– ನಾಗರಿಕ ಪ್ರಾಧಿಕಾರಗಳ ನಿರ್ಲಕ್ಷ್ಯ: ಬೆಂಗಳೂರಲ್ಲಿ ಅತಿ ಹೆಚ್ಚು ಸಾವು ಬೆಂಗಳೂರು ನಗರವನ್ನು ಜಾಗತಿಕ ಮಟ್ಟದ ನಗರವನ್ನಾಗಿ ಬೆಳೆಸಲಾಗುವುದು ಎಂಬ ಭರವಸೆ ನೀಡಿ ಪ್ರತಿವರ್ಷವೂ ರಾಜ್ಯದ ಬಜೆಟ್‌ನ ಗಣನೀಯವಾದ ಭಾಗವನ್ನು ಈ ಸಲುವಾಗಿ ಮೀಸಲಿಡಲಾಗು ತ್ತಿದೆ. ಹಾಗಿದ್ದರೂ ಬೆಂಗಳೂರು ನಗರ ಮಾತ್ರ ಅವ್ಯವಸ್ಥೆಯ ಆಗರವಾಗಿಯೇ ಇದೆ. ನಗರದ ನಾಗರಿಕ ಸೇವೆಗಳ ಪ‍್ರಾಧಿಕಾರಗಳು ಪ‍ರಸ್ಪರ ಸಮನ್ವಯ ಇಲ್ಲದೆ ಕೆಲಸ ಮಾಡುತ್ತಾ ಜನರ ಜೀವನವನ್ನು ದುಃಸ್ವಪ್ನವಾಗಿಸಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ (ಎನ್‌ಸಿಆರ್‌ಬಿ) ವರದಿಯ ಪ್ರಕಾರ, ನಾಗರಿಕ ಸೇವಾ ಪ್ರಾಧಿಕಾರಗಳ ನಿರ್ಲಕ್ಷ್ಯದಿಂದಾಗಿ ದೇಶದ ನಗರಗಳ ಪೈಕಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸತತ ಮೂರು ವರ್ಷಗಳಿಂದ ಈ ದಾಖಲೆ ಹೀಗೆಯೇ ಇದೆ. 2018ರಲ್ಲಿ ಇಂತಹ ಮೂರು ಪ್ರಕರಣಗಳು ವರದಿಯಾಗಿದ್ದವು. 2019ರಲ್ಲಿ ಅದು 49ಕ್ಕೆ ಏರಿತು. 2022ರಲ್ಲಿ ಇಡೀ ದೇಶದಲ್ಲಿ ನಡೆದ ಇಂತಹ ಘಟನೆಗಳಲ್ಲಿ ಅರ್ಧದಷ್ಟು ಬೆಂಗಳೂರಿನಿಂದಲೇ ವರದಿಯಾಗಿವೆ. ಪಾದಚಾರಿ ಮಾರ್ಗ ಇಲ್ಲದಿರುವುದು ಅಥವಾ ಅವುಗಳ ಒತ್ತುವರಿಯ ಕಾರಣ ಜನರು ರಸ್ತೆಯಲ್ಲಿಯೇ ನಡೆಯಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅಪಘಾತವಾಗಿ ಜನರು ಜೀವ ಕಳೆದು ಕೊಂಡಿದ್ದಾರೆ. ರಸ್ತೆಯಲ್ಲಿ ಅಪಾಯಕಾರಿಯಾದ ಗುಂಡಿಗಳು, ವಿದ್ಯುತ್‌ ಆಘಾತದಂತಹ ಕಾರಣ ಗಳಿಂದಲೂ ಜನರು ಬಲಿಯಾಗಿದ್ದಾರೆ. ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಅಪಾಯಕ್ಕೆ ಕಾರಣವಾದ ಅಂಶವೇನು ಮತ್ತು ಅದರಿಂದ ಆಗಿರುವ ಪರಿಣಾಮ ಏನು ಎಂಬುದನ್ನು ನಿಖರವಾಗಿ ಗುರುತಿಸಬಹುದು. ರಾಜ್ಯದ ಮೂಲಸೌಕರ್ಯ ವ್ಯವಸ್ಥೆಯ ಕುರಿತ ನಿರ್ಲಕ್ಷ್ಯ ಧೋರಣೆಯು ಅಡಿಗಡಿಗೂ ಅಪಾಯವು ಎದುರಾಗುವಂತೆ ಮಾಡಿದೆ. ರಸ್ತೆಯಲ್ಲಿರುವ ಗುಂಡಿಯ ಕಾರಣಕ್ಕೆ ಉಂಟಾಗುವ ಅಪ‍ಘಾತಗಳು ಸಮರ್ಪಕವಾಗಿ ವರದಿ ಆಗುವುದಿಲ್ಲ. ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ನೆಪ ಹೇಳಲಾಗುತ್ತದೆ. ಮಹಿಳೆ ಮತ್ತು ಅವರ ಮಗು ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ಮೆಟ್ಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಮೃತಪಟ್ಟರು. ಬೆಂಗಳೂರು ನಗರವನ್ನು ‘ಸ್ಮಾರ್ಟ್‌ ಸಿಟಿ’ ಆಗಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದರೂ ಪರಿಸ್ಥಿತಿ ಹೀಗಿದೆ. ನಿರ್ಲಕ್ಷ್ಯದ ಕಾರಣಕ್ಕೆ ನಾಗರಿಕ ಸೇವಾ ಪ್ರಾಧಿಕಾರಗಳ ವಿರುದ್ಧ ಅತಿಹೆಚ್ಚು ದೂರುಗಳು ದಾಖಲಾಗಿದ್ದು ಕೂಡ ಬೆಂಗಳೂರಿನಲ್ಲಿಯೇ ಎಂಬುದರಲ್ಲಿ ಆಶ್ಚರ್ಯದ ವಿಚಾರ ಏನೂ ಇಲ್ಲ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಾಹನಗಳಿಗೇ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸಾರ್ವಜನಿಕ ಸಾರಿಗೆ, ಸೈಕಲ್‌ ಸವಾರರು ಮತ್ತು ಪಾದಚಾರಿಗಳಿಗೆ ಬೇಕಾದ ರೀತಿಯಲ್ಲಿ ನಗರ ವನ್ನು ವಿನ್ಯಾಸ ಮಾಡಲಾಗಿಲ್ಲ. ಇತ್ತೀಚೆಗೆ ನಿರ್ಮಿಸಲಾದ ಕೆಲವು ರಸ್ತೆಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಆದರೆ, ಕೆಟ್ಟ ವಿನ್ಯಾಸ, ನಿರ್ವಹಣೆ ಇಲ್ಲದಿರುವುದು ಅಥವಾ ಎರಡೂ ಕಾರಣಗಳಿಂದಾಗಿ ಪಾದಚಾರಿ ಮಾರ್ಗದ ಬಹುಭಾಗ ನಿರುಪಯೋಗಿ ಆಗಿರುತ್ತದೆ. ವಿದ್ಯುತ್ ತಂತಿ ಜಾಲವನ್ನು ಭೂಮಿಯ ಅಡಿಗೆ ವರ್ಗಾಯಿಸುವ ಕೆಲಸ ಶೇ 95ರಷ್ಟು ಪೂರ್ಣಗೊಂಡಿದೆ ಎಂದು ಬೆಸ್ಕಾಂ ಹೇಳಿಕೊಳ್ಳುತ್ತಿದೆ. ಹೈಟೆನ್ಶನ್‌ ತಂತಿಗಳು ನಗರದ ವಿವಿಧ ಭಾಗಗಳಲ್ಲಿ ನೇತಾಡುತ್ತಿರುತ್ತವೆ. ಬೆಂಗಳೂರಿನ ಜೊತೆಗೆ ಕೆಲವು ವರ್ಷಗಳ ಹಿಂದೆ ವಿಲೀನಗೊಂಡ ನೂರಕ್ಕೂ ಹೆಚ್ಚು ಗ್ರಾಮಗಳ ಸ್ಥಿತಿಯನ್ನು ಕಡಿಮೆ ಹೇಳಿದಷ್ಟೂ ಒಳ್ಳೆಯದು. ನಾಗರಿಕ ಸೇವಾ ಸಂಸ್ಥೆಗಳು ಪ್ರತ್ಯೇಕ ಪ್ರತ್ಯೇಕವಾಗಿ ಕೆಲಸ ಮಾಡುತ್ತಿರುವುದೇ ಬೆಂಗಳೂರಿನ ಬಹುದೊಡ್ಡ ಸಮಸ್ಯೆ. ಎಲ್ಲ ಸಂಸ್ಥೆಗಳ ಉಸ್ತುವಾರಿ ಇರುವ ಏಕೈಕ ಪ್ರಾಧಿಕಾರ ಇಲ್ಲಿ ಇಲ್ಲ. ಹಾಗಾಗಿ, ನಗರದ ಸಮಸ್ಯೆಗಳಿಗೆ ನಾಗರಿಕ ಸೇವಾ ಸಂಸ್ಥೆಗಳು ಒಂದನ್ನೊಂದು ದೂಷಿಸಿಕೊಂಡು ಕಾಲ ಕಳೆಯುತ್ತಿವೆ. ಬೆಂಗಳೂರು ನಗರದ ಎಲ್ಲ ನಾಗರಿಕ ಸೇವಾ ಸಂಸ್ಥೆಗಳ ಮೇಲೆ ನಿಯಂತ್ರಣ ಹೊಂದಿರುವ ಸಂಸ್ಥೆಯೊಂದು ಬೇಕಿದೆ. ನಗರವು ಯೋಜಿತವಾಗಿ ಬೆಳೆಯುವಂತೆ ನೋಡಿಕೊಳ್ಳಲು ಮತ್ತು ನಗರವನ್ನು ಸುರಕ್ಷಿತವಾಗಿಸಲು ಇದು ಅಗತ್ಯ. ಬೆಂಗಳೂರಿನ ‘ಬ್ರ್ಯಾಂಡ್‌ ಮೌಲ್ಯ’ ಹೆಚ್ಚಿಸುವುದಕ್ಕಾಗಿ ದೊಡ್ಡ ದೊಡ್ಡ ಯೋಜನೆಗಳನ್ನು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಘೋಷಿಸಿದ್ದಾರೆ. ನಗರದ ಮೂಲಭೂತ ಅಗತ್ಯಗಳನ್ನೇ ಪೂರೈಸದೆ ಇಂತಹ ಬೃಹತ್‌ ಯೋಜನೆಗಳನ್ನು ಘೋಷಿಸಿ ಉಪಯೋಗ ಏನು? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.