ಸಂಪಾದಕೀಯ: ಚಿಪ್ ತಯಾರಿಕೆಗೆ ಕೇಂದ್ರದ ಉತ್ತೇಜನ;ಸಂದರ್ಭದ ಅಗತ್ಯ,ಸ್ವಾಗತಾರ್ಹ ಕ್ರಮ ಸೆಮಿಕಂಡಕ್ಟರ್‌ಗಳಿಗೆ ಸಂಬಂಧಿಸಿದ ಸಮಾವೇಶವೊಂದು ಗುಜರಾತ್‌ನಲ್ಲಿ ಈಚೆಗೆ ನಡೆಯಿತು. ಅಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಮಾತುಗಳು ಉದ್ಯಮ ಸಮೂಹದ ಗಮನ ಸೆಳೆಯುವಂತೆ ಇವೆ. ದೇಶದ ಸೆಮಿಕಂಡಕ್ಟರ್‌ ಚಿಪ್‌ ತಯಾರಿಕಾ ವಲಯದಲ್ಲಿ ಹೂಡಿಕೆ ಮಾಡುವ, ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಆರಂಭಿಸುವ ಉದ್ಯಮಗಳಿಗೆ ಶೇಕಡ 50ರಷ್ಟು ಹಣಕಾಸಿನ ನೆರವು ಒದಗಿಸಲಾಗುತ್ತದೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಇದು ವಿಶ್ವದ ಹೂಡಿಕೆದಾರರು, ಉದ್ಯಮಿಗಳು ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆಗೆ ಮುಂದಾಗುವಂತೆ ಮಾಡುವಲ್ಲಿ ಬಹಳ ದೊಡ್ಡ ಹೆಜ್ಜೆ. ಸೆಮಿಕಂಡಕ್ಟರ್ ಚಿಪ್‌ ತಯಾರಿಕೆಗೆ ‍ಭಾರತದ ವೇದಾಂತ ಸಮೂಹ ಮತ್ತು ತೈವಾನ್‌ನ ಫಾಕ್ಸ್‌ಕಾನ್‌ ಮಾಡಿಕೊಂಡಿದ್ದ ಪಾಲುದಾರಿಕೆಗೆ ಕೆಲವು ದಿನಗಳ ಹಿಂದಷ್ಟೇ ಅಂತ್ಯ ಹೇಳಿವೆ. ‘ಭಾರತದಲ್ಲಿಯೇ ತಯಾರಾದ ಸೆಮಿಕಂಡಕ್ಟರ್ ಚಿಪ್‌ಗಳು ಇನ್ನು ಎರಡೂವರೆ ವರ್ಷಗಳಲ್ಲಿ ಸಿಗಲಿವೆ’ ಎಂದು ವೇದಾಂತ ಸಮೂಹದ ಅಧ್ಯಕ್ಷ ಅನಿಲ್ ಅಗರವಾಲ್ ಹೇಳಿದ್ದಾರೆ. ಆದರೆ ಚಿಪ್ ತಯಾರಿಕೆಗೆ ತಂತ್ರಜ್ಞಾನ ಪಾಲುದಾರ ಯಾರು ಎಂಬುದನ್ನು ಅವರು ಹೇಳಿಲ್ಲ. ಭಾರತದ ಪಾಲಿಗೆ ಈಗ ಸೆಮಿಕಂಡಕ್ಟರ್‌ ಚಿಪ್‌ಗಳ ಅಗತ್ಯವು ಬಹಳ ದೊಡ್ಡ ಮಟ್ಟದಲ್ಲಿ ಇದೆ. ದೇಶದ ವಾಹನ ತಯಾರಿಕಾ ವಲಯದ ಕಂಪನಿಗಳ ಮಾತುಗಳನ್ನು ಆಲಿಸಿದರೂ ಸಾಕು, ಇಂತಹ ಚಿಪ್‌ಗಳ ಅಗತ್ಯ ಎಷ್ಟಿದೆ ಎಂಬುದು ಅರಿವಿಗೆ ಬರುತ್ತದೆ. ಹೀಗಾಗಿ, ಪ್ರಧಾನಿಯವರ ಘೋಷಣೆಯು ಬಹಳ ಮಹತ್ವದ್ದಾಗುತ್ತದೆ. ಚಿಪ್ ತಯಾರಿಕೆಗೆ ಭಾರಿ ಪ್ರಮಾಣದ ಬಂಡವಾಳದ ಅಗತ್ಯವಿರುವ ಕಾರಣ, ಸರ್ಕಾರದ ಕಡೆಯಿಂದ ಶೇ 50ರಷ್ಟು ನೆರವು ಸಿಗುತ್ತದೆ ಎಂಬುದು ಉದ್ಯಮಿಗಳಿಗೆ ಉತ್ತೇಜನಕಾರಿ ಆಗಬಲ್ಲದು. ಕೋವಿಡ್‌ ನಂತರದಲ್ಲಿ ಸೆಮಿಕಂಡಕ್ಟರ್‌ ಚಿಪ್‌ಗಳ ಕೊರತೆ ಬಗ್ಗೆ ವಿಶ್ವದ ಹಲವೆಡೆಗಳಿಂದ ವರದಿಗಳು ಬರಲಾರಂಭಿಸಿದವು. ಈ ಚಿಪ್‌ಗಳ ತಯಾರಿಕೆಯಲ್ಲಿ ಪ್ರಾಬಲ್ಯ ಹೊಂದಿರುವ ಚೀನಾ ಆಚೆಗೆ ಕೂಡ ಇದರ ತಯಾರಿಕೆಯು ದೊಡ್ಡ ಪ್ರಮಾಣದಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಪ್ರಯತ್ನಗಳು ಆಗುತ್ತಿವೆ. ಭಾರತವು ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್‌ ಉತ್ಪಾದನೆಗೆ ಪೂರಕವಾದ ಪರಿಸರವನ್ನು