ಸಂಪಾದಕೀಯ:ಸರ್ಕಾರಿ ಶಾಲೆ ದುಃಸ್ಥಿತಿ–ಹೈಕೋರ್ಟ್‌ತಿವಿತದಿಂದಾದರೂ ಎಚ್ಚೆತ್ತುಕೊಳ್ಳಿ ‘ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದಿದ್ದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ’ ಎನ್ನುವ ಹೈಕೋರ್ಟ್‌ನ ಅಭಿಪ್ರಾಯವು ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಇದುವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿರುವ ರಾಜಕೀಯ ಪಕ್ಷಗಳು ಶೈಕ್ಷಣಿಕ ಸುಧಾರಣೆ ಕುರಿತು ಪುಂಖಾನುಪುಂಖವಾಗಿ ಮಾತನಾಡಿದ್ದೇ ಬಂತು. ವಾಸ್ತವವಾಗಿ, ಶಾಲಾ ವಾತಾವರಣದಲ್ಲಿ ಹೇಳಿಕೊಳ್ಳುವಂತಹ ಸುಧಾರಣೆಗಳು ಆಗಿಲ್ಲ ಎನ್ನುವ ಕಹಿಸತ್ಯವನ್ನು ನಾವೆಲ್ಲ ಒಪ್ಪಿಕೊಳ್ಳಲೇಬೇಕು. ಇಂತಹ ವಿಷಮ ಸನ್ನಿವೇಶವೇ, ‘ಸರ್ಕಾರಿ ಶಾಲೆಗಳಲ್ಲಿನ ಕೆಟ್ಟ ಪರಿಸ್ಥಿತಿ ಖಾಸಗಿ ಶಾಲೆಗಳ ಮಾಲೀಕರಿಗೆ ಇಂಬು ನೀಡಿದೆ. ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವಂತಹ ಸನ್ನಿವೇಶ ಎದುರಾಗಿದೆ’ ಎಂದೂ ನ್ಯಾಯಪೀಠ ಖಾರವಾಗಿ ಮಾತನಾಡುವಂತೆ ಮಾಡಿದೆ. ಶಾಲೆಗಳು ಅಚ್ಚುಕಟ್ಟಾಗಿ ನಡೆಯಲು ಎರಡು ಅಂಶಗಳು ಬಹುಮುಖ್ಯ. ಒಂದು, ಕೊಠಡಿಗಳು, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನೂ ಶಾಲೆಯು ಒಳಗೊಂಡಿರಬೇಕು. ಎರಡು, ಪಾಠ ಮಾಡಲು ಅಗತ್ಯವಾದ ಸಂಖ್ಯೆಯಷ್ಟು ಶಿಕ್ಷಕರು ಆ ಶಾಲೆಯಲ್ಲಿ ಲಭ್ಯರಿರಬೇಕು. ಈ ಎರಡೂ ವಿಚಾರಗಳಲ್ಲಿ ನಮ್ಮ ಸರ್ಕಾರಿ ಶಾಲೆಗಳು ಹಿಂದೆ ಬಿದ್ದಿರುವುದು ಹಲವು ಸಮೀಕ್ಷೆಗಳಿಂದ ನಿರೂಪಿತವಾಗಿದೆ. ಒಳ್ಳೆಯ ಶಿಕ್ಷಣ ಸಿಗುವುದು ಖಾತರಿ ಆಗದಿದ್ದಾಗ ಯಾವ ಪೋಷಕರಾದರೂ ಅಂತಹ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಇಷ್ಟಪಡುವುದಿಲ್ಲ. ಅಲ್ಲದೆ, ಸೌಲಭ್ಯಗಳ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿದ ಉದಾಹರಣೆಗಳೂ ಇವೆ. ಹಣಕಾಸಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಡಪೋಷಕರ ಮೇಲೆ ಇಂತಹ ಸನ್ನಿವೇಶಗಳು ತೀವ್ರ ರೀತಿಯಲ್ಲಿ ಒತ್ತಡವನ್ನು ಉಂಟು ಮಾಡುತ್ತವೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ (ಇಡಬ್ಲ್ಯುಎಸ್‌) 23.97 ಲಕ್ಷ ಮಕ್ಕಳು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಬಡವರು ತಮ್ಮ ಮಕ್ಕಳನ್ನು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಸೇರಿಸುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯದ ಸಂಕೇತ ಎಂದೇ ಅರ್ಥೈಸಬೇಕಾಗುತ್ತದೆ. ಸಾವಿರಾರು ಮಕ್ಕಳು ಶಾಲೆಯಿಂದಲೇ ಹೊರಗುಳಿಯಲು ಈ ಸನ್ನಿವೇಶ ಕಾರಣವಾಗಿದೆ. ಹೀಗಾಗಿ, ಕೋರ್ಟ್‌ನಲ್ಲಿ ವಾದಿಸಲಾಗಿರುವಂತೆ ‘ಸಂವಿಧಾನದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿದ ಉದ್ದೇಶಕ್ಕೂ ಸೋಲಾಗುತ್ತಿದೆ’. ‘ಯಾವ ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ ಎಂಬುದನ್ನು ಸಂಶೋಧನೆ ಮಾಡಿ ತಿಳಿಯಬೇಕಿಲ್ಲ. ಕಡುಬಡವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ದುರದೃಷ್ಟ ಎಂದರೆ, ಇಂದು ಉಳ್ಳವರು ಎಲ್ಲ ಸೌಲಭ್ಯ ಪಡೆಯುತ್ತಿದ್ದಾರೆ. ಇಲ್ಲದವರಿಗೆ ಏನೂ ಇಲ್ಲ ಎಂಬಂತಾಗಿದೆ’ ಎಂಬ ಕೋರ್ಟ್‌ನ ಮಾತು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಹೃದಯಕ್ಕೆ ನಾಟಬೇಕು. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ–2009 ಹಾಗೂ ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳನ್ನು ಜಾರಿಗೊಳಿಸುವ ಸ್ಥಾನದಲ್ಲಿರುವ ಅವರು ತಮ್ಮ ಹೊಣೆಯಿಂದ ನುಣುಚಿಕೊಳ್ಳುವಂತಿಲ್ಲ. ಅನುಷ್ಠಾನ ಹಂತದಲ್ಲಿ ಆಗಿರುವ ಲೋಪಗಳು ಅಪಾರ ಸಂಖ್ಯೆಯ ಮಕ್ಕಳನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡಿವೆ ಎಂಬ ಸಂಗತಿ ಅವರಲ್ಲಿ ಪಾಪಪ್ರಜ್ಞೆ ಕಾಡುವಂತೆ ಮಾಡಬೇಕು. ಅಮಿಕಸ್‌ ಕ್ಯೂರಿಯಿಂದ ಕೋರ್ಟ್‌ಗೆ ಸಲ್ಲಿಕೆಯಾದ ವರದಿ ಪ್ರಕಾರ, 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು 87 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈ ವ್ಯವಸ್ಥೆ ಮಾಡಲು ತುಂಬಾ ದೊಡ್ಡ ಬಾಬತ್ತೇನೂ ಬೇಕಾಗಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಪಂಚಾಯಿತಿ ಮಟ್ಟದಲ್ಲೇ ಅನುದಾನ ಒದಗಿಸಿ, ತಿಂಗಳಿನಲ್ಲಿಯೇ ಸೌಲಭ್ಯ ಒದಗಿಸಲು ಸಾಧ್ಯ. ಆಡಳಿತ ಇಲ್ಲವೆ ವಿರೋಧ ಎಂಬ ಪಕ್ಷಭೇದವಿಲ್ಲದೆ ಹಲವು ಶಾಸಕರು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಭಾಗವಾಗಿ, ಅಲ್ಲಿ ಹಿತಾಸಕ್ತಿ ಹೊಂದಿರುವಾಗ ಸರ್ಕಾರಿ ಶಾಲೆಗಳ ಸುಧಾರಣೆಗಾಗಿ ಅವರು ಪ್ರಯತ್ನ ಮಾಡಿಯಾರು ಎನ್ನುವುದು ಹುಸಿನಿರೀಕ್ಷೆಯಾದೀತು. ಇಲ್ಲದಿದ್ದರೆ ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಹೊಸ ಸರ್ಕಾರಿ ಶಾಲೆಯನ್ನೂ ತೆರೆಯದೆ ಇರುತ್ತಿರಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಖಾಸಗಿ ಶಾಲೆಗಳೂ ತಲೆ ಎತ್ತುತ್ತಿರಲಿಲ್ಲ. ‘ಪುಸ್ತಕ ಇಲ್ಲದ ಅಂಬೇಡ್ಕರ್ ಅವರ ಪುತ್ಥಳಿ ಅಥವಾ ಚಿತ್ರವನ್ನು ನೋಡಿದ್ದೀರಾ? ಶಿಕ್ಷಣದಿಂದ ಸಮಾನತೆ ಸಾಧ್ಯ ಎಂಬ ಕಾರಣಕ್ಕಾಗಿಯೇ ನಾವು ಅಂಬೇಡ್ಕರ್ ಅವರನ್ನು ಪುಸ್ತಕ ಹಿಡಿದಿರುವ ರೀತಿಯಲ್ಲಿ ಕಾಣುತ್ತೇವೆ’ ಎಂಬ ನ್ಯಾಯಪೀಠದ ಮಾತು, ಅವರ ಹೃದಯದ ಆಳಕ್ಕೂ ಇಳಿಯಬೇಕು. ಹಣ ಹೊಂದಿಸಲು ಆಗದವರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವಂತಹ ವಾತಾವರಣ ನಿರ್ಮಾಣಗೊಳ್ಳಬೇಕು. ಅದಕ್ಕಾಗಿ ಸಂಸತ್ತು, ವಿಧಾನಸಭೆ ಬೇಕಾದಷ್ಟು ಕಾಯ್ದೆಗಳನ್ನು ಮಾಡಿವೆ ನಿಜ. ಆದರೆ, ಅನುಷ್ಠಾನದ ವಿಷಯದಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಕೋರ್ಟ್‌ನಲ್ಲಿ ಮಾತು ಕೊಟ್ಟಿರುವಂತೆ, ಸರ್ಕಾರ ಎರಡು ತಿಂಗಳಿನಲ್ಲಿ ಶಾಲೆಗಳ ಸ್ಥಿತಿಗತಿ ಸಮೀಕ್ಷೆ ನಡೆಸಿ, ಅವುಗಳ ಆಮೂಲಾಗ್ರ ಸುಧಾರಣೆಗೆ ಮುಂದಡಿ ಇಡುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.