ಸಂಪಾದಕೀಯ: ಭ್ರಷ್ಟಾಚಾರ ನಿಗ್ರಹದ ವಿಚಾರದಲ್ಲಿ ವಿಳಂಬ ಧೋರಣೆ ಸಲ್ಲದು ಭ್ರಷ್ಟಾಚಾರ ಮತ್ತು ದುರಾಡಳಿತದ ಆಪಾದನೆ ಎದುರಿಸುತ್ತಿರುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಜರುಗಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಂಚ ಪ್ರಕರಣ, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು ಸೇರಿದಂತೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸರ್ಕಾರಿ ನೌಕರರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಕಾಲಮಿತಿಯೊಳಗೆ ಅನುಮತಿ ನೀಡದೇ ಆರೋಪಿಗಳಿಗೆ ಅನುಕೂಲಕರವಾಗುವ ರೀತಿಯಲ್ಲಿ ಸಕ್ಷಮ ಪ್ರಾಧಿಕಾರಗಳು ವರ್ತಿಸುತ್ತಿರುವುದಕ್ಕೆ ಲೋಕಾಯುಕ್ತರು ಆಕ್ಷೇಪ ಎತ್ತಿದ್ದಾರೆ. ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತಾಗಿ, ದಂಡನೆಗೆ ಶಿಫಾರಸು ಮಾಡಲಾದ 1,074 ವರದಿಗಳನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ದೀರ್ಘಕಾಲದಿಂದ ಬಾಕಿ ಇರಿಸಿಕೊಂಡು ಭ್ರಷ್ಟಾಚಾರಿಗಳಿಗೆ ಅನುಕೂಲ ಮಾಡಿಕೊಡುತ್ತಿರುವುದನ್ನೂ ಅವರು ಬಹಿರಂಗಪಡಿಸಿದ್ದಾರೆ. ವಿಧಾನಸೌಧದಲ್ಲೇ ನಡೆದ ಕಾರ್ಯಾಗಾರದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಎದುರಿನಲ್ಲೇ ಲೋಕಾಯುಕ್ತರು ಈ ಎಲ್ಲ ಮಾಹಿತಿಗಳನ್ನೂ ಹಂಚಿಕೊಂಡಿದ್ದಾರೆ. ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ಹತ್ತಿಕ್ಕಲು ಸ್ವಯಂಪ್ರೇರಿತ ಕ್ರಮಗಳನ್ನು ಕೈಗೊಂಡು, ಆಡಳಿತದಲ್ಲಿ ಸುಧಾರಣೆ ತರಬೇಕಾದುದು ಸರ್ಕಾರದ ಜವಾಬ್ದಾರಿ. ಆದರೆ, ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಸರ್ಕಾರವು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಸರ್ಕಾರಿ ನೌಕರರ ಸೇವಾ ನಿಯಮಾವಳಿ ಹಾಗೂ ತನಿಖಾ ಸಂಸ್ಥೆಗಳನ್ನು ಅಣಕಿಸುವಂತೆ ವರ್ತಿಸುತ್ತಿರುವುದನ್ನು ಲೋಕಾಯುಕ್ತರ ಹೇಳಿಕೆಯು ಎತ್ತಿತೋರಿಸುತ್ತದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ತ್ವರಿತವಾಗಿ ತನಿಖೆಯನ್ನು ಪೂರ್ಣಗೊಳಿಸಿ, ಕಾಲಮಿತಿಯಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಬೇಕು. ಅಷ್ಟೇ ತ್ವರಿತವಾಗಿ ವಿಚಾರಣೆ ಪೂರ್ಣಗೊಳ್ಳುವಂತೆ ಎಚ್ಚರಿಕೆ ವಹಿಸಬೇಕು. ಈ ಯಾವುದೇ ಪ್ರಕ್ರಿಯೆಯಲ್ಲಿ ವಿಳಂಬವಾದರೂ ಆರೋಪಿಗಳು ಅದರ ಅನುಕೂಲ ಪಡೆದುಕೊಂಡು, ಕಾನೂನಿನ ಕುಣಿಕೆಯಿಂದ ತಪ್ಪಿಸಿ ಕೊಳ್ಳುವ ಸಾಧ್ಯತೆ ಹೆಚ್ಚು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌–19ಕ್ಕೆ 2018ರಲ್ಲಿ ತಿದ್ದುಪಡಿ ತಂದ ಬಳಿಕ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ತನಿಖಾಧಿಕಾರಿಯು ಪ್ರಸ್ತಾವ ಸಲ್ಲಿಸಿದ ದಿನದಿಂದ ಮೂರು ತಿಂಗಳೊಳಗೆ ಸಕ್ಷಮ ಪ್ರಾಧಿಕಾರ ಅನುಮತಿ ನೀಡುವುದು ಕಡ್ಡಾಯ. ಹೆಚ್ಚಿನ ವಿವರಣೆ ಅಗತ್ಯವಿರುವ ಪ್ರಕರಣಗಳಲ್ಲಿ ಮಾತ್ರ ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ಇದೆ. ಈ ಕಾಲಮಿತಿಯನ್ನು ಸುಪ್ರೀಂ ಕೋರ್ಟ್‌ ಕೂಡ 2022ರ ತೀರ್ಪಿನಲ್ಲಿ ಎತ್ತಿಹಿಡಿದಿದೆ. ಆದರೆ, ಲೋಕಾಯುಕ್ತ ಪೊಲೀಸರು ಸಲ್ಲಿಸುವ ಬಹುತೇಕ ಪ್ರಸ್ತಾವಗಳನ್ನು ಈ ಕಾಲಮಿತಿಗಿಂತ ಹೆಚ್ಚು ಅವಧಿಯವರೆಗೆ ಸಕ್ಷಮ ಪ್ರಾಧಿಕಾರಗಳು ಬಾಕಿ ಇರಿಸಿಕೊಳ್ಳುತ್ತಿವೆ. ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲು ಅನುಮತಿ ಕೋರಿ ಸಲ್ಲಿಸುವ ಪ್ರಸ್ತಾವಗಳ ವಿಲೇವಾರಿಯಲ್ಲೂ ಸಕ್ಷಮ ಪ್ರಾಧಿಕಾರಗಳು ವಿಳಂಬ ಧೋರಣೆ ಅನುಸರಿ ಸುತ್ತಿವೆ. ಆರೋಪಪಟ್ಟಿ ಸಲ್ಲಿಸಲು ಅಭಿಯೋಜನಾ ಮಂಜೂರಾತಿ ಕೋರುವ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರಗಳು ಪರ್ಯಾಯ ವಿಚಾರಣೆ ನಡೆಸುತ್ತಾ ಕಾಲಹರಣ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಧೋರಣೆಯು ಭ್ರಷ್ಟಾಚಾರ ನಿಗ್ರಹದ ವಿಷಯದಲ್ಲಿ ಸರ್ಕಾರದ ಬದ್ಧತೆಯ ಕುರಿತು ಅನುಮಾನಕ್ಕೆ ಎಡೆಮಾಡುವಂತಿದೆ. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾಕ್ಷಿಗಳ ಅಸಹಕಾರ, ತನಿಖೆಯಲ್ಲಿನ ಲೋಪಗಳು ಸೇರಿದಂತೆ ತಾಂತ್ರಿಕ ಕಾರಣಗಳಿಗಾಗಿ ಆರೋಪಿಗಳು ಖುಲಾಸೆ ಆಗುತ್ತಾರೆ. ಅಂತಹ ಪ್ರಕ ರಣಗಳಲ್ಲಿ ಸರ್ಕಾರಿ ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವುದನ್ನು ತಡೆಯುವುದಕ್ಕಾಗಿಯೇ ಸೇವಾ ನಿಯಮಾವಳಿಗಳ ಅಡಿಯಲ್ಲಿ ಇಲಾಖಾ ವಿಚಾರಣೆ ನಡೆಸಲಾಗುತ್ತದೆ. ಕ್ರಿಮಿನಲ್‌ ಪ್ರಕರಣಗಳಲ್ಲಿ ಖುಲಾಸೆಯಾದರೂ ಸಾಂದರ್ಭಿಕ ಸಾಕ್ಷ್ಯಗಳು ಬಲವಾಗಿದ್ದರೆ ಇಲಾಖಾ ವಿಚಾರಣೆಯಲ್ಲಿ ಆರೋಪಿಗಳನ್ನು ದಂಡನೆಗೆ ಒಳಪಡಿಸಲು ಶಿಫಾರಸು ಮಾಡಲಾಗುತ್ತದೆ. ಆದರೆ, ಕ್ರಿಮಿನಲ್‌ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಖುಲಾಸೆಯಾಗಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಇಲಾಖಾ ವಿಚಾರಣೆಯ ಶಿಫಾರಸನ್ನು ತಿರಸ್ಕರಿಸಿ ದಂಡನೆಯಿಂದ ಪಾರು ಮಾಡುವ ಪರಿಪಾಟವೂ ಇದೆ. ಲಂಚ ಪ್ರಕರಣ, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣಗಳಲ್ಲಿ ಸಿಲುಕಿದ ಸರ್ಕಾರಿ ನೌಕರರನ್ನು ಕೆಲವು ದಿನಗಳವರೆಗೆ ಅಮಾನತಿನಲ್ಲಿ ಇರಿಸಲಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಅಮಾನತು ತೆರವಾದ ಬೆನ್ನಿಗೇ ಅದೇ ಹುದ್ದೆಗೆ ನಿಯೋಜಿಸಲಾಗುತ್ತಿದೆ. ಸರ್ಕಾರದ ಈ ಧೋರಣೆ ಸಂಪೂರ್ಣವಾಗಿ ಜನ ವಿರೋಧಿಯಾದುದು. ವಿಚಾರಣೆ, ತನಿಖೆಗೆ ಅನುಮತಿ ನೀಡಲು ವಿಳಂಬ ಮಾಡುವುದು, ಆರೋಪ ಹೊತ್ತವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವುದು, ಇಲಾಖಾ ವಿಚಾರಣೆಗಳ ವರದಿಗಳನ್ನು ತಾಂತ್ರಿಕ ಕಾರಣ ಮುಂದಿಟ್ಟು ತಿರಸ್ಕರಿಸುವಂತಹ ನಡೆಗಳ ಹಿಂದೆ ಭ್ರಷ್ಟರನ್ನು ರಕ್ಷಿಸುವ ಹುನ್ನಾರ ಅಡಗಿದೆ. ‘ಭ್ರಷ್ಟಾಚಾರವನ್ನು ಎಳ್ಳಷ್ಟೂ ಸಹಿಸುವುದಿಲ್ಲ’ ಎಂದು ಚುನಾವಣೆ ಸಮಯದಲ್ಲಿ ಘೋಷಿಸಿದವರು ಅಧಿಕಾರದ ಗದ್ದುಗೆ ಏರಿದ ಬಳಿಕ ಅದನ್ನು ಮರೆತವರಂತೆ ವರ್ತಿಸುತ್ತಾರೆ. ಭ್ರಷ್ಟಾಚಾರ ನಿಗ್ರಹದ ವಿಚಾರದಲ್ಲಿ ಸರ್ಕಾರ ದೃಢ ನಿಲುವು ತಳೆಯಬೇಕು. ತನಿಖೆ, ವಿಚಾರಣೆಗೆ ಅನುಮತಿ ನೀಡುವ ವಿಚಾರದಲ್ಲಿ ವಿಳಂಬಕ್ಕೆ ಅವಕಾಶ ಇಲ್ಲದಂತಹ ಪಾರದರ್ಶಕ ವ್ಯವಸ್ಥೆಯೊಂದನ್ನು ರೂಪಿಸಬೇಕು. ಭ್ರಷ್ಟಾಚಾರದ ಆರೋಪ ಹೊತ್ತವರನ್ನು ಅದೇ ಹುದ್ದೆಗಳಲ್ಲಿ ಮುಂದುವರಿಸುವ ಪ್ರವೃತ್ತಿಯನ್ನು ಕೈಬಿಡಬೇಕು. ಭ್ರಷ್ಟಾಚಾರ ನಿಗ್ರಹಿಸುವ ವಿಚಾರದಲ್ಲಿ ಯಾವ ಒತ್ತಡಕ್ಕೂ ಮಣಿಯದೆ, ವಿಳಂಬಕ್ಕೆ ಅವಕಾಶ ಇಲ್ಲದಂತೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.