ಸಂಪಾದಕೀಯ | ಪುಸ್ತಕ ಖರೀದಿ ವಿಳಂಬ ಸಲ್ಲ; ‘ಪುಸ್ತಕ ಸಂಸ್ಕೃತಿ’ ನೀತಿ ಅಗತ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪೂರೈಕೆಯಾಗಬೇಕಾದ 2020ನೇ ಸಾಲಿನ ಪುಸ್ತಕಗಳ ಪಟ್ಟಿಗೆ ಅನುಮೋದನೆ ನೀಡಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು, ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಇರುವ ಸ್ಥಾನವನ್ನು ಸೂಚಿಸುವಂತಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಮಯಕ್ಕೆ ಸರಿಯಾಗಿ ಪುಸ್ತಕಗಳನ್ನು ಕೊಳ್ಳದೇ ಹೋದರೆ, ಪ್ರಕಾಶಕರು ಸಂಕಷ್ಟಕ್ಕೆ ಸಿಲುಕುವುದರ ಜೊತೆಗೆ ಪುಸ್ತಕ ಸಂಸ್ಕೃತಿಯೂ ಬಿಕ್ಕಟ್ಟನ್ನು ಎದುರಿಸುತ್ತದೆ. 2020ರ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ, 2021 ಹಾಗೂ 2022ನೇ ಸಾಲಿನ ಪುಸ್ತಕಗಳ ಆಯ್ಕೆ ಹಾಗೂ ಖರೀದಿ ಪ್ರಕ್ರಿಯೆಗೂ ಹಿನ್ನಡೆಯಾಗಿದೆ. ಅಂತಿಮಗೊಂಡ ಪುಸ್ತಕಗಳ ಪಟ್ಟಿಗೆ ಅನುಮೋದನೆ ನೀಡಬೇಕೆನ್ನುವ ಪ್ರಕಾಶಕರ ಕೋರಿಕೆಗೆ ನಿಕಟ‍ಪೂರ್ವ ಸರ್ಕಾರವೂ ಸ್ಪಂದಿಸಿಲ್ಲ, ಈಗಿನ ಸರ್ಕಾರವೂ ಈವರೆಗೆ ನಿರ್ಧಾರ ಕೈಗೊಳ್ಳದೆ ವಿಳಂಬನೀತಿ ಅನುಸರಿಸುತ್ತಿರುವಂತಿದೆ. ಪುಸ್ತಕಗಳ ಆಯ್ಕೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಪುಸ್ತಕ ಆಯ್ಕೆ ಸಮಿತಿಯನ್ನು ಸರ್ಕಾರ ನೇಮಿಸಿದೆ. ಆದರೆ, ಹಿಂದಿನ ಅವಧಿಯ ಪುಸ್ತಕಗಳ ಖರೀದಿಯೇ ಪೂರ್ಣಗೊಳ್ಳದಿರುವುದರಿಂದ, ಹೊಸ ಸಮಿತಿಯ ಆಯ್ಕೆ ಹಾಗೂ ನಂತರದ ಖರೀದಿ ಪ್ರಕ್ರಿಯೆಗಳು ಸಹಜವಾಗಿಯೇ ವಿಳಂಬವಾಗಲಿವೆ. ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ₹10 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದ್ದರೂ ಆರ್ಥಿಕ ಇಲಾಖೆ ಅನುಮೋದನೆ ನೀಡದಿರುವುದರಿಂದ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಸರ್ಕಾರ ಯಾವ ನೆಪವನ್ನೂ ಹೇಳಬಾರದು. ‘ಗ್ರಂಥಾಲಯ ಕರ’ದ ಹೆಸರಿನಲ್ಲಿ ನಾಗರಿಕರಿಂದ ಹಣ ಸಂಗ್ರಹಿಸುವುದರಿಂದ, ಪುಸ್ತಕ ಖರೀದಿಗೆ ಹಣದ ಮುಗ್ಗಟ್ಟು ಎದುರಾಗಬಾರದು. ಪುಸ್ತಕ ಸಂಸ್ಕೃತಿ ಕಾರಣಕ್ಕಾಗಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ಸರ್ಕಾರ ಇನ್ನಾದರೂ ನಿಲ್ಲಿಸಬೇಕು. ಕನ್ನಡದ ಅತ್ಯುತ್ತಮ ಪುಸ್ತಕಗಳನ್ನು ಓದುವ ಅವಕಾಶದಿಂದ ಓದುಗರು ವಂಚಿತರಾಗದಂತೆ ನೋಡಿಕೊಳ್ಳುವ ಸಾಂಸ್ಕೃತಿಕ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳಬಾರದು. ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸುವ ಚಟುವಟಿಕೆ ಪ್ರತಿವರ್ಷವೂ ವಿಳಂಬವಾಗುವುದು ಹಾಗೂ ಪ್ರಕಾಶಕರು ಅಳಲು ತೋಡಿಕೊಳ್ಳುವುದು ಸಹಜ ಎನ್ನುವಂತಾಗಿದೆ. ಪುಸ್ತಕ ಖರೀದಿಯ ಈ ಪ್ರಕ್ರಿಯೆ ಪ್ರತಿವರ್ಷ ನಿಗದಿತ ಸಮಯದಲ್ಲಿ ಹಾಗೂ ಗೊಂದಲಗಳಿಗೆ ಆಸ್ಪದವಿಲ್ಲದಂತೆ ನಡೆಯಲು ಅಗತ್ಯವಾದ ಕ್ರಮ ಕೈಗೊಳ್ಳಲು ಯಾವ ಪಕ್ಷದ ನೇತೃತ್ವದ ಸರ್ಕಾರವೂ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಓದುವ ಅಭ್ಯಾಸ ಕ್ಷೀಣಿಸುತ್ತಿರುವ ಸಂದರ್ಭಗಳಲ್ಲಿ, ಪುಸ್ತಕ ಸಂಸ್ಕೃತಿಯ ರಾಯಭಾರಿಗಳಂತೆ ಸಾರ್ವಜನಿಕ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಲಕ್ಷಾಂತರ ಓದುಗರು ತಮ್ಮ ಓದಿನ ಹಸಿವೆಯನ್ನು ಗ್ರಂಥಾಲಯಗಳ ಮೂಲಕ ತಣಿಸಿಕೊಳ್ಳುತ್ತಿದ್ದಾರೆ. ಹೊಸ ಪುಸ್ತಕಗಳು ಸಕಾಲಕ್ಕೆ ಸೇರ್ಪಡೆಗೊಳ್ಳದೆ ಹೋದರೆ, ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುವುದು ಹೇಗೆ ಸಾಧ್ಯ? ಸಾರ್ವಜನಿಕ ಗ್ರಂಥಾಲಯಗಳನ್ನು ದುರ್ಬಲಗೊಳಿಸುವ ಮೂಲಕ ಪುಸ್ತಕ ಸಂಸ್ಕೃತಿಗೆ ಪೆಟ್ಟು ಕೊಡುವ ಕೆಲಸವನ್ನು ಸರ್ಕಾರ ಮಾಡಬಾರದು. ಹೊಸ ಪುಸ್ತಕಗಳನ್ನು ಒಳಗೊಳ್ಳುವುದು, ತಂತ್ರಜ್ಞಾನ ಅಳವಡಿಕೆಯ ಮೂಲಕ ಗ್ರಂಥಾಲಯಗಳನ್ನು ಸಮಕಾಲೀನಗೊಳಿಸುವುದು ಹಾಗೂ ಸದಾ ಜೀವಂತವಾಗಿರುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಎಲ್ಲ ನಾಗರಿಕರಿಗೂ ಆಹಾರವನ್ನು ಖಚಿತಪಡಿಸುವ ಅನ್ನಭಾಗ್ಯ ಯೋಜನೆಯಂತೆಯೇ ಓದುಗರಿಗೆ ಪುಸ್ತಕಗಳನ್ನು ಖಚಿತಪಡಿಸುವ ಪುಸ್ತಕಭಾಗ್ಯ ಯೋಜನೆಯನ್ನೂ ಸರ್ಕಾರ ರೂಪಿಸಬೇಕು. ಸಾಂಸ್ಕೃತಿಕ ಆರೋಗ್ಯದ ದೃಷ್ಟಿಯಿಂದ ಪುಸ್ತಕಭಾಗ್ಯ ಯೋಜನೆಗೆ ವಿಶೇಷ ಮಹತ್ವವಿದೆ. ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ವಾರ್ಷಿಕ ಕ್ಯಾಲೆಂಡರ್ ರೂಪಿಸುವುದು ಇಂದಿನ ಅಗತ್ಯ. ಖರೀದಿಗೆ ಪುಸ್ತಕಗಳ ಆಹ್ವಾನ, ಆಯ್ಕೆ ಪ್ರಕ್ರಿಯೆ, ಆಯ್ಕೆಯಾದ ಪುಸ್ತಕಗಳ ಪಟ್ಟಿ ಪ್ರಕಟ ಹಾಗೂ ಕೊಳ್ಳುವ ಪ್ರಕ್ರಿಯೆ– ಇವೆಲ್ಲವೂ ಸರ್ಕಾರದ ಮರ್ಜಿಗೆ ತಕ್ಕಂತೆ ನಡೆಯದೆ, ನಿರ್ದಿಷ್ಟ ದಿನಾಂಕಗಳಂದು ನಡೆಯುವಂತೆ ಸರ್ಕಾರ ಕ್ಯಾಲೆಂಡರ್ ರೂಪಿಸಬೇಕು. ಹಾಗೆಯೇ, ಗ್ರಂಥಾಲಯಗಳಿಗೆ ಆಯ್ಕೆಗೊಳ್ಳುವ ಪುಸ್ತಕಗಳಿಗೆ ಗುಣಮಟ್ಟದ ಖಾತರಿ ಇರುವಂತೆಯೂ ನೋಡಿಕೊಳ್ಳಬೇಕು. ಕಳಪೆ ಪುಸ್ತಕಗಳ ಆಯ್ಕೆ–ಖರೀದಿಯಿಂದಾಗಿ ಗ್ರಂಥಾಲಯಗಳು ಅನಗತ್ಯ ವಸ್ತುಗಳನ್ನು ತುಂಬುವ ಕೊಠಡಿಗಳಾಗದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕ ಗ್ರಂಥಾಲಯಗಳಿಗೆ ಪೂರೈಕೆಯಾಗುವ ಪುಸ್ತಕಗಳ ಆಯ್ಕೆಯ ಮಾನದಂಡವು ಓದುಗರ ಅಗತ್ಯಗಳಿಗೆ ಪೂರಕ ಆಗಿರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.