ಸಂಪಾದಕೀಯ: ಮಹಿಳಾ ಮೀಸಲು– ತಕ್ಷಣದ ಅನುಷ್ಠಾನ ಏಕೆ ಸಾಧ್ಯವಿಲ್ಲ? ಮಹಿಳಾ ಮೀಸಲು ಮಸೂದೆಗೆ ಸಂಸತ್ತಿನ ಉಭಯ ಸದನಗಳು ಅಂಗೀಕಾರದ ಮುದ್ರೆಯನ್ನು ಒತ್ತಿರುವುದರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಳದ ಹಾದಿ ಸುಗಮವಾಗಿದೆ. ಆದರೆ, ಗುರಿ ತಲುಪಲು ಇನ್ನೂ ತುಂಬಾ ಕಾಲಾವಕಾಶ ಬೇಕಾಗಿದೆ ಎಂಬ ಸಂಗತಿಯನ್ನು ನಾವು ಮರೆಯುವಂತಿಲ್ಲ. ಈ ಮಸೂದೆಯು ಇದಕ್ಕಿಂತ ಮೊದಲು ಹಲವು ಸ್ವರೂಪಗಳಲ್ಲಿ ಹಾಗೂ ಹಲವು ಬಾರಿ ಸಂಸತ್ತಿನಲ್ಲಿ ಮಂಡನೆಯಾಗಿತ್ತು ಮತ್ತು ರಾಜಕೀಯ ಪಕ್ಷಗಳು ಬದ್ಧತೆ ಪ್ರದರ್ಶಿಸದ ಕಾರಣ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ಮಹಿಳಾ ಮೀಸಲಾತಿ ಸಂಬಂಧ 2014 ಮತ್ತು 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಬಿಜೆಪಿ, ಇಷ್ಟೊಂದು ವಿಳಂಬವಾಗಿ ಈಗ ತನ್ನ ಭರವಸೆಯನ್ನು ಈಡೇರಿಸಲು ಹೊರಟಿದೆ. ವಿವಿಧ ಪಕ್ಷಗಳು ನೀಡಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ ಈ ಮಸೂದೆಗೆ ವ್ಯಾಪಕ ಬೆಂಬಲ ಇರುವುದು ಸುಸ್ಪಷ್ಟ. ವಾಸ್ತವವಾಗಿ, ಕಾಂಗ್ರೆಸ್‌ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳೂ ಈ ಮಸೂದೆಗೆ ತಾವೇ ಕಾರಣ ಎಂದು ಹೇಳಿಕೊಳ್ಳುತ್ತಿವೆ. 2010ರಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಆ ಸದನದ ಒಪ್ಪಿಗೆಯನ್ನೂ ಪಡೆಯಲಾಗಿತ್ತು. ತಮ್ಮ ಪಕ್ಷದ ನಾಯಕರೇ ಮಸೂದೆ ಪರವಾಗಿ ಮೊದಲ ಬಾರಿಗೆ ಧ್ವನಿ ಎತ್ತಿ, ಈ ಬೇಡಿಕೆಗೆ ಒಂದು ಆಂದೋಲನದ ರೂಪ ನೀಡಿದ್ದು ಎಂದು ಎಲ್ಲ ಪಕ್ಷಗಳು ವಾದಿಸುತ್ತಿವೆ. ಇರಲಿ, ಲೋಕಸಭೆಯಲ್ಲಿ ಮೊನ್ನೆ ನಡೆದ ಚರ್ಚೆಯ ಕಾಲಕ್ಕೆ ಮಹಿಳಾ ಮೀಸಲಾತಿಯಲ್ಲಿ ಇತರ ಹಿಂದುಳಿದ ವರ್ಗಗಳಿಗೂ (ಒಬಿಸಿ) ಒಳಮೀಸಲಾತಿ ಕಲ್ಪಿಸಬೇಕು ಎಂಬ ಆಗ್ರಹ ಜೋರಾಗಿ ಕೇಳಿಬಂದಿದೆ. ಕಾಂಗ್ರೆಸ್‌ ನಾಯಕರಂತೂ ಮುಂಚೂಣಿಯಲ್ಲಿ ನಿಂತು ಈ ಬೇಡಿಕೆಯನ್ನು ಪ್ರಬಲವಾಗಿ ಮಂಡಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಒಟ್ಟು ಸ್ಥಾನಗಳಲ್ಲಿ ಶೇ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು (ಎಸ್‌ಸಿ ಮತ್ತು ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳಲ್ಲಿಯೂ ಮಹಿಳಾ ಮೀಸಲಾತಿ ಸೌಲಭ್ಯ ಒದಗಿಸುವುದೂ ಸೇರಿದಂತೆ) ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಈ ಮೀಸಲಾತಿ ಸೌಲಭ್ಯವು ಹದಿನೈದು ವರ್ಷಗಳವರೆಗೆ ಕಡ್ಡಾಯವಾಗಿ ಅನುಷ್ಠಾನದಲ್ಲಿರಬೇಕು. ಮುಂದೆ ಬೇಕಾದರೆ ಸಂಸತ್ತು ಅದರ ಕಾಲಾವಧಿಯನ್ನು ವಿಸ್ತರಿಸಬಹುದು ಎಂದೂ ಮಸೂದೆ ಹೇಳುತ್ತದೆ. ಪ್ರತಿಸಲ ಕ್ಷೇತ್ರ ಪುನರ್‌ವಿಂಗಡನೆ ಪ್ರಕ್ರಿಯೆ ಮುಗಿದ ಬಳಿಕ ರೋಸ್ಟರ್‌ ಪದ್ಧತಿಗೆ ಅನುಗುಣವಾಗಿ ಮೀಸಲು ಕ್ಷೇತ್ರಗಳನ್ನು ಮರುನಿಗದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಮಸೂದೆಯು ಅಂಗೀಕಾರಗೊಂಡ ನಂತರ ನಡೆಯುವ ಮೊದಲ ಜನಗಣತಿಯ ಆಧಾರದಲ್ಲಿ, ಕ್ಷೇತ್ರ ಪುನರ್‌ವಿಂಗಡನೆ ಪ್ರಕ್ರಿಯೆಯನ್ನು ನಡೆಸಿದ ಬಳಿಕವಷ್ಟೇ ಈ ಮೀಸಲು ಸೌಲಭ್ಯ ಅನುಷ್ಠಾನಕ್ಕೆ ಬರಲಿದೆ. ಮಹಿಳಾ ಮೀಸಲಾತಿ ಮಸೂದೆಯು ಸ್ವಾಗತಾರ್ಹ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದೇ ಸಂದರ್ಭದಲ್ಲಿ ಮಸೂದೆ ಕುರಿತು ಹಲವು ಪ್ರಶ್ನೆಗಳೂ ಕಾಡುತ್ತಿವೆ. ಈ ಮಸೂದೆಯ ವಿಷಯವಾಗಿ ಸರ್ಕಾರ ಇಷ್ಟೊಂದು ಸುದೀರ್ಘ ಅವಧಿಯವರೆಗೆ ಏನೂ ಮಾಡದೆ ಸುಮ್ಮನಿದ್ದು, ಈಗ ಏಕಾಏಕಿ ಮಂಡಿಸಿದ್ದು ಏಕೆ? ಲೋಕಸಭೆ ಚುನಾವಣೆ ಇನ್ನೇನು ಹತ್ತಿರದಲ್ಲಿರುವಾಗ ವಿಶೇಷ ಅಧಿವೇಶನ ಕರೆದು ಮಸೂದೆ ಮಂಡಿಸಲು ಕಾರಣವೇನು? ಚುನಾವಣಾ ಲಾಭದ ಲೆಕ್ಕಾಚಾರವೇ ಈ ನಡೆಗೆ ಕಾರಣ ಎನ್ನುವುದು ಎದ್ದುಕಾಣುವ ಅಂಶವಾದರೂ ಇದರಿಂದ ಮಸೂದೆಯ ಮಹತ್ವವೇನೂ ಕಡಿಮೆಯಾಗುವುದಿಲ್ಲ. ಮೀಸಲು ಅನುಷ್ಠಾನವೇ ಇಲ್ಲಿರುವ ಅತ್ಯಂತ ಪ್ರಮುಖ ಪ್ರಶ್ನೆ. ಸದ್ಯದ ಸನ್ನಿವೇಶದಲ್ಲಿ, ಈ ಮಸೂದೆಯು ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ತಾತ್ವಿಕವಾಗಿ ಒಪ್ಪಿಗೆ ನೀಡುತ್ತದೆ ಅಷ್ಟೆ. ತಕ್ಷಣದಲ್ಲಿ ಅದು ಅನುಷ್ಠಾನಕ್ಕೆ ಬರುವುದಿಲ್ಲ. ಮುಂದಿನ ಜನಗಣತಿ ಮುಗಿದು, ಅದರ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡನೆಯಾದ ಬಳಿಕವಷ್ಟೇ ಮಹಿಳೆಯರಿಗೆ ಮೀಸಲು ಸೌಲಭ್ಯ ಸಿಗಲಿದೆ. ಮುಂದಿನ ಜನಗಣತಿ ಯಾವಾಗ ಎನ್ನುವುದು ಇನ್ನೂ ನಿಶ್ಚಿತವಿಲ್ಲ. ಅಲ್ಲದೆ, ಕ್ಷೇತ್ರ ಪುನರ್‌ವಿಂಗಡನೆ ಪ್ರಕ್ರಿಯೆ ವಿವಾದವಿಲ್ಲದೆ ಸುಸೂತ್ರವಾಗಿ ನಡೆದೀತು ಎಂಬ ನಿರೀಕ್ಷೆಯೂ ಇಲ್ಲ. ಹೀಗಾಗಿ ಮುಂದಿನ ಕೆಲವು ವರ್ಷಗಳವರೆಗೆ ಮೀಸಲು ಸೌಲಭ್ಯ ದಕ್ಕುವುದಿಲ್ಲ. 2039ರವರೆಗೂ ಮೀಸಲು ಅನುಷ್ಠಾನಗೊಳ್ಳುವುದು ಅನುಮಾನ ಎಂಬ ಮಾತುಗಳೂ ಕೇಳಿಬರುತ್ತಿವೆ. ಆ ವೇಳೆಗೆ, ಸದ್ಯದ ಶಾಸನ ರಚನೆ ಪ್ರಕ್ರಿಯೆಗಳಲ್ಲಿಯೂ ಹಲವು ಮಾರ್ಪಾಡುಗಳು ಆಗಿರಲಿಕ್ಕೂ ಸಾಕು. ಹೀಗಾಗಿ ಮಹಿಳಾ ಮೀಸಲಾತಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುವಾಗಿಸುವ ದಿಸೆಯಲ್ಲಿ ಸರ್ಕಾರ ಮತ್ತು ಶಾಸನ ರಚನಾ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ರಾಜಕೀಯ ಪಕ್ಷಗಳು ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.