| ‘ಇಂಡಿಯಾ’ ಮೈತ್ರಿಕೂಟ: ತಕ್ಷಣ ನಿವಾರಣೆಯಾಗಲಿ ಅಪನಂಬಿಕೆ ಹಿಂದಿ ಭಾಷಿಕ ರಾಜ್ಯಗಳಾದ ಛತ್ತೀಸಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷದ ಸೋಲು, ಬಿಜೆ‍ಪಿ ವಿರೋಧಿಯಾದ 28 ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಒಳಗೆ ಇರುವ ಬಿರುಕುಗಳು ಮುನ್ನೆಲೆಗೆ ಬರುವಂತೆ ಮಾಡಿದೆ. ಜೊತೆಗೆ, ಈ ಎಲ್ಲ ಪಕ್ಷಗಳು ಒಂದು ತಂಡವಾಗಿ ಕೆಲಸ ಮಾಡಬಹುದೇ ಎಂಬ ಸಂದೇಹವನ್ನೂ ಹುಟ್ಟಿಸಿದೆ. ತೆಲಂಗಾಣ ಉದಯವಾಗಿ ಒಂದು ದಶಕದ ಬಳಿಕ ಆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಿಕ್ಕ ಗೆಲುವು ಕೂಡ ಹಿಂದಿ ಭಾಷಿಕ ರಾಜ್ಯಗಳಲ್ಲಿನ ಸೋಲು ಮತ್ತು ‘ಇಂಡಿಯಾ’ ಮೈತ್ರಿಕೂಟದಲ್ಲಿನ ಬಿರುಕಿನ ಕರಿನೆರಳಿನಲ್ಲಿ ಮಸುಕಾಯಿತು. ಗಾಳಿ ಎತ್ತ ಬೀಸುತ್ತಿದೆ ಎಂಬುದು ಕಾಂಗ್ರೆಸ್‌ ಪಕ್ಷ ಮತ್ತು ಅದರ ರಾಜ್ಯ ಮಟ್ಟದ ನಾಯಕರಿಗೆ ಗೊತ್ತಾಗಲಿಲ್ಲ. ತಾವೇ ಮಾಡಿಕೊಂಡ ತಪ್ಪು ಗ್ರಹಿಕೆಗೆ ಅನುಗುಣವಾಗಿ ಅವರು ಕೆಲಸ ಮಾಡಿದರು. ‘ಇಂಡಿಯಾ’ ಮೈತ್ರಿಕೂಟದ ಇತರ ಪಕ್ಷಗಳನ್ನು ಜೊತೆಗೆ ಕರೆದೊಯ್ಯುವ ಯಾವ ಆಸಕ್ತಿಯನ್ನೂ ಈ ನಾಯಕರು ತೋರಿಸಲಿಲ್ಲ. ಕೆಲವೇ ಕೆಲವು ಸೀಟುಗಳಿಗಾಗಿ ಈ ಪಕ್ಷಗಳು ಇಟ್ಟ ಬೇಡಿಕೆಯನ್ನೂ ನಿರ್ಲಕ್ಷಿಸಲಾಯಿತು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಮತ್ತು ಕಾಂಗ್ರೆಸ್‌ ಮಧ್ಯಪ್ರದೇಶ ಘಟಕದ ಅಧ್ಯಕ್ಷ ಕಮಲನಾಥ್‌ ನಡುವೆ ಸಾರ್ವಜನಿಕವಾಗಿ ಹೀನಾಯವಾದ ವಾಗ್ಯುದ್ಧವೂ ನಡೆಯಿತು. ಇಂತಹ ಪರಿಸ್ಥಿತಿ ಸೃಷ್ಟಿ ಮಾಡಿಕೊಂಡದ್ದರ ಹೊಣೆಯನ್ನು ಪಕ್ಷದ ಕೇಂದ್ರ ನಾಯಕತ್ವವೂ ಹೊತ್ತುಕೊಳ್ಳಬೇಕು. ರಾಜ್ಯ ಘಟಕಗಳಿಗೆ ದೃಢವಾದ ಸಂದೇಶ ಕಳುಹಿಸುವಲ್ಲಿ ಕೇಂದ್ರ ನಾಯಕತ್ವವು ವಿಫಲವಾಯಿತು. ಕಾಂಗ್ರೆಸ್‌ ಪಕ್ಷವು ಸೊಕ್ಕಿನಿಂದ ವರ್ತಿಸುತ್ತಿದೆ ಎಂಬ ಭಾವನೆಯನ್ನು ಬದಲಾಯಿಸಲು ಕೂಡ ಕೇಂದ್ರ ನಾಯಕತ್ವವು ಪ್ರಯತ್ನಿಸಲಿಲ್ಲ. ಈ ಎಲ್ಲದರ ಪರಿಣಾಮವಾಗಿ ಎಎಪಿ, ಎಸ್‌ಪಿ, ಜೆಡಿಯು ಮುಂತಾದ ಪಕ್ಷಗಳು ಪ್ರತ್ಯೇಕವಾಗಿಯೇ ಸ್ಪರ್ಧಿಸಿದವು. ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಈ ಪಕ್ಷಗಳು ಅಡ್ಡಿಯಾದವೇ ಇಲ್ಲವೇ ಎಂಬುದು ಬೇರೆ ಪ್ರಶ್ನೆ. ಆದರೆ, ಲೋಕಸಭಾ ಚುನಾವಣೆ ಸನಿಹದಲ್ಲಿರುವ ಈ ಹೊತ್ತಿನಲ್ಲಿ ಮೈತ್ರಿಕೂಟದೊಳಗೆ ಅಪನಂಬಿಕೆಯನ್ನಂತೂ ಇದು ಮೂಡಿಸಿದೆ. ಭಾರಿ ಚೌಕಾಶಿಯ ಬಳಿಕ ರಾಜಸ್ಥಾನದಲ್ಲಿ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮತ್ತು ತೆಲಂಗಾಣದಲ್ಲಿ ಸಿಪಿಐಗೆ ಕಾಂಗ್ರೆಸ್‌ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿತು. ರಾಜಸ್ಥಾನದ ಭರತ್‌ಪುರದಲ್ಲಿ ಆರ್‌ಎಲ್‌ಡಿ ಗೆದ್ದರೆ, ತೆಲಂಗಾಣದ ಕೊತ್ತಗೂಡೆಂನಲ್ಲಿ ಸಿಪಿಐ ಗೆದ್ದಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಗೆಲುವಿನ ಬಳಿಕ ಬಿಜೆಪಿ ವಿರೋಧಿ ಪಕ್ಷಗಳ ನಡುವೆ ಕಾಂಗ್ರೆಸ್‌ನ ವರ್ಚಸ್ಸು ಹೆಚ್ಚಾಗಿತ್ತು. ಆದರೆ, ಉತ್ತರ ಭಾರತದ ಮೂರು ರಾಜ್ಯಗಳ ಸೋಲಿನ ನಂತರ ಅದು ಪಾತಾಳಕ್ಕೆ ಕುಸಿದಿದೆ. ಬಿಜೆಪಿಗೆ ಒಗ್ಗಟ್ಟಾಗಿ ಸವಾಲು ಒಡ್ಡಲು ಇರಿಸಿಕೊಳ್ಳಬೇಕಾದ ಸಾಮೂಹಿಕ ಗುರಿಗಳು ಏನು ಎಂಬುದರತ್ತ ತಕ್ಷಣವೇ ಗಮನಹರಿಸಿದರೆಮಾತ್ರ ‘ಇಂಡಿಯಾ’ ಮೈತ್ರಿಕೂಟವು ಪರಿಣಾಮ ಬೀರಲು ಸಾಧ್ಯ. ಸೈದ್ಧಾಂತಿಕ ದಿಕ್ಕನ್ನು ಸ್ಪಷ್ಟವಾಗಿ ಗುರುತಿಸುವುದು ಈ ಮೈತ್ರಿಕೂಟದ ಮುಂದೆ ಇರುವ ದೊಡ್ಡ ಸವಾಲು. ಸೀಟು ಹಂಚಿಕೆ ಸುಸೂತ್ರವಾಗಿ ಆಗುವಂತೆ ನೋಡಿಕೊಳ್ಳುವುದು ಕೂಡ ಸಣ್ಣ ಕೆಲಸವಲ್ಲ. ಮೂರು ರಾಜ್ಯಗಳಲ್ಲಿ ಸಿಕ್ಕ ಗೆಲುವು ಬಿಜೆಪಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕೇಂದ್ರದಲ್ಲಿ ಬಿಜೆಪಿ ಮೂರನೇ ಅವಧಿಗೆ ಅಧಿಕಾರಕ್ಕೆ ಏರುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದು ಇದನ್ನೇ ಸೂಚಿಸುತ್ತದೆ. ಮೈತ್ರಿಕೂಟವು ಜೊತೆಯಾಗಿ ಕೆಲಸ ಮಾಡಿ ಯಶಸ್ಸು ಪಡೆಯಬೇಕಿದ್ದರೆ, ತಳಮಟ್ಟದ ಕಾರ್ಯಕರ್ತರಲ್ಲಿ ಇರುವ ವೈರತ್ವ ಮತ್ತು ಅಪನಂಬಿಕೆಯನ್ನು ಮೊದಲಿಗೆ ನಿವಾರಿಸಬೇಕು. ಮೈತ್ರಿಕೂಟದ ಪರವಾಗಿ ಎಲ್ಲರೂ ಜೊತೆಯಾಗಿ ಕೆಲಸ ಮಾಡುವುದು ಸಾಧ್ಯವಾಗಬೇಕು. ಈ ಸಂದೇಶವು ತಳಮಟ್ಟದವರೆಗೆ ತಲುಪುವಂತೆ ಮೈತ್ರಿಕೂಟದ ನಾಯಕರೇ ನೋಡಿಕೊಳ್ಳಬೇಕು. ಈ ಸಂದರ್ಭದಲ್ಲಿಯಂತೂ ಮೈತ್ರಿಕೂಟದ ನಾಯಕರ ನಡುವೆ ಯಾವುದೇ ಸಾಮರಸ್ಯ ಇದ್ದಂತೆ ಕಾಣಿಸುವುದಿಲ್ಲ. ಮೈತ್ರಿಕೂಟವು ಯಶಸ್ಸು ಪಡೆಯಬೇಕಿದ್ದರೆ ಕಾಂಗ್ರೆಸ್‌ ಮತ್ತು ‘ಇಂಡಿಯಾ’ ಮೈತ್ರಿಕೂಟದ ಪಾಲುದಾರರ ನಡುವೆ ಸಂಬಂಧ ಉತ್ತಮವಾಗಿರಬೇಕು. ಎಲ್ಲ ಅಪನಂಬಿಕೆಗಳನ್ನು ಕಳಚಿಕೊಂಡು, ಸುಸ್ಥಿರವಾಗಿ ಮುಂದಕ್ಕೆ ಸಾಗುವುದು ‘ಇಂಡಿಯಾ’ ಮುಂದೆ ಇರುವ ದೊಡ್ಡ ಸವಾಲು. ಈ ಸವಾಲು ಈಗ ಇನ್ನಷ್ಟು ಕಠಿಣವಾಗಿ ಪರಿವರ್ತಿತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.