ಸಂಪಾದಕೀಯ: ಚಂದ್ರನೆಲಕ್ಕೆ ಭಾರತದ ಪದಾರ್ಪಣ- ಹೊಸ ಸಾಧ್ಯತೆಗಳ ಹನುಮಲಂಘನ ಚಂದ್ರನ ಮೇಲೆ ವಿಕ್ರಮ್‌ ಹೂವಿನಂತೆ ಇಳಿದಿದ್ದನ್ನು ಕಂಡು ಇಡೀ ದೇಶವೇ ಸಂಭ್ರಮಿಸಿದೆ. ನಮ್ಮ ನಮ್ಮೊಳಗಿನ ಎಲ್ಲ ಭೇದಗಳನ್ನು ಬದಿಗೊತ್ತಿ ಇಡೀ ಭಾರತವೇ ಏಕತ್ರವಾಗಿ ಜೈಕಾರ ಹಾಕಿದ್ದು, ಮೇಲಾಗಿ ಜಗತ್ತಿನಾದ್ಯಂತ ಅದು ಮೊಳಗಿದ್ದು ಇತ್ತೀಚಿನ ದಶಕಗಳಲ್ಲಿ ಇದೇ ಮೊದಲಿರಬೇಕು. ಹಾಗಾಗಿ, 23.8.23 ಎಂಬುದು ಮರೆಯಲಾಗದ ದಿನವಾಗಿ ಚರಿತ್ರೆಯಲ್ಲಿ ದಾಖಲಾಗಿ ಉಳಿಯಲಿದೆ. ಚಂದ್ರನ ಮೇಲೆ ನವಿರಾಗಿ ಇಳಿಯಲು ಜಪಾನ್‌ ದೇಶಕ್ಕೆ ಈ ನಾಲ್ಕು ವರ್ಷಗಳಲ್ಲಿ ಸಾಧ್ಯವಾಗಲಿಲ್ಲ; ದಕ್ಷಿಣ ಕೊರಿಯಾಕ್ಕೆ, ಇಸ್ರೇಲಿಗೂ ಸಾಧ್ಯವಾಗಿರಲಿಲ್ಲ. ಅಷ್ಟೇಕೆ, ರಷ್ಯನ್ನರ ಇಳಿಯಂತ್ರ ‘ಲೂನಾ–25’ ಕೂಡ ಮೊನ್ನೆಯಷ್ಟೇ ಧೊಪ್ಪೆಂದು ಬಿದ್ದಿದೆ. ತಂತ್ರಜ್ಞಾನದಲ್ಲಿ ದಾಪುಗಾಲಿಡುತ್ತಲೇ ಬಂದಿದ್ದ ದೇಶಗಳು ಎಡವಿದ ಲೋಕದಲ್ಲಿ ಭಾರತವೂ ಎಡವಿತ್ತಾದರೂ ಅದನ್ನೇ ಯಶಸ್ಸಿನ ಸೋಪಾನವನ್ನಾಗಿಸಿ ಮತ್ತೆ ಮೇಲೆದ್ದು ಈಗ ದೃಢವಾದ ಹೆಜ್ಜೆ ಮೂಡಿಸಿದೆ. ಅದೂ ದುರ್ಭರ ದಕ್ಷಿಣ ಧ್ರುವದಲ್ಲಿ ಬರೀ 615 ಕೋಟಿ ರೂಪಾಯಿಗಳ ನಗಣ್ಯ ವೆಚ್ಚದಲ್ಲಿ ಇದನ್ನು ಸಾಧ್ಯವಾಗಿಸಿದ್ದು ಮುಂದೆ ಬಾಹ್ಯಾಕಾಶದತ್ತ ವಾಣಿಜ್ಯದ ಹೆಬ್ಬಾಗಿಲನ್ನೇ ತೆರೆಯಬಹುದಾಗಿದೆ. ಭಾರತೀಯ ಪ್ರಚ್ಛನ್ನ ಪ್ರತಿಭೆಗಳು ನಮ್ಮ ನೆಲದಲ್ಲಿ ಮಂಕಾಗಿದ್ದರೂ ವಿದೇಶಿ ನೆಲದಲ್ಲಿ ಪ್ರಜ್ವಲಿಸುತ್ತವೆ ಎಂಬ ಮಿಥ್ಯೆಯನ್ನು ಹಿಂದಿನಿಂದಲೂ ಭಗ್ನಗೊಳಿಸುತ್ತಲೇ ಬೆಳೆದಿದ್ದು ಇಸ್ರೊ ಸಂಸ್ಥೆ. ಅಂದು 1963ರಲ್ಲಿ ಸೈಕಲ್‌ ಮೇಲೆ ಕ್ಷಿಪಣಿಯ ಬಿಡಿಭಾಗಗಳನ್ನು, ನಂತರ ಎತ್ತಿನ ಬಂಡಿಯಲ್ಲಿ ಆಪಲ್‌ ಉಪಗ್ರಹದ ಮಾದರಿಯನ್ನು ಸಾಗಿಸುತ್ತ ಸಾಧನೆಯ ದಾರಿಯಲ್ಲಿ ಮೇಲೇರುತ್ತ ಇಸ್ರೊ ವಿಜ್ಞಾನಿಗಳ ಪಡೆ ಚಂದ್ರನ ಮೇಲೂ ಬಾವುಟವನ್ನು ನೆಟ್ಟು ದೇಶಕ್ಕೇ ಹೆಮ್ಮೆ ತಂದಿದೆ. ನಮ್ಮಲ್ಲೂ ಪ್ರತಿಭೆಗೆ, ಪರಿಶ್ರಮಕ್ಕೆ ಅಂಕುಶವಿಲ್ಲ ಎಂಬ ಭರವಸೆ ಯುವಮನಸ್ಸುಗಳಲ್ಲಿ ಅರಳುವಂತೆ ಮಾಡಿದೆ. 1969ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ನೀಲ್‌ ಆರ್ಮ್‌ಸ್ಟ್ರಾಂಗ್‌, ‘ಮನುಷ್ಯನೊಬ್ಬನಿಗೆ ಇದೊಂದು ಪುಟ್ಟ ಹೆಜ್ಜೆ; ಆದರೆ ಮನುಕುಲಕ್ಕೆ ಇದು ಹನುಮಲಂಘನ’ ಎಂದು ಹೇಳಿದ್ದು ಅಮರವಾಣಿ ಎನ್ನಿಸಿದೆ. ಈಗಿನ ಚಂದ್ರಯಾನ–3ರ ಯಶಸ್ಸು ಕೂಡ ಭಾರತದ ಮಹಾಕನಸುಗಳನ್ನು ನನಸು ಮಾಡುವ ದಿಸೆಯಲ್ಲಿ ಹನುಮಲಂಘನವೇ ಆಗಬಹುದಾಗಿದೆ. ಈಗಾಗಲೇ ಸುಮಾರು 140 ನವೋದ್ಯಮಗಳು ಅಂಥ ಲಂಘನಕ್ಕೆ ರೆಕ್ಕೆಪುಕ್ಕ ಕಟ್ಟತೊಡಗಿವೆ. ಇನ್ನೇನು, ರಾಕೇಶ್‌ ಶರ್ಮಾ ಸೋವಿಯತ್‌ ರಷ್ಯಾದ ಬಾಹ್ಯಾಕಾಶ ನೌಕೆಯಲ್ಲಿ 1984ರಲ್ಲಿ ಭೂಕಕ್ಷೆಯನ್ನು ಸುತ್ತಿದ ಹಾಗೆ, ನಮ್ಮದೇ ನೌಕೆಯಲ್ಲಿ ಯುವ ಸಾಹಸಿಯನ್ನು ಸುತ್ತಿಸಬೇಕು; ಚಂದ್ರನ ಮೇಲೆ ನಾವೊಂದು ದೂರದರ್ಶಕವನ್ನು ಸ್ಥಾಪಿಸಿ, ಅಲ್ಲಿನ ನಿರಭ್ರ ಗಗನದಲ್ಲಿ ದೃಷ್ಟಿಹಾಯಿಸಿ, ಪೃಥ್ವಿಯನ್ನು ಹೋಲಬಲ್ಲ ಗ್ರಹಗಳು ಸೌರಲೋಕದಾಚೆ ಇವೆಯೇ ಎಂಬುದನ್ನು ನೋಡಬೇಕು. ಗುರುತ್ವ ಬಲ ಕಮ್ಮಿ ಇರುವ ಚಂದ್ರನೆಲದಿಂದ ಮಂಗಳ ಮತ್ತು ಅದರಾಚಿನ ಗ್ರಹಗಳಿಗೆ ನೌಕೆಗಳನ್ನು ಚಿಮ್ಮಿಸಬೇಕು; ಅದಕ್ಕೆ ಬೇಕಾದ ಅಟ್ಟಣಿಗೆಗಳನ್ನು ಇತರ ದೇಶಗಳಿಗೂ ನಾವೇ ಅಲ್ಲಿ ಕಟ್ಟಿಕೊಡಬೇಕು. ಬಾಹ್ಯಾಕಾಶದತ್ತ ‘ಪೈಪೋಟಿ’ಯ ಬದಲು ಜಾಗತಿಕ ಸಹಕಾರ ಏರ್ಪಡುವಂತೆ ಮಾಡುವಲ್ಲಿ ಭಾರತ ತನ್ನ ನಾಯಕತ್ವವನ್ನು ಸ್ಥಾಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಚಂದ್ರನಲ್ಲಿ ಹೇರಳವಾಗಿ ಲಭ್ಯವಿದೆ ಎನ್ನಲಾದ ಹೀಲಿಯಂ ಅನಿಲವನ್ನು ಹೆಪ್ಪುಗಟ್ಟಿಸಿ ತಂದು ಭಾರತವನ್ನು ಅಕ್ಷಯ ಶಕ್ತಿಯ ಭಂಡಾರವನ್ನಾಗಿಸಬೇಕು. ನನಸಾಗಬೇಕಾದ ಕನಸುಗಳು ತುಂಬ ಇವೆ. ಬಾಹ್ಯಾಂತರಿಕ್ಷದಲ್ಲಷ್ಟೇ ಅಲ್ಲ, ಈ ನೆಲದ ಮೇಲೂ ಇವೆ. ವಿಕ್ರಮ್‌ ಲ್ಯಾಂಡರ್‌ ನೌಕೆಯಲ್ಲಿ ಖಚಿತ ಹವಾಮುನ್ಸೂಚನೆ ನೀಡಬಲ್ಲ ಸಾಧನಗಳಿದ್ದವು. ಅಂಥವು ನಮ್ಮ ಪಂಚಾಯಿತಿ ಮಟ್ಟದಲ್ಲಿ ರೈತರಿಗೆ ಸದ್ಯದ ಭವಿಷ್ಯದಲ್ಲಿ ಸಿಗಬಲ್ಲವೇ? ಚಂದ್ರನ ಮೇಲೆ ಚಲಿಸುತ್ತಿರುವ ಪ್ರಜ್ಞಾನ್‌ ಹೆಸರಿನ ಪುಟ್ಟ, ಕುಶಾಗ್ರ ಪ್ರಯೋಗಶಾಲೆಯೊಂದು ಅಲ್ಲಿನ ಕ್ಷೀಣ ಬಿಸಿಲಿನಲ್ಲೂ 50 ವಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತ ಮಣ್ಣು-ಮರಳನ್ನು ಪರೀಕ್ಷಿಸುತ್ತ, ಖನಿಜಗಳನ್ನು ಗುರುತಿಸುತ್ತ, ಚಂದ್ರಕಂಪನಗಳನ್ನು ಅಳೆಯುತ್ತ ವಿಡಿಯೊ ವರದಿ ಮಾಡುತ್ತಿದೆ. ನಮ್ಮ ವಿಶ್ವವಿದ್ಯಾಲಯಗಳ ಲ್ಯಾಬ್‌ಗಳಲ್ಲೂ ಲಭ್ಯ ಇಲ್ಲದ ಅಂಥ ಸಾಧನಗಳು ಕ್ರಮೇಣ ಹೈಸ್ಕೂಲುಗಳಲ್ಲೂ ಸಿಗುವಂತಾಗಬೇಕು. ಈ ನೆಲದ ಗುಣಧರ್ಮಗಳನ್ನೂ ಅಳೆದು ನೋಡುವ ಕ್ಷಮತೆ ಎಳೆಯ ವಿದ್ಯಾರ್ಥಿಗಳಿಗೂ ಬರಬೇಕು. ಇಷ್ಟಕ್ಕೂ ನಮ್ಮ ಬಾಹ್ಯಾಕಾಶದ ಎಲ್ಲ ಕನಸುಗಳನ್ನೂ ನನಸು ಮಾಡಬೇಕಾದವರು ಈ ಎಳೆಯರು. ಅವರನ್ನು ವಿಜ್ಞಾನದತ್ತ ಸೆಳೆಯುವಂತೆ ಮಾಡಲು ಉತ್ಕೃಷ್ಟ ಮೂಲ ಸೌಕರ್ಯ, ಪ್ರಾಯೋಗಿಕ ಸಲಕರಣೆಗಳು ಬೇಕಿವೆ. ಅದು ರಾಜಕೀಯ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ತಿಂಗಳನಲ್ಲಿ ಮೂಡಿದ ಬೆಳಕು ನಮ್ಮ ಕತ್ತಲನ್ನೂ ಸರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.