ಸಂಪಾದಕೀಯ | ವ್ಯಾಜ್ಯ ಇತ್ಯರ್ಥಕ್ಕೆ ಮಧ್ಯಸ್ಥಿಕೆ; ಕೇಂದ್ರದ ನಡೆ ಸ್ವಾಗತಾರ್ಹ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ‘ಮಧ್ಯಸ್ಥಿಕೆ ಮಸೂದೆ– 2021’ ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿಯೇ ಮಂಡನೆ ಆಗುವ ನಿರೀಕ್ಷೆ ಇದೆ. ವ್ಯಾಜ್ಯಗಳನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳುವುದರ ಬದಲು, ಮಧ್ಯಸ್ಥಿಕೆ ಮೂಲಕ ಅವುಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಈ ಮಸೂದೆಯು ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಮಧ್ಯಸ್ಥಿಕೆ ಮೂಲಕ ಕೈಗೊಂಡ ತೀರ್ಮಾನವನ್ನು ಜಾರಿಗೆ ತರುವ ವ್ಯವಸ್ಥೆ ರೂಪಿಸುವುದು ಹಾಗೂ ಆನ್‌ಲೈನ್‌ ಮೂಲಕ ಮಧ್ಯಸ್ಥಿಕೆ ನಡೆಸುವುದಕ್ಕೆ ಅವಕಾಶ ಕಲ್ಪಿಸುವ ಅಂಶವೂ ಈ ಮಸೂದೆಯಲ್ಲಿ ಇದೆ. ವ್ಯಾಜ್ಯಗಳನ್ನು ಇತ್ಯರ್ಥಪಡಿಸುವುದಕ್ಕೆ ಮಧ್ಯಸ್ಥಿಕೆಯ ಮೊರೆ ಹೋಗುವ ವಿಚಾರವು ದೇಶದಲ್ಲಿ ವರ್ಷಗಳಿಂದ ಚರ್ಚೆಯಲ್ಲಿದೆ. ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರುವ ಮೊದಲು, ಮಧ್ಯಸ್ಥಿಕೆಯ ಮೂಲಕ ಅವುಗಳನ್ನು ಇತ್ಯರ್ಥಪಡಿಸಲು ಸಾಧ್ಯವೇ ಎಂಬ ಪ್ರಯತ್ನವು ಕಡ್ಡಾಯವಾಗಿ ನಡೆಯುವಂತಾಗಬೇಕು ಎನ್ನುವ ಸಲಹೆಗಳು ಇವೆ. ಕಂ‍ಪನಿಗಳ ಕಾಯ್ದೆಯು ವ್ಯಾಜ್ಯ ಪರಿಹಾರಕ್ಕೆ ಮಧ್ಯಸ್ಥಿಕೆಯ ಮೊರೆ ಹೋಗಬಹುದು ಎನ್ನುತ್ತದೆ. ಆದರೆ ಮಧ್ಯಸ್ಥಿಕೆಗಾಗಿ ಪ್ರತ್ಯೇಕ ಕಾಯ್ದೆ ದೇಶದಲ್ಲಿ ಇಲ್ಲ. ಈ ಕೊರತೆಯನ್ನು ಹೊಸ ಮಸೂದೆಯು ತುಂಬಬಹುದು. ಸಂಸತ್ತಿನ ಸ್ಥಾಯಿ ಸಮಿತಿಯೊಂದು ನೀಡಿದ್ದ ಕೆಲವು ಶಿಫಾರಸುಗಳನ್ನು ಪರಿಗಣಿಸಿ ಹೊಸ ಮಸೂದೆಯನ್ನು ಸಂಪುಟವು ಅನುಮೋದಿಸಿದೆ. ಈ ಮಸೂದೆಯು ಕಾಯ್ದೆಯಾಗಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಲ್ಲಿ ದೇಶದ ನ್ಯಾಯದಾನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಬರಬಹುದು. ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಮಧ್ಯಸ್ಥಿಕೆಯು ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿಯಾದ ವ್ಯವಸ್ಥೆ. ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಇರುವ ಪ್ರಕರಣಗಳ ಸಂಖ್ಯೆ ಲಕ್ಷಗಳಷ್ಟು ಇದೆ. ಕೋರ್ಟ್‌ಗಳಲ್ಲಿ ಪ್ರಕರಣಗಳು ಇತ್ಯರ್ಥವಾಗುವ ವೇಗ ಇದೇ ಮಟ್ಟದಲ್ಲಿ ಇದ್ದರೆ, ಇದುವರೆಗಿನ ಪ್ರಕರಣಗಳನ್ನು ಇತ್ಯರ್ಥಪಡಿಸಲು ದಶಕಗಳೇ ಬೇಕಾಗಬಹುದು. ಈಗ ಸಂಪುಟದ ಅನುಮೋದನೆ ಪಡೆದಿರುವ ಮಸೂದೆಯು ವ್ಯಾಜ್ಯವನ್ನು ಕೋರ್ಟ್‌ಗೆ ಒಯ್ಯುವ ಮೊದಲು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಯತ್ನ ನಡೆಸಬೇಕು ಎನ್ನುತ್ತದೆ; ಮಧ್ಯಸ್ಥಿಕೆಯ ಯತ್ನವು ಐಚ್ಛಿಕ ಎಂದು ಹೇಳುತ್ತದೆ. ಏಕೆಂದರೆ ಮಧ್ಯಸ್ಥಿಕೆಯನ್ನು ಕಡ್ಡಾಯ ಮಾಡುವುದು, ನ್ಯಾಯಾಂಗದ ಮೊರೆ ಹೋಗುವುದಕ್ಕೆ ಅಡ್ಡಿ ಎಂದು ಪರಿಗಣಿತವಾಗಿಬಿಡಬಹುದು. ಆ ರೀತಿ ಮಾಡುವುದಕ್ಕೆ ಕಾನೂನು ಅವಕಾಶ ಕೊಡುವುದಿಲ್ಲ. ಮಸೂದೆಯ ಪ್ರಕಾರ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು 180 ದಿನಗಳಲ್ಲಿ ಪೂರ್ಣಗೊಳಿಸಬೇಕು. ಮಸೂದೆಯ ಈ ಮೊದಲಿನ ಕರಡು ಪ್ರತಿಯಲ್ಲಿ, ಮಧ್ಯಸ್ಥಿಕೆ ಪ್ರಕ್ರಿಯೆಗೆ ಹೆಚ್ಚುವರಿಯಾಗಿ ಆರು ತಿಂಗಳ ಕಾಲಾವಕಾಶ ಕಲ್ಪಿಸುವ ಪ್ರಸ್ತಾವ ಇತ್ತು. ಆದರೆ, ವ್ಯಾಜ್ಯ ಇತ್ಯರ್ಥಪಡಿಸುವುದನ್ನು ವಿಳಂಬಗೊಳಿಸಲು ಇದನ್ನು ಬಳಸಿಕೊಳ್ಳಬಾರದು ಎಂಬ ಉದ್ದೇಶದಿಂದ ಹೆಚ್ಚುವರಿ ಕಾಲಾವಕಾಶಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ. ಮಧ್ಯಸ್ಥಿಕೆಗೆ ಅಗತ್ಯವಿರುವ ಮೂಲಸೌಕರ್ಯವನ್ನು ದೇಶದ ಎಲ್ಲೆಡೆ ಕಲ್ಪಿಸಲಾಗುತ್ತದೆ ಎಂದು ಮಸೂದೆ ಹೇಳುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಮಧ್ಯಸ್ಥಿಕೆ ಮಂಡಳಿಯೊಂದು ರಚನೆಯಾಗುತ್ತದೆ. ಮಧ್ಯಸ್ಥಿಕೆದಾರರ ನೋಂದಣಿ, ಮಧ್ಯಸ್ಥಿಕೆ ಸೇವೆ ಒದಗಿಸುವವರಿಗೆ ಮಾನ್ಯತೆ ನೀಡುವ ಕೆಲಸ, ಮಧ್ಯಸ್ಥಿಕೆಯ ಬಗ್ಗೆ ತರಬೇತಿ ನೀಡುವ ಸಂಸ್ಥೆಗಳಿಗೆ ಮಾನ್ಯತೆ ನೀಡುವುದು ಈ ಮಂಡಳಿಯ ಕೆಲಸ. ಅಂತರರಾಷ್ಟ್ರೀಯ ಮಧ್ಯಸ್ಥಿಕೆಗಳು ಭಾರತದಲ್ಲಿ ನಡೆದಲ್ಲಿ, ಅದಕ್ಕೆ ಮಾನ್ಯತೆ ನೀಡುವ ಅಂಶ ಕೂಡ ಮಸೂದೆಯಲ್ಲಿ ಇದೆ. ಭಾರತದ ಸಮಾಜ, ಇಲ್ಲಿನ ಸರ್ಕಾರಿ ವ್ಯವಸ್ಥೆ ಹಾಗೂ ಇಲ್ಲಿನ ಸಂಸ್ಥೆಗಳು ಸಣ್ಣ ತಕರಾರುಗಳನ್ನು ಕೂಡ ಕೋರ್ಟ್‌ಗೆ ಒಯ್ಯುವ ಪ್ರವೃತ್ತಿ ಹೊಂದಿವೆ. ಮಧ್ಯಸ್ಥಿಕೆ ಮಸೂದೆಯು ಈ ಪ್ರವೃತ್ತಿಯನ್ನು ನಿರುತ್ತೇಜಿಸುತ್ತದೆ ಎಂದು ಭಾವಿಸಬಹುದು. ಮದ್ರಾಸ್‌ ಹೈಕೋರ್ಟ್‌ ತಮಿಳುನಾಡಿನಲ್ಲಿ ಮಧ್ಯಸ್ಥಿಕೆ ವ್ಯವಸ್ಥೆಯೊಂದನ್ನು ಆರಂಭಿಸಿದೆ. ಅಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಮಧ್ಯಸ್ಥಿಕೆ ಕೇಂದ್ರ ಇದೆ. ದೇಶದಲ್ಲಿ ಇಂತಹ ವ್ಯವಸ್ಥೆ ಇರುವುದು ತಮಿಳುನಾಡಿನಲ್ಲಿ ಮಾತ್ರ. ಇದು ಆ ರಾಜ್ಯದಲ್ಲಿ ವಿಚಾರಣೆಯ ಹಂತದಲ್ಲಿನ ಪ್ರಕರಣಗಳ ಸಂಖ್ಯೆ ಕಡಿಮೆ ಆಗುವಲ್ಲಿ ನೆರವಾಗಿದೆ. ಹೊಸ ಮಸೂದೆಯು ತಮಿಳುನಾಡಿನಲ್ಲಿ ಸಾಧ್ಯವಾಗಿರುವುದನ್ನು ದೇಶದ ಎಲ್ಲೆಡೆ ಸಾಧ್ಯವಾಗಿಸಬಹುದು. ಆದರೆ ಈಗಾಗಲೇ ವಿಚಾರಣೆಯ ಹಂತದಲ್ಲಿ ಇರುವ ಪ್ರಕರಣಗಳಿಗೆ ಇದು ಹೇಗೆ ಅನ್ವಯವಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಮಧ್ಯಸ್ಥಿಕೆಯ ವ್ಯವಸ್ಥೆಯು ನಿಷ್ಪಕ್ಷಪಾತವಾಗಿ ಕೆಲಸ ಮಾಡುವುದನ್ನು ಖಾತರಿಪಡಿಸಬೇಕು. ಆ ವ್ಯವಸ್ಥೆಯು ಜನರ ವಿಶ್ವಾಸವನ್ನು ಸಂಪಾದಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.