಯೆ, ಎಚ್ಚೆತ್ತುಕೊಂಡಿರುವ ಪೊಲೀಸರು ವಾಹನಗಳ ವೇಗದ ಮೇಲೆ ಕಣ್ಣಿಡುವ ಇಂಟರ್‌ಸೆಪ್ಟರ್‌ಗಳನ್ನು ಹೆದ್ದಾರಿಯಲ್ಲಿ ನಿಯೋಜಿಸುವ ಮೂಲಕ ಅಪಘಾತಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ಅದರ ಫಲವೆಂಬಂತೆ ಜುಲೈ ತಿಂಗಳಿನಲ್ಲಿ ಕೇವಲ 27 ಅವಘಡಗಳು ಸಂಭವಿಸಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಇಳಿದಿದೆ. ಆದರೆ, ಇಂಟರ್‌ಸೆಪ್ಟರ್‌ಗಳ ನಿಯೋಜನೆ ಮತ್ತು ಸ್ಥಳದಲ್ಲೇ ದಂಡ ಆಕರಣೆಯು ಹೆದ್ದಾರಿಯಲ್ಲಿ ಹೊಸದೊಂದು ಸಮಸ್ಯೆಯ ಸೃಷ್ಟಿಗೆ ಕಾರಣವಾಗಬಾರದು. ಅತಿಯಾದ ವೇಗದ ಚಾಲನೆ ಮೇಲೆ ಕಣ್ಣಿಡಲು ತಂತ್ರಜ್ಞಾನ ಆಧಾರಿತ ಆಧುನಿಕ ಸಾಧನಗಳು, ವಿಧಾನಗಳು ಹಲವು ಇವೆ. ಜಗತ್ತಿನ ಅತ್ಯುತ್ತಮ ಮಾದರಿಗಳನ್ನು ಪರಿಶೀಲಿಸಿ, ಅಂಥವನ್ನು ಇಲ್ಲೂ ಅಳವಡಿಸಿಕೊಳ್ಳುವತ್ತ ಗಮನಹರಿಸಬೇಕು. ಸಂಚಾರಕ್ಕೆ ಅಡಚಣೆ ಆಗಬಾರದು ಎಂಬ ಉದ್ದೇಶದಿಂದ ಹೆದ್ದಾರಿಯಲ್ಲಿ ಬೈಕ್‌, ಆಟೊ, ಟ್ರ್ಯಾಕ್ಟರ್‌ಗಳಿಗೆ ಆಗಸ್ಟ್‌ ಒಂದರಿಂದ ನಿಷೇಧ ವಿಧಿಸಲು ನಿರ್ಧರಿಸಲಾಗಿದೆ. ಅಪಘಾತ ನಿಯಂತ್ರಣಕ್ಕೆ ಇದೂ ಒಂದು ಕ್ರಮ ಎಂದು ಭಾವಿಸಬಹುದಾದರೂ ಸ್ಥಳೀಯರ ಮುಕ್ತ ಸಂಚಾರಕ್ಕೆ ಈ ಹೆದ್ದಾರಿಯೇ ಒಂದು ರೀತಿಯಲ್ಲಿ ತೊಡಕಾಗದಂತೆ ನೋಡಿಕೊಳ್ಳುವುದೂ ಅಗತ್ಯ. ಸ್ಥಳೀಯರ ಬಳಕೆಗಾಗಿ ಸರ್ವಿಸ್‌ ರಸ್ತೆಗಳು ಸದಾ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಮತ್ತು ರಸ್ತೆ ದಾಟಲು ಅಲ್ಲಲ್ಲಿ ಸೂಕ್ತ ವ್ಯವಸ್ಥೆಯನ್ನೂ ಮಾಡಬೇಕು. ಈ ಹೆದ್ದಾರಿಯಲ್ಲಿ ಸಂಭವಿಸಿರುವ ಅಪಘಾತಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇಂದ್ರ ಸಾರಿಗೆ ಇಲಾಖೆಯು ತಾಂತ್ರಿಕ ಸಮಿತಿಯೊಂದನ್ನು ನೇಮಿಸಿದೆ. ಕಾಲಮಿತಿಯಲ್ಲಿ ವರದಿ ನೀಡಲೂ ಸೂಚಿಸಲಾಗಿದೆ. ತಜ್ಞರ ವರದಿ ಆಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಪಘಾತ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ವಿಳಂಬವಿಲ್ಲದೆ ಕೈಗೊಳ್ಳಬೇಕು. ಹೆದ್ದಾರಿಗಳು ಜನರ ಪ್ರಾಣದೊಡನೆ ಚೆಲ್ಲಾಟವಾಡುವ ತಾಣಗಳಾಗದಂತೆ ನೋಡಿಕೊಳ್ಳುವುದು ಎರಡೂ ಸರ್ಕಾರಗಳ ಹೊಣೆಗಾರಿಕೆಯೂ ಹೌದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.