ಸಂಪಾದಕೀಯ | ಶಿವಕುಮಾರ್ ವಿರುದ್ಧದ ತನಿಖೆ; ರಾಜಕೀಯ ಲೆಕ್ಕಾಚಾರ, ಕಾನೂನಿನ ಪ್ರಶ್ನೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸಚಿವ ಸಂಪುಟವು ಹಿಂಪಡೆಯುವ ತೀರ್ಮಾನ ಕೈಗೊಂಡಿರುವುದು ‘ಕಾನೂನಿನ ಪ್ರಕ್ರಿಯೆ’ಗೆ ಸಂಬಂಧಿಸಿದ್ದು. ಕಾನೂನಿನ ಅಡಿಯಲ್ಲಿ ಇದು ಎಷ್ಟರಮಟ್ಟಿಗೆ ಸರಿ ಎಂಬುದು ಪರೀಕ್ಷೆಗೆ ಒಳಗಾಗಬೇಕು. 2019ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ನೀಡಿದ್ದ ಅನುಮತಿಯೇ ಕಾನೂನುಬದ್ಧವಾಗಿ ಇರಲಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಈಗಿನ ಸರ್ಕಾರ ಹೇಳಿದೆ. 2019ರಲ್ಲಿ ಅಡ್ವೊಕೇಟ್ ಜನರಲ್ ತಮ್ಮ ಅಭಿಪ್ರಾಯ ನೀಡುವ ಮೊದಲೇ ಅನುಮತಿ ನೀಡಲಾಗಿತ್ತು, ಸ್ಪೀಕರ್ ಅನುಮತಿ ಪಡೆಯದೆಯೇ ಸಂಪುಟವು ಅನುಮತಿ ನೀಡಿತ್ತು ಎಂದು ಸರ್ಕಾರ ಹೇಳಿದೆ. ಸ್ಪೀಕರ್ ಅವರು ಮೌಖಿಕವಾಗಿ ಅನುಮತಿ ನೀಡಿದ್ದರು ಎನ್ನಲಾಗಿದೆ. ಆದರೆ ಇವೆಲ್ಲವೂ ಚರ್ಚಾಸ್ಪದ ಸಂಗತಿಗಳು. ಕಾಂಗ್ರೆಸ್ ನೇತೃತ್ವದ ಸರ್ಕಾರ ಹೇಳುತ್ತಿರುವುದನ್ನು ಬಿಜೆಪಿ ಹಾಗೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅಲ್ಲಗಳೆದಿದ್ದಾರೆ. ತನಿಖೆಗೆ ಅನುಮತಿ ನೀಡಿದ್ದನ್ನು ಶಿವಕುಮಾರ್ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಅವರ ಅರ್ಜಿಗೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಕುರಿತ ಆದೇಶವು ಈ ವಾರದಲ್ಲಿ ಪ್ರಕಟವಾಗಬಹುದು ಎಂಬ ನಿರೀಕ್ಷೆ ಇದೆ. ಏಕಸದಸ್ಯ ಪೀಠವು ತನಿಖೆಗೆ ಅನುಮತಿ ನೀಡಿದ್ದನ್ನು ಎತ್ತಿಹಿಡಿದಿತ್ತು. ಈಗ ಸರ್ಕಾರವು ಅನುಮತಿಯನ್ನು ಹಿಂದಕ್ಕೆ ಪಡೆದಿದೆ. ಸಿಬಿಐ ತನಿಖೆಯು ಬಹಳ ಮುಂದೆ ಸಾಗಿರುವ ಹೊತ್ತಿನಲ್ಲಿ ಸರ್ಕಾರವು ಅನುಮತಿಯನ್ನು ಹಿಂಪಡೆಯಬಹುದೇ ಎಂಬ ಪ್ರಶ್ನೆ ಇದೆ. ತನಿಖೆಯ ಬಹುಭಾಗ ಪೂರ್ಣಗೊಂಡಿದೆ ಎಂದು ಕೋರ್ಟ್‌ಗೆ ಸಿಬಿಐ ತಿಳಿಸಿದೆ. ಕಾನೂನಿನ ಪ್ರಶ್ನೆಗಳು ಇನ್ನಷ್ಟೇ ಇತ್ಯರ್ಥ ಆಗಬೇಕಿವೆ. ಆದರೆ, ಇಲ್ಲಿರುವ ನಿಜವಾದ ವಿಚಾರ ರಾಜಕಾರಣಕ್ಕೆ ಸಂಬಂಧಿಸಿದೆ. ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ತೀರ್ಮಾನವು ಎಷ್ಟರಮಟ್ಟಿಗೆ ರಾಜಕೀಯ ಲೆಕ್ಕಾಚಾರಗಳಿಂದ ಕೂಡಿತ್ತೋ, ಕಾಂಗ್ರೆಸ್ ನೇತೃತ್ವದ ಇಂದಿನ ಸರ್ಕಾರದ ತೀರ್ಮಾನ ಕೂಡ ರಾಜಕೀಯ ಲೆಕ್ಕಾಚಾರಗಳಿಂದಲೇ ಪ್ರಭಾವಿತವಾಗಿದೆ. ಈಗ ಸರ್ಕಾರವು ಶಿವಕುಮಾರ್ ಅವರಿಗೆ ಕಾನೂನು ಪ್ರಕ್ರಿಯೆಯ ದೃಷ್ಟಿಯಿಂದ ಒಂದು ಗುರಾಣಿಯನ್ನು ಕಲ್ಪಿಸಿಕೊಟ್ಟಿದೆ. ಹಿಂದಿನ ಸರ್ಕಾರ ನೀಡಿದ್ದ ಅನುಮತಿಯು ಕಾನೂನುಬಾಹಿರವಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ ಅವರು, ಸಿಬಿಐ ತನಿಖೆಗೆ ಅನುಮತಿ ನೀಡುವ ಮುನ್ನ ಶಿವಕುಮಾರ್ ವಿರುದ್ಧದ ಪ್ರಕರಣದ ಸತ್ಯಾಸತ್ಯತೆಯನ್ನು ಸರ್ಕಾರ ಪರಿಶೀಲಿಸಿ ರಲಿಲ್ಲ ಎಂದು ಹೇಳಿದ್ದಾರೆ. ಕೆಲವು ಸಂದರ್ಭಗಳಲ್ಲಿ ರಾಜಕಾರಣವೇ ಕಾನೂನು ಪ್ರಕ್ರಿಯೆಗಳ ಚಾಲಕನ ಸ್ಥಾನದಲ್ಲಿ ಕುಳಿತಿರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ರಾಜಕಾರಣವು ಕಾನೂನು ಪ್ರಕ್ರಿಯೆಗಳನ್ನು ಮೀರುವ ಕೆಲಸವನ್ನು ಕೂಡ ಮಾಡುತ್ತದೆ. ರಾಜಕಾರಣವು ಈ ಎರಡೂ ಕೆಲಸಗಳನ್ನು ತನ್ನ ಅನುಕೂಲಕ್ಕಾಗಿ ಹಾಗೂ ತನ್ನ ಉದ್ದೇಶ ಸಾಧನೆಗಾಗಿ ಮಾಡುತ್ತದೆ. ಶಿವಕುಮಾರ್ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಅವುಗಳ ಬಗ್ಗೆ ತನಿಖೆ ಆಗಬೇಕಿದೆ. ಆದರೆ ರಾಜ್ಯ ಪೊಲೀಸರು ಶಿವಕುಮಾರ್ ವಿರುದ್ಧದ ಆರೋಪಗಳ ಬಗ್ಗೆ ವಿಶ್ವಾಸಾರ್ಹ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬುದು ನಿಜ. ತನಿಖೆಯನ್ನು ತಟಸ್ಥ, ನಿಷ್ಪಕ್ಷಪಾತ ಸಂಸ್ಥೆಯೊಂದು ನಡೆಸಿದರೆ ಚೆನ್ನ. ಆದರೆ ನಿಷ್ಪಕ್ಷಪಾತ ತನಿಖಾ ಸಂಸ್ಥೆ ಎಂಬ ಹಿರಿಮೆಯನ್ನು ಸಿಬಿಐ ಉಳಿಸಿಕೊಂಡಿದೆಯೇ? ವಿರೋಧ ಪಕ್ಷಗಳ ನಾಯಕರು, ಸರ್ಕಾರದ ಟೀಕಾಕಾರರು ಮತ್ತು ಭಿನ್ನ ದನಿಗಳನ್ನು ವ್ಯಕ್ತಪಡಿಸು ವವರ ವಿರುದ್ಧ ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ನಿರಂತರವಾಗಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿಯೇ ಶಿವಕುಮಾರ್ ಪ್ರಕರಣವನ್ನು ಗಮನಿಸಬೇಕು. ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐ ಅಧಿಕಾರಿಗಳು ವರ್ಷಗಳಿಂದ ಶಿವಕುಮಾರ್ ಬೆನ್ನಿಗೆ ಬಿದ್ದಿದ್ದಾರೆ. ಅವರ ವಿರುದ್ಧದ ತನಿಖೆಗಳು ಮುಂದುವರಿದಿವೆ. ಆದರೆ, ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳು ಅಥವಾ ಬಿಜೆಪಿ ಸೇರುವ ಇತರ ಪಕ್ಷಗಳ ನಾಯಕರ ವಿರುದ್ಧದ ಪ್ರಕರಣಗಳು ಶೈತ್ಯಾಗಾರವನ್ನು ಸೇರಿವೆ. ಈ ಕಾರಣಕ್ಕಾಗಿಯೇ, ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸುವ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಸಿಬಿಐಗೆ ತನಿಖೆ ನಡೆಸಲು ಅನುಮತಿ ನಿರಾಕರಿಸಿವೆ. ಇದೊಂದು ಸಾಂಸ್ಥಿಕ ರಕ್ಷಣಾ ಕಾರ್ಯ. ಈ ಕಾರ್ಯದಲ್ಲಿ ಕಾನೂನು, ನೈತಿಕತೆ, ರಾಜಕಾರಣ ಪರಸ್ಪರ ಬೆರೆತು, ಕಲಸುಮೇಲೋಗರದಂತೆ ಆಗಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.