ಸಂಪಾದಕೀಯ | ಜನರ ಬವಣೆಯ ದರ್ಶನ; ಆಡಳಿತ ವೈಫಲ್ಯಕ್ಕೆ ನಿದರ್ಶನ ಸಾರ್ವಜನಿಕರ ಅರ್ಜಿಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತಹ ಜನಸ್ನೇಹಿ ಆಡಳಿತವು ಇಂದಿನ ತುರ್ತು ಅಗತ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಿಂಗಳ 8ರಂದು ನಡೆಸಿದ ರಾಜ್ಯಮಟ್ಟದ ಎರಡನೇ ‘ಜನಸ್ಪಂದನ’ವು ನಾಡಿನುದ್ದಕ್ಕೂ ಅಬಲರು, ಅಂಗವಿಕಲರು, ಹಿರಿಯ ಜೀವಗಳು, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಗಾಧತೆಗೆ ಕನ್ನಡಿ ಹಿಡಿದಿದೆ. ಮುಖ್ಯಮಂತ್ರಿ ಬಳಿಗೆ ಜನರು ಹೊತ್ತು ತಂದ ಅಹವಾಲುಗಳನ್ನು ಅವಲೋಕಿಸಿದರೆ ಆಡಳಿತ ವ್ಯವಸ್ಥೆ ಯಾವ ಮಟ್ಟಿಗೆ ಜಡ್ಡುಗಟ್ಟಿದೆ ಎಂಬುದು ಯಾರಿಗಾದರೂ ಮನವರಿಕೆ ಆಗುತ್ತದೆ. ಜನರ ಕಷ್ಟಕ್ಕೆ ಕಿವಿಗೊಡಬೇಕಾದ, ಅಹವಾಲು ಹೊತ್ತು ಕಚೇರಿಗೆ ಬಂದವರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾದ ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು ಸಂವೇದನೆ ಕಳೆದುಕೊಂಡಿರುವುದರ ಜೊತೆಗೆ ಕರ್ವವ್ಯಪ್ರಜ್ಞೆ ಮರೆತಿರುವುದರಿಂದಲೇ ಜನರಿಗೆ ಮುಖ್ಯಮಂತ್ರಿಯವರೇ ಕೊನೆಯ ಆಸರೆಯಾಗಿ ಕಂಡಿರಬಹುದು. ನವೆಂಬರ್‌ನಲ್ಲಿ ನಡೆದ ಜನಸ್ಪಂದನದಲ್ಲಿ 4,030 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅವುಗಳಲ್ಲಿ 3,738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಶೇ 98ರಷ್ಟು ಸಾಧನೆಯಾಗಿದೆ ಎಂದು ಎರಡನೇ ಜನಸ್ಪಂದನದ ವೇಳೆ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಒಟ್ಟು 108 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಎಂದೂ ವಿವರಿಸಿದ್ದಾರೆ. ಹಾಗಿದ್ದರೂ ಮೊದಲನೇ ಜನಸ್ಪಂದನಕ್ಕೆ ಹೋಲಿಸಿದರೆ ಎರಡನೇ ಜನಸ್ಪಂದನದಲ್ಲಿ ಸ್ವೀಕರಿಸಿರುವ ಅರ್ಜಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. 12,372 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ 246 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ. ಇನ್ನೂ 12,126 ಅರ್ಜಿಗಳು ಪರಿಶೀಲನೆಯ ಹಂತದಲ್ಲಿಯೇ ಇವೆ. ಅರ್ಜಿಗಳ ಮಹಾಪೂರ ನೋಡಿದರೆ, ಜನರು ನಿತ್ಯವೂ ಮುಖಾಮುಖಿಯಾಗುತ್ತಿರುವ ಸಂಕಷ್ಟಗಳ ಆಳ–ಅಗಲದ ಬಾಹುಳ್ಯ ಎಷ್ಟೆಂಬುದು ಮುಖ್ಯಮಂತ್ರಿಯವರ ಅರಿವಿಗೆ ಬಂದಿರಬಹುದು. ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ ಟೀಕಿಸಿತ್ತು. ಅದರಿಂದ ರೋಸಿಹೋಗಿದ್ದ ಜನ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರಿ ಬಹುಮತ ನೀಡಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆದಿದೆ. ಆದರೆ, ಅಧಿಕಾರಿಶಾಹಿಯ ಮನೋಧರ್ಮ ಬದಲಾಗಿಲ್ಲ ಎಂಬುದನ್ನು ಮುಖ್ಯಮಂತ್ರಿಯವರ ಜನಸ್ಪಂದನಕ್ಕೆ ಹರಿದುಬಂದ ಅಹವಾಲುಗಳ ಮಹಾಪೂರ ದೃಢಪಡಿಸುತ್ತದೆ. ಜಿಲ್ಲಾ ಮಟ್ಟದಲ್ಲಿ ಜನಸ್ಪಂದನ ನಡೆಸಿ ಜನರ ಅಹವಾಲುಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಸೂಚಿಸಿದ್ದರು. ಆದರೆ, ಹೆಚ್ಚಿನ ಜಿಲ್ಲೆಗಳಲ್ಲಿ ಜನಸ್ಪಂದನ ನಿಯಮಿತವಾಗಿ ನಡೆಯುತ್ತಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಹಂತದಲ್ಲೇ ಸಮಸ್ಯೆ ಆಲಿಸಿ, ಪರಿಹಾರ ಕಲ್ಪಿಸಲು ವಿಪುಲ ಅವಕಾಶಗಳು ಇರುತ್ತವೆ. ತಾಲ್ಲೂಕು ಮಟ್ಟದಲ್ಲಿ ಕೂಡ ಇಂತಹದೇ ವ್ಯವಸ್ಥೆ ಇದೆ. ಹಾಗಿದ್ದರೂ ಮುಖ್ಯಮಂತ್ರಿಗೆ ಮನವಿ ಕೊಡಲು ನಾಡಿನ ಮೂಲೆ ಮೂಲೆಗಳಿಂದ ಬೆಂಗಳೂರಿನವರೆಗೂ ಜನರು ಧಾವಿಸಿರುವುದು ಕೆಳಹಂತದಲ್ಲಿ ಆಡಳಿತ ವ್ಯವಸ್ಥೆಯು ಜಡ್ಡುಗಟ್ಟಿರುವುದರ ಸಂಕೇತದಂತಿದೆ. ‘ಅಧಿಕಾರಿಗಳು ಕೆಳ ಹಂತದಲ್ಲೇ ಸಮಸ್ಯೆ ಬಗೆಹರಿಸಿದರೆ ಬೆಂಗಳೂರಿಗೆ ಜನ ಬಂದು ಅರ್ಜಿ ಕೊಡುವ ಸಂದರ್ಭ ಉದ್ಭವಿಸುವುದಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗಳ ಮೇಲೆ ಜವಾಬ್ದಾರಿ ಹೆಚ್ಚು. ಆಡಳಿತವು ಜಡತ್ವದಿಂದ ಕೂಡಿರಬಾರದು. ಅಧಿಕಾರಿಗಳ ಹಂತದಲ್ಲೇ ಸಮಸ್ಯೆ ಬಗೆಹರಿಸಿ. ಜನರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಎಚ್ಚರಿಸುತ್ತಲೇ ಇದ್ದಾರೆ. ಆದರೂ, ಅವರ ಎಚ್ಚರಿಕೆಯು ಅಧಿಕಾರಿಗಳ ಕಾರ್ಯಶೈಲಿಯ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸದ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾದ ಅಗತ್ಯವನ್ನು ಇದು ಸಾರಿ ಹೇಳುತ್ತದೆ. ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಇತ್ಯರ್ಥವಾಗಬೇಕಾದ ಅರ್ಜಿಗಳು ರಾಜಧಾನಿಯವರೆಗೂ ಬಂದು ಮುಖ್ಯಮಂತ್ರಿ ಕಚೇರಿ ತಲುಪಿವೆ. ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯಿತಿ, ನಾಡ ಕಚೇರಿ ಹೆಚ್ಚೆಂದರೆ ಜಿಲ್ಲಾ ಮಟ್ಟದಲ್ಲೇ ಇಂತಹ ಬಹುತೇಕ ಅರ್ಜಿಗಳನ್ನು ವಿಲೇವಾರಿ ಮಾಡಬಹುದು. ಸಾರ್ವಜನಿಕರ ಅರ್ಜಿಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ವಿಲೇವಾರಿ ಮಾಡುವುದಕ್ಕಾಗಿಯೇ 2012ರಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ‘ಸಕಾಲ’ ಕಾಯ್ದೆ ಇದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ಮಹತ್ವದ ಕಾಯ್ದೆಯನ್ನು ಜಾರಿಗೊಳಿಸಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂಬುದನ್ನು ಹದಗೆಟ್ಟ ಈ ಸ್ಥಿತಿಯೇ ಹೇಳುತ್ತದೆ. ಸಣ್ಣಪುಟ್ಟ ಸಮಸ್ಯೆಗಳ ಪರಿಹಾರಕ್ಕೂ ಮುಖ್ಯಮಂತ್ರಿಯವರ ಆದೇಶ ಅಥವಾ ನಿರ್ದೇಶನ ಬೇಕು ಎನ್ನುವುದಾದರೆ ಆಡಳಿತ ವ್ಯವಸ್ಥೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ನೌಕರವರ್ಗ ಏಕಿರಬೇಕು ಎನ್ನುವ ಪ್ರಶ್ನೆ ಏಳುತ್ತದೆ. ಸಾರ್ವಜನಿಕರ ಅರ್ಜಿಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತಹ ಜನಸ್ನೇಹಿ ಆಡಳಿತವು ಇಂದಿನ ತುರ್ತು ಅಗತ್ಯ. ಅದಕ್ಕಾಗಿ ಪರಿಣಾಮಕಾರಿಯಾದ ನಿಗಾ ವ್ಯವಸ್ಥೆಯೂ ಬೇಕು. ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸದ, ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡುವ ಅಧಿಕಾರಿಗಳು, ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಹ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.