ನಿರ್ಮಾಣ ಮಾಡುವ ವಿಚಾರವನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಸೆಮಿಕಂಡಕ್ಟರ್ ವಿನ್ಯಾಸಕ್ಕೆ ಪರಿಣತರನ್ನು ಸಿದ್ಧಗೊಳಿಸಲು 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಮುಖ ಕಾಲೇಜುಗಳನ್ನು ಗುರುತಿಸಲಾಗಿದೆ ಎಂದು ಅವರು ಸೆಮಿಕಾನ್‌ ಇಂಡಿಯಾ ಸಮಾವೇಶದಲ್ಲಿಯೇ ಹೇಳಿದ್ದಾರೆ. ಸೆಮಿಕಂಡಕ್ಟರ್ ಚಿಪ್ ತಯಾರಿಸಲು ಮುಂದೆ ಬರುವ ಕಂಪನಿಗಳಿಗೆ ಹಣಕಾಸಿನ ನೆರವು ಹಾಗೂ ಆ ಕಂಪನಿಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲ ಸಜ್ಜುಗೊಳಿಸುವ ಕೆಲಸವು, ದೇಶವು ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ದಾಪುಗಾಲು ಇರಿಸಲು ನೆರವಾಗಬಲ್ಲದು. ಹಾಗೆಯೇ, ಈ ಕ್ರಮಗಳ ಜೊತೆಯಲ್ಲೇ ಇನ್ನಷ್ಟು ಹೆಚ್ಚಿನ ಉತ್ತೇಜನ ಕ್ರಮಗಳು ಕೂಡ ಬೇಕಾಗಬಹುದು. ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕಂಪನಿ ಮೈಕ್ರಾನ್‌ಗೆ ಗುಜರಾತ್‌ನಲ್ಲಿ ತಯಾರಿಕಾ ಘಟಕವೊಂದನ್ನು ಸ್ಥಾಪಿಸಲು ಅಮೆರಿಕ–ಭಾರತದ ನಡುವೆ ಒಪ್ಪಂದವು ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಸಂದರ್ಭದಲ್ಲಿ ಆಗಿದೆ. ಇದು ಬಹಳ ಮಹತ್ವದ್ದು. ಈ ಒಪ್ಪಂದವು ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಪೂರೈಕೆ ವ್ಯವಸ್ಥೆಯ ಪಾಲುದಾರ ಆಗುವತ್ತ ಭಾರತ ಇರಿಸಿದ ಮೊದಲ ಹೆಜ್ಜೆ. ಇದೇ ಬಗೆಯಲ್ಲಿ, ವಿಶ್ವದ ಇತರ ಹಲವು ದೇಶಗಳು ಕೂಡ ಸೆಮಿಕಂಡಕ್ಟರ್‌ ಚಿಪ್ ತಯಾರಿಕೆಗೆ ಉತ್ತೇಜನ ನೀಡುವ ಹಾದಿಯಲ್ಲಿ ಸಾಗಿವೆ. ಕೋವಿಡ್ ನಂತರದ ಜಗತ್ತು ಚೀನಾ ವಿಚಾರದಲ್ಲಿ ಹೆಚ್ಚೆಚ್ಚು ಜಾಗರೂಕವಾಗಿ ನಡೆದುಕೊಳ್ಳುತ್ತಿದೆ. ಸೆಮಿಕಂಡಕ್ಟರ್‌ ಚಿಪ್‌ಗಳಿಗಾಗಿ ಚೀನಾ ಹೊರತುಪಡಿಸಿ, ಬೇರೊಂದು ದೇಶವನ್ನು, ಅದರಲ್ಲೂ ಮುಖ್ಯವಾಗಿ ನಂಬಿಕಸ್ಥ ದೇಶವೊಂದನ್ನು ಅವಲಂಬಿಸಬೇಕು ಎಂಬ ಬಯಕೆಯು ಹಲವು ದೇಶಗಳ ಪ್ರಮುಖರಲ್ಲಿ ಇದೆ. ಈ ಕಾರಣದಿಂದಾಗಿಯೇ, ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಘಟಕಗಳನ್ನು ತಮ್ಮದೇ ನೆಲದಲ್ಲಿ ಆರಂಭಿಸಲು, ಬೇರೆ ಬೇರೆ ಕಂಪನಿಗಳಿಗೆ ಉತ್ತೇಜಕ ಕ್ರಮಗಳನ್ನು ಹಲವು ದೇಶಗಳು ಘೋಷಿಸುತ್ತಿವೆ. ಇದು ಭಾರತದ ಪಾಲಿಗೆ ವಿಶ್ವದರ್ಜೆಯ ಕಂಪನಿಗಳನ್ನು ತನ್ನಲ್ಲಿಗೆ ಆಹ್ವಾನಿಸುವುದಕ್ಕೆ ಒಂದು ತೊಡಕಾಗಿ ‍ಪರಿಣಮಿಸಬಹುದು. ಈ ವಿಚಾರವಾಗಿ ನೀತಿ ನಿರೂಪಕರ ಮಟ್ಟದಲ್ಲಿ ಚಿಂತನೆ ಆಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.