| ದರ ಇಳಿಕೆ ಸ್ವಾಗತಾರ್ಹ: ಬೆಲೆ ನಿಗದಿಗೆ ಸ್ಪಷ್ಟ ನೀತಿ ಬೇಕು ಮನೆಗಳಲ್ಲಿ ಬಳಕೆ ಮಾಡುವ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ₹200ರಷ್ಟು ತಗ್ಗಿಸುವ ತೀರ್ಮಾನವನ್ನು ಕೇಂದ್ರ ಸಚಿವ ಸಂಪುಟವು ಕೈಗೊಂಡಿದೆ. ಬೆಲೆ ಪರಿಷ್ಕರಣೆಯು ಬುಧವಾರದಿಂದಲೇ ಜಾರಿಗೆ ಬಂದಿದೆ. ಮೂರು ವರ್ಷಗಳಲ್ಲಿ ಎಲ್‌ಪಿಜಿ ದರವು ಸರಿಸುಮಾರು ದುಪ್ಪಟ್ಟಾಗಿದ್ದುದನ್ನು ಅನುಭವಿಸಿರುವ ಜನಸಾಮಾನ್ಯ, ಕೇಂದ್ರದ ಈ ತೀರ್ಮಾನದಿಂದಾಗಿ ತುಸು ನಿರಾಳ ಆಗಿದ್ದಾನೆ. ಬೆಲೆ ಏರಿಕೆಯ ಪ್ರಮಾಣವು ವಿಪರೀತ ಅನ್ನಿಸುವ ಮಟ್ಟ ತಲುಪಿರುವ ಈ ದಿನಗಳಲ್ಲಿ, ಯಾವುದೇ ಅಗತ್ಯ ಉತ್ಪನ್ನ ಅಥವಾ ಸೇವೆಯ ಬೆಲೆಯಲ್ಲಿ ಇಳಿಕೆ ಆಗಲಿದೆ ಎಂಬ ಸುದ್ದಿಯು ಜನಸಾಮಾನ್ಯರಿಗೆ ಖಂಡಿತ ಸಮಾಧಾನ ತರುತ್ತದೆ. ಆದರೆ, ಜೀವನಾವಶ್ಯಕ ಉತ್ಪನ್ನಗಳ ಅಥವಾ ಸೇವೆಗಳ ಬೆಲೆಯನ್ನು ತಗ್ಗಿಸಲು ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಹತ್ತಿರವಾಗಬೇಕು ಎಂಬುದು ಮಾತ್ರ ವಿಷಾದಕರ. ವಾಸ್ತವದಲ್ಲಿ, ಜನಸಾಮಾನ್ಯರ ಬವಣೆಯನ್ನಷ್ಟೇ ಪರಿಗಣಿಸಿ ರಾಜ್ಯ ಸರ್ಕಾರಗಳು ಅಥವಾ ಕೇಂದ್ರ ಸರ್ಕಾರವು ಇಂಥದ್ದೊಂದು ತೀರ್ಮಾನ ತೆಗೆದುಕೊಳ್ಳಬೇಕು. ಜನರ ಜೀವನವನ್ನು ಹೆಚ್ಚು ಸಹನೀಯಗೊಳಿಸುವ ಯಾವುದೇ ತೀರ್ಮಾನ ಕೈಗೊಳ್ಳಲು ಚುನಾವಣೆ ಹತ್ತಿರವಾಗಬೇಕು ಎಂಬ ಅಘೋಷಿತ ನಿಲುವು ಈಗ ಚಾಲ್ತಿಯಲ್ಲಿ ಇರುವಂತೆ ಕಾಣುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸಗಡ, ಮಿಜೋರಾಂ ವಿಧಾನಸಭೆಗಳಿಗೆ ಚುನಾವಣೆ ಹತ್ತಿರವಾಗುತ್ತಿದೆ. 2024ರಲ್ಲಿ ಲೋಕಸಭಾ ಚುನಾವಣೆ ಇದೆ. ಅದಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಹಾಗೂ ಐ.ಎನ್‌.ಡಿ.ಐ.ಎ (‘ಇಂಡಿಯಾ’) ಮೈತ್ರಿಕೂಟಗಳಲ್ಲಿ ಚಟುವಟಿಕೆಗಳು ಕಾವು ಪಡೆದುಕೊಳ್ಳುತ್ತಿವೆ ಎಂಬುದನ್ನು ಮರೆಯುವಂತಿಲ್ಲ. 2021ರಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸಿತು. ಆಗ ಕೇಂದ್ರ ಹಣಕಾಸು ಸಚಿವಾಲಯವು ‘ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಡೀಸೆಲ್ ಮೇಲೆ ₹10ರಷ್ಟು ಬೆಲೆ ಇಳಿಕೆ ಮಾಡಲಾಗಿದೆ. ಅಲ್ಲದೆ, ಹಬ್ಬದ ಸಂದರ್ಭದಲ್ಲಿ ಜನರು ಖರೀದಿ ಚಟುವಟಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಲಿ, ಆರ್ಥಿಕ ಚಟುವಟಿಕೆಗಳು ಬಿರುಸು ಪಡೆಯಲಿ ಎಂಬ ಉದ್ದೇಶವೂ ಎಕ್ಸೈಸ್ ಸುಂಕ ಇಳಿಕೆಯ ಹಿಂದೆ ಇದೆ. ಡೀಸೆಲ್ ಬೆಲೆ ಇಳಿಕೆಯಿಂದ ಹಣದುಬ್ಬರ ತಗ್ಗಬಹುದು’ ಎಂದು ಹೇಳಿತ್ತು. ವಾಸ್ತವದಲ್ಲಿ, ಎಕ್ಸೈಸ್‌ ಸುಂಕ ತಗ್ಗಿಸುವ ತೀರ್ಮಾನ ಕೈಗೊಂಡಿದ್ದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಇರಲಿಲ್ಲ ಎನ್ನಲಾಗದು. ದೇಶದ ವಿವಿಧ ರಾಜ್ಯಗಳ ಒಟ್ಟು 29 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳಿಗೆ ಆ ಹೊತ್ತಿನಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಒಟ್ಟಾರೆಯಾಗಿ ತುಸು ಹಿನ್ನಡೆ ಅನುಭವಿಸಿತ್ತು. ಹಿಮಾಚಲ ಪ್ರದೇಶದಲ್ಲಿ ದೊಡ್ಡ ಹಿನ್ನಡೆ ಕಂಡಿತ್ತು. ಚುನಾವಣಾ ಫಲಿತಾಂಶಗಳು ಬಂದ ಒಂದೇ ದಿನದಲ್ಲಿ ಕೇಂದ್ರವು ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ತಗ್ಗಿಸಿತ್ತು. 2022ರ ಆರಂಭದಲ್ಲಿ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿಕ್ಕಿತ್ತು. ಎಕ್ಸೈಸ್‌ ಸುಂಕ ಕಡಿತದ ಹಿಂದೆ ಆ ಚುನಾವಣೆಗಳ ಪ್ರಭಾವವೂ ಇತ್ತು. ಕೋವಿಡ್‌ ಸಾಂಕ್ರಾಮಿಕವು ದೇಶವನ್ನು ಆವರಿಸುವ ಮೊದಲು ಎಲ್‌ಪಿಜಿ ಸಿಲಿಂಡರ್‌ಗೆ ಕೇಂದ್ರವು ಸಬ್ಸಿಡಿ ನೀಡುತ್ತಿತ್ತು. ಸಬ್ಸಿಡಿ ಮೊತ್ತವನ್ನು ಬಳಕೆದಾರರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ, ಸಬ್ಸಿಡಿ ನೀಡುವ ಪದ್ಧತಿಯನ್ನು ಕೇಂದ್ರವು ಏಕಾಏಕಿ ಕೈಬಿಟ್ಟಿತು. ಇದಕ್ಕೆ ಕಾರಣ ಏನು ಎಂಬ ವಿವರಣೆಯನ್ನು ಅದು ನೀಡಲಿಲ್ಲ. ಅಷ್ಟೇ ಏಕೆ, ಸಬ್ಸಿಡಿ ವ್ಯವಸ್ಥೆ ಇನ್ನು ಇರುವುದಿಲ್ಲ ಎಂಬ ಅಧಿಕೃತ ಘೋಷಣೆಯೂ ಆಗ ಹೊರಬೀಳಲಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಸರ್ಕಾರ ನಿರ್ಧರಿಸಬಾರದು; ಮಾರುಕಟ್ಟೆ ಪರಿಸ್ಥಿತಿಯನ್ನು ಆಧರಿಸಿ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಬೆಲೆ ನಿಗದಿ ಮಾಡಬೇಕು ಎಂಬುದು ಕೇಂದ್ರದ ಪ್ರಕಟಿತ ನಿಲುವು. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಳಿತ ಇದ್ದರೂ, ಈ ಎರಡು ಇಂಧನಗಳ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ತಿಂಗಳುಗಳಿಂದ ಸ್ಥಿರವಾಗಿದೆ. ಬೆಲೆ ಸ್ಥಿರತೆಯು ಸ್ವಾಗತಾರ್ಹ ಹೌದಾದರೂ, ಕೇಂದ್ರವು ಈ ವಿಚಾರದಲ್ಲಿ ತನ್ನ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಆಗ, ಲೋಕಸಭಾ ಚುನಾವಣೆ ಇನ್ನಷ್ಟು ಹತ್ತಿರವಾದಾಗ ಪೆಟ್ರೋಲ್, ಡೀಸೆಲ್ ಬೆಲೆಯೂ ತಗ್ಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ. ಹಣದುಬ್ಬರ ನಿಯಂತ್ರಿಸಲು ರೆಪೊ ದರದಲ್ಲಿ ಏರಿಳಿಕೆ ಮಾತ್ರ ಪರಿಹಾರವಲ್ಲ ಎಂಬ ಮಾತನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಚೆಗೆ ಆಡಿದ್ದಾರೆ. ಮಿತಿ ಮೀರಿರುವ ಹಣದುಬ್ಬರ ನಿಯಂತ್ರಿಸಲು ತಾವು ಕೂಡ ಜೀವನಾವಶ್ಯಕ ಉತ್ಪನ್ನ, ಸೇವೆಗಳ ಬೆಲೆಯನ್ನು ನಿಯಂತ್ರಿಸಲು ಸಾಧ್ಯವೇ ಎಂಬ ಬಗ್ಗೆ ಸರ್ಕಾರಗಳು ಆಲೋಚಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.