ಸಂಪಾದಕೀಯ | ಮಣಿಪುರದಲ್ಲಿ ನಿಲ್ಲದ ಹಿಂಸೆ: ನಿಭಾಯಿಸುವಲ್ಲಿ ಸೋತ ಸರ್ಕಾರ ಮಾಹಿತಿಯ ಮುಕ್ತ ಹರಿವಿಗೆ ತಡೆ ಒಡ್ಡಿದರೆ, ವದಂತಿಗಳು ಹರಿದಾಡುತ್ತವೆ ಹಾಗೂ ಇವು ಶಾಂತಿ ಹದಗೆಡಲು ಕಾರಣವಾಗುತ್ತವೆ. ಮಣಿಪುರದಲ್ಲಿ ಇಂಟರ್‌ನೆಟ್‌ ಸೇವೆಗಳ ಮೇಲೆ ಮತ್ತೆ ನಿಷೇಧ ಹೇರಲಾಗಿದೆ. ಇಂಟರ್‌ನೆಟ್‌ ಸೇವೆ ಪುನರಾರಂಭಗೊಂಡ 48 ತಾಸುಗಳ ಒಳಗೆ ಮತ್ತೆ ನಿಷೇಧ ಹೇರಿರುವುದು ರಾಜ್ಯವು ಎದುರಿಸುತ್ತಿರುವ ಪರಿಸ್ಥಿತಿ ಎಷ್ಟು ಸಂಕೀರ್ಣವಾಗಿದೆ ಎಂಬುದನ್ನು ತೋರುತ್ತದೆ. ಜೊತೆಗೆ, ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯಕ್ಕೂ ಬೊಟ್ಟು ಮಾಡುತ್ತದೆ. ಕುಕಿ ಸಮುದಾಯದ ಜನರು ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಬಳಿಕ ಮೇ 3ರಂದು ಇಂಟರ್‌ನೆಟ್‌ ಸೇವೆಯ ಮೇಲೆ ಸರ್ಕಾರವು ನಿಷೇಧ ಹೇರಿತ್ತು. ನಂತರದ ಕೆಲವು ತಿಂಗಳು ಹಿಂಸಾಚಾರ ನಿಲ್ಲದ ಕಾರಣ ಇಂಟರ್‌ನೆಟ್‌ ನಿಷೇಧವು ಮುಂದುವರಿದಿತ್ತು. ಕಾಶ್ಮೀರದಲ್ಲಿ ಇಂಟರ್‌ನೆಟ್‌ ಮೇಲೆ ಎರಡು ವರ್ಷ ನಿರಂತರ ನಿಷೇಧ ಹೇರಲಾಗಿತ್ತು; ಅದಾದ ನಂತರ ಮಣಿಪುರದಲ್ಲಿನ ನಿಷೇಧವೇ ಅತೀ ದೀರ್ಘ ಕಾಲದ ನಿಷೇಧವಾಗಿದೆ. ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಸುಧಾರಿಸಿದ ಕಾರಣ’ ಇಂಟರ್‌ನೆಟ್‌ ಸೇವೆಯ ಮೇಲಿನ ನಿಷೇಧ ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಈ ತಿಂಗಳ 23ರಂದು ಮಣಿಪುರ ಸರ್ಕಾರ ಹೇಳಿತ್ತು. ರಾಜ್ಯದಲ್ಲಿನ ಪರಿಸ್ಥಿತಿ ಮತ್ತು ನಿಷೇಧದ ಪರಿಣಾಮಗಳ ಕುರಿತು ಸರ್ಕಾರಕ್ಕೆ ಸರಿಯಾದ ಗ್ರಹಿಕೆಯೇ ಇರಲಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಇಂಟರ್‌ನೆಟ್‌ ಮೇಲಿನ ನಿಷೇಧವು ಪರಿಸ್ಥಿತಿಯನ್ನು ಉತ್ತಮಪಡಿಸುವುದರ ಬದಲಿಗೆ ಇನ್ನಷ್ಟು ಹದಗೆಡಿಸಿದೆ ಎಂಬುದು ವಾಸ್ತವ. ಮಾಹಿತಿಯ ಮುಕ್ತ ಹರಿವಿಗೆ ತಡೆ ಒಡ್ಡಿದರೆ, ವದಂತಿಗಳು ಮತ್ತು ತಪ್ಪು ಮಾಹಿತಿ ಹರಿದಾಡುತ್ತವೆ ಹಾಗೂ ಇವು ಶಾಂತಿ ಹದಗೆಡಲು ಕಾರಣವಾಗುತ್ತವೆ. ಆಧಾರವಿಲ್ಲದ ವದಂತಿಗೆ ಪ್ರತಿಕ್ರಿಯೆಯಾಗಿಯೇ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ನಡೆಸಿ, ಅವರ ಮೇಲೆ ದೌರ್ಜನ್ಯ ಎಸಗಲಾಯಿತು. ಈ ಘಟನೆಯು ಕೆಲವು ವಾರ ಹೊರಜಗತ್ತಿಗೆ ತಿಳಿಯಲೇ ಇಲ್ಲ. ಹಿಂಸೆ ಮತ್ತು ಶಾಂತಿಭಂಗದ ಕೃತ್ಯಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ಇಬ್ಬರು ಯುವಕರ ಮೃತದೇಹಗಳದ್ದು ಎಂದು ಹೇಳಲಾದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಿಗೆ ವಿದ್ಯಾರ್ಥಿಗಳು ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯು ಹಿಂಸೆಗೆ ತಿರುಗಿದೆ. ಅದರ ಪರಿಣಾಮವಾಗಿ ಇಂಟರ್‌ನೆಟ್‌ ಮೇಲೆ ಪುನಃ ನಿಷೇಧ ಹೇರಲಾಗಿದೆ. ಮೈತೇಯಿ ಮತ್ತು ಕುಕಿ ಸಮುದಾಯದ ಜನರ ನಡುವಣ ಅಪನಂಬಿಕೆ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ ಮತ್ತು ಎರಡೂ ಸಮುದಾಯಗಳು ಪರಸ್ಪರ ಸಂವಹನ ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿ ದೂರವಾಗಿವೆ. ಈ ವಿಭಜನೆಯು ಎಷ್ಟೊಂದು ದಟ್ಟವಾಗಿದೆ ಎಂದರೆ, ಎರಡೂ ಸಮುದಾಯಗಳು ವಾಸಿಸುವ ಪ್ರದೇಶಗಳ ನಡುವೆ ಮೀಸಲು ಪ್ರದೇಶವನ್ನು ಸೃಷ್ಟಿಸಿ ನಡುವೆ ಅಲ್ಲಿ ಭದ್ರತಾ ಪಡೆಗಳ ಪಹರೆಯನ್ನೂ ಏರ್ಪಡಿಸಲಾಗಿದೆ. ಆದರೆ, ಈ ವ್ಯವಸ್ಥೆಯನ್ನು ಮೀರಿಯೂ ಹಿಂಸೆ ನಡೆದಿದೆ. ಕೆಲವು ಸಾಮಾಜಿಕ ಸಂಘಟನೆಗಳು ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಮನಃಸ್ಥಿತಿ ಬೆಳೆಸಿಕೊಂಡಿವೆ. ಮೈತೇಯಿ ಸಮುದಾಯದ ಮಹಿಳೆಯರ ಗುಂಪುಗಳು ಮತ್ತು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿವೆ ಮತ್ತು ಹಿಂಸಾಕೃತ್ಯಗಳನ್ನೂ ಎಸಗಿವೆ. ಭದ್ರತಾ ಪಡೆಗಳು ಅದರಲ್ಲೂ ವಿಶೇಷವಾಗಿ ಅಸ್ಸಾಂ ರೈಫಲ್ಸ್‌ ಅನ್ನು ಮುಖಾಮುಖಿಯಾಗಿವೆ. ಹಿಂಸೆ ಮತ್ತು ಅಪರಾಧ ಕೃತ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೆ ಒಳಗಾದ ವ್ಯಕ್ತಿಗಳನ್ನು ಬಲವಂತವಾಗಿ ಬಿಡುಗಡೆ ಮಾಡುವುದಕ್ಕೂ ಈ ಗುಂಪುಗಳು ಪ್ರಯತ್ನಿಸಿವೆ. ಕೇಂದ್ರೀಯ ಪಡೆಗಳು ಮತ್ತು ರಾಜ್ಯ ಪೊಲೀಸ್‌ ಇಲಾಖೆಯ ನಡುವೆ ಬಿರುಕು ಮೂಡಿದೆ. ರಾಜ್ಯ ಪೊಲೀಸ್‌ ಇಲಾಖೆ, ಆಡಳಿತ ವ್ಯವಸ್ಥೆ ಮತ್ತು ಎನ್‌. ಬಿರೇನ್‌ ಸಿಂಗ್‌ ನೇತೃತ್ವದ ಸರ್ಕಾರವು ಮೈತೇಯಿ ಸಮುದಾಯದ ಜೊತೆಗೆ ಗುರುತಿಸಿಕೊಂಡಿವೆ. ಈ ಕಾರಣದಿಂದಾಗಿಯೇ ಕುಕಿ ಸಮುದಾಯದ ವಿಶ್ವಾಸವನ್ನು ಕಳೆದುಕೊಂಡಿವೆ. ತಮಗೆ ಪ್ರತ್ಯೇಕ ಆಡಳಿತಾತ್ಮಕ ವಲಯ ಬೇಕು ಎಂದು ಕುಕಿ ಸಮುದಾಯಗಳ ಜನರು ಆಗ್ರಹಿಸಿದ್ದಾರೆ. ಮೈತೇಯಿ ಸಮುದಾಯದ ಪರವಾದ ‍ಪೂರ್ವಗ್ರಹ ಹೊಂದಿದೆ ಮತ್ತು ಕುಕಿ ಸಮುದಾಯದ ಭಾವನೆಗಳು ಹಾಗೂ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಗೊತ್ತಾಗುವ ರೀತಿಯ ವರ್ತನೆಯನ್ನು ಸರ್ಕಾರವು ತೋರಿದೆ. ರಾಜ್ಯ ಸರ್ಕಾರವನ್ನು ಬೆಂಬಲಿಸುವುದನ್ನು ಮುಂದುವರಿಸಿರುವ ಕೇಂದ್ರ ಸರ್ಕಾರವು ಸಕ್ರಿಯ ಮಧ್ಯಪ್ರವೇಶ ನಡೆಸಿಲ್ಲ. ಕಿತ್ತಾಟದಲ್ಲಿ ತೊಡಗಿರುವ ಎರಡೂ ಸಮುದಾಯಗಳ ನಡುವೆ ಸಂವಹನ ಸಾಧ್ಯವಾಗದೇ ಇದ್ದರೆ, ಬಿರುಕು ಮುಚ್ಚದಿದ್ದರೆ, ಗಾಯಗಳು ಉಪಶಮನ ಆಗದೇ ಇದ್ದರೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಯ ಸಾಧ್ಯತೆ ಕ್ಷೀಣವೇ ಆಗಿರಲಿದೆ. ಆದರೆ, ಈ ದಿಸೆಯಲ್ಲಿ ಗಂಭೀರ ಪ್ರಯತ್ನ ನಡೆದಿಲ್ಲ. ಇದು ಸಾಧ್ಯವಾಗುವಂತೆ ಮಾಡುವ ರಾಜಕೀಯ ಮತ್ತು ನೈತಿಕ ವಿಶ್ವಾಸಾರ್ಹತೆಯನ್ನು ರಾಜ್ಯ ಸರ್ಕಾರವು ಉಳಿಸಿಕೊಂಡಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.