ಸಂಪಾದಕೀಯ | ‘ಇಂಡಿಯಾ’ ಮತ್ತು ‘ಭಾರತ’; ಮಕ್ಕಳ ಮೇಲೆ ಹೇರಿಕೆ ಬೇಡ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಕೆಲಸ ಸಂಶೋಧನೆ ಗಳನ್ನು ಕೈಗೊಳ್ಳುವುದು ಹಾಗೂ ಸೂಕ್ತವಾದ ಪಾಠವನ್ನು ರೂಪಿಸುವುದು. ಆದರೆ ಭಾರತವೆಂಬ ಹೆಸರಿನ ದೇಶವನ್ನು, ‘ಭಾರತ’ ಎಂದು ಕರೆಯಬೇಕೇ ‘ಇಂಡಿಯಾ’ ಎಂದು ಕರೆಯಬೇಕೇ ಎಂಬ ವಿಚಾರದಲ್ಲಿ ಮಂಡಳಿಯು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯಪ್ರೇರಿತ ನಡೆಯಿಂದ ಪ್ರೇರಣೆ ಪಡೆದಿರುವಂತೆ ಕಾಣುತ್ತಿದೆ. ಮೋದಿ ನೇತೃತ್ವದ ಸರ್ಕಾರವು ಈಚೆಗೆ ದೇಶದಲ್ಲಿ ನಡೆದ ಜಿ20 ಶೃಂಗದ ಸಂದರ್ಭದಲ್ಲಿ, ರಾಜಕೀಯ ಉದ್ದೇಶಗಳಿಂದಾಗಿ, ಅಧಿಕೃತ ಸಂವಹನಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’ ಪದವನ್ನು ಬಳಸಿತ್ತು. ಆದರೆ, ಸಂವಿಧಾನದಲ್ಲಿ ಹೇಳಿರುವ ‘ಇಂಡಿಯಾ, ಅಂದರೆ ಭಾರತ’ ಎಂಬುದಕ್ಕೆ ತನ್ನ ಬದ್ಧತೆ ಇದೆ ಎಂಬ ನಿಲುವನ್ನು ಕೇಂದ್ರವು ನಂತರದಲ್ಲಿ ವ್ಯಕ್ತಪಡಿ ಸಿದೆ. ಹೀಗಿದ್ದರೂ, ಮಂಡಳಿಯು ರಚಿಸಿದ್ದ ಸಮಿತಿಯೊಂದು ಶಾಲೆಯ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಪದದ ಬದಲಿಗೆ ‘ಭಾರತ’ ಪದವನ್ನು ಬಳಸಬೇಕು ಎಂದು ಶಿಫಾರಸು ಮಾಡಿದೆ. ಎನ್‌ಸಿಇಆರ್‌ಟಿಯ 2022ನೇ ಸಾಲಿನ ಸಮಾಜವಿಜ್ಞಾನ ಸಮಿತಿಯ ಅಧ್ಯಕ್ಷ ಪ್ರೊ. ಸಿ.ಐ.ಐಸಕ್ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ಶಿಫಾರಸುಗಳು ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಎಲ್ಲ ವಿಷಯಗಳ ಪಠ್ಯಕ್ರಮ ದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು (ಐಕೆಎಸ್) ಅಳವಡಿಸಬೇಕು ಎಂದು ಕೂಡ ಸಮಿತಿಯು ಶಿಫಾರಸು ಮಾಡಿದೆ. ಭಾರತದ ‘ಪುರಾತನ ಇತಿಹಾಸ’ದ ಬದಲು ‘ಶಾಸ್ತ್ರೀಯ ಇತಿಹಾಸ’ವನ್ನು ಅಳವಡಿಸಬೇಕು ಎಂಬುದು ಶಿಫಾರಸಿನ ಒಂದು ಭಾಗ. ಹಿಂದುತ್ವದ ಕಡೆ ಒಲವು ಹೊಂದಿರುವ ಪ್ರೊ. ಐಸಕ್ ಅವರು, ಸಮಿತಿಯು ಸರ್ಕಾರದಿಂದ ಪ್ರಭಾವಿತ ಆಗಿಲ್ಲ ಎಂದು ಹೇಳಿದ್ದಾರೆ. ಆದರೆ ಇಂತಹ ಶಿಫಾರಸುಗಳು ಯಾರ ಪ್ರಭಾವವೂ ಇಲ್ಲದೆ ಜೀವ ಪಡೆದುಕೊಳ್ಳುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯೇ. ‘ಭಾರತ’ ಪದವನ್ನು ವ್ಯಾಪಕವಾಗಿ ಬಳಕೆ ಮಾಡಲು ಕೇಂದ್ರ ಸರ್ಕಾರವು ಈಚಿನ ದಿನಗಳಲ್ಲಿ ಯತ್ನಿಸಿದೆ. ‘ಭಾರತ’ ಎಂಬುದು ಈ ದೇಶದ ಮೂಲ ಹೆಸರು, ‘ಇಂಡಿಯಾ’ ಎಂಬುದು ವಸಾಹತುಶಾಹಿ ಕಾಲದ ಪದ ಎಂಬ ವಾದವನ್ನು ಅದು ಜನರ ಮುಂದಿರಿಸಿದೆ. ರಾಷ್ಟ್ರಪತಿಯವರು ರವಾನಿಸುವ ಆಹ್ವಾನ ಪತ್ರಿಕೆಗಳಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಎಂದು ಉಲ್ಲೇಖಿಸುವುದು ವಾಡಿಕೆ. ಆದರೆ ಈಚೆಗೆ ದೇಶದಲ್ಲಿ ನಡೆದ ಜಿ20 ಶೃಂಗಸಭೆಗೆ ಸಂಬಂಧಿಸಿದ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಬರೆಯಲಾಗಿತ್ತು. ಅದಾದ ನಂತರದಲ್ಲಿ, ಬೇರೆ ಕೆಲವು ಸಂದರ್ಭಗಳಲ್ಲಿಯೂ ‘ಭಾರತ’ ಪದವನ್ನು ಕೇಂದ್ರವು ಬಳಸಿದೆ. ತಾನು ಹೆಚ್ಚು ಬಯಸುವ ಹಾಗೂ ದೇಶದ ಅಧಿಕೃತವಾದ ಹೆಸರು ಇದು ಎಂಬ ಚಿತ್ರಣವನ್ನು ನೀಡಲು ಕೂಡ ಕೇಂದ್ರವು ಯತ್ನಿಸಿದೆ. ದೇಶದ ‘ನಿಜವಾದ’ ಹಾಗೂ ‘ಅಧಿಕೃತವಾದ’ ಪ್ರತಿನಿಧಿ ತಾನು ಎಂದು ಬಿಂಬಿಸಿಕೊಂಡು, ಅದರ ರಾಜಕೀಯ ಲಾಭವನ್ನು ಪಡೆದುಕೊಳ್ಳುವುದು ಈ ಯತ್ನದ ಹಿಂದಿರುವ ಉದ್ದೇಶ. ಇಲ್ಲಿ ಇನ್ನೊಂದು ರಾಜಕೀಯ ಉದ್ದೇಶವೂ ಇದೆ. ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು ತಮ್ಮ ಒಕ್ಕೂಟದ ಹೆಸರಿನ ಸಂಕ್ಷಿಪ್ತ ರೂಪವು ‘ಇಂಡಿಯಾ’ ಎಂದು ಬರುವಂತೆ ನೋಡಿಕೊಂಡಿವೆ. ಈ ಹೆಸರಿಟ್ಟುಕೊಂಡಿದ್ದನ್ನು ಪ್ರಧಾನಿ ಮೋದಿ ಟೀಕಿಸಿದ್ದಾರೆ. ಬಿಜೆಪಿ ಕೂಡ ಟೀಕಿಸಿದೆ. ಕೇಂದ್ರದ ಎಲ್ಲ ಯತ್ನಗಳ ಮುಂದುವರಿದ ಭಾಗ, ಎನ್‌ಸಿಇಆರ್‌ಟಿ ರಚಿಸಿದ್ದ ಸಮಿತಿಯ ಶಿಫಾರಸು. ‘ಭಾರತ’ ಎಂಬುದು ಈ ದೇಶದ ನಿಜವಾದ ಹೆಸರು ಎಂಬ ಆಲೋಚನೆಯು ಮಕ್ಕಳ ಮನಸ್ಸಿನಲ್ಲಿ ಬೆಳೆಯುವಂತೆ ಮಾಡುವುದು ಇದರ ಉದ್ದೇಶ. ದೇಶದ ಸಂವಿಧಾನವು ಈ ನೆಲವನ್ನು ‘ಇಂಡಿಯಾ, ಅಂದರೆ ಭಾರತ’ ಎಂದು ಕರೆದಿದೆ. ಒಂದು ಹೆಸರನ್ನು ಕೈಬಿಟ್ಟು, ಇನ್ನೊಂದು ಹೆಸರಿಗೆ ಉತ್ತೇಜನ ನೀಡುವುದು ಸರಿಯಾದ ನಡೆ ಅಲ್ಲ. ‘ಇಂಡಿಯಾ’ ಎಂಬ ಪದವು ವಸಾಹತುಶಾಹಿ ಅವಧಿಯಲ್ಲಿ ಜನ್ಮತಾಳಿದ್ದು ಎಂದಷ್ಟೇ ಹೇಳುವುದು ಸರಿಯಲ್ಲ; ಈ ಪದವು ಇತಿಹಾಸದಲ್ಲಿ ವಿಕಾಸ ಹೊಂದುತ್ತಾ ಬಂದಿದೆ, ದೇಶದ ಅಸ್ಮಿತೆಯೊಂದಿಗೆ ಬೆರೆತಿದೆ, ಅರ್ಥವನ್ನು ಹಿಗ್ಗಿಸಿಕೊಂಡಿದೆ. ಹೆಸರುಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಆರಂಭಿಸಿದರೆ, ‘ಭಾರತ’ ಎಂಬ ಪದವೂ ಕೆಲವರಿಗೆ ಆಗಿಬರದಿರಬಹುದು. ಆ ಪದವು ಉತ್ತರ ಭಾರತದ ಒಂದು ರಾಜಮನೆತನದಿಂದ ಪಡೆದಿದ್ದು ಎಂದು ಕೆಲವರು ವಾದಿಸಬಹುದು. ‘ಇಂಡಿಯಾ’ ಪದದ ಬದಲು ‘ಭಾರತ’ ಎಂಬ ಪದವನ್ನು ಬಳಸಬೇಕು ಎನ್ನುವ ಶಿಫಾರಸನ್ನು ವಿರೋಧಿಸುವುದಾಗಿ ಕರ್ನಾಟಕ ಮತ್ತು ಕೇರಳ ಹೇಳಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈ ದೇಶದ ಬಗ್ಗೆ ತಾನು ಹೊಂದಿರುವ ಸೀಮಿತ ದೃಷ್ಟಿಕೋನವನ್ನು ದೇಶದ ಮಕ್ಕಳ ಮೇಲೆ ಹೇರುವ ಕೆಲಸ ಮಾಡಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.