ಸಂಪಾದಕೀಯ | ಮಾಜಿ ಅಧಿಕಾರಿಗಳಿಗೆ ಮರಣದಂಡನೆ; ಭಾರತದ ಸಾಮರ್ಥ್ಯಕ್ಕೆ ಅಗ್ನಿಪರೀಕ್ಷೆ ಭಾರತದ ನೌಕಾಪಡೆಯ ಎಂಟು ಮಂದಿ ಮಾಜಿ ಅಧಿಕಾರಿಗಳಿಗೆ ಕತಾರ್‌ನ ನ್ಯಾಯಾಲಯವು ಮರಣದಂಡನೆ ವಿಧಿಸಿರುವುದು ಬಹಳ ಆಘಾತಕಾರಿಯಾದುದು. 2022ರ ಆಗಸ್ಟ್‌ನಲ್ಲಿ ಬಂಧನಕ್ಕೆ ಒಳಗಾದ ಇವರು ಅಲ್ಲಿಂದ ಈತನಕ ಜೈಲಿನಲ್ಲಿಯೇ ಇದ್ದಾರೆ. ಇವರ ಮೇಲೆ ಇರುವ ಆರೋಪಗಳು ಏನು ಎಂಬುದನ್ನು ಕತಾರ್‌ ಸರ್ಕಾರವಾಗಲೀ ಭಾರತದ ವಿದೇಶಾಂಗ ಸಚಿವಾಲಯವಾಗಲೀ ಬಹಿರಂಗ ಮಾಡಿಲ್ಲ. ಮೂರನೇ ದೇಶವೊಂದರ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪ ಇವರ ಮೇಲೆ ಇದೆ ಎಂಬ ಊಹಾ‍ಪೋಹಕ್ಕೆ ಇದು ಕಾರಣವಾಗಿದೆ. ಇದು, ಈ ಮಾಜಿ ಅಧಿಕಾರಿಗಳ ಕುಟುಂಬಗಳಲ್ಲಿ ಕಳವಳ ಮತ್ತು ಗೊಂದಲ ಉಂಟುಮಾಡಿದೆ. ಈ ಎಂಟು ಮಂದಿಯಲ್ಲಿ ಏಳು ಜನರು ನೌಕಾಪ‍ಡೆಯಲ್ಲಿ ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರು. ಕತಾರ್‌ ನ್ಯಾಯಾಲಯದ ತೀರ್ಪು ಹೊರಬಿದ್ದಾಗ ಸರ್ಕಾರವು ‘ಆಘಾತ’ ವ್ಯಕ್ತಪಡಿಸಿದೆ. ಈ ತೀರ್ಪಿನ ಕುರಿತಂತೆ ಸರ್ಕಾರಕ್ಕೆ ಏನೂ ತಿಳಿದಿರಲಿಲ್ಲ ಅಥವಾ ಕತಾರ್‌ ಸರ್ಕಾರವು ನೀಡಿದ ಭರವಸೆಗೆ ವ್ಯತಿರಿಕ್ತವಾದ ತೀರ್ಪು ಬಂದಿದೆ ಎಂಬುದನ್ನು ಇದು ಸೂಚಿಸುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇಂತಹ ಪರಿಸ್ಥಿತಿಯನ್ನು ಈ ಹಿಂದೆ ಕಂಡಿರಲಿಲ್ಲ. 2016ರಲ್ಲಿ ಕುಲಭೂಷಣ್‌ ಜಾಧವ್‌ ‍ಪ್ರಕರಣವು ಎದುರಾಗಿತ್ತು. ಆದರೆ, ಆ ಸಂದರ್ಭದಲ್ಲಿ ಭಾರತವು ನಿಭಾಯಿಸಬೇಕಾಗಿದ್ದುದು ಪಾಕಿಸ್ತಾನವನ್ನು. ಅದಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಕೈಗೊಳ್ಳುವುದು ಸರ್ಕಾರಕ್ಕೆ ಸುಲಭವಾಗಿತ್ತು. ಜಾಧವ್‌ ಅವರು ಭಾರತದ ಬೇಹುಗಾರ ಮತ್ತು ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಷಡ್ಯಂತ್ರ ಮಾಡಿದ್ದರು ಎಂದು ಪಾಕಿಸ್ತಾನ ಆರೋಪ ಮಾಡಿತ್ತು. ಆದರೆ, ಇದು ನೆರೆಯ ಪ್ರತಿಕೂಲವಾದ ದೇಶದ ನಿರಾಧಾರ ಹೇಳಿಕೆ ಎಂದು ಭಾರತವು ತಳ್ಳಿಹಾಕಿತ್ತು. ಆದರೆ ಕತಾರ್‌ನ ವಿಷಯದಲ್ಲಿ ಈ ರೀತಿ ನಡೆದುಕೊಳ್ಳುವುದು ಭಾರತಕ್ಕೆ ಸಾಧ್ಯವಿಲ್ಲ. ಕತಾರ್‌ ಜೊತೆಗೆ ಕೆಲ ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಸ್ನೇಹಸಂಬಂಧವನ್ನು ಭಾರತ ಬೆಳೆಸಿಕೊಂಡಿದೆ. ಕತಾರ್‌ ಮತ್ತು ಭಾರತದ ನಡುವೆ ದೊಡ್ಡ ಮಟ್ಟದ ಆರ್ಥಿಕ ಸಂಬಂಧ ಇದೆ. ದ್ವಿಪಕ್ಷೀಯ ವ್ಯಾಪಾರದ ವಾರ್ಷಿಕ ವಹಿವಾಟು 1,500 ಕೋಟಿ ಡಾಲರ್‌ (ಸುಮಾರು ₹1.25 ಲಕ್ಷ ಕೋಟಿ). ಇದರಲ್ಲಿ ಭಾರತದ ಆಮದಿನ ಪ್ರಮಾಣವೇ ಶೇ 80ರಷ್ಟಿದೆ. ಭಾರತಕ್ಕೆ ಅನಿಲ ಪೂರೈಸುವ ಪ್ರಮುಖ ದೇಶಗಳಲ್ಲಿ ಕತಾರ್ ಕೂಡ ಒಂದು. ಭಾರತದ ಅಗತ್ಯದ ಶೇಕಡ 42ರಷ್ಟು ನೈಸರ್ಗಿಕ ಅನಿಲವನ್ನು ಈ ದೇಶ ಒದಗಿಸುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಎರಡೂ ದೇಶಗಳ ನೌಕಾಪಡೆಗಳ ನಡುವೆ ಕೂಡ ಬಲವಾದ ಸಂಬಂಧ ಇದೆ. ಭಾರತ ಮೂಲದ ಜನರು ಬಹುದೊಡ್ಡ ಸಂಖ್ಯೆಯಲ್ಲಿ ಅಲ್ಲಿ ನೆಲೆಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಎಂಟು ಲಕ್ಷ ಭಾರತೀಯರು ಅಲ್ಲಿ ಇದ್ದಾರೆ. ಆ ದೇಶದ ಒಟ್ಟು ಜನಸಂಖ್ಯೆಯೇ 27 ಲಕ್ಷ. ಆ ದೇಶದಲ್ಲಿ ನೆಲೆಯಾಗಿರುವ ಬೇರೊಂದು ದೇಶದ ಸಮುದಾಯಗಳಲ್ಲಿ ಭಾರತೀಯರೇ ಹೆಚ್ಚು. ಹಮಾಸ್‌ ಬಂಡುಕೋರರ ಬಳಿ ಇರುವ ಒತ್ತೆಯಾಳುಗಳನ್ನು ಬಿಡಿಸಲು ಈ ಪುಟ್ಟ ದೇಶವು ಗಂಭೀರವಾದ ಪ್ರಯತ್ನ ನಡೆಸುತ್ತಿದೆ. ಅಮೆರಿಕ, ಇಸ್ರೇಲ್‌ನಂತಹ ಪ್ರಮುಖ ದೇಶಗಳ ಮೇಲೆ ಕತಾರ್‌ ಹೊಂದಿರುವ ಪ್ರಭಾವವನ್ನು ಇದು ತೋರಿಸುತ್ತದೆ. ಹಾಗಾಗಿಯೇ, ಕೆನಡಾ ಜೊತೆಗೆ ಇತ್ತೀಚೆಗೆ ವರ್ತಿಸಿದ ರೀತಿಯಲ್ಲಿ ಕತಾರ್‌ ಜೊತೆಗೆ ವರ್ತಿಸುವುದು ಭಾರತಕ್ಕೆ ಸಾಧ್ಯವಾಗದು. ಈಗಿನ ಈ ವಿದ್ಯಮಾನವು ಯಾವ ಮಟ್ಟದ ಪರಿಣಾಮ ಬೀರಬಹುದು ಎಂಬುದು ಖಚಿತವಿಲ್ಲ. ಆದರೆ, ಸಂದರ್ಭವು ಅತ್ಯಂತ ನಾಜೂಕು ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಲೇಬೇಕು. ಸೆರೆಯಲ್ಲಿರುವ ಭಾರತೀಯರನ್ನು ಬಿಡಿಸಿ ತರಲು ಲಭ್ಯವಿರುವ ಕಾನೂನಾತ್ಮಕ ಮತ್ತು ರಾಜಕೀಯ ಆಯ್ಕೆಗಳೆಲ್ಲವನ್ನೂ ಬಳಸಿಕೊಳ್ಳುವುದಾಗಿ ಭಾರತ ಸರ್ಕಾರ ಹೇಳಿದೆ. ಕತಾರ್‌ನ ನ್ಯಾಯಾಂಗ ವ್ಯವಸ್ಥೆಯು ಹೇಗಿದೆ ಎಂಬುದರ ಕುರಿತು ಹೆಚ್ಚಿನದೇನೂ ತಿಳಿದಿಲ್ಲ. ಪಾರದರ್ಶಕತೆ ಇಲ್ಲದೇ ಇದ್ದರೂ ಹಲವು ಹಂತಗಳ ಮೇಲ್ಮನವಿ ವ್ಯವಸ್ಥೆ ಅಲ್ಲಿ ಇದ್ದಂತಿದೆ. ಅಲ್ಲಿನ ದೊರೆಯು ಕ್ಷಮಾದಾನದ ಹಕ್ಕನ್ನೂ ಬಳಸಿಕೊಳ್ಳಬಹುದು. ಆದರೆ, ಅದಕ್ಕೆ ಅತ್ಯುನ್ನತ ಮಟ್ಟದ ರಾಜಕೀಯ ಮಧ್ಯಪ್ರವೇಶ ಬೇಕಾಗುತ್ತದೆ. ಮಾನವ ಹಕ್ಕುಗಳ ರಕ್ಷಣೆ ಕುರಿತಂತೆ ಕತಾರ್‌ನ ಹಿನ್ನೆಲೆ ಚೆನ್ನಾಗಿಯೇನೂ ಇಲ್ಲ. ಆದರೆ, ಎರಡು ದಶಕಗಳಲ್ಲಿ ಭಾರತ ಜಾರಿ ಮಾಡಿದಷ್ಟು ಮರಣದಂಡನೆಗಳನ್ನು ಕತಾರ್‌ ಜಾರಿ ಮಾಡಿಲ್ಲ ಎಂಬುದು ಆಶಾದಾಯಕ. ‍ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂಬ ನಿರೀಕ್ಷೆ ಎಂಟು ಮಂದಿಯ ಕುಟುಂಬ, ಸೇನಾಪಡೆಗಳ ಯೋಧರು ಮತ್ತು ಕತಾರ್‌ನಲ್ಲಿರುವ ಭಾರತ ಮೂಲದ ಜನರಲ್ಲಿ ಖಂಡಿತಾ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.