ಸಂಪಾದಕೀಯ | ‘ಸುವರ್ಣ ಕರ್ನಾಟಕ’ ಮೈಲಿಗಲ್ಲು – ಕನ್ನಡ ಬಲವರ್ಧನೆಗೆ ಅಡಿಗಲ್ಲಾಗಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಕರೆದ ಚಾರಿತ್ರಿಕ ವಿದ್ಯಮಾನಕ್ಕೆ ಐವತ್ತು ವರ್ಷಗಳು ತುಂಬಿರುವ ಸಂದರ್ಭ ನಾಡಿನುದ್ದಕ್ಕೂ ಸಹಜವಾಗಿಯೇ ಸಂಭ್ರಮದ ತರಂಗಗಳನ್ನು ಉಂಟುಮಾಡಿದೆ. ಕನ್ನಡ ನಾಡಿಗೆ ‘ಕರ್ನಾಟಕ’ ಎಂದು ಹೆಸರಿಟ್ಟಿದ್ದು ಮಗುವೊಂದಕ್ಕೆ ನಾಮಕರಣ ಮಾಡಿದಷ್ಟು ಸಲೀಸಾಗಿರಲಿಲ್ಲ. 1956ರಲ್ಲಿ ಕರ್ನಾಟಕ ಏಕೀಕರಣಗೊಂಡ ದಿನದಿಂದಲೂ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಕರೆಯಬೇಕೆನ್ನುವ ಅಭಿಪ್ರಾಯ ವ್ಯಕ್ತವಾಗುತ್ತಲೇ ಇತ್ತು. ಆದರೆ, ಅಖಂಡ ಕರ್ನಾಟಕಕ್ಕೊಂದು ಅರ್ಥಪೂರ್ಣ ಹೆಸರು ಬೇಕೆನ್ನುವ ಕನ್ನಡ ಜನಪದದ ಅಪೇಕ್ಷೆ ಮೂರ್ತರೂಪಕ್ಕೆ ಬರಲು ಏಕೀಕರಣ ನಂತರದಲ್ಲಿ ಹದಿನೇಳು ವರ್ಷಗಳು ಬೇಕಾದವು. 1973ರ ನವೆಂಬರ್‌ 1ರಂದು, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಅಧಿಕೃತವಾಗಿ ಕರೆಯಲಾಯಿತು. ಮೈಸೂರು ರಾಜ್ಯ ಕರ್ನಾಟಕವಾಗಿ ರೂಪಾಂತರ ಗೊಳ್ಳಲಿಕ್ಕೆ ಹಲವು ಕಾರಣಗಳಿದ್ದವು. ಮೈಸೂರು ಎನ್ನುವ ಹೆಸರು ಒಂದು ಪ್ರಾಂತ್ಯದ ಹೆಸರನ್ನು ಸೂಚಿಸುವಂತಿತ್ತೇ ಹೊರತು ಸಮಗ್ರ ಕರ್ನಾಟಕವನ್ನು ಸಂಕೇತಿಸುವಂತಿರಲಿಲ್ಲ. ಏಕೀಕರಣದ ನಂತರ ಕನ್ನಡ ನುಡಿ ಮತ್ತು ಸಂಸ್ಕೃತಿಯ ನೆಲೆಗಟ್ಟಿನಲ್ಲಿ ರೂಪುಗೊಂಡಿದ್ದ ಕನ್ನಡನಾಡನ್ನು ಅಖಂಡವಾಗಿ ಗುರುತಿಸುವ ಹೆಸರಿಗಾಗಿ ಹುಡುಕಾಟ ನಡೆದೇ ಇತ್ತು. ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಹೆಸರಿಸಬೇಕೆನ್ನುವ ಜನಸಾಮಾನ್ಯರ ಭಾವನೆಗಳಿಗೆ ಕನ್ನಡ ಚಳವಳಿಗಾರರು, ಲೇಖಕರು ಮತ್ತು ಪ್ರಾಜ್ಞ ರಾಜಕಾರಣಿಗಳು ಒತ್ತಾಸೆಯಾಗಿ ನಿಂತರು. ಆ ಒತ್ತಾಸೆ ಮತ್ತು ಹೋರಾಟದ ಫಲವಾಗಿ, ಕರ್ನಾಟಕ ಎನ್ನುವ ಹೆಸರಿಗೆ ಶಾಸನಸಭೆಯ ಅಂಗೀಕಾರ ದೊರೆಯಿತು. ಏಕೀಕೃತ ಕನ್ನಡನಾಡು ಕರ್ನಾಟಕ ಎನ್ನುವ ಹೆಸರನ್ನು ಪಡೆದ ಸಂದರ್ಭದಲ್ಲಿ, ನಾಡು–ನುಡಿಗೆ ಸಂಬಂಧಿಸಿದಂತೆ ಅನೇಕ ಕನಸುಗಳನ್ನು ಜನಮಾನಸದಲ್ಲಿ ಬಿತ್ತಲಾಗಿತ್ತು. ನಾಡಿನ ಅಮೂಲ್ಯ ಪ್ರಾಕೃತಿಕ ಸಂಪತ್ತನ್ನು ಸಂರಕ್ಷಿಸುವುದು ಹಾಗೂ ಆ ಸಂಪತ್ತನ್ನು ನಾಡವರ ಹಿತಕ್ಕೆ ಬಳಸಿಕೊಳ್ಳುವ ಮೂಲಕ ಆಧುನಿಕ ಕರ್ನಾಟಕವನ್ನು ಕಟ್ಟುವ ಹಂಬಲ ‘ಕರ್ನಾಟಕ ನಾಮಕರಣ’ದ ಆಶಯಗಳಲ್ಲೊಂದಾಗಿತ್ತು. ಹಾಗೆಯೇ, ಕರ್ನಾಟಕದ ಬಹುತ್ವ ಪರಂಪರೆಯ ಅನನ್ಯತೆಯನ್ನು ಸಂರಕ್ಷಿಸಿಕೊಂಡು, ಭಾರತ ಒಕ್ಕೂಟದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ದಿಸೆಯಲ್ಲಿ ನಾಡನ್ನು ಸಜ್ಜುಗೊಳಿಸುವ ಆಕಾಂಕ್ಷೆಯೂ ಇತ್ತು. ಕಳೆದ ಐವತ್ತು ವರ್ಷಗಳಲ್ಲಿ ಈ ಆಶಯ ಎಷ್ಟರಮಟ್ಟಿಗೆ ಸಾಕಾರಗೊಂಡಿದೆ ಎನ್ನುವುದರ ಅವಲೋಕನ ‘ಕರ್ನಾಟಕ ಸುವರ್ಣ ಮಹೋತ್ಸವ’ ಸಂದರ್ಭದಲ್ಲಿ ನಡೆಯಬೇಕಾಗಿದೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆದ ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಗತಿಗಳು ನಾಡಿನ ಹೆಮ್ಮೆಯನ್ನು ಹೆಚ್ಚಿಸುವಂತೇನೂ ಇರಲಿಲ್ಲ ಎನ್ನುವುದನ್ನು ಮರೆಯಬಾರದು. ಬಳ್ಳಾರಿಯನ್ನು ಕೇಂದ್ರವಾಗಿಸಿಕೊಂಡು ನಡೆದ ಗಣಿಗಾರಿಕೆ ಹಾಗೂ ಅದರ ಪರಿಣಾಮಗಳು ಪ್ರಾಕೃತಿಕವಾಗಿಯೂ, ರಾಜಕೀಯವಾಗಿಯೂ ರಾಜ್ಯದ ವರ್ಚಸ್ಸನ್ನು ಮಸುಕುಗೊಳಿಸುವಂತಿದ್ದವು. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿಯೊಂದನ್ನು ಅಳವಡಿಸಿಕೊಳ್ಳುವುದು ನಮಗೆ ಸಾಧ್ಯವಾಗಿಲ್ಲ. ಧರ್ಮ ಮತ್ತು ರಾಜಕಾರಣದ ನಡುವಣ ಗೆರೆ ತೆಳುವಾಗುತ್ತಾ ಹೋಗಿರುವುದು ಕೂಡ ಕನ್ನಡ–ಕರ್ನಾಟಕದ ‘ವಿವೇಕ ಪರಂಪರೆ’ಗೆ ಪೂರಕವಾಗಿಲ್ಲ. ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ನಾಡಗೀತೆಯ ಆಶಯಕ್ಕೆ ಗಾಸಿ ಉಂಟುಮಾಡುವ ಘಟನೆಗಳು ರಾಜ್ಯದ ವಿವಿಧ ಭಾಗಗಳಿಂದ ನಿರಂತರವಾಗಿ ವರದಿಯಾಗುತ್ತಿರುವುದು ಕಳವಳಕಾರಿ. ಈ ಎಲ್ಲ ವಿದ್ಯಮಾನಗಳ ಚರ್ಚೆಗೆ ‘ಕರ್ನಾಟಕ 50’ರ ಸಂದರ್ಭ ಅವಕಾಶ ಕಲ್ಪಿಸಬೇಕು. ಯಾವುದೇ ಸಂಭ್ರಮದ ಸಂದರ್ಭ ಅರ್ಥಪೂರ್ಣವಾಗುವುದು ಕಳೆದ ದಿನಗಳನ್ನು ವಿಮರ್ಶಾತ್ಮಕ ವಾಗಿ ನೋಡುತ್ತ, ವರ್ತಮಾನದ ತವಕ–ತಲ್ಲಣಗಳನ್ನು ಒರೆಗೆ ಹಚ್ಚುತ್ತ, ಆರೋಗ್ಯಕರ ನಾಳೆಗಳನ್ನು ರೂಪಿಸಿಕೊಳ್ಳಲು ಅಗತ್ಯವಾದ ಅರಿವಿನ ಬೆಳಕನ್ನು ಪಡೆದುಕೊಳ್ಳುವುದರಲ್ಲಿ. ಈ ಅರಿವಿನ ಉದ್ದೀಪನದ ರೀತಿಯಲ್ಲಿ ‘ಕರ್ನಾಟಕ ಸುವರ್ಣ ಮಹೋತ್ಸವ’ ಸಂದರ್ಭವನ್ನು ನಾಡು ಬಳಸಿಕೊಳ್ಳಬೇಕಾಗಿದೆ. ‘ಕರ್ನಾಟಕ 50’ರ ಸಂಭ್ರಮವನ್ನು ಸರ್ಕಾರ ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ಆಚರಿಸಲಿದೆ. ಆದರೆ, ಈ ಸಂಭ್ರಮವು ಅದ್ದೂರಿ ಕಾರ್ಯಕ್ರಮಗಳಿಗೆ ಹಾಗೂ ಗೌರವ ಸಮರ್ಪಣೆಗಳಿಗೆ ಸೀಮಿತವಾಗಬಾರದು. ನುಡಿ ಸಂಭ್ರಮದಿಂದಷ್ಟೇ ‘ಆಧುನಿಕ ಕರ್ನಾಟಕ’ ತಲೆ ಎತ್ತುವುದು ಸಾಧ್ಯವಿಲ್ಲ. ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನ ಮೂಲಕ ನಾಡು–ನುಡಿಯ ಸಾಧ್ಯತೆಗಳನ್ನು ರೂಪಿಸುವ ಸವಾಲಿಗೆ ಮುಖಾಮುಖಿಯಾಗದೆ ಹೋದರೆ ಕನ್ನಡದ ನಾಳೆಗಳು ಉಜ್ವಲಗೊಳ್ಳುವ ಕನಸು ನನಸಾಗುವುದು ಅಸಾಧ್ಯ. ‘ಪ್ರಜಾಪ್ರಭುತ್ವ ಭಾರತ’ವನ್ನು ಬಲಗೊಳಿಸುವ ದಿಸೆಯಲ್ಲಿ ‘ಪ್ರಜಾಪ್ರಭುತ್ವ ಕರ್ನಾಟಕ’ ಹೆಗಲೆಣೆಯಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವೂ ಇದೆ. ಕನ್ನಡವನ್ನು ಪರಿಣಾಮಕಾರಿ ಯಾಗಿ ಆಡಳಿತ ಭಾಷೆಯಾಗಿಸುವ ಹಾಗೂ ಶಿಕ್ಷಣ ಮಾಧ್ಯಮದ ಭಾಷೆಯಾಗಿಸುವ ನಿಟ್ಟಿನಲ್ಲಿ ಸರ್ಕಾರ ದೃಢ ಪ್ರಯತ್ನಗಳನ್ನು ನಡೆಸಬೇಕಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ, ವರ್ಷದಿಂದ ವರ್ಷಕ್ಕೆ ದುರ್ಬಲ ಗೊಳ್ಳುತ್ತಿರುವ ಕನ್ನಡ ಶಾಲೆಗಳ ತಳಹದಿಯನ್ನು ಗಟ್ಟಿಗೊಳಿಸಬೇಕಾಗಿದೆ. ಕನ್ನಡ ಶಾಲೆಗಳೇ ಇಲ್ಲದೆ ಹೋದರೆ, ಕನ್ನಡದ ನಾಳೆಗಳ ಕುರಿತ ಯಾವ ಕನಸುಗಳಿಗೂ ಅರ್ಥವಿಲ್ಲ ಎನ್ನುವುದನ್ನು ನಾಗರಿಕರು ಹಾಗೂ ಸರ್ಕಾರ ಮರೆಯಬಾರದು. ಹೊಸ ಕಾಲದ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವಂತೆ ಕನ್ನಡ ಹಾಗೂ ಕನ್ನಡಿಗರ ಸಬಲೀಕರಣಕ್ಕೆ ‘ಕರ್ನಾಟಕ 50’ರ ಸಂಭ್ರಮ ಪ್ರೇರಣೆಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.