ಸಂಪಾದಕೀಯ: ಮಹಾರಾಷ್ಟ್ರಆಸ್ಪತ್ರೆಯಲ್ಲಿ ಸಾವು; ವ್ಯವಸ್ಥೆಯ ಲೋಪದಲ್ಲಿ ಎಲ್ಲರೂ ಭಾಗಿ ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ದುರಂತಗಳು ಒಂದಾದ ನಂತರ ಒಂದರಂತೆ ಸಂಭವಿಸುತ್ತಿವೆ. ಚಿಕಿತ್ಸೆಗೆಂದು ದಾಖಲಾಗಿದ್ದವರು ಸಾಯುತ್ತಿದ್ದಾರೆ. ನಾಂದೇಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ 31 ರೋಗಿಗಳು ಮೃತಪಟ್ಟಿದ್ದಾರೆ. ಇವರಲ್ಲಿ ಸರಿಸುಮಾರು ಅರ್ಧದಷ್ಟು ಮಂದಿ ನವಜಾತ ಶಿಶುಗಳು ಹಾಗೂ ಮಕ್ಕಳು. ಕೇವಲ 48 ಗಂಟೆಗಳ ಅವಧಿಯಲ್ಲಿ ಇಷ್ಟು ಸಾವುಗಳು ವರದಿಯಾಗಿವೆ. ನಾಗಪುರದಲ್ಲಿನ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೇ ದಿನದಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಸಂಭಾಜಿನಗರದಲ್ಲಿನ (ಔರಂಗಾಬಾದ್‌) ಆಸ್ಪತ್ರೆಯೊಂದರಲ್ಲಿ ಹಲವರು ಮೃತಪಟ್ಟ ವರದಿಗಳು ಇವೆ. ಠಾಣೆಯ ಒಂದು ಆಸ್ಪತ್ರೆಯಲ್ಲಿ ಆಗಸ್ಟ್‌ನಲ್ಲಿ ಒಂದೇ ದಿನದಲ್ಲಿ ಕನಿಷ್ಠ 18 ರೋಗಿಗಳು ಮೃತಪಟ್ಟಿದ್ದಾರೆ. ಇವರೆಲ್ಲ ಯಾವುದೋ ಸಾಂಕ್ರಾಮಿಕಕ್ಕೆ ತುತ್ತಾಗಿದ್ದ ರೋಗಿಗಳಲ್ಲ. ಬದಲಿಗೆ, ಅವರೆಲ್ಲ ಒಬ್ಬೊಬ್ಬರು ಒಂದೊಂದು ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದವರು. ಮೃತಪಟ್ಟವರಲ್ಲಿ ಹೆಚ್ಚಿನವರು ಬಡವರು. ಅವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ದುಬಾರಿ ವೆಚ್ಚದ ಚಿಕಿತ್ಸೆ ಗಳನ್ನು ಭರಿಸಲು ಬಹುಶಃ ಆಗುತ್ತಿರಲಿಲ್ಲ. ಕೆಲವೇ ದಿನಗಳ ಅಂತರದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ರೋಗಿಗಳು ಸಾವನ್ನಪ್ಪಿರುವುದು ಆಸ್ಪತ್ರೆಗಳ ಕೆಟ್ಟ ಸ್ಥಿತಿಯನ್ನು ಹಾಗೂ ಅಲ್ಲಿ ರೋಗಿಗಳಿಗೆ ಸಿಗುತ್ತಿರಬಹುದಾದ ಚಿಕಿತ್ಸೆಯ ಗುಣಮಟ್ಟ ಹೇಗಿರಬಹುದು ಎಂಬುದನ್ನು ಹೇಳುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ, ಅದಕ್ಕೆ ಅನುಗುಣವಾದ ಪ್ರಮಾಣದಲ್ಲಿ ಸಿಬ್ಬಂದಿ ಮತ್ತು ಔಷಧ ಇಲ್ಲ ಎಂದು ಆಡಳಿತವು ಆರಂಭದಲ್ಲಿ ಹೇಳಿತ್ತು. ಆದರೆ ಈ ಸಮಸ್ಯೆಯು ಕೆಲವೇ ದಿನಗಳಲ್ಲಿ ಇಷ್ಟೊಂದು ಜನ ಸಾಯುವುದಕ್ಕೆ ಕಾರಣವಾಗಿದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ. ನಂತರದಲ್ಲಿ ಇನ್ನೊಂದು ವಿಚಿತ್ರವಾದ ವಾದವನ್ನು ಮುಂದಿರಿಸಿದ ಅಧಿಕಾರಿಗಳು, ರೋಗಿಗಳನ್ನು ಬಹಳ ಚೆನ್ನಾಗಿ ಆರೈಕೆ ಮಾಡಲಾಗಿತ್ತಾದರೂ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಹೇಳಿದರು. ಆದರೆ ಆಸ್ಪತ್ರೆಗಳಲ್ಲಿನ ಕೆಟ್ಟ ಪರಿಸ್ಥಿತಿ ಹಾಗೂ ಅಲ್ಲಿ ರೋಗಿಗಳಿಗೆ ಸಿಗುವ ಕಳಪೆ ಗುಣಮಟ್ಟದ ಆರೈಕೆಗೆ ಅಧಿಕಾರಿಗಳು ಹೊಣೆ ಹೊರಲೇಬೇಕು. ಪರಿಸ್ಥಿತಿ ಇದ್ದಕ್ಕಿದ್ದಂತೆ ಹೀಗಾಗಿರಲಿಕ್ಕೆ ಸಾಧ್ಯವಿಲ್ಲ. ಬಹಳ ಕಾಲದಿಂದಲೂ ಅಲ್ಲಿ ಪರಿಸ್ಥಿತಿ ಕೆಟ್ಟದ್ದಾಗಿಯೇ ಇದ್ದಿರಬೇಕು. ಆಸ್ಪತ್ರೆಗಳಲ್ಲಿ ಸಿಬ್ಬಂದಿ ಅಗತ್ಯ ಸಂಖ್ಯೆಯಲ್ಲಿ ಇರಲಿಲ್ಲ, ಔಷಧ ಖರೀದಿಯಲ್ಲಿನ ವಿಳಂಬದ ಕಾರಣದಿಂದಾಗಿ ಅಗತ್ಯ ಔಷಧಗಳು ಲಭ್ಯವಿರಲಿಲ್ಲ ಎಂಬ ವರದಿಗಳು ಇವೆ. ನಾಂದೇಡಿನ ಆಸ್ಪತ್ರೆಯು 500 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದರೂ, ಅದರ ಎರಡು ಪಟ್ಟು ಹೆಚ್ಚು ಸಂಖ್ಯೆಯಲ್ಲಿ ರೋಗಿಗಳನ್ನು ಸೇರಿಸಿಕೊಂಡಿತ್ತು. ಅಲ್ಲದೆ, ಅಲ್ಲಿ ಎಂಆರ್‌ಐ ಮತ್ತು ಸಿ.ಟಿ. ಸ್ಕ್ಯಾನ್ ಯಂತ್ರ ಇರಲಿಲ್ಲ. ಪರಿಸ್ಥಿತಿ ಈ ರೀತಿ ಆಗಲು ಕಾರಣರಾದವರು ತಮ್ಮಿಂದ ಆಗಿರುವ ಲೋಪಕ್ಕೆ ಉತ್ತರದಾಯಿ ಆಗಬೇಕು. ಯಶಸ್ಸು ಸಿಕ್ಕಾಗ ಅದಕ್ಕೆ ತಾವೇ ಕಾರಣ ಎಂದು ಹೇಳುವ, ಸಮಸ್ಯೆಗಳು ಎದುರಾದಾಗ ತಕ್ಷಣ ಕೈತೊಳೆದುಕೊಳ್ಳುವ ರಾಜಕಾರಣಿಗಳೂ ಹೊಣೆ ಹೊರಬೇಕು. ಸಾವಿನ ಬಗ್ಗೆ ತನಿಖೆ ನಡೆಸಲು, ಕಾಲಮಿತಿಯಲ್ಲಿ ವರದಿ ಸಲ್ಲಿಸಲು ರಾಜ್ಯ ಸರ್ಕಾರವು ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಠಾಣೆಯಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ತನಿಖೆ ನಡೆಸಿರುವ ಸಮಿತಿಯೊಂದು ಇನ್ನೂ ವರದಿ ಸಲ್ಲಿಸಿಲ್ಲ. ಸಾವಿನ ವಿಚಾರವು ರಾಜಕೀಯಕ್ಕೆ ಬಳಕೆಯಾಗುವುದು ಸರ್ಕಾರಕ್ಕೆ ಬೇಕಿಲ್ಲ. ಆದರೆ ಆರೋಗ್ಯ ಸೇವಾ ವ್ಯವಸ್ಥೆಯನ್ನು ಸುಧಾರಿಸಬೇಕಿರುವುದು ಸರ್ಕಾರದ ಕೆಲಸವೇ ಆಗಿದೆ. ಅಂದರೆ, ಮೂಲಸೌಕರ್ಯ ಹೆಚ್ಚಳ, ಸಿಬ್ಬಂದಿ ಲಭ್ಯತೆ ಹೆಚ್ಚಿಸುವುದು ಸರ್ಕಾರದ ಕೆಲಸ. 2022–23ರಿಂದ 2023–24ರ ನಡುವೆ ಸಾರ್ವಜನಿಕ ಆರೋಗ್ಯಕ್ಕೆ ನೀಡುವ ಬಜೆಟ್ ಅನುದಾನವನ್ನು ಮಹಾರಾಷ್ಟ್ರ ಸರ್ಕಾರವು ಶೇಕಡ 7ರಷ್ಟು ಕಡಿಮೆ ಮಾಡಿದೆ. ಇದು ಸರ್ಕಾರದ ಆದ್ಯತೆ ಏನು ಎಂಬುದನ್ನು ಹೇಳುತ್ತಿದೆ. ಆಸ್ಪತ್ರೆಯೊಂದರ ಡೀನ್‌ ವಿರುದ್ಧ ಪ್ರಕರಣ ದಾಖಲಿಸುವುದರಿಂದ ಅಥವಾ ಶಿವಸೇನಾ ಸಂಸದ ಹೇಮಂತ ಪಾಟೀಲ್ ಅವರು ಡೀನ್‌ ಶೌಚಾಲಯ ಸ್ವಚ್ಛಗೊಳಿಸುವಂತೆ ಮಾಡಿದ್ದರಿಂದ ಸುಧಾರಣೆಗಳು ಆಗುವುದಿಲ್ಲ. ಆರೋಗ್ಯಸೇವಾ ವ್ಯವಸ್ಥೆಯಲ್ಲಿನ ಲೋಪದಲ್ಲಿ ಎಲ್ಲರೂ ಭಾಗಿಗಳು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.