| ಕೋವಿಡ್‌: ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಯಲಿ ಕೋವಿಡ್‌ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿರುವುದು ದೃಢಪಟ್ಟರೆ, ಅಧಿಕಾರಿಗಳು ಮಾತ್ರವಲ್ಲ ಅದಕ್ಕೆ ಕಾರಣರಾದ ರಾಜಕೀಯ ನಾಯಕರ ವಿರುದ್ಧವೂ ಕ್ರಮ ಜರುಗಿಸಬೇಕು ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ನೇತೃತ್ವದ ಸರ್ಕಾರವು ಕೋವಿಡ್‌ನಿಂದ ಸಂಭವಿಸಿದ ಸಾವುಗಳ ಸಂಖ್ಯೆಯಲ್ಲಿ 1.20 ಲಕ್ಷದಷ್ಟು ಕಡಿಮೆ ಲೆಕ್ಕ ತೋರಿಸಿರುವುದೂ ಸೇರಿದಂತೆ ಗಂಭೀರ ಸ್ವರೂಪದ ಅಕ್ರಮಗಳನ್ನು ಎಸಗಿದೆ ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ದೋಷಾರೋಪ ಹೊರಿಸಿದೆ. ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ, ಡಾ.ಕೆ. ಸುಧಾಕರ್‌ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆ ಹೆಸರಿನಲ್ಲಿ ಭಾರಿ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಪಿಎಸಿ ವರದಿ ಹೇಳಿದೆ. ಔಷಧಿಗಳು ಹಾಗೂ ವೈದ್ಯಕೀಯ ಯಂತ್ರೋಪಕರಣಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ವರದಿ ಬೊಟ್ಟು ಮಾಡಿದೆ. ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳನ್ನು ಆಧರಿಸಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಈ ಕುರಿತು ಪರಿಶೀಲನೆ ಆರಂಭಿಸಿತ್ತು. 2020 ಹಾಗೂ 2021ರ ಅವಧಿಯಲ್ಲಿ ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕ್ರಮಗಳನ್ನು ಕುರಿತು ಸಮಿತಿಯು ಪರಿಶೀಲನೆಗೆ ಮುಂದಾಗಿತ್ತು. ಆದರೆ, ಆರಂಭದಿಂದಲೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮಿತಿಗೆ ಅಗತ್ಯ ಮಾಹಿತಿ, ದಾಖಲೆಗಳನ್ನು ಒದಗಿಸದೇ ಅಸಹಕಾರ ತೋರಿದ್ದರು. ವಿಶೇಷ ಲೆಕ್ಕಪರಿಶೋಧನೆ ನಡೆಸಬೇಕೆಂಬ ಸಮಿತಿಯ ಕೋರಿಕೆಯನ್ನು ತಳ್ಳಿಹಾಕಲಾಗಿತ್ತು. ಈ ಎಲ್ಲ ಅಡಚಣೆಗಳ ಮಧ್ಯದಲ್ಲೂ ಲಭ್ಯವಿದ್ದ ಮಾಹಿತಿ ಮತ್ತು ದಾಖಲೆಗಳ ಆಧಾರದಲ್ಲಿ ವರದಿಯೊಂದನ್ನು ಸಿದ್ಧಪಡಿಸಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಅದನ್ನು ವಿಧಾನಮಂಡಲಕ್ಕೆ ಒಪ್ಪಿಸಿದೆ. ಕೋವಿಡ್‌ ಸಾಂಕ್ರಾಮಿಕವು ತೀವ್ರವಾಗಿ ಕಾಡುತ್ತಿದ್ದ 2020 ಮತ್ತು 2021ರ ಅವಧಿಯಲ್ಲಿ ರಾಜ್ಯದಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಗೆ ಸಂಬಂಧಿಸಿದ ಮಾಹಿತಿಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ಇರುವುದನ್ನು ಸಮಿತಿ ಗುರುತಿಸಿದೆ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ಸಮಿತಿಗೆ ಒದಗಿಸಿರುವ ಅಂಕಿಅಂಶಗಳ ಪ್ರಕಾರ, 2021ರ ಜನವರಿಯಿಂದ ಜುಲೈವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ 4,26,943 ಸಾವುಗಳು ದಾಖಲಾಗಿವೆ. 2020ರ ಇದೇ ಅವಧಿಯಲ್ಲಿ 2,69,029 ಸಾವುಗಳು ಮಾತ್ರ ದಾಖಲಾಗಿವೆ. 2021ರ ಆಗಸ್ಟ್‌ 24ರವರೆಗೆ ಕೋವಿಡ್‌ನಿಂದ 37,206 ಮಂದಿ ಮಾತ್ರ ಮೃತಪಟ್ಟಿರುವುದು ‘ಮರಣ ಆಡಿಟ್‌’ನಲ್ಲಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಮಿತಿಗೆ ಸ್ಪಷ್ಟೀಕರಣ ನೀಡಿದ್ದರು. ಆರೋಗ್ಯ ಇಲಾಖೆ ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಂಕಿಅಂಶಗಳ ಮಧ್ಯೆ ಗಣನೀಯ ವ್ಯತ್ಯಾಸ ಇರುವುದನ್ನು ಗುರುತಿಸಿರುವ ಸಮಿತಿ, ಆರೋಗ್ಯ ಇಲಾಖೆಯು ಕೋವಿಡ್‌ ಅವಧಿಯಲ್ಲಿನ ಸಾವುಗಳ ಸಂಖ್ಯೆಯಲ್ಲಿ 1.20 ಲಕ್ಷದಷ್ಟು ಕಡಿಮೆ ತೋರಿಸುವ ಮೂಲಕ ಘೋರ ಅಪರಾಧ ಎಸಗಿದೆ ಎಂದು ಅಭಿಪ್ರಾಯಪಟ್ಟಿದೆ. ಐವರ್‌ಮೆಕ್ಟಿನ್‌ ಮಾತ್ರೆಗಳಿಂದ ಕೋವಿಡ್‌ ಸೋಂಕಿತರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಬಳಿಕವೂ 1.10 ಕೋಟಿಯಷ್ಟು ಇದೇ ಮಾತ್ರೆಗಳನ್ನು ಖರೀದಿಸುವ ಮೂಲಕ ರಾಜ್ಯ ಆರೋಗ್ಯ ಇಲಾಖೆ ಲೋಪ ಎಸಗಿತ್ತು. ಅಷ್ಟೇ ಅಲ್ಲದೆ ಈ ಮಾತ್ರೆಗಳ ವಿತರಣೆ ಮತ್ತು ಬಾಕಿ ಉಳಿದ ಮಾತ್ರೆಗಳ ಕುರಿತು ಇಲಾಖೆಯ ಬಳಿ ಸರಿಯಾದ ಮಾಹಿತಿಯೇ ಇರಲಿಲ್ಲ ಎಂಬುದು ಪಿಎಸಿ ವರದಿಯಲ್ಲಿ ಬಹಿರಂಗವಾಗಿದೆ. ದುಬಾರಿ ದರಕ್ಕೆ ಆಂಪೋಟೆರಿಸಿನ್‌ ಲಸಿಕೆ ಖರೀದಿ, ರೆಮ್‌ಡಿಸಿವಿಯರ್‌ ಲಸಿಕೆ ಖರೀದಿಗೆ ₹ 5 ಕೋಟಿ ಹೆಚ್ಚುವರಿ ವೆಚ್ಚ, ಆರೋಗ್ಯ ಇಲಾಖೆಯ ಸಹಾಯವಾಣಿ ಇದ್ದಾಗ್ಯೂ ದುಬಾರಿ ದರ ತೆತ್ತು ಖಾಸಗಿ ಸಹಾಯವಾಣಿ ಸೇವೆಯನ್ನು ಪಡೆದುಕೊಂಡಿರುವುದು, ವೈದ್ಯಕೀಯ ಯಂತ್ರೋಪಕರಣಗಳಿಗೆ ಮಾರುಕಟ್ಟೆ ದರದ ಹಲವು ಪಟ್ಟು ಹೆಚ್ಚು ಪಾವತಿ, ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿದ ಕಂಪನಿಗಳಿಗೆ ಪುನಃ ಗುತ್ತಿಗೆ ನೀಡಿರುವುದು ಸೇರಿದಂತೆ ಹಲವು ಬಗೆಯ ಅವ್ಯವಹಾರಗಳು ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸಮಿತಿ ಹೇಳಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಗಣನೀಯವಾಗಿದ್ದರೂ ‘ಪಿಎಂ–ಕೇರ್ಸ್‌’ ನಿಧಿಯ ಅಡಿಯಲ್ಲಿ ಒದಗಿಸಿದ್ದ 165 ವೆಂಟಿಲೇಟರ್‌ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ವಿತರಿಸಿದ್ದ ಆರೋಗ್ಯ ಇಲಾಖೆಯ ಕ್ರಮವು ಜನದ್ರೋಹಿ ನಿರ್ಧಾರ ಎಂದು ಪಿಎಸಿ ದೂಷಿಸಿದೆ. ವೆಂಟಿಲೇಟರ್‌ಗಳು, ವೈದ್ಯಕೀಯ ಉಪಕರಣಗಳು, ಆಮ್ಲಜನಕ ಮತ್ತು ಔಷಧಿಗಳ ಕೊರತೆ ತೀವ್ರವಾಗಿ ಬಾಧಿಸಲು ಅಧಿಕಾರಿಗಳೇ ಕಾರಣ ಎಂದು ಹೇಳಿದೆ. ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆ ಹೆಸರಿನಲ್ಲಿ ನಡೆದಿರುವ ‘ಹಗರಣ’ದ ಕುರಿತು ಪ್ರತಿಷ್ಠಿತ ಸ್ವಾಯತ್ತ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸುವಂತೆ ಸಮಿತಿ ಶಿಫಾರಸು ಮಾಡಿದೆ. ಪಿಎಸಿ ತನಿಖೆಯಲ್ಲಿ ಪತ್ತೆಯಾಗಿರುವ ಅನೇಕ ಸಂಗತಿಗಳು ಗಂಭೀರವಾಗಿವೆ. ಈ ಕುರಿತು ತನಿಖೆ ನಡೆಯಲೇಬೇಕಿದೆ. ಕೋವಿಡ್‌ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿರುವುದು ದೃಢಪಟ್ಟರೆ ಅಧಿಕಾರಿಗಳು ಮಾತ್ರವಲ್ಲ ಅದಕ್ಕೆ ಕಾರಣರಾದ ರಾಜಕೀಯ ನಾಯಕರ ವಿರುದ್ಧವೂ ಕ್ರಮ ಜರುಗಿಸಬೇಕು. ಕೋವಿಡ್‌ನಿಂದ ಸಂಭವಿಸಿದ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸುವ ದೋಷಪೂರಿತ ಕ್ರಮದಿಂದಾಗಿ ಕೋವಿಡ್‌ ಸಾವುಗಳೆಂದು ದಾಖಲಾಗದ ಪ್ರಕರಣಗಳನ್ನು ಪತ್ತೆಹಚ್ಚಿ, ದಾಖಲಿಸುವುದಕ್ಕೆ ಆದ್ಯತೆ ನೀಡಬೇಕು. ತಪ್ಪು ಕ್ರಮದಿಂದ ಪರಿಹಾರ ವಂಚಿತವಾಗಿರುವ ಸಂತ್ರಸ್ತ ಕುಟುಂಬಗಳನ್ನು ಗುರುತಿಸಿ ಕೋವಿಡ್‌ ಮರಣ ಪರಿಹಾರ ಪಾವತಿಗೆ ಕ್ರಮ ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.