ಸಂಪಾದಕೀಯ: ಬ್ಯಾಂಕುಗಳಿಗೆ ಆರ್‌ಬಿಐ ಮಾರ್ಗಸೂಚಿ- ಪರಿಣಾಮಕಾರಿಯಾಗಿ ಜಾರಿಗೆ ಬರಲಿ ಆಗಸ್ಟ್ ತಿಂಗಳ ಎರಡನೆಯ ವಾರದಲ್ಲಿ ಸಭೆ ಸೇರಿದ್ದ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ಗ್ರಾಹಕರ ಹಿತದೃಷ್ಟಿಯಿಂದ ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿತು. ಬ್ಯಾಂಕ್‌ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಎನ್‌ಬಿಎಫ್‌ಸಿ) ಸಾಲ ಪಡೆದಿರುವವರಿಗೆ, ನಿಶ್ಚಿತ ಬಡ್ಡಿ ದರ ವ್ಯವಸ್ಥೆಗೆ ಬದಲಾಗಲು ಅವಕಾಶ ಕೊಡಬೇಕು ಎಂಬುದು ಅದರಲ್ಲಿ ಒಂದು. ಈ ತೀರ್ಮಾನದ ಮುಂದಿನ ಹೆಜ್ಜೆಯಾಗಿ ಆರ್‌ಬಿಐ ಈಗ ವಿಸ್ತೃತ ನಿಯಮಾವಳಿಗಳನ್ನು ಪ್ರಕಟಿಸಿದೆ. ಇವು ಡಿಸೆಂಬರ್‌ 31ಕ್ಕೆ ಮೊದಲು ಜಾರಿಗೆ ಬರಲಿವೆ ಎಂದು ಆರ್‌ಬಿಐ ಹೇಳಿದೆ. 2022ರ ಮೇ ತಿಂಗಳಿನಿಂದ ರೆಪೊ ದರವು ಹೆಚ್ಚುತ್ತ ಬಂದಿರುವ ಪರಿಣಾಮವಾಗಿ, ಬ್ಯಾಂಕ್‌ ಸಾಲದ ಮೇಲಿನ ಬಡ್ಡಿ ದರ ಕೂಡ ಹೆಚ್ಚಾಗಿದೆ. ಕಡಿಮೆ ಬಡ್ಡಿ ದರ ಇದ್ದ ಸಂದರ್ಭದಲ್ಲಿ ವಿವಿಧ ಬಗೆಯ ಸಾಲಗಳನ್ನು ಪಡೆದವರ ಮಾಸಿಕ ಕಂತುಗಳ (ಇಎಂಐ) ಮೊತ್ತ ಹೆಚ್ಚಾಗಿದೆ. ಇನ್ನು ಕೆಲವು ಪ್ರಕರಣಗಳಲ್ಲಿ, ಸಾಲದ ಮರು‍ಪಾವತಿ ಅವಧಿ ಹೆಚ್ಚಾಗಿದೆ. ಕೆಲವು ಅಪರೂಪದ ಪ್ರಕರಣಗಳಲ್ಲಿ, ಇಎಂಐ ಮೊತ್ತವು ಮೊದಲಿನಷ್ಟೇ ಉಳಿದುಕೊಂಡಿದ್ದರೂ, ಬಡ್ಡಿ ಹೆಚ್ಚಳದ ಪರಿಣಾಮವಾಗಿ ಆ ಇಎಂಐ ಮೊತ್ತವು ಸಾಲದ ಅಸಲಿನ ಮೇಲೆ ಪ್ರತಿ ತಿಂಗಳು ಬರುವ ಬಡ್ಡಿಯನ್ನು ತೀರಿಸಲಿಕ್ಕೂ ಸಾಕಾಗದಂತೆ ಆಗಿದೆ. ಅಂದರೆ, ಇಎಂಐ ಮೊತ್ತವನ್ನು ಅಷ್ಟೇ ಉಳಿಸಿಕೊಂಡರೆ, ವ್ಯಕ್ತಿ ಸಾಲವನ್ನು ತೀರಿಸಲು ಸಾಧ್ಯವೇ ಆಗದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಪ್ರಕರಣಗಳಲ್ಲಿ, ನೌಕರ ವರ್ಗದವರು ಪಡೆದ ಸಾಲದ ಮರುಪಾವತಿ ಅವಧಿ ವಿಸ್ತರಣೆ ಕಂಡು, ನೌಕರ ನಿವೃತ್ತಿಯಾದ ನಂತರವೂ ಸಾಲದ ಕಂತುಗಳನ್ನು ಕಟ್ಟಬೇಕಾದ ಸ್ಥಿತಿ ಇದೆ. ಇಎಂಐ ಮೊತ್ತ, ಮರುಪಾವತಿ ಅವಧಿ ವಿಸ್ತರಣೆಯಂತಹ ವಿಷಯಗಳನ್ನು ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ತಿಳಿಸಿಲ್ಲ ಎಂಬ ದೂರುಗಳು ಇವೆ. ಇವುಗಳಿಗೆ ಕಡಿವಾಣ ಹಾಕುವ ಹಾಗೂ ಗ್ರಾಹಕರು ಶಾಶ್ವತವಾಗಿ ಸಾಲದ ಸುಳಿಯಲ್ಲಿ ಸಿಲುಕಬಾರದು ಎಂಬ ಉದ್ದೇಶದಿಂದ ಆರ್‌ಬಿಐ ಈಗ ಈ ನಿಯಮಾವಳಿಗಳನ್ನು ಹೊರಡಿಸಿದೆ. ‘ರೆಪೊ ದರದಲ್ಲಿ ಆಗುವ ಬದಲಾವಣೆಗಳು ಇಎಂಐ ಮೊತ್ತ ಹಾಗೂ ಸಾಲದ ಮರುಪಾವತಿ ಅವಧಿಯ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ಹಣಕಾಸು ಸಂಸ್ಥೆಗಳು ಸಾಲ ಮಂಜೂರು ಮಾಡುವಾಗ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ನಂತರ, ಇಎಂಐ ಹೆಚ್ಚಳ ಅಥವಾ ಮರುಪಾವತಿ ಅವಧಿಯ ವಿಸ್ತರಣೆಯನ್ನು ಸೂಕ್ತ ರೀತಿಯಲ್ಲಿ ತಕ್ಷಣವೇ ತಿಳಿಸಬೇಕು’ ಎಂದು ಆರ್‌ಬಿಐ ತಾಕೀತು ಮಾಡಿರುವುದು ಸ್ವಾಗತಾರ್ಹ. ಹಣಕಾಸು ಸಾಕ್ಷರತೆ ಕಡಿಮೆ ಇರುವ ಕಾರಣ, ರೆಪೊ ದರ ಹಾಗೂ ಅದರಲ್ಲಿನ ಬದಲಾವಣೆಗಳಿಂದ ಆಗುವ ಪರಿಣಾಮಗಳ ಬಗ್ಗೆ ಅರಿವಿನ ಕೊರತೆ ಇದೆ. ತಾವು ಸಾಲ ಬಯಸಿದ ಸಂದರ್ಭದಲ್ಲಿದ್ದ ಕಡಿಮೆ ಪ್ರಮಾಣದ ಬಡ್ಡಿಯನ್ನು ಕಂಡು, ಆ ಬಡ್ಡಿ ದರಕ್ಕೆ ಸಾಲ ಪಡೆದು, ಬದಲಾದ ಪರಿಸ್ಥಿತಿಯಲ್ಲಿ ಮರುಪಾವತಿ ಅವಧಿ ವಿಸ್ತರಣೆಯಾಗಿ ಅಥವಾ ಇಎಂಐ ದುಬಾರಿಯಾಗಿ ಸಂಕಷ್ಟಕ್ಕೆ ಸಿಲುಕಿದವರು ಇದ್ದಾರೆ. ಆದರೆ, ಈಗ ಆರ್‌ಬಿಐ ಹೊರಡಿಸಿರುವ ಮಾರ್ಗಸೂಚಿಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಲ್ಲಿ, ಇಂತಹ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬಹುದು. ಬ್ಯಾಂಕ್ ಹಾಗೂ ಎನ್‌ಬಿಎಫ್‌ಸಿಗಳಿಗೆ ಆರ್‌ಬಿಐ ನೀಡಿರುವ ಇನ್ನೊಂದು ಸೂಚನೆ, ‘ದಂಡದ ರೂಪದಲ್ಲಿ ಬಡ್ಡಿ’ ವಸೂಲು ಮಾಡುವುದಕ್ಕೆ ಸಂಬಂಧಿಸಿದೆ. ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿಗಳು ತಮ್ಮ ವರಮಾನ ಹೆಚ್ಚಿಸಿಕೊಳ್ಳುವ ಕ್ರಮವಾಗಿ ‘ದಂಡದ ರೂಪದಲ್ಲಿ ಬಡ್ಡಿ’ ವಿಧಿಸುವ ಮಾರ್ಗ ತುಳಿಯುತ್ತಿರುವುದನ್ನು ತಡೆಯಲು ಆರ್‌ಬಿಐ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಸಾಲ ಮರುಪಾವತಿ ಯಾವುದೇ ಕಾರಣಕ್ಕೆ ವಿಳಂಬವಾದರೆ ದಂಡ ಶುಲ್ಕವನ್ನು ಮಾತ್ರ ವಸೂಲು ಮಾಡಬೇಕು ಎಂದು ಸ್ಪಷ್ಟಪಡಿಸಿದೆ. ಗ್ರಾಹಕರು ಹಣಕಾಸಿನ ಸಂಕಷ್ಟಕ್ಕೆ ಸಿಲುಕಿ ಸಾಲ ಮರುಪಾವತಿಯಲ್ಲಿ ತಪ್ಪಬಹುದು. ಅಂಥವರಿಗೆ ದಂಡದ ರೂಪದಲ್ಲಿ ಹೆಚ್ಚುವರಿ ಬಡ್ಡಿಯ ಹೊರೆಯನ್ನು ಹೊರಿಸುವುದು ಮಾನವೀಯ ಕ್ರಮವಾಗುವುದಿಲ್ಲ. ಈ ಎಲ್ಲ ಸೂಚನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರುವ ಜೊತೆಯಲ್ಲಿಯೇ, ಈ ನಿಯಮಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವ ಕೆಲಸ ಕೂಡ ಆಗಬೇಕು. ಇದು ದೊಡ್ಡ ಮಟ್ಟದಲ್ಲಿ ಆಗಬೇಕು. ಈ ಕೆಲಸವನ್ನು ಆರ್‌ಬಿಐ ಮತ್ತು ಹಣಕಾಸು ಸಂಸ್ಥೆಗಳು ಜೊತೆಯಾಗಿ ಮಾಡಬಹುದು. ಆಗ ಮಾತ್ರ ಆರ್‌ಬಿಐ ಉದ್ದೇಶ ಪೂರ್ಣ ಪ್ರಮಾಣದಲ್ಲಿ ಈಡೇರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.