ಸಂಪಾದಕೀಯ | ಕೇರಳ ಬಾಂಬ್ ಸ್ಫೋಟ; ಕಳವಳ ಮೂಡಿಸುವ ಕೃತ್ಯ ಕೇರಳದಲ್ಲಿ ಕ್ರೈಸ್ತರ ಧಾರ್ಮಿಕ ಸಭೆಯ ಮೇಲೆ ಭಾನುವಾರ ನಡೆದ ಬಾಂಬ್‌ ದಾಳಿಗೂ ಯಾವುದೇ ಭಯೋತ್ಪಾದಕ ಸಂಘಟನೆಗೂ ನೇರವಾಗಿ ಸಂಬಂಧ ಇದ್ದಂತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಆದರೆ, ಈ ದಾಳಿಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಬಾಂಬ್ ದಾಳಿಯು ಮೂವರನ್ನು ಬಲಿ ತೆಗೆದುಕೊಂಡಿದೆ. ಇವರಲ್ಲಿ ಒಬ್ಬ ಬಾಲಕಿಯೂ ಸೇರಿದ್ದಾಳೆ. ಹಲವರಿಗೆ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಕ್ರೈಸ್ತರ ಧಾರ್ಮಿಕ ಪಂಥವಾಗಿರುವ ‘ಯಹೋವನ ಸಾಕ್ಷಿಗಳು’ ಈ ಪ್ರಾರ್ಥನಾ ಸಭೆಯನ್ನು ಆಯೋಜಿಸಿತ್ತು. ಇದರಲ್ಲಿ ಅಂದಾಜು ಎರಡು ಸಾವಿರ ಮಂದಿ ಪಾಲ್ಗೊಂಡಿದ್ದರು. ಈ ಪಂಥದ ಜೊತೆ ಇದ್ದು, ನಂತರ ಅದರಿಂದ ದೂರವಾಗಿರುವ ಡಾಮಿನಿಕ್ ಮಾರ್ಟಿನ್‌ ಎಂಬ ವ್ಯಕ್ತಿ ಸ್ಫೋಟದ ಹೊಣೆ ಹೊತ್ತು ಪೊಲೀಸರಿಗೆ ಶರಣಾಗಿದ್ದಾನೆ. ಈತನೇ ಬಾಂಬ್‌ ಸ್ಫೋಟಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಪಂಥವು ‘ದೇಶವಿರೋಧಿ’ ಬೋಧನೆಗಳನ್ನು ಮಾಡುತ್ತಿತ್ತು, ‘ಆ ಕಾರಣಕ್ಕೆ ಬಾಂಬ್ ದಾಳಿ ನಡೆಸಲು ತೀರ್ಮಾನಿಸಲಾಯಿತು’ ಎಂದು ಈತ ಹೇಳಿದ್ದಾನೆ. ಈತನ ಹೇಳಿಕೆಯ ಪ್ರಕಾರ, ಈ ವಿಚಾರವನ್ನು ಪಂಥದವರಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ತನ್ನ ನಿಲುವನ್ನು ಬದಲಿಸಿಕೊಳ್ಳಲು ಪಂಥವು ಸಿದ್ಧವಿಲ್ಲದಿದ್ದ ಕಾರಣ ಬಾಂಬ್ ದಾಳಿ ನಡೆಸಲು ತೀರ್ಮಾನಿಸಲಾಯಿತು ಎಂದು ಮಾರ್ಟಿನ್ ಹೇಳಿಕೊಂಡಿದ್ದಾನೆ. ಸ್ಫೋಟದ ಬಗ್ಗೆ ಕೇರಳ ಪೊಲೀಸರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೇರಿದಂತೆ ಕೆಲವು ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಹಲವು ಸಂಗತಿಗಳು ಇನ್ನಷ್ಟೇ ಸ್ಪಷ್ಟವಾಗಬೇಕಿವೆ. ಬಾಂಬ್‌ ಇರಿಸಿದ್ದು ಮಾರ್ಟಿನ್‌ ಎಂಬುದಕ್ಕೆ ಸಾಕ್ಷ್ಯಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ತಾನು ಯಾರ ಜೊತೆಗೂ ಸೇರಿ ಈ ಕೆಲಸ ಮಾಡಿಲ್ಲ, ಒಬ್ಬನೇ ಇದನ್ನು ಮಾಡಿದ್ದೇನೆ ಎಂದು ಮಾರ್ಟಿನ್ ಹೇಳಿದ್ದಾನೆ. ಈತ ಯಾವುದಾದರೂ ಸಂಘಟನೆಯ ಪರವಾಗಿ ಈ ಕೆಲಸ ಮಾಡಿರಬಹುದು ಎಂಬ ಆರೋಪಗಳನ್ನು ಅಲ್ಲಗಳೆಯಲು ಈ ಹಂತದಲ್ಲಿ ಆಗದು. ಹಾಗೆಯೇ, ಪೊಲೀಸರು ಇದುವರೆಗೆ ಹೊಂದಿರುವ ಮಾಹಿತಿ ಅನ್ವಯ, ಈತ ಸಂಘಟನೆಯೊಂದರ ಜೊತೆ ಶಾಮೀಲಾಗಿ ಸ್ಫೋಟ ನಡೆಸಿದ್ದಾನೆ ಎಂದು ಕೂಡ ಖಚಿತವಾಗಿ ಹೇಳಲಾಗದು. ‌ ಸ್ಫೋಟ ನಡೆಸಿರುವುದಕ್ಕೆ ಈತ ನೀಡಿರುವ ಕಾರಣಗಳು ತೃಪ್ತಿಕರವಾಗಿಲ್ಲ. ಹೀಗಿದ್ದರೂ, ಈತ ನೀಡಿರುವ ಕಾರಣಗಳು ಆತನ ಮಾನಸಿಕ ಸ್ಥಿತಿಯನ್ನು ಅವಲಂಬಿಸಿವೆ. ಈತ ನೀಡಿದಂತಹ ಕಾರಣಗಳಿಗೆ ಕೆಲವರನ್ನು ಕೊಲ್ಲಲು ಮುಂದಾಗುವ ವ್ಯಕ್ತಿ ಮಾನಸಿಕವಾಗಿ ಸ್ಥಿಮಿತದಲ್ಲಿ ಇದ್ದಾನೆ ಎನ್ನಲು ಆಗುವುದಿಲ್ಲ. ಮಾರ್ಟಿನ್‌ ಹೊಂದಿರುವಂತಹ ಆಲೋಚನೆಗಳು ಭಯೋತ್ಪಾದಕನಲ್ಲಿಯೂ ಇರುತ್ತವೆಯಾದರೂ ಸಾಂಪ್ರದಾಯಿಕ ನೆಲೆಯಲ್ಲಿ ಮಾರ್ಟಿನ್‌ನನ್ನು ಭಯೋತ್ಪಾದಕ ಎಂದು ಕರೆಯಲು ಆಗುವುದಿಲ್ಲ. ಮುಖ್ಯವಾಹಿನಿಯಲ್ಲಿ ಇಲ್ಲದ ಪಂಥಗಳು ಕೆಲವು ಸಂದರ್ಭಗಳಲ್ಲಿ ಬಹಳ ವಿಚಿತ್ರವಾದ ಪ್ರವೃತ್ತಿಗಳನ್ನು ಹುಟ್ಟುಹಾಕುತ್ತವೆ. ಇಂಟರ್ನೆಟ್‌ನಿಂದ ಮಾಹಿತಿ ಪಡೆದು ಬಾಂಬ್‌ ಸಿದ್ಧಪಡಿಸುವುದನ್ನು ಕಲಿತಿದ್ದಾಗಿ, ಕೆಲವು ವಾರಗಳ ಅವಧಿಯಲ್ಲಿ ಬಾಂಬ್‌ ಸಿದ್ಧಪಡಿಸಿದ್ದಾಗಿ ಮಾರ್ಟಿನ್‌ ಹೇಳಿರುವುದು ಆತಂಕ ಮೂಡಿಸುವಂಥದ್ದು. ಸಹಸ್ರಾರು ಮಂದಿ ಸೇರುವ ಸಭೆಗಳಲ್ಲಿ ಭದ್ರತಾ ವ್ಯವಸ್ಥೆಯ ಕೊರತೆಯನ್ನು ಈ ಸ್ಫೋಟವು ಎತ್ತಿತೋರಿಸಿದೆ.‌ ಸ್ಫೋಟದ ಬಗ್ಗೆ ವರದಿಗಳು ಬಂದ ತಕ್ಷಣವೇ, ಈ ಘಟನೆಗೆ ಕೋಮು ಬಣ್ಣ ನೀಡಲು ಕೆಲವರು ಪ್ರಯತ್ನಿಸಿದ್ದು ಬಹಳ ಗಂಭೀರವಾದ ಸಂಗತಿ. ಇದು ಭಯೋತ್ಪಾದಕರು ನಡೆಸಿದ ಕೃತ್ಯ, ಇದಕ್ಕೂ ಪಶ್ಚಿಮ ಏಷ್ಯಾದಲ್ಲಿನ ಈಗಿನ ಸ್ಥಿತಿಗೂ ಸಂಬಂಧ ಇದೆ ಎಂದು ಹೇಳುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪ‍ಕವಾಗಿ ಹರಿದಾಡಿದವು. ಇಂತಹ ಊಹಾಪೋಹಗಳಿಗೆ ಬಿಜೆಪಿಯ ಕೆಲವು ಪ್ರಮುಖರು ಪ್ರಚೋದನೆ ನೀಡುವ ಕೆಲಸ ಮಾಡಿದರು. ಇವು ಸಮಾಜದಲ್ಲಿ ದ್ವೇಷ ಹಾಗೂ ವಿಭಜನೆಯನ್ನು ಹುಟ್ಟುಹಾಕುವ ಉದ್ದೇಶ ಹೊಂದಿದ್ದವು. ಇಂತಹ ಹೇಳಿಕೆಗಳು ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವ ವ್ಯಕ್ತಿಗಳಿಂದಲೂ ಬಂದಿವೆ. ದ್ವೇಷದ ಸಂದೇಶ ರವಾನಿಸಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇಂತಹ ಸಂದೇಶಗಳನ್ನು ರವಾನಿಸಲು ಉತ್ತೇಜನ ನೀಡುವ ಮನಃಸ್ಥಿತಿಯು ಬಾಂಬ್ ಇಡಲು ಪ್ರೇರಣೆ ನೀಡಿದ ಮನಃಸ್ಥಿತಿಯಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಅಪಾಯಕಾರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